ಬೂಕರ್ ಪ್ರಶಸ್ತಿಗೆ ಬಾನು ಮುಷ್ತಾಕ್ ಎಲ್ಲ ರೀತಿಯಿಂದಲೂ ಅರ್ಹ -ಹೆಚ್ ಎಲ್ ಪುಷ್ಪ
ಬೆಂಗಳೂರು ,ಮೇ 15-ಕನ್ನಡದ ಲೇಖಕಿ, ಅದರಲ್ಲಿಯೂ ಅಲ್ಪಸಂಖ್ಯಾತ ಸಮುದಾಯಧ ಹುಟ್ಟು ಹೋರಾಟಗಾರ್ತಿ, ಪ್ರಖರ ಚಿಂತಕಿ, ಲೇಖಕಿ ಬಾನು ಮುಸ್ತಾಕ್ ಎಲ್ಲ ದೃಷ್ಟಿಯಿಂದಲೂ ಬೂಕರ್ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ನಾಡಿನ ಸಾಂಸ್ಕೃತಿಕ ಲೋಕದ ಸಮಸ್ತ ಹಾರೈಕೆ ಅವರ ಜೊತೆಗಿದೆ ಎಂದು ಖ್ಯಾತ ಕವಿಯಿತ್ರಿ , ಲೇಖಕಿ,ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಡಾ.ಹೆಚ್ ಎಲ್ ಪುಷ್ಪ ಹೇಳಿದ್ದಾರೆ.
ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ ಜಯನಗರದ ಜೈನ್ ಯೂನಿವರ್ಸಿಟಿ ಆಫ್ ಕಾಮರ್ಸ್ ನ
ಸಹಯೋಗದೊಂದಿಗೆ ಆಯೋಜಿಸಿದ್ದ ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮದಲ್ಲಿ ಬಾನು ಮುಷ್ತಾಕ್ ರ ಹಸೀನಾ ಮತ್ತು ಇತರ ಕಥೆಗಳು ಕೃತಿಯನ್ನು ಕುರಿತು ಮಾತನಾಡುತ್ತಿದ್ದರು .
ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ಸಾಹಿತ್ಯ ಪ್ರಶಸ್ತಿ ಎಂದು ಪರಿಗಣಿಸಲ್ಪಟ್ಟಿರುವ ಬೂಕರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಬಾನು ಮುಷ್ಟಾಕ್ ಅವರ ಎದೆಯ ಹಣತೆ ಕಥಾ ಸಂಕಲನ ಪರಿಗಣಿಸಲ್ಪಟ್ಟಿರುವ ಹಿನ್ನೆಲೆಯಲ್ಲಿ ಈ ಕುರಿತು ಮಾತನಾಡುತ್ತಿದ್ದ ಪುಷ್ಪ ಅವರು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಹಿನ್ನೆಲೆಯಿಂದ ಬಂದ ಒಬ್ಬ ಮಹಿಳೆ ತನ್ನದೇ ಧರ್ಮದ ಹೆಸರಿನಲ್ಲಿ ನಡೆಯುವ ಆಚರಣೆಗಳಲ್ಲಿ ಹೆಣ್ಣು ಪಡುವ ನೋವು ಬಿಚ್ಚಿಡುವ ದಿಟ್ಟತನ ಮೆರೆದಿದ್ದಾರೆ. ಅದನ್ನು ಎಲ್ಲರೂ ಮೆಚ್ಚಲೇಬೇಕು. ಅದನ್ನು ಹೇಳುವ ಸಾಹಿತ್ಯಕ ಶಕ್ತಿ ಅವರಲ್ಲಿದೆ. ಅವರು ಕನ್ನಡದ ಹೆಮ್ಮೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಲೋಕಕ್ಕೆ ಇಂತಹ ಅತ್ಯುತ್ತಮ ಅವಕಾಶ ಮೊದಲ ಬಾರಿಗೆ ಬಂದಿದೆ. ಧರ್ಮದ ಹೆಸರಿನಲ್ಲಿ ಕೆಸರು ಎರಚಿ ವಿಕೃತ ಆನಂದ ಪಡುವ ಪ್ರವೃತ್ತಿಯ ಮಧ್ಯೆ ಬಾನು ಮುಷ್ತಾಕ್ ಅವರು ತಮ್ಮ ಸೃಜನಶೀಲ ಅಭಿವ್ಯಕ್ತಿಯ ಜೊತೆ ತಮ್ಮ ಕಥೆಗಳ ಮೂಲಕ ಇಂತಹ ವಿಕೃತಿಗಳ ವಿರುದ್ಧ ದನಿ ಎತ್ತುತ್ತಿರುವುದು ಅವರ ಸಾಹಿತ್ಯಕ್ಕೆ ವಿಶೇಷ ಶಕ್ತಿಯನ್ನು ಕೊಟ್ಟಿದೆ ಎಂದರು.
ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ವನ್ನು ನೋಡುವ ದೃಷ್ಟಿಕೋನ ಬದಲಾಗಬೇಕು, ಅದಕ್ಕೆ ಇರುವ ಏಕೈಕ ಮಾರ್ಗವೆಂದರೆ ಅದು ಸಾಹಿತ್ಯ, ಬಾನು ಮುಷ್ತಾಕ್ ಅವರು ತಮ್ಮ ಕೃತಿಗಳಲ್ಲಿ ಧರ್ಮದೊಳಗಿನ ದ್ವಂದ್ವಗಳು ಮತ್ತು ಅದರಿಂದ ಹೆಣ್ಣಿನ ಮೇಲೆ ಆಗುವ ದೌರ್ಜನ್ಯ, ಸುನ್ನತಿ ಆಚರಣೆಯ ಹಿಂದಿನ ನಿಲುವುಗಳು, ಧರ್ಮದ ಒಳಗೆ ಗಂಡಿಗಿರುವ ಸ್ವಾತಂತ್ರ ಮತ್ತು ಹೆಣ್ಣಿನ ಬಲಹೀನತೆ ,ಹೀಗೆ ಧರ್ಮದ ಒಳಗೆ ,ಹೊರಗೆ ನಡೆಯುವ ಹೋರಾಟ ,ಅದನ್ನು ನಿಭಾಯಿಸುವ ಭಾನು ಮುಷ್ತಾಕ್ ಅವರ ದಿಟ್ಟತನ ಆದರ್ಶಪ್ರಾಯವಾದದ್ದು ಎಂದು ಹೇಳಿದರು.
ಸಮಾಜದಲ್ಲಿರುವ ಕೆಡುಕುಗಳನ್ನು ಮಹಿಳೆ ಸಂಯಮದಿಂದ ಗೆದ್ದು ಬರುತ್ತಾಳೆ. ಈ ಸಂಯಮ ಎಲ್ಲಿಯವರೆಗೆ ಎಂದು ಪ್ರಶ್ನಿಸುವ ಬಾನು ಮುಷ್ತಾಕ್ ಅವರ ಬದುಕೇ ಉರಿಯುವ ಬೆಂಕಿ ಇದ್ದ ಹಾಗೆ. ತೃತೀಯ ಜಗತ್ತಿಗೆ ಮಹಿಳೆಯರ ಭಾವಾಭಿವ್ಯಕ್ತಿಯನ್ನು ತೆರೆದಿಡುವ ಬಾನು ಮುಷ್ತಾಕ್ ಅವರ ಸಾಹಿತ್ಯ ಕನ್ನಡದ ಓದುಗರ ಪಾಲಿಗೆ ಮಾನವತೆಯ ಕಡೆ ಹೋಗುವುದನ್ನು ಕಲಿಸುವ ಸಾಹಿತ್ಯವಾಗಿದೆ ಎಂದು ಎಚ್ ಎಲ್ ಪುಷ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಇಂದಿನ ವಿದ್ಯಾರ್ಥಿಗಳು ಓದುವುದನ್ನು ಮರೆಯುತ್ತಿದ್ದಾರೆ, ಕಾಲೇಜುಗಳಲ್ಲಿ ಕಲಿಸುವ ಶಿಕ್ಷಣ ಶೈಕ್ಷಣಿಕವಾದದ್ದು, ಆದರೆ ಸಾಹಿತ್ಯ ಬದುಕನ್ನು ಕಲಿಸುತ್ತದೆ. ಆದದರಿಂದ ಇಂದಿನ ಯುವ ಜನತೆ ಸಾಹಿತ್ಯವನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು ಎಂದರು. ಬಾನು ಮುಷ್ತಾಕ್ ಅವರಿಗೆ ಸಮಸ್ತ ಕನ್ನಡಿಗರ ಹಾರೈಕೆ ಇದೆ .ಅವರಿಗೆ ಬೂಕರ್ ಪ್ರಶಸ್ತಿ ಲಭಿಸಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಜೈನ್ ಯುನಿವರ್ಸಿಟಿಯ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಎಂ ಕೆ ಶ್ರೀಧರ್ ಹಾಗೂ ಕನ್ನಡ ವಿಭಾಗದ ಸಂಯೋಜಕರಾದ ಶ್ರೀಮತಿ ರಾಜೇಶ್ವರಿ ಉಪಸ್ಥಿತರಿದ್ದರು.
ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ ಬಿ ಕಿರಣ್ ಸಿಂಗ್ ಪ್ರಾಸ್ತಾವಿಕ ಭಾಷಣ ಮಾಡಿದರು
ಕನ್ನಡ ಪುಸ್ತಕ ಪ್ರಾಧಿಕಾರವು ಇಂದು ಜೈನ್ ಯುನಿವರ್ಸಿಟಿ. (ಡೀಮ್ಡ್-ಟು-ಬಿ-ಯೂನಿವರ್ಸಿಟಿ)ಯ, ಸ್ಕೂಲ್ ಆಫ್ ಕಾಮರ್ಸ್, ಸಿ ಎಸ್ & ಐ ಟಿ, ಎಸ್ ಎಚ್ & ಎಸ್ ಎಸ್ನ ಕನ್ನಡ ಭಾಷಾ ವಿಭಾಗ ಹಾಗೂ ಆದಿಕವಿ ಪಂಪ ಸಂಶೋಧನಾ ವೇದಿಕೆ ಇವರ ಸಹಯೋಗದೊಂದಿಗೆ “ಅಂಗಳದಲ್ಲಿ ತಿಂಗಳ ಪುಸ್ತಕ” ಯೋಜನೆಯಡಿ 2025ರ ಬೂಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಶ್ರೀಮತಿ ಬಾನು ಮುಷ್ತಾಕ್ ಅವರ “ಹಸೀನಾ ಮತ್ತು ಇತರ ಕಥೆಗಳು” ಕೃತಿ ಕುರಿತು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹಿರಿಯ ಲೇಖಕಿ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೆಚ್.ಎಲ್. ಪುಷ್ಪಾ ಅವರು ಈ ಕೃತಿಯನ್ನು ಕುರಿತು ಮಾತನಾಡಿದರು. ಜಯನಗರ 9ನೇ ಬಡಾವಣೆ ಯಲ್ಲಿರುವ ಜೈನ್ (ಡೀಮ್ಡ್-ಟು-ಬಿ-ಯೂನಿವರ್ಸಿಟಿ)ಯ, ಜೆ ಜಿ ಐ ನಾಲೆಡ್ಜ್ ಕ್ಯಾಂಪಸ್ ನಲ್ಲಿ ಆಯೋಜನೆಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಜೈನ್(ಡೀಮ್ಡ್-ಟು-ಬಿ-ಯುನಿವರ್ಸಿಟಿ)ಯ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಕೆ. ಶ್ರೀಧರ್ ಅವರು ಉಪಸ್ಥಿತರಿದ್ದರು.ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ ಬಿ ಕಿರಣ್ ಸಿಂಗ್ ,ಸ್ಕೂಲ್ ಆಫ್ ಕಾಮರ್ಸ್ನ ಕನ್ನಡ ಭಾಷಾ ವಿಭಾಗದ ಸಂಯೋಜಕರಾದ ಶ್ರೀಮತಿ ರಾಜೇಶ್ವರಿ ವೈ.ಎಂ. ಅವರು ಭಾಗವಹಿಸಿದರು.