ಗ್ಯಾರಂಟಿ ಯೋಜನೆಗಳ ಯಶಸ್ಸಿನಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳ ಶ್ರಮವಿದೆ ಜಿಎಸ್ ಟಿ ಸಂಗ್ರಹಣೆಯಲ್ಲಿ ದೇಶದಲ್ಲಿ ಪ್ರಥಮ ಸ್ಥಾನ ಗಳಿಸಲು ಪ್ರಯತ್ನಿಸಿ- ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಸಿಎಂ ಕರೆ

Banglore:

Font size:

ಗ್ಯಾರಂಟಿ ಯೋಜನೆಗಳ ಯಶಸ್ಸಿನಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳ ಶ್ರಮವಿದೆ ಜಿಎಸ್ ಟಿ ಸಂಗ್ರಹಣೆಯಲ್ಲಿ ದೇಶದಲ್ಲಿ ಪ್ರಥಮ ಸ್ಥಾನ ಗಳಿಸಲು ಪ್ರಯತ್ನಿಸಿ- ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಸಿಎಂ ಕರೆ

ಬೆಂಗಳೂರು, ಮೇ, 17 -

ಜಿಎಸ್‍ಟಿ ಸಂಗ್ರಹಣೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ ದ್ವಿತೀಯ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಎರಡನೇ ಸ್ಥಾನಕ್ಕೆ ಬರಲು ಪ್ರಯತ್ನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ತಿಳಿಸಿದರು.

ಇಂದು ಕರ್ನಾಟಕ ವಾಣಿಜ್ಯ ತೆರಿಗೆಗಳ ಸೇವಾ ಸಂಘ ಬೆಂಗಳೂರು ಇವರ ವತಿಯಿಂದ ಆಯೋಜಿಸಲಾಗಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘವು 50 ವರ್ಷಗಳ ಮೈಲಿಗಲ್ಲನ್ನು ಸಾಧಿಸಿದ್ದು, ಇದಕ್ಕಾಗಿ ಶ್ರಮಿಸಿದ ಸಂಘದ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆಗಳು. ನಿಮ್ಮೆಲ್ಲರ ಸಹಕಾರದಿಂದ ನಾನು ಆರ್ಥಿಕ ಇಲಾಖೆಯ ಜವಾಬ್ದಾರಿಯನ್ನು ದೀರ್ಘ ಕಾಲದವರೆಗೆ ನಿಭಾಯಿಸಲು ಸಾಧ್ಯವಾಯಿತು. ನಾನು ಹಣಕಾಸು ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಹಾಗೂ ಮುಖ್ಯಮಂತ್ರಿಯಾಗಿ ಹಣಕಾಸು ಇಲಾಖೆಯ ಕಾರ್ಯಭಾರವನ್ನು ನಿರ್ವಹಿಸಿದ್ದೇನೆ. ಈಗ ಸರ್ಕಾರದ ಯಶಸ್ವಿ ಆಡಳಿತಕ್ಕೆ ಎರಡು ವರ್ಷ ಪೂರೈಸಿದ್ದು, ಮೇ 20 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದರು.

ತೆರಿಗೆ ಸಂಗ್ರಹಣೆಯಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳ ಪ್ರಮುಖ ಪಾತ್ರ ವಹಿಸುತ್ತಿದ್ದು, ಇದಕ್ಕಾಗಿ ಎಲ್ಲ ಅಧಿಕಾರಿಗಳಿಗೆ ಅಭಿನಂದನೆಗಳು. ಜವಾಬ್ದಾರಿಯುತ ಅಧಿಕಾರಿಗಳಿಂದ ಉತ್ತಮ ತೆರಿಗೆ ಸಂಗ್ರಹಣೆಯಾಗುತ್ತದೆ. ವಾಣಿಜ್ಯ ತೆರಿಗೆ ಇಲಾಖೆಯಿಂದ ಹೆಚ್ಚಿನ ಮೊತ್ತದ ತೆರಿಗೆ ಸಂಗ್ರಹಣೆ ಸಾಧ್ಯವಾಗುತ್ತದೆ. ಕಳೆದ ವರ್ಷ ತೆರಿಗೆ ಸಂಗ್ರಹಣೆಗೆ 1,03,000 ಕೋಟಿಗಳ ಗುರಿನಿಗದಿಪಡಿಸಲಾಗಿದ್ದು, ಹೆಚ್ಚುವರಿ 17000 ಕೋಟಿಗಳ ತೆರಿಗೆ ಸಂಗ್ರಹಣೆಯನ್ನು ಸಾಧಿಸಲಾಗಿತ್ತು. ಈ ವರ್ಷ ತೆರಿಗೆ ಸಂಗ್ರಹಣೆಗೆ 1,20,000 ಕೋಟಿಗಳ ಗುರಿಯನ್ನು ನೀಡಲಾಗಿದ್ದು, ಅಧಿಕಾರಿಗಳು ಗುರಿಮೀರಿ ಸಾಧನೆ ಮಾಡಬೇಕಿದೆ. ಈ ವರ್ಷ 409000 ಕೋಟಿ ರೂ. ಗಳ ಬಜೆಟ್ ಮಂಡಿಸಲಾಗಿದ್ದು, ಇದರಲ್ಲಿ ಗ್ಯಾರಂಟಿ ಯೋಜನೆಗಳಿಗೆ 50,018 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈವರೆಗೆ 90,000 ಕೋಟಿ ರೂ.ಗಳನ್ನು ಗ್ಯಾರಂಟಿಯೋಜನೆಗಳಿಗೆ ವೆಚ್ಚ ಮಾಡಲಾಗಿದೆ. ಗ್ಯಾರಂಟಿಗಳಿಗೆ ಹಣ ಪೂರೈಸಲಾಗದೇ ರಾಜ್ಯ ಆರ್ಥಿಕ ದಿವಾಳಿಯಾಗುತ್ತದೆ ಎಂದು ವಿರೋಧಪಕ್ಷದವರು ಟೀಕಿಸಿದ್ದರು. ಸರ್ಕಾರದ ಈ ಯಶಸ್ಸಿಗೆ ಇಲಾಖೆಯ ಅಧಿಕಾರಿಗಳ ಶ್ರಮ ಅಡಗಿದೆ ಎಂದರು.

ತೆರಿಗೆ ಪ್ರಕ್ರಿಯೆಯಲ್ಲಿ ಸುಧಾರಣೆ ತರಲು ಸರ್ಕಾರ ಬದ್ಧ:

ನಾನು ಹಣಕಾಸಿನ ಮಂತ್ರಿಯಾಗಿದ್ದರೂ ಸಹ ತೆರಿಗೆ ಅಧಿಕಾರಿಗಳ ಕಾರ್ಯನಿರ್ವಹಣೆಯಲ್ಲಿ ಅನಗತ್ಯ ಮದ್ಯಪ್ರವೇಶ ಮಾಡಲು ಬಯಸುವುದಿಲ್ಲ. ಆದರೆ ಅಧಿಕಾರಿಗಳು ಇಲಾಖೆಗೆ ನೀಡಿರುವ ತೆರಿಗೆ ಸಂಗ್ರಹಣೆಯ ಗುರಿಯನ್ನು ಸಾಧಿಸಲು ಪ್ರಯತ್ನಿಸಬೇಕು. ಬೆಂಗಳೂರಿನಲ್ಲಿ ತೆರಿಗೆ ಸೋರಿಕೆ ಹೆಚ್ಚಿನ ಮಟ್ಟದಲ್ಲಿದೆ. ಕರ್ನಾಟಕ ತೆರಿಗೆ ಸಂಗ್ರಹಣೆಯಲ್ಲಿ ಮುಂಚೂಣಿಯಲ್ಲಿದೆ. ತೆರಿಗೆ ಪಾವತಿ ಪ್ರಕ್ರಿಯೆಯಲ್ಲಿ ಹೆಚ್ಚಿನ ಸುಧಾರಣೆಗಳನ್ನು ತರಲು ಸರ್ಕಾರ ಬದ್ಧವಾಗಿದೆ. ತೆರಿಗೆ ಅಧಿಕಾರಿಗಳ ಸಂಘದ ಬೇಡಿಕೆಗಳನ್ನು ಸರ್ಕಾರ ಪರಿಶೀಲಿಸಲಾಗುವುದು. ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಎಂದಿಗೂ ಸ್ಪಂದಿಸುತ್ತದೆ. ಅಂತೆಯೇ ಕರ್ತವ್ಯಲೋಪ ಎಸಗುವ ಅಧಿಕಾರಿ ನೌಕರರ ಮೇಲೆ ಶಿಸ್ತಿನ ಕ್ರಮವನ್ನೂ ಸರ್ಕಾರ ತೆಗೆದುಕೊಳ್ಳುತ್ತದೆ ಎಂದರು.

Prev Post ಮಾನ್ಯ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ನವದೆಹಲಿಯಲ್ಲಿ ಇಂದು ಸರ್ವಪ್ರಿಯ ವಿಹಾರ್ ನಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನದ ಶಾಖಾ ಮಠ ಕ್ಕೆ ಭೇಟಿ ನೀಡಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದ ನಾಥ ಮಹಾಸ್ವಾಮಿ ಅವರ ಆಶೀರ್ವಾದ ಪಡೆದುಕೊಂಡರು.
Next Post ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಶ್ರೀ ಕ್ಷೇತ್ರ ಕೊರಂಬಡ್ಕದಲ್ಲಿ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೇವಸ್ಥಾನಕ್ಕೆ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಭೇಟಿ