ಜಪಾನಿನ ಉತ್ತಮ ವ್ಯವಸ್ಥೆಗಳನ್ನು ನಮ್ಮ ರಾಜ್ಯದಲ್ಲಿ ಅನುಷ್ಠಾನಕ್ಕೆ ಕ್ರಮ: ಸಿಎಂ ಡಿ ಕೆ ಶಿವಕುಮಾರ್
ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಕುರಿತು ದೆಹಲಿಯಲ್ಲಿ ಕೇರಳ, ತೆಲಂಗಾಣ ಸಿಎಂಗಳ ಜತೆ ಚರ್ಚೆ
ಬಿಜೆಪಿ ಅನುಕೂಲಕ್ಕೆ ತಕ್ಕಂತೆ ಕ್ಷೇತ್ರ ಪುನರ್ವಿಂಗಡಣೆ
ದಕ್ಷಿಣ ರಾಜ್ಯದವರು ಅಲ್ಪಸಂಖ್ಯಾತರಾಗುತ್ತಾರೆ
ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ
ಮಹಿಳಾ ಮೀಸಲಾತಿಗೆ ನಮ್ಮ ಬೆಂಬಲವಿದೆ
ಎನ್ ಡಿಎ ನಾಯಕರು ಆಶಾ ಕಾರ್ಯಕರ್ತೆಯರನ್ನು ಸರ್ಕಾರದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ
ಬೆಂಗಳೂರು, ನ.28:
“ರಾಜ್ಯದಲ್ಲಿನ ಬರ ಪರಿಸ್ಥಿತಿಗೆ ಕೇಂದ್ರ ಸರ್ಕಾರ ಈವರೆಗೂ ಒಂದು ರೂಪಾಯಿ ನೆರವು ನೀಡಿಲ್ಲ. ಈ ವಿಚಾರವಾಗಿ ನಾವು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದ್ದು, ಎಲ್ಲಾ ರೀತಿಯ ಹೋರಾಟ ಮಾಡುತ್ತೇವೆ. ಬೆಳಗಾವಿ ಅಧಿವೇಶನ ಮುಕ್ತಾಯದ ಒಳಗೆ ಕೇಂದ್ರ ಸರ್ಕಾರ ಪರಿಹಾರ ನೀಡದೇ ಇದ್ದರೆ. ಅಧಿವೇಶನ ಮುಗಿದ ಬಳಿಕ ದೆಹಲಿ ಚಲೋ ಹೋರಾಟ ಮಾಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣ ಸಂಗಮದಲ್ಲಿ ಶಿವಕುಮಾರ್ ಅವರು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶನಿವಾರ ಮಾತನಾಡಿದರು.
ಕೇಂದ್ರ ಸರ್ಕಾರ ಬರ ಪರಿಹಾರ ನೀಡದಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೀರಾ ಎಂದು ಕೇಳಿದಾಗ, “ಸುಪ್ರೀಂ ಕೋರ್ಟಿಗೂ ಹೋಗುತ್ತೇವೆ, ನಮ್ಮ ಸರ್ವ ಪಕ್ಷ ನಿಯೋಗ ಭೇಟಿಗೆ ಸಮಯ ನೀಡಿ ಎಂದು ಪ್ರಧಾನಮಂತ್ರಿಗಳಿಗೂ ಮನವಿ ಮಾಡಿದ್ದೇವೆ. ನಿಮ್ಮೆಲ್ಲರ ಎದುರು ಈ ವಿಚಾರವನ್ನು ಪ್ರಧಾನಮಂತ್ರಿಗಳ ಮುಂದೆ ಪ್ರಸ್ತಾಪಿಸಿದ್ದೇನೆ. ನಮ್ಮ ರಾಜ್ಯ ಹಾಗೂ ಕನ್ನಡಿಗರ ಸ್ವಾಭಿಮಾನದ ವಿಚಾರವಾಗಿ ಕನ್ನಡ ಧ್ವಜಕ್ಕೆ ಮಾನ್ಯತೆ ನೀಡುವ ವಿಚಾರವನ್ನು ಅಧಿವೇಶನದಲ್ಲಿ ಚರ್ಚೆ ಮಾಡಲಾಗುವುದು. ಪರಿಶಿಷ್ಟರ ಮೀಸಲಾತಿ ವಿಚಾರದಲ್ಲಿ ಕೋರ್ಟ್ ನಲ್ಲಿ ಹಿನ್ನಡೆಯಾಗಿದ್ದು, ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಬೇಕು ಎಂಬುದು ನಮ್ಮ ಒಮ್ಮತದ ತೀರ್ಮಾನವಾಗಿದೆ” ಎಂದರು.
ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಕುರಿತು ದೆಹಲಿಯಲ್ಲಿ ಕೇರಳ, ತೆಲಂಗಾಣ ಸಿಎಂ ಜತೆ ಚರ್ಚೆ
ದೆಹಲಿ ಪ್ರವಾಸ ಬಗ್ಗೆ ಕೇಳಿದಾಗ, “ಶನಿವಾರ ರಾತ್ರಿ ದೆಹಲಿಗೆ ಪ್ರವಾಸ ಮಾಡುತ್ತಿದ್ದು, ಕೇಂದ್ರ ಸರ್ಕಾರದ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಮಸೂದೆ ಕುರಿತು ಭಾನುವಾರ ಕೇರಳ, ತೆಲಂಗಾಣ ಸಿಎಂ ಸೇರಿ ಚರ್ಚೆ ಮಾಡುತ್ತಿದ್ದು, ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಚರ್ಚೆ ಮಾಡುತ್ತೇವೆ. ಉತ್ತರ ಭಾರತದ ರಾಜ್ಯಗಳಲ್ಲಿ ಎಷ್ಟು ಸ್ಥಾನಗಳು ಹೆಚ್ಚಾಗಲಿವೆ. ದಕ್ಷಿಣ ಭಾರತದ ರಾಜ್ಯಗಳ ಪರಿಸ್ಥಿತಿ, ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಲಾಗುವುದು. ನಿನ್ನೆಯಷ್ಟೇ ಕೇಂದ್ರ ಸರ್ಕಾರ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿದ್ದು, ಮಾಧ್ಯಮಗಳ ವರದಿಯ ಮಾಹಿತಿ ಮಾತ್ರ ನಮಗೆ ತಿಳಿದಿದೆ. ನಾವು ನಮ್ಮ ಹಿತ ರಕ್ಷಣೆಗೆ ಹೋರಾಟ ಮಾಡುತ್ತೇವೆ. ಈ ಹಿಂದೆ ಡಿಎಂಕೆ ಕರೆದ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಬಿಜೆಪಿಯವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡುತ್ತಿದ್ದಾರೆ. ನಾವು ನಮ್ಮ ಸಾರ್ವಭೌಮತ್ವ ಉಳಿಸಿಕೊಳ್ಳಲು ಹೋರಾಟ ಮಾಡುತ್ತೇವೆ. ಮಹಿಳಾ ಮೀಸಲಾತಿಗೆ ನಾವು ಒಪ್ಪಿದ್ದು, ಕ್ಷೇತ್ರ ಪುನರ್ವಿಂಗಡಣೆಗೆ ನಮ್ಮ ವಿರೋಧ” ಎಂದು ಸ್ಪಷ್ಟಪಡಿಸಿದರು.
ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ
“ಎನ್ ಡಿಎ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಅವರು ರಾಜಕಾರಣ ಮಾಡಲಿ. ಇದರಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದ್ದು, ಈ ರಾಜ್ಯಗಳು ಅಲ್ಪಸಂಖ್ಯಾತರಾಗಲಿವೆ. ನಮ್ಮ ರಾಜ್ಯಗಳ ಹಿತಾಸಕ್ತಿಗಾಗಿ ನಾವು ಧ್ವನಿ ಎತ್ತುತ್ತೇವೆ. ದೇಶದ ಪ್ರಗತಿಗೆ ದಕ್ಷಿಣ ರಾಜ್ಯಗಳು ಶಕ್ತಿ ತುಂಬುತ್ತಿವೆ. ಅವರು ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಈ ವಿಚಾರವಾಗಿ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದು ಚರ್ಚೆ ಮಾಡುವ ನಿರೀಕ್ಷೆ ಇತ್ತು. ಸಿದ್ದರಾಮಯ್ಯ ಅವರು ಹೇಳಿದಂತೆ ಸರ್ವಪಕ್ಷ ಸಭೆ ಕರೆದು ಚರ್ಚೆ ಮಾಡಬೇಕಿತ್ತು” ಎಂದರು.
ಕನ್ನಡಿಗರ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಮಸೂದೆಗೆ ಬೆಂಬಲ ನೀಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರ ಕಾಲದಲ್ಲಿ ಕನ್ನಡಿಗರು ಹಾಗೂ ಕರ್ನಾಟಕಕ್ಕೆ ಏನು ಮಾಡಿದ್ದಾರೆ ಎಂದು ಅವರು ಹೇಳಲಿ. ಖಾಲಿ ಮಾತು ಆಡುವುದಲ್ಲ” ಎಂದು ತಿಳಿಸಿದರು.
ಎನ್ ಡಿಎ ನಾಯಕರು ಆಶಾ ಕಾರ್ಯಕರ್ತೆಯರನ್ನು ಸರ್ಕಾರದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ
ಆಶಾ ಕಾರ್ಯಕರ್ತೆಯರ ಭೇಟಿ ಬಗ್ಗೆ ಕೇಳಿದಾಗ, “ನಿನ್ನೆ ನಾನು ನಮ್ಮ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದು, ನಮ್ಮ ಸಚಿವರು ಇಂದು ಆಶಾ ಕಾರ್ಯಕರ್ತೆಯರೊಂದಿಗೆ ಚರ್ಚೆ ಮಾಡಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಸಹಾಯ ಮಾಡಬೇಕು ಎಂದು ಎನ್ ಡಿಎ ನಾಯಕರು ಮುಂದೆ ಬರಲಿಲ್ಲ. ಅವರು ಆಶಾ ಕಾರ್ಯಕರ್ತೆಯರನ್ನು ರಾಜ್ಯ ಸರ್ಕಾರದ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ 2 ಸಾವಿರ ನೀಡುತ್ತಿರುವುದು ಬಿಟ್ಟರೆ ಬೇರೆ ಏನೂ ನೀಡುತ್ತಿಲ್ಲ. ಆಶಾ ಕಾರ್ಯಕರ್ತೆಯರ ವಿಚಾರದಲ್ಲಿ ನಮ್ಮ ಜವಾಬ್ದಾರಿ ಎಷ್ಟಿದೆಯೋ ಕೇಂದ್ರ ಸರ್ಕಾರದ ಜವಾಬ್ದಾರಿಯೂ ಅಷ್ಟೇ ಇದೆ. ನಾವು ಆಶಾ ಕಾರ್ಯಕರ್ತೆಯರಿಗೆ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳುತ್ತೇವೆ” ಎಂದು ತಿಳಿಸಿದರು.
000
ಜಪಾನಿನ ಉತ್ತಮ ವ್ಯವಸ್ಥೆಗಳನ್ನು ನಮ್ಮ ರಾಜ್ಯದಲ್ಲಿ ಅನುಷ್ಠಾನಕ್ಕೆ ಕ್ರಮ: ಸಿಎಂ ಡಿ ಕೆ ಶಿವಕುಮಾರ್
ಜಪಾನ್ ಪ್ರವಾಸದ ಕುರಿತು ಸಿಎಂ ಮಾಹಿತಿ
ಹಾರೋಹಳ್ಳಿಯಲ್ಲಿ 600 ಜನರಿಗೆ ಉದ್ಯೋಗ ಸೃಷ್ಠಿಗೆ ಕವಾಸಕಿಯೊಂದಿಗೆ ಒಪ್ಪಂದ
ರಾಜ್ಯದಲ್ಲಿ ಟೊಯೋಟಾ ಘಟಕ ವಿಸ್ತರಣೆಗೆ ಎಲ್ಲಾ ನೆರವು
ಬಿಯಾಂಡ್ ಬೆಂಗಳೂರು ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು
ಹೈಬ್ರಿಡ್ ಟ್ಯಾಕ್ಸಿ ಕಾರು ಉತ್ಪಾದನೆಗೆ ಆಹ್ವಾನ
ಬೆಂಗಳೂರು, ನ.28:
“ನಗರ ಸಾರಿಗೆ, ಕಸ ವಿಲೇವಾರಿ, ನಗರಾಭಿವೃದ್ಧಿ ಮೂಲಸೌಕರ್ಯ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಜಪಾನಿನಲ್ಲಿರುವ ಉತ್ತಮ ವ್ಯವಸ್ಥೆಗಳನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧ ಸಮ್ಮೇಳನ ಸಭಾಂಗಣ ʻಸಂಗಮʼದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಸಿಎಂ, ತಮ್ಮ ಮೂರು ದಿನಗಳ ಜಪಾನ್ ಪ್ರವಾಸದ ವಿವರಗಳನ್ನು ಶನಿವಾರ ಹಂಚಿಕೊಂಡರು.
“ನಗರಾಭಿವೃದ್ಧಿ, ಉತ್ಪಾದನಾ ಕ್ಷೇತ್ರ, ನಗರ ಸಾರಿಗೆ ವ್ಯವಸ್ಥೆ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಜಪಾನ್ ದೇಶದಿಂದ ಕಲಿಯುವಂತಹದ್ದು ಬಹಳಷ್ಟಿದೆ. ಆ ದೇಶದ ಸಮಯ ಪರಿಪಾಲನೆ, ಶಿಸ್ತು, ಬದ್ಧತೆ ಅನುಕರಣೀಯವಾಗಿದೆ. ಜಪಾನ್ ಪ್ರವಾಸದ ಸಂದರ್ಭದಲ್ಲಿ ಭೇಟಿಯಾದ ಬಹಳಷ್ಟು ಕನ್ನಡಿಗರು ಸಹ ಈ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ” ಎಂದು ಹೇಳಿದರು.
ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶಕ್ಕೆ ಆಹ್ವಾನ
“ಮುಂದಿನ ಎಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶಕ್ಕೆ ಪೂರ್ವಭಾವಿಯಾಗಿ ವಿವಿಧ ದೇಶಗಳಲ್ಲಿ ರೋಡ್ ಶೋ ನಡೆಸುತ್ತಿದ್ದೇವೆ. ಪೂರ್ವ ಏಷ್ಯಾದ ಹಲವು ದೇಶಗಳು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿವೆ. ನಮ್ಮ ರಾಜ್ಯದಲ್ಲಿ ಅನುಷ್ಠಾನಗೊಳಿಸಬಹುದಾದ ಜಪಾನಿನ ಮಾದರಿಗಳ ಕಾರ್ಯ ಸಾಧ್ಯತೆ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಯೋಜನೆಗಳನ್ನು ರೂಪಿಸಲಾಗುವುದು. ಜಪಾನಿನ ವಿದೇಶಾಂಗ ಸಚಿವರೊಂದಿಗೆ ಹಾಗೂ ರಾಯಭಾರಿಯೊಂದಿಗೆ ಸಹ ಮಾತುಕತೆ ನಡೆಸಿದ್ದೇನೆ. ಎಲ್ಲರೂ ಸಹಕರಿಸುವ ಭರವಸೆಯನ್ನು ನೀಡಿದ್ದಾರೆ” ಎಂದು ಮಾಹಿತಿ ನೀಡಿದರು.
ಹೊಸ ಗ್ರೀನ್ ಫೀಲ್ಡ್ ಯೋಜನೆಗಳಿಗೆ ಒತ್ತು
“ಮೂರು ದಿನಗಳ ಭೇಟಿಯ ವೇಳೆ ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಜಪಾನಿನಲ್ಲಿ ಹಲವು ನಿಯೋಗಗಳ ಜತೆ ಮಾತುಕತೆ ನಡೆಸಿದ್ದೇವೆ. ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಬೆಂಗಳೂರಿನಾಚೆಗೂ ಹೊಸ ಗ್ರೀನ್ ಫೀಲ್ಡ್ ಯೋಜನೆಗಳನ್ನು ಪ್ರಾರಂಭಿಸಬೇಕು ಎಂಬುವುದು ನಮ್ಮ ಉದ್ದೇಶವಾಗಿದೆ” ಎಂದರು.
“ಜಪಾನಿನಲ್ಲಿ ಹೊಸ ನಗರಗಳ ನಿರ್ಮಾಣ, ಟೌನ್ ಶಿಪ್ ಗಳು, ವಾಣಿಜ್ಯ ಚಟುವಟಿಕೆಗಳ ವಿಸ್ತರಣೆ ಬಗ್ಗೆಯೂ ಪರಿಶೀಲನೆ ಮಾಡಿದ್ದೇವೆ. ಜಪಾನಿನಲ್ಲಿ ತ್ಯಾಜ್ಯ ವಿಲೇವಾರಿ ಮೂಲಕ ಕನಿಷ್ಟ 24 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಘಟಕಕ್ಕೆ ಭೇಟಿ ನೀಡಿದ್ದು, ಕರ್ನಾಟಕದಲ್ಲಿಯೂ ಅಂತಹ ಯೋಜನೆ ಅನುಷ್ಠಾನ ಕುರಿತು ಪರಿಶೀಲನೆ ನಡೆಸಲು ಆಹ್ವಾನ ನೀಡಿದ್ದೇನೆ. ಬೆಂಗಳೂರು ಮಾತ್ರವಲ್ಲದೆ, ಹುಬ್ಬಳ್ಳಿ ಧಾರವಾಡ, ಮೈಸೂರಿನಂತಹ ನಗರಗಳಲ್ಲೂ ಇಂತಹ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಜಾರಿಗೊಳಿಸಬಹುದಾಗಿದೆ. ಕೇಂದ್ರ ಸರ್ಕಾರ ಸಹ ಈ ನಿಟ್ಟಿನಲ್ಲಿ ನೆರವು ಒದಗಿಸಲಿದೆ” ಎಂದು ಹೇಳಿದರು.
“ಜಪಾನಿನ ನಗರ ಸಾರಿಗೆ ವ್ಯವಸ್ಥೆ ಮಾದರಿ ಯೋಗ್ಯವಾಗಿದ್ದು, ಮೆಟ್ರೋ ಸೌಲಭ್ಯದ ಗರಿಷ್ಠ ಉಪಯೋಗ ಪಡೆಯುತ್ತಿದ್ದಾರೆ. ಅಲ್ಲಿನ ಮೆಟ್ರೋ ನಿಲ್ದಾಣಗಳು ವ್ಯವಸ್ಥಿತ ವಾಣಿಜ್ಯ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಎಲ್ಲಾ ರೈಲ್ವೇ ನಿಲ್ದಾಣ ವಿಮಾನ ನಿಲ್ದಾಣಕ್ಕಿಂತ ಚೆನ್ನಾಗಿದೆ. ಸಮಯ ಪರಿಪಾಲನೆ, ಸ್ವಚ್ಛತೆಗೆ ಮಾದರಿ. ನಮ್ಮಲ್ಲಿಯೂ ಮೆಟ್ರೋ ನಿಲ್ದಾಣಗಳ ಗರಿಷ್ಠ ಉಪಯೋಗ ಪಡೆದುಕೊಳ್ಳಲು ಯೋಜನೆಗಳನ್ನು ರೂಪಿಸಬೇಕಾಗಿದೆ. ಈ ಕುರಿತು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ” ಎಂದರು.
ಟೊಯೋಟಾ ಘಟಕ ವಿಸ್ತರಣೆಗೆ ಒಲವು
“ಪ್ರಸ್ತುತ ಜಪಾನಿನ 525 ಉದ್ದಿಮೆ ಸಂಸ್ಥೆಗಳು ಕರ್ನಾಟಕದಲ್ಲಿವೆ. ಹಲವು ಉತ್ಪಾದನಾ ಘಟಕಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿವೆ. ರಾಜ್ಯದಲ್ಲಿ ಹೊಸ ಹೂಡಿಕೆಗಳ ಮೂಲಕ ಹೆಚ್ಚಿನ ಉದ್ಯೋಗ ಸೃಷ್ಟಿಸುವುದು ನಮ್ಮ ಉದ್ದೇಶವಾಗಿದೆ. ಟೊಯೋಟಾ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ರಾಜ್ಯದಲ್ಲಿ ಪ್ರಸ್ತುತವಿರುವ ಉತ್ಪಾದನಾ ಘಟಕವನ್ನು ವಿಸ್ತರಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ” ಎಂದರು.
ಹಾರೋಹಳ್ಳಿಯಲ್ಲಿ 600 ಉದ್ಯೋಗ ಸೃಷ್ಠಿ
“ಕವಾಸಕಿ ಹೆವಿ ಇಂಡಸ್ಟ್ರೀಸ್ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿಯಲ್ಲಿ 600 ಜನರಿಗೆ ತಾಂತ್ರಿಕ ಉದ್ಯೋಗ ದೊರಕಿಸುವ ಕುರಿತು ಒಪ್ಪಂದ ಮಾಡಲಾಗಿದೆ. ಇಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಂಪೆನಿಯು ಬಂಡವಾಳ ಹೂಡಿಕೆಗೆ ಉತ್ಸುಕತೆ ತೋರಿಸಿದೆ” ಎಂದರು.
ಹೈಬ್ರಿಡ್ ಮಾದರಿ ಕಾರು ಉತ್ಪಾದನೆಗೆ ಆಹ್ವಾನ
“ಟೋಕಿಯೋ ಒಲಿಂಪಿಕ್ಸ್ ಸಮಯದಲ್ಲಿ ಟ್ಯಾಕ್ಸಿ ಮಾದರಿಯ ಹೈಬ್ರಿಡ್ ಕಾರು ಬಿಡುಗಡೆ ಮಾಡಲಾಗಿತ್ತು. ಇದೇ ಮಾದರಿಯ ಕಾರನ್ನು ನಮ್ಮ ರಾಜ್ಯದಲ್ಲಿ ಉತ್ಪಾದನೆ ಮಾಡಲು ಆಹ್ವಾನ ನೀಡಿದ್ದೇವೆ. ಇದು ಸ್ಥಳೀಯ ಆಟೋಗಳಿಗೆ ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲ. ಆಟೋಗಳಿಗೂ ನಾವು ಉತ್ತೇಜನ ನೀಡಬೇಕಾಗುತ್ತದೆ. ನಾವು ನೋಡಿದ ಟ್ಯಾಕ್ಸಿ ಕಾರು ಹೆಚ್ಚು ಅನುಕೂಲಕರವಾಗಿತ್ತು” ಎಂದರು.
“ನಯೋಗ ನಗರದಲ್ಲಿ ವಾಣಿಜ್ಯ ಹಾಗೂ ಸಾರ್ವಜನಿಕ ಸಂಚಾರ ಮೂಲಸೌಕರ್ಯ ಪರಿಶೀಲಿಸಿದ್ದೇವೆ ನ.24ರಂದು ಒಸಾಕೋಗೆ ಭೇಟಿ ನೀಡಿ ತ್ಯಾಜ್ಯದಿಂದ ಇಂಧನ ಉತ್ಪಾದನೆ ಪರಿಶೀಲಿಸಿದ್ದೇವೆ. ಪ್ಯಾನಸೋನಿಕ್, ಜೆಎಫ್ ಸಿ ಸ್ಟೀಲ್ ಸಂಸ್ಥೆಯೊಂದಿಗೂ ಚರ್ಚೆ ಮಾಡಿ ಒಪ್ಪಂದ ಮಾಡಿಕೊಂಡಿದ್ದೇವೆ. ಸುಮೊಟೋ, ಅಂಜಿನ ಮೋಟೋ, ಅಕೆಡಾ, ಶೇಕ್ ಫಾರ್ಮಾ, ಯೊಕಸಾವಾ ಸಂಸ್ಥೆಗಳೊಂದಿಗೆ ಎಂ ಬಿ ಪಾಟೀಲ್ ಅವರು ಸಭೆ ಮಾಡಿದ್ದಾರೆ” ಎಂದರು.
“ವಿದೇಶಿ ಹೂಡಿಕೆಯನ್ನು ಸುಗಮಗೊಳಿಸಲು ಎಲ್ಲಾ ಕ್ರಮಗಳನ್ನು ನಾವು ಕೈಗೊಳ್ಳಲಿದ್ದೇವೆ. ಉದ್ದಿಮೆಗಳ ಪ್ರಾರಂಭಕ್ಕೆ ಅಗತ್ಯವಿರುವ ಅನುಮೋದನೆಗಳನ್ನು ತ್ವರಿತಗೊಳಿಸಿ, ವಿಳಂಬವನ್ನು ತಪ್ಪಿಸಲು ಈಗಾಗಲೇ ಸೂಚನೆ ನೀಡಲಾಗಿದೆ” ಎಂದು ಹೇಳಿದರು.
ಪಿಪಿಪಿ ಮಾದರಿಯಲ್ಲಿ ತುಮಕೂರಿಗೆ ಮೆಟ್ರೋ ತುಮಕೂರಿಗೆ ಮೆಟ್ರೋ ವಿಸ್ತರಣೆ ಕುರಿತು ಶುಕ್ರವಾರ ಸಭೆ ನಡೆಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, “ತುಮಕೂರಿಗೆ ಮೆಟ್ರೋ ತುಮಕೂರಿಗೆ ಮೆಟ್ರೋ ವಿಸ್ತರಣೆ ಬಗ್ಗೆ ಪಿಪಿಪಿ ಮಾದರಿಯಲ್ಲಿ ಪ್ರಸ್ತಾವವಿದೆ. ಮೆಟ್ರೋದ ಜತೆಗೆ ನಗರಗಳು ಅಭಿವೃದ್ಧಿ ಹೊಂದುತ್ತವೆ. ಜನರ ಅನುಕೂಲ ಮುಖ್ಯ. ರಾಜ್ಯ ಸರ್ಕಾರ ಯಾವುದೇ ಬಂಡವಾಳ ಹೂಡಿಕೆ ಮಾಡುತ್ತಿಲ್ಲ. ಪ್ರಸ್ತುತ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಮೆಟ್ರೋ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ” ಎಂದು ತಿಳಿಸಿದರು.






Comments
Leave a Comment