ಹನಿಟ್ರ್ಯಾಪ್ ಪ್ರಕರಣ ಬಂಟ್ವಾಳದ ಖಾಸಗಿ ಅನುದಾನಿತ ಕಾಲೇಜೊಂದಕ್ಕೂ ಸಂಬಂಧ ; ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಆರೋಪ
From Jayaram Udupi
ಮಂಗಳೂರು: ಸಚಿವ ರಾಜಣ್ಣ ಅವರು ಹನಿಟ್ರ್ಯಾಪ್ ಆಗಿರುವ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿದ್ದು ಅದಕ್ಕೂ ಬಂಟ್ವಾಳದ ಖಾಸಗಿ ಅನುದಾನಿತ ಕಾಲೇಜೊಂದಕ್ಕೂ ಸಂಬಂಧ ಇರುವ ಬಗ್ಗೆ ಸಂಶಯಗಳಿವೆ, ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ಗುರುವಾರ ಮುಖ್ಯಮಂತ್ರಿ ಶ್ರೀ ಸಿದ್ದಾರಾಮಯ್ಯ ಅವರಿಗೆ ಬರೆದ ಬಹಿರಂಗ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಲೋಲಾಕ್ಷ ಮಾತನಾಡಿದರು. ಮುಖ್ಯಮಂತ್ರಿ ಅವರು ಶುಕ್ರವಾರ ಮಂಗಳೂರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸರಣಿ ಪ್ರಶ್ನೆಗಳನ್ನು ಕೇಳಿದ ಪತ್ರವನ್ನು ಅವರು ಬಿಡುಗಡೆ ಮಾಡಿದ್ದು, ಈ ಬಗ್ಗೆ ಮುಖ್ಯಮಂತ್ರಿ ನಿಲುವು ಪ್ರಕಟಿಸಬೇಕು ಎಂದೂ ಆಗ್ರಹಿಸಿದ್ದಾರೆ.
ಬಂಟ್ವಾಳದ ಖಾಸಗಿ ಅನುದಾನಿತ ಕಾಲೇಜಿನ ಆಡಳಿತ ಮಂಡಳಿ ಕಾನೂನು ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಅದನ್ನು ವಜಾ ಮಾಡಿ ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು ಸಹಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ.ಈ ಕಡತ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರ ಮುಂದಿದೆ ಎನ್ನಲಾಗಿದೆ. ಕಾಲೇಜು ನಡೆಸುತ್ತಿರುವ ವಿದ್ಯಾವರ್ಧಕ ಸಂಘದ ವ್ಯಾಪ್ತಿಯಲ್ಲಿ ಶಿಕ್ಷಣ ಸಂಸ್ಥೆಗಳು ಇರುವ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಇದೆ. ಆಡಳಿತಾಧಿಕಾರಿ ನೇಮಕ ಕಡತ ಸಚಿವರ ಬಳಿಯೇ ಚೆನ್ನಾಗಿ ಮಲಗಿದೆ, ಸಚಿವರು ತಾವೇ ಹೇಳಿಕೊಂಡಂತೆ ಹನಿಟ್ರ್ಯಾಪ್ ನಲ್ಲಿ ಇದ್ದಾರೆ ಎಂದು ಲೋಲಾಕ್ಷ ಗುಮಾನಿ ವ್ಯಕ್ತಪಡಿಸಿದರು.
ಈ ಅನುದಾನಿತ ಕಾಲೇಜಿನ ಪ್ರಿನ್ಸಿಪಾಲ್ ಕಾಲೇಜು ಶಿಕ್ಷಣ ಇಲಾಖೆಯ ಆದೇಶಗಳನ್ನು ಪಾಲಿಸುತ್ತಿಲ್ಲ. ನಿವೃತ್ತಿಯ ಕೊನೆಯ ದಿನದಂದು ವರದಿ ಮಾಡಕೊಳ್ಳಲು ಹೋದ ಅಧ್ಯಾಪಕರಿಗೆ ನಿವೃತ್ತಿ ವರದಿ ಮಾಡಿಕೊಳ್ಳಲು ಅವಕಾಶ ನೀಡದಿರಲು ಕಾಲೇಜಿಗೇ ಬೀಗ ಜಡಿದು ಹೋದ ಪ್ರಿನ್ಸಿಪಾಲ್ ನನ್ನು ಅಮಾನತು ಮಾಡಬೇಕು ಎಂದು ಕಾಲೇಜು ಶಿಕ್ಷಣ ಜಂಟಿ ನಿರ್ದೇಶಕರು ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ. ಆತನ ವಿರುದ್ದ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಆತನ ಎದುರು ಮಂಡಿಯೂರಿ ಕುಳಿತಿದ್ದಾರೆ ಎಂದು ಲೇವಡಿ ಮಾಡಿರುವ ಲೋಲಾಕ್ಷ ನಿವೃತ್ತಿಯಾದವರಿಗೆ ನಿವೃತ್ತಿ ಸೌಲಭ್ಯ ಸಿಗದಂತೆ ಮಾಡಲಾಗುತ್ತಿದೆ, ಸೇವಾ ಪುಸ್ತಕ ಗಳನ್ನು ಸರಕಾರಕ್ಕೆ ನೀಡದೆ ಪ್ರಿನ್ಸಿಪಾಲ್ ಸವಾಲು ಹಾಕುತ್ತಿದ್ದಾರೆ, ಅದನ್ನು ತರಿಸಿಕೊಳ್ಳುವ ಕರ್ತವ್ಯ ಬಧ್ದತೆ ಅಧಿಕಾರಿಗಳಲ್ಲಿ ಕಾಣುತ್ತಿಲ್ಲ ಎಂದಾರೋಪಿಸಿದರು.
ವಿದ್ಯಾವರ್ಧಕ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಬೇಕು, ಕಳೆದ ನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳಿಲ್ಲದ ಕಾರಣಕ್ಕೆ ಪುಕ್ಕಟ್ಟೆ ವೇತನ ಪಾವತಿ ಮಾಡಲು ಕಾರಣನಾಗಿ, ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ನಷ್ಟ ಉಂಟು ಮಾಡಿರುವ ಪ್ರಿನ್ಸಿಪಾಲ್ ರಿಂದ ನಷ್ಟ ವಸೂಲು ಮಾಡಬೇಕು. ಇಡೀ ಅವ್ವಹಾರದ ಬಗ್ಗೆ ತನಿಖಾ ತಂಡ ಕಳುಹಿಸಿ ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದೂ ಒಕ್ಕೂಟ ಮುಖ್ಯ ಮಂತ್ರಿಗಳಿಗೆ ಬರೆದ ಬಹಿರಂಗ ಪತ್ರದಲ್ಲಿ ಆಗ್ರಹಿದೆ ಮತ್ತು ಅದನ್ನು ಮಾಡಬಲ್ಲಿರಾ ಎಂದೂ ಪ್ರಶ್ನಿಸಿದೆ.
ಕ್ರಿಮಿನಲ್ ಮೊಕ್ಕದ್ದಮೆ ಏಕಿಲ್ಲ;
ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಮೀಸಲಿಟ್ಟ ಜಮೀನನ್ನು ಕಾನೂನು ಬಾಹಿರವಾಗಿ ಅತಿಕ್ರಮಣ ಮಾಡುವುದು ಕ್ರಿಮಿನಲ್ ಅಪರಾಧ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ೮೫೧೦ ಎಕರೆ ಡಿ.ಸಿ. ಮನ್ನಾ ಭೂಮಿಯಲ್ಲಿ ೭೩೬೬ ಎಕರೆ ಜಮೀನನ್ನು ವಿವಿಧ ಉದ್ದೇಶಗಳಿಗೆ ಬಳಸಲಾಗಿದೆ.ಉಳಿದ ೧೧೪೪ ಎಕರೆ ಭೂಮಿಯಲ್ಲಿ ೯೭೭ ಎಕರೆ ಅತಿಕ್ರಮವಾಗಿದೆ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಹೇಳುತ್ತಿದೆ. ಈ ಬಗ್ಗೆ ದೂರುಗಳನ್ನು ನೀಡಲಾಗಿದೆ, ಪ್ರತಿಭಟನೆ ನಡೆಸಲಾಗಿದೆ,ಆದರೆ ಇದುವರೆಗೂ ಯಾಕೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಲ್ಲ, ಇದಕ್ಕೆ ಮುಖ್ಯಮಂತ್ರಿ ಉತ್ತರ ನೀಡಬೇಕು ಎಂದೂ ಲೋಲಾಕ್ಷ ಒತ್ತಾಯಿಸಿದರು.
ದೇಶದಲ್ಲಿ ಕ್ರೈಸ್ತ ರು ಪರಿಶಿಷ್ಟ ಜಾತಿಯ ಸ್ಥಾನ ಮಾನಕ್ಕೆ ಅರ್ಹರಲ್ಲ, ಆದರೆ ರಾಜ್ಯದಲ್ಲಿ ಒಳ ಮೀಸಲಾತಿಗೆ ರಚಿಸಲಾದ ಆಯೋಗದ ಮೂಲಕವೇ ಕ್ರೈಸ್ತರು ಪರಿಶಿಷ್ಟ ಜಾತಿಯ ಸೌಲಭ್ಯಗಳನ್ನು ಪಡೆಯುವಂತಹ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಅವರು ಒಳಮೀಸಲಾತಿ ಸಮೀಕ್ಷೆಯಲ್ಲಿ ಧರ್ಮ ದಾಖಲು ಮಾಡಲು ಕಲಂ ಸೇರ್ಪಡೆ ಮಾಡಬೇಕು ಎಂಬ ಒಕ್ಕೂಟದ ಬೇಡಿಕೆಯನ್ನು ಪುನರುಚ್ಚರಿಸಿದರು.
ಕಾಂತಪ್ಪ ಅಲಂಗಾರು,ಅನಿಲ್ ಕಂಕನಾಡಿ, ಲಕ್ಷ್ಮಣ್ ಕಾಂಚನ್ ಉಪಸ್ಥಿತರಿದ್ದರು.