ಮಹಿಳೆಯರಿಗೆ ಕಾಂಗ್ರೆಸ್‍ನಿಂದ ದ್ರೋಹ: ಆರ್.ಅಶೋಕ್
ಮಹಿಳೆಯರಿಗೆ ಕಾಂಗ್ರೆಸ್‍ನಿಂದ ದ್ರೋಹ: ಆರ್.ಅಶೋಕ್
ಬೆಂಗಳೂರು: ಮಹಿಳಾ ಮೀಸಲಿಗೆ ತಡೆವೊಡ್ಡಿದ ಕಾಂಗ್ರೆಸ್ ಕೋಟ್ಯಂತರ ಮಹಿಳೆಯರಿಗೆ ದ್ರೋಹ ಬಗೆದಿದೆ. ಮಹಿಳೆಯರ ಶಕ್ತಿ ನಿರ್ಲಕ್ಷಿಸಿದ ಕಾಂಗ್ರೆಸ್ ಅನ್ನು ದೇಶದ ಜನ ಕ್ಷಮಿಸುವುದಿಲ್ಲ. ಮುಂಬರುವ ರಾಜ್ಯಗಳ ಚುನಾವಣೆಯಲ್ಲಿ ಜನರು ಬುದ್ಧಿ ಕಲಿಸಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಹೇಳಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಹಿಳಾ ಮೀಸಲು ಮಸೂದೆಗೆ ಸೋಲಾಗಿದ್ದು ಸಾಮಾನ್ಯ ವಿಚಾರ ಅಲ್ಲ. ಇದು ರಾಜಕೀಯ ಪಕ್ಷಗಳ ಪಿತೂರಿ, ನಿರ್ಲಕ್ಷ್ಯ, ಮಹಿಳಾ ವಿರೋಧಿ ಭಾವನೆಯ ಸ್ಪಷ್ಟ ಸಂಕೇತ ಎಂದರು.
ದೇಶದ ಇತಿಹಾಸದಲ್ಲೇ ಮಹಿಳೆಯರಿಗೆ ಅವರ ಹಕ್ಕನ್ನು ಸಂವಿಧಾನದತ್ತವಾಗಿ ಕೊಡುವ ತೀರ್ಮಾನವನ್ನು ನರೇಂದ್ರ ಮೋದಿ ಅವರು ಮಾಡಿದ್ದರು. ಆದರೆ ಇದಕ್ಕೆ ಕಾಂಗ್ರೆಸ್ ಬೆಂಬಲ ನೀಡದೆ ಕೋಟ್ಯಂತರ ಮಹಿಳೆಯರ ಕನಸುಗಳ ಮೇಲೆ ಹೊಡೆತ ನೀಡಿತು. ಇದು ಕೇವಲ ಮಸೂದೆ ವಿಫಲತೆ ಅಲ್ಲ. ಮಹಿಳೆಯರ ಹಕ್ಕನ್ನು ನಿರ್ಲಕ್ಷ್ಯ ಮಾಡುವ ಕಾಂಗ್ರೆಸ್ ಅನ್ನು ಜನ ಕ್ಷಮಿಸುವುದಿಲ್ಲ ಎಂದು ವಿವರಿಸಿದರು.
ಮಹಿಳಾ ಮೀಸಲು ಮಸೂದೆ ಸರ್ವಾನುಮತದಿಂದ ಬೆಂಬಲ ಸಿಗಬೇಕಿತ್ತು. ಆದರೆ ಬೆಂಬಲ ನೀಡದೆ ವಿಧಾನಸಭೆಗೆ ಸಂಸತ್ತಿಗೆ ಹೋಗುತ್ತೇವೆ ಎಂಬ ಮಹಿಳೆಯರ ಕನಸನ್ನು ನುಚ್ಚು ನೂರು ಮಾಡಿದೆ. ಮಹಿಳೆಯರ ಶಾಪ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ ತಟ್ಟದೇ ಬಿಡುವುದಿಲ್ಲ ಎಂದರು. ಕಳೆದ 70 ವರ್ಷಗಳಿಂದ ಅಧಿಕಾರ ನಡೆಸಿದ ಕಾಂಗ್ರೆಸ್, ಮಹಿಳೆಯ ಹಕ್ಕಿನ ಬಗ್ಗೆ ವೇದಿಕೆಗಳಲ್ಲಿ ದೊಡ್ಡ ದೊಡ್ಡ ಭಾಷಣ ಮಾಡಿತು. ಆದರೆ ಕಾರ್ಯರೂಪಕ್ಕೆ ತರಲಿಲ್ಲ. ಮೀಸಲು ಮಸೂದೆಗೆ ಬೆಂಬಲ ಕೊಡುವ ಧೈರ್ಯ ಇಲ್ಲದ ಮೇಲೆ ಮಹಿಳೆಯರ ಬಗ್ಗೆ ಮಾತನಾಡುವ ಅಧಿಕಾರವೂ ಕಾಂಗ್ರೆಸ್‍ಗೆ ಇಲ್ಲ. ಆದ್ದರಿಂದ ಮಹಿಳಾ ಕಾಂಗ್ರೆಸ್ ಘಟಕವನ್ನು ರದ್ದು ಮಾಡಿ ಎಂದು ಸಲಹೆ ನೀಡಿದರು.
ಕಾಂಗ್ರೆಸ್ಸಿಗರೇ ಇನ್ನೆಷ್ಟು ಕಾಲ ದಿನ, ವರ್ಷ ಮಹಿಳೆಯರನ್ನು ಕೇವಲ ಮತದಾರರಾಗಿ ಬಳಸುತ್ತೀರಿ. ಮಹಿಳೆಯರು ದುರ್ಬಲರು ಎಂದುಕೊಂಡು ನೆಹರು, ಇಂದಿರಾ, ಸೋನಿಯಾ ರಾಜ್ಯಭಾರ ಮಾಡಿದ್ದರಲ್ಲ. ಆಗ ನಿಮಗೆ ಅವರ ಶಕ್ತಿ ಬಗ್ಗೆ ತಿಳಿಯಲಿಲ್ಲವೇ ಎಂದರು. ಮಹಿಳಾ ಮೀಸಲಿಗೆ ಮೋದಿ ಅವರು ಮುಂದಾದರೆ ವಿರೋಧಿಸಿ ಹೀನ ಕಾರ್ಯ ಮಾಡಿದ್ದೀರಿ. ಇದು ಕಾಂಗ್ರೆಸ್ ರಕ್ತದಲ್ಲೇ ಇರುವ ವಿರೋಧಿ ನೀತಿ ಎಂದು ನುಡಿದರು.
ಫ್ರೀ ಬಸ್ ಕೊಟ್ಟರೆ ಸಾಕು...
ಮಹಿಳೆಯರಿಗೆ ಪುಕ್ಕಟೆಯಾಗಿ ಎರಡು ಸಾವಿರ ಕೊಟ್ಟರೆ ಸಾಕು. ಫ್ರೀ ಬಸ್ ಕೊಟ್ಟರೆ ಸಾಕು ಮನೆಯಲ್ಲೇ ಇರ್ತಾರೆ. ಅಡಿಗೆ ಮಾಡಿಕೊಂಡು, ದೇವಸ್ಥಾನಕ್ಕೆ ತಿರುಗಿಕೊಂಡು ಇರ್ತಾರೆ. ಅವರಿಗೆ ರಾಜಕೀಯ ಪ್ರಾತಿನಿಧ್ಯ ಸಿಗಬಾರದು. ಸಂಸತ್‍ಗೆ, ವಿಧಾನಸಭೆಗೆ ಹೋಗುವುದು ಬೇಡ ಎಂದು ಕಾಂಗ್ರೆಸ್‍ನವರು ತಿಳಿದಿದ್ದಾರೆ. ಮೀಸಲಾತಿ ಕಸಿದ ದ್ರೋಹಿ ಕಾಂಗ್ರೆಸ್ಸಿಗರು ಎಂದರು.
ಕ್ಷೇತ್ರ ಮರುವಿಂಗಡಣೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಹೆಚ್ಚಿನ ಕ್ಷೇತ್ರಗಳು ಸಿಗುವಂತೆ ಮಾಡಲು ಅವಕಾಶ ಇತ್ತು. ಆದರೆ ಕಾಂಗ್ರೆಸ್‍ನವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿದರು. ಈ ಬಗ್ಗೆ ಚರ್ಚೆ ಮಾಡಬಹುದಿತ್ತು. ಹಿಂದೆ ಹಲವು ಬಾರಿ ಕ್ಷೇತ್ರ ಮರುವಿಂಗಡಣೆ ಆದಾಗ ಅವರು ವಿರೋಧಿಸಲಿಲ್ಲ. ಇದೇ ಮೊದಲ ಬಾರಿಗೆ ಆಗಿಲ್ಲ. ಆಗಲೂ ಸಂಸತ್ ಸೀಟು ಹೆಚ್ಚಳ ಆಗಿದೆ. ಆಗ ಇವರು ಬಾಯಿಗೆ ಬಟ್ಟೆ ತುರುಕಿಕೊಂಡಿದ್ದರೇ ಎಂದರು.
ವಾಜಪೇಯಿ ಅವರು ಇದ್ದಾಗ ಕ್ಷೇತ್ರ ವಿಂಗಡಣೆ ಆಯಿತು. ಅವರು ಮತ್ತೆ ಗೆಲ್ಲಲಿಲ್ಲ ಕಾಂಗ್ರೆಸ್ ಗೆದ್ದಿತು. ಆದರೆ ಈಗ ಇವರು ಮಹಿಳೆಯರನ್ನು ತುಳಿಯುವ ಪ್ರಯತ್ನಕ್ಕೆ ಡೀ ಲಿಮಿಟೇಷನ್ ಅನ್ನು ದಾಳವಾಗಿ ಬಳಸಿದ್ದಾರೆ. ಕ್ಷೇತ್ರ ಮರು ಹಂಚಿಕೆ ನಿರಂತರ ಪ್ರಕ್ರಿಯೆ. ಕಾಂಗ್ರೆಸ್‍ನ ಮಹಿಳಾ ವಿರೋಧಿ ಮನಸ್ಥಿತಿ ದೇಶದ ಜನರ ಮುಂದೆ ಬಟಾಬಯಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಅನ್ನು ಹಾದಿಬೀದಿಗಳಲ್ಲಿ ಓಡಾಡಿಸುವ ಕಾಲ ಬರಲಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ದೇಶಭ್ರಷ್ಟವಾಗಲಿದೆ. ಅವರನ್ನು ಓಡಿಸುವ ಕೆಲಸವನ್ನು ತಾಯಂದಿರು ಮಾಡಲಿದ್ದಾರೆ ಎಂದರು. ಹಿಂದೆ ತಲಾಖ್ ಸಂಬಂಧವೂ ಕಾಂಗ್ರೆಸ್ ವಿರೋಧ ಮಾಡಿತ್ತು. ದೇಶದ ಭದ್ರತೆ ಆರ್ಟಿಕಲ್ 370 ತಂದಾಗಲೂ ವಿರೋಧ ಮಾಡಿದ್ದರು. ಸರ್ಜಿಕಲ್ ಸ್ಟ್ರೈಕ್ ಮಾಡಿದಾಗಲೂ ವಿರೋಧಿಸಿದ್ದರು. ದೇಶದ ಒಳಿತಿಗಾಗಿ ಏನೆಲ್ಲ ಮಾಡಿದ್ದರೂ ಇವರು ವಿರೋಧಿಸಿದ್ದಾರೆ. ಕಾಂಗ್ರೆಸ್‍ನ ಮಾಡಿದ್ದು ಅಕ್ಷಮ್ಯ ಅಪರಾಧ. ಮಹಿಯರ ಭವಿಷ್ಯ ನಿರ್ಮಾಣಕ್ಕೆ ನೆರವಾಗಬೇಕಿದ್ದ ಮಸೂದೆಗೆ ತಡೆ ಒಡ್ಡಿ ಕರಾಳ ದಿನವಾಗಿ ಕಾಂಗ್ರೆಸ್ ಮಾಡಿದೆ ಎಂದರು.
ಮೀಸಲು ಮಸೂದೆಯ ಕ್ರೆಡಿಟ್ ಅನ್ನು ಕಾಂಗ್ರೆಸ್ ಪಡೆದುಕೊಳ್ಳಬೇಕಿತ್ತು. ಮನೆಹಾಳ ಕಾಂಗ್ರೆಸ್ ಇಷ್ಟು ವರ್ಷ ಸುಮ್ಮನಿದ್ದು ಈಗ ಯಾಕೆ ವಿರೋಧ ಮಾಡುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇತ್ತೀಚಿನ ಸಮೀಕ್ಷೆ ಅನುಸಾರವೇ ಕ್ಷೇತ್ರ ವಿಂಗಡಣೆಯನ್ನು ಮಾಡಬಹುದಿತ್ತಲ್ಲವೇ ಎಂಬ ಪ್ರಶ್ನೆಗೆ, ಗ್ರೇಟರ್ ಬೆಂಗಳೂರು ರಚನೆಗೆ ಯಾವುದನ್ನು ಪರಿಗಣಿಸಿದ್ದೀರಿ ಎಂದರು.
ಸಾಲು ಸಾಲು ತೆರಿಗೆ ಹೊರಲು ಜನ ಸಿದ್ಧರಾಗಬೇಕಿದೆ..
ಸಿದ್ದರಾಮಯ್ಯ ಕುತಂತ್ರಿ. ಈಗ ಅವರು ಅತಂತ್ರರಾಗಿದ್ದಾರೆ. ವಿದ್ಯುತ್ ಬೆಲೆ ಏರಿಕೆ ಮಾಡಿದ್ದಾರೆ. ಬಜೆಟ್‍ನಲ್ಲಿ ಏನೂ ತೋರಿಸದೆ ಆನಂತರ ಬೆಲೆ ಏರಿಕೆ ಮಾಡಿದರು. ಉಪ ಚುನಾವಣೆಗೆ ಕಾದು ಈಗ ಬೆಲೆ ಏರಿಕೆ ಮಾಡಿದ್ದಾರೆ. ಗ್ರೇಟರ್ ಬೆಂಗಳೂರು ಚುನಾವಣೆ ಬರುವ ಮೊದಲು ಸಾಲು ಸಾಲು ತೆರಿಗೆ ಹೊರಲು ರಾಜ್ಯದ ಜನ ಸಿದ್ಧರಾಗಬೇಕಿದೆ. ನೌಕರರಿಗೆ ವೇತನ ಕೊಡಲೂ ಹಣ ಇಲ್ಲ. ನಷ್ಟ ಭರಿಸಲು ಬೆಲೆ ಏರಿಕೆ ಮಾಡ್ತಾನೆ ಇರ್ತಾರೆ. ಬೆಂಗಳೂರು ಚುನಾವಣೆ ಮಾಡುವಲ್ಲಿ ನಂಬಿಕೆ ಸರ್ಕಾರಕ್ಕೆ ಇಲ್ಲ. ಸೋಲಿನ ನೆರಳು ಅವರ ಹಿಂದಿದೆ ಎಂದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಮಾಳವಿಕಾ ಅವಿನಾಶ್, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು.ಸಿ.ಮಂಜುಳಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು





Comments
Leave a Comment