ಬೆಂಗಳೂರಿನ ಶ್ರೀ ಬನಶಂಕರಿ ದೇವಿ ಸನ್ನಿಧಾನದಲ್ಲಿ28ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಅರ್ಜಿ ಆಹ್ವಾನ
28ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಅರ್ಜಿ ಆಹ್ವಾನ
ಬೆಂಗಳೂರು, ನವೆಂಬರ್ 23:
ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ವಿವಾಹ ವೆಚ್ಚದ ಭಾರವನ್ನು ಕಡಿಮೆ ಮಾಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ವತಿಯಿಂದ 28ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನು 2027ರ ಫೆಬ್ರವರಿ 11ರಂದು ಬೆಂಗಳೂರಿನ ಶ್ರೀ ಬನಶಂಕರಿ ದೇವಿ ಸನ್ನಿಧಾನದಲ್ಲಿ ಅದ್ಧೂರಿಯಾಗಿ ಆಯೋಜಿಸಲು ಸಿದ್ಧತೆಗಳು ಆರಂಭಗೊಂಡಿವೆ ಎಂದು ವೇದಿಕೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.
ವೇದಿಕೆಯ ಆಶ್ರಯದಲ್ಲಿ ನಡೆಯಲಿರುವ ಈ ಮಹೋತ್ಸವವು ಸ್ವಸ್ತಿಶ್ರೀ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ ಪಂಚಮಿಯ ಶುಭ ಸಂದರ್ಭದಲ್ಲಿ ಫೆಬ್ರವರಿ 11ರ ಗುರುವಾರ ಬೆಳಗ್ಗೆ 11.11 ರಿಂದ 12.09 ಗಂಟೆಯೊಳಗೆ ಮೇಷ ಲಗ್ನದಲ್ಲಿ ನೆರವೇರಲಿದೆ. ಕಳೆದ 27 ವರ್ಷಗಳಿಂದ ನಿರಂತರವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರುತ್ತಿರುವ ವೇದಿಕೆ, ಈ ಬಾರಿಯೂ ಹೆಚ್ಚಿನ ಸಂಖ್ಯೆಯ ಜೋಡಿಗಳನ್ನು ವೈವಾಹಿಕ ಜೀವನಕ್ಕೆ ಕರೆತರುವ ಗುರಿ ಹೊಂದಿದೆ.
1999ರಲ್ಲಿ ಆರಂಭಗೊಂಡ ಈ ಸಾಮಾಜಿಕ ಮತ್ತು ಧಾರ್ಮಿಕ ಸೇವಾ ಕಾರ್ಯಕ್ರಮದ ಮೊದಲ ವರ್ಷದಲ್ಲಿ 41 ಜೋಡಿಗಳು ವಿವಾಹ ಬಂಧನಕ್ಕೆ ಒಳಗಾಗಿದ್ದವು. ನಂತರ ವರ್ಷದಿಂದ ವರ್ಷಕ್ಕೆ ಕಾರ್ಯಕ್ರಮಕ್ಕೆ ಸಾರ್ವಜನಿಕರ ಬೆಂಬಲ ಹೆಚ್ಚುತ್ತಾ ಬಂದಿದ್ದು, ಕಳೆದ 27 ವರ್ಷಗಳಲ್ಲಿ ಸುಮಾರು 1,652ಕ್ಕೂ ಹೆಚ್ಚು ಜೋಡಿಗಳು ಈ ವೇದಿಕೆಯ ಮೂಲಕ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಸಮಾಜದಲ್ಲಿ ವಿವಾಹ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆ ಬಡವರು ಹಾಗೂ ಹಿಂದುಳಿದ ವರ್ಗಗಳ ಜನರಿಗೆ ನೆರವಾಗುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.
ಜಾತಿ, ಮತ ಮತ್ತು ಪಂಥ ಭೇದಗಳನ್ನು ಮೀರಿಸಿ ಎಲ್ಲ ವರ್ಗದ ಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸಾಮೂಹಿಕ ವಿವಾಹ ನೆರವೇರಿಸುವುದು ಈ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಮಠಾಧೀಶರ ಆಶೀರ್ವಾದ, ಗಣ್ಯರ ಮಾರ್ಗದರ್ಶನ, ದಾನಿಗಳು ಹಾಗೂ ವಿವಿಧ ಸಂಸ್ಥೆಗಳ ಸಹಕಾರದಿಂದ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ಯಶಸ್ವಿಯಾಗಿ ಮುಂದುವರಿಯುತ್ತಿದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ವಾಸಿಸುವ ವಿವಾಹಕ್ಕೆ ಇಚ್ಚೆಯುಳ್ಳ ವಧು-ವರರು ಮತ್ತು ಅವರ ಪೋಷಕರು ತಮ್ಮ ಹೆಸರುಗಳನ್ನು 2027ರ ಜನವರಿ 31ರೊಳಗೆ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 98450 61887 ಹಾಗೂ 080-26712988 ಸಂಖ್ಯೆಗೆ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.
ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ವಧು-ವರರಿಗೆ ಸಂಪ್ರದಾಯಬದ್ಧವಾಗಿ ಸಮವಸ್ತ್ರ, ಬಾಸಿಂಗ, ಕಂಕಣದಾರ, ಹೂವಿನ ಹಾರ, ಮಾಂಗಲ್ಯ, ಕಾಲುಂಗುರ, ಪೇಟ ಸೇರಿದಂತೆ ಅಗತ್ಯ ವಿವಾಹ ಸಾಮಗ್ರಿಗಳನ್ನು ಉಚಿತವಾಗಿ ಒದಗಿಸಲಾಗುವುದು. ಜೊತೆಗೆ ವಧು-ವರರ ಬಂಧುಗಳು, ಆಹ್ವಾನಿತ ಅತಿಥಿಗಳು ಹಾಗೂ ಸ್ಥಳೀಯರಿಗಾಗಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಈ 28ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವದ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಮಾಧ್ಯಮಗಳು ವ್ಯಾಪಕ ಪ್ರಚಾರ ನೀಡುವಂತೆ ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ಮನವಿ ಮಾಡಿದೆ.
ಈ ಕುರಿತು ವೇದಿಕೆಯ ವ್ಯವಸ್ಥಾಪಕರಾದ ಎ.ಹೆಚ್. ಬಸವರಾಜು, ಎಸ್.ಕೆ. ನಟರಾಜ್, ಜೆ.ಆರ್. ದಾಮೋದರ್ ನಾಯ್ಡು, ಹೆಚ್.ಕೆ. ಮುತ್ತಪ್ಪ, ಆರ್. ನಾರಾಯಣಸ್ವಾಮಿ ಹಾಗೂ ಸಿ. ಮುತ್ತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








Comments
Leave a Comment