ದಲಿತರನ್ನು ತುಳಿದವರೇ ಕಾಂಗ್ರೆಸ್‌ನವರು: ಪ್ರತಿಪಕ್ಷ ನಾಯಕ ಆರ್.ಅಶೋಕ ಜಾತಿ ಗಣತಿ ವೈಜ್ಞಾನಿಕವಾಗಿ ಆಗಿಲ್ಲ /// ಭೀಮ ಹೆಜ್ಜೆʼ ಸಂಭ್ರಮ ಆಚರಿಸದೆ ಅಂಬೇಡ್ಕರ್‌ಗೆ ಅವಮಾನ ರಾಜ್ಯ ಸರ್ಕಾರದ ವಿರುದ್ಧ ಸಚಿವ ಪ್ರಲ್ಹಾದ ಜೋಶಿ ಆರೋಪ
ಬೆಂಗಳೂರು, ಏ. 11 -ಕಾಂಗ್ರೆಸ್‌ನವರು ಹಲವಾರು ವರ್ಷಗಳ ಕಾಲ ದಲಿತರನ್ನು ತುಳಿದುಕೊಂಡೇ ಬಂದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ವಿಧಾನಸೌಧದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ “ಭೀಮ ಹೆಜ್ಜೆ 100 ರ ಸಂಭ್ರಮ” ಕಾರ್ಯಕ್ರಮದ ಉದ್ಘಾಟನೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ದಲಿತರ ಬಗ್ಗೆ ಮಾತಾಡುವಾಗಲೆಲ್ಲ ಅವರು ತುಳಿತಕ್ಕೆ ಒಳಗಾದವರು ಎಂದು ಹೇಳುತ್ತೇವೆ. ಆದರೆ ಈ ರೀತಿ ತುಳಿದವರು ಯಾರು ಎಂದು ಪ್ರಶ್ನೆ ಮಾಡಿದರೆ, ಕಾಂಗ್ರೆಸ್‌ನವರೇ ಎಂಬ ಉತ್ತರ ಸಿಗುತ್ತದೆ. ಇಷ್ಟು ವರ್ಷಶೋಷಿತರನ್ನು ಕಾಂಗ್ರೆಸ್‌ನವರೇ ತುಳಿದಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕಾಂಗ್ರೆಸ್‌ನ ಕಳ್ಳರು ದಲಿತರನ್ನು ಉದ್ಧಾರ ಮಾಡಲಿಲ್ಲ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್‌ರ ಹೆಸರನ್ನು ಕಾಂಗ್ರೆಸ್‌ನವರು ದುರುಪಯೋಗ ಮಾಡಿಕೊಂಡರು. ನರೇಂದ್ರ ಮೋದಿ ಪ್ರಧಾನಿಯಾದ ಬಳಿ ಅಂಬೇಡ್ಕರರ ಜೀವನದ ಪ್ರಮುಖ ಸ್ಥಳಗಳನ್ನು ಪಂಚತೀರ್ಥವೆಂದು ಯಾತ್ರಾ ಸ್ಥಳವಾಗಿಸಿದರು. ಕಾಂಗ್ರೆಸ್ ನಾಯಕರು ತಾವು ದಲಿತರ ಪರ ಎಂದು ಹೇಳುತ್ತಾರೆ. ಆದರೆ ದಲಿತರಿಗೆ ಮೋಸ ಮಾಡುತ್ತಾರೆ ಎಂದು ದೂರಿದರು.
ವಕ್ಫ್ ಮಂಡಳಿ ಲಕ್ಷಾಂತರ ದಲಿತರ ಆಸ್ತಿಗಳನ್ನು ಲೂಟಿ ಮಾಡಿದೆ. ವಕ್ಫ್‌ನಿಂದಾದ ಭೂ ಕಬಳಿಕೆ ಬಗ್ಗೆ ನಾನು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾಗ, ದೂರು ಹೇಳಿಕೊಳ್ಳಲು ಬರುತ್ತಿದ್ದವರಲ್ಲಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದರು. ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ವಿರುದ್ಧವಾಗಿ ಕಾಂಗ್ರೆಸ್ ನಿಂತುಕೊಳ್ಳುತ್ತದೆ ಎಂಬುದರಲ್ಲೇ ಅವರ ದಲಿತರ ಕಾಳಜಿ ಅರ್ಥವಾಗುತ್ತದೆ. ಸಂವಿಧಾನ ಉಳಿಯಬೇಕು, ಕಾಂಗ್ರೆಸ್‌ನ ಪೊಳ್ಳು ಭರವಸೆಗಳು ಹೋಗಬೇಕು ಎಂದರು.
ಜಾತಿ ಗಣತಿ ವೈಜ್ಞಾನಿಕವಲ್ಲ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿಯಲ್ಲಿ ಸಮೀಕ್ಷೆ ಮಾಡಿದ್ದವರು ಎಲ್ಲರ ಮನೆಗೆ ಹೋಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿ ಮಾಡಿಸಿರುವ ವರದಿ. ಇದರಲ್ಲಿ ರಾಜಕೀಯ ಇರುವುದರಿಂದ ಇದನ್ನು ಯಾರೂ ಒಪ್ಪಲ್ಲ. ನಾನು ಕೂಡ ಜಾತಿ ಗಣತಿ ಆಗಬೇಕು ಎನ್ನುತ್ತೇನೆ. ಆದರೆ ಯಾರಿಗೋ ಅನುಕೂಲ ಮಾಡಿಕೊಡಲು ಜಾತಿಜಾತಿಗಳ ನಡುವೆ ವಿಷಬೀಜ ಬಿತ್ತಲು ಈ ವರದಿ ರೂಪಿಸಲಾಗಿದೆ. ಕಾಂಗ್ರೆಸ್‌ಗೆ ಇದೇ ಬೇಕಾಗಿದೆ ಎಂದರು.
ಗುತ್ತಿಗೆದಾರರು ಕಮಿಶನ್ ಆರೋಪ ಮಾಡಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕರು ಸಭೆ ಮಾಡಿ ಚರ್ಚಿಸಲಿ. ಯಾವ ಖಾತೆಗಳಲ್ಲಿ ಎಷ್ಟು ಲೂಟಿ ನಡೆಯುತ್ತಿದೆ ಎಂದು ಹೇಳಿದ್ದಾರೆ. ಕಮಿಶನ್ ಕೊಡುವವರಿಗೆ ಬಿಲ್ ಪಾವತಿಯಾಗುತ್ತದೆ. ಅಬಕಾರಿ ಇಲಾಖೆಯಲ್ಲಿ ಸಚಿವರ ಮಗ ಲೂಟಿ ಮಾಡುತ್ತಿದ್ದಾರೆ. ಸಚಿವರ ಮೇಲೆ ಇಷ್ಟೆಲ್ಲ ಆರೋಪ ಬಂದರೂ ಸಿಎಂ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಳ್ಳುತ್ತಾರೆ. ಭ್ರಷ್ಟಾಚಾರವೇ ನಮ್ಮ ಬಂಧು ಬಳಗ ಎಂದು ಕಾಂಗ್ರೆಸ್ ಘೋಷಣೆ ಮಾಡಿಕೊಳ್ಳಬೇಕು. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದೇ ಇರಲು ಕಮಿಶನ್ ವಸೂಲಿ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಸಿಎಂ ಆಗಲು ಕಮಿಶನ್ ಸಂಗ್ರಹಿಸುತ್ತಿದ್ದಾರೆ. ಸಚಿವರು ಕೂಡ ಸಿಎಂ ಆಗಲು ಕಮಿಶನ್ ಮಾಡುತ್ತಿದ್ದಾರೆ. ವಿಧಾನಸೌಧದ ಸಚಿವರ ಕಚೇರಿಗಳು ಕಲೆಕ್ಷನ್ ಸೆಂಟರ್ ಆಗಿದೆ. ಜೊತೆಗೆ ಜನರ ಮೇಲೆ 80 ಸಾವಿರ ಕೋಟಿ ರೂ. ತೆರಿಗೆ ಹಾಕಿದ್ದಾರೆ ಎಂದು ದೂರಿದರು.
ಜೆಡಿಎಸ್‌ನ ಹೋರಾಟಕ್ಕೆ ಬಿಜೆಪಿಯ ಸಂಪೂರ್ಣ ಬೆಂಬಲವಿದೆ. ಯಾವ ಹೋರಾಟ ಒಟ್ಟಿಗೆ ಮಾಡಬೇಕು, ಪ್ರತ್ಯೇಕ ಮಾಡಬೇಕೆಂದು ಎಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚಿಸಲಾಗುವುದು. ನಮ್ಮ ಅವರ ನಡುವಿನ ಬಾಂಧವ್ಯಕ್ಕೆ ಯಾರೂ ಹುಳಿ ಹಿಂಡಲು ಸಾಧ್ಯವೇ ಇಲ್ಲ ಎಂದರು.
------
ಭೀಮ ಹೆಜ್ಜೆʼ ಸಂಭ್ರಮ ಆಚರಿಸದೆ ಅಂಬೇಡ್ಕರ್‌ಗೆ ಅವಮಾನ
ರಾಜ್ಯ ಸರ್ಕಾರದ ವಿರುದ್ಧ ಸಚಿವ ಪ್ರಲ್ಹಾದ ಜೋಶಿ ಆರೋಪ
ಶಶಿಕಲಾ ಜೊಲ್ಲೆ ಅವರು ಗಮನ ಸೆಳೆದರೂ ಸರ್ಕಾರದ ಅನಾದಾರ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಡೇಡ್ಕರ್ ಅವರ ʼಭೀಮ ಹೆಜ್ಜೆʼ ಶತಮಾನ ಸಂಭ್ರಮ ಕಾರ್ಯಕ್ರಮ ಆಚರಿಸದೆ ಅವಮಾನಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಗಂಭೀರ ಆರೋಪ ಮಾಡಿದರು.
ಬೆಂಗಳೂರಿನಲ್ಲಿ ಇಂದು "ಭೀಮ ಹೆಜ್ಜೆʼ ಶತಮಾನ ಸಂಭ್ರಮ ನಿಮಿತ್ತ ನಿಪ್ಪಾಣಿವರೆಗೆ ಏರ್ಪಡಿಸಿದ್ದ ಬೈಕ್ ಜಾಥಾಕ್ಕೆ ಚಾಲನೆ ನೀಡಿದ ವೇಳೆ ಮಾದ್ಯಮದವರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಅಂಬೇಡ್ಕರ್ ಅವರಿಗೆ ಮತ್ತೂ ಅವಮಾನವನ್ನೇ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕಿ ಶಶಿಕಲಾ ಜೊಲ್ಲೆ ಅವರು ಸರ್ಕಾರದ ಗಮನ ಸೆಳೆದರೂ ರಾಜ್ಯ ಸರ್ಕಾರ "ಭೀಮ ಹೆಜ್ಜೆʼ ಶತಮಾನ ಸಂಭ್ರಮ ಆಚರಣೆಗೆ ಅನಾದಾರ ತೋರಿದೆ. ಅಂಬೇಡ್ಕರ್ ಮತ್ತು ದಲಿತರ ಮೇಲೆ ಕಾಂಗ್ರೆಸ್ಸಿಗರಿಗೆ ನಿಜವಾದ ಗೌರವವೇ ಇಲ್ಲ. ಮೊನ್ನೆ ಕಾಂಗ್ರೆಸ್ ಸಮಾವೇಶದಲ್ಲಿ ದಲಿತ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೇಗೆ ನಡೆಸಿಕೊಂಡಿದೆ ಎಂಬುದನ್ನು ದೇಶದ ಜನ ಗಮನಿಸಿದ್ದಾರೆ ಎಂದು ಚಾಟಿ ಬೀಸಿದರು.
ಮಹಾತ್ಮ ಗಾಂಧಿ ಅವರು ಬೆಳಗಾವಿಗೆ ಬಂದು ಹೋದ ಕಾರಣಕ್ಕೆ "ನೂರು ವರ್ಷದ ಸಂಭ್ರಮʼ ಎಂಬ ನೆಪದಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಧಿವೇಶನ ನಡೆಸಿಕೊಂಡಿತು. ಆದರೆ, ಅದೇ ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಸಂವಿಧಾನ ಶಿಲ್ಪಿ, ದಲಿತ ನಾಯಕ ಡಾ.ಅಂಬೇಡ್ಕರ್ ಅವರು ಬಂದು ಹೋದ ಸವಿ ನೆನಪಿಗೆ "ಭೀಮ ಹೆಜ್ಜೆʼ ಶತಮಾನದ ಸಂಭ್ರಮ ನಡೆಸಲು ಮುಂದಾಗಲಿಲ್ಲ ಏಕೆ? ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದರು.
ಮಹಾತ್ಮ ಗಾಂಧಿ ಶತಮಾನ ಸಂಭ್ರಮ ಸಮಾರಂಭವನ್ನೂ ಸರ್ಕಾರ ಅಚ್ಚುಕಟ್ಟಾಗಿ ಆಚರಿಸಲಿಲ್ಲ. ಬದಲಾಗಿ ಕಾಂಗ್ರೆಸ್ ಪಕ್ಷದ್ದೊಂದು ಅಧೀವೇಶನದ ರೀತಿ ನಡೆಸಿತು. ಈಗ ನೋಡಿದರೆ ಅದೇ ನಿಪ್ಪಾಣಿಗೆ ಅಂಬೇಡ್ಕರ್ ಬಂದು ಹೋದ ಸವಿನೆನಪಿಗೆ "ಭೀಮ ಹೆಜ್ಜೆʼ ಶತಮಾನ ಸಂಭ್ರಮ ಸಮಾರಂಭ ಆಯೋಜಿಸದೆ ಇಡೀ ದಲಿತ ಸಮುದಾಯವನ್ನೇ ಅವಮಾನಿಸಿದೆ ಎಂದು ಆರೋಪಿಸಿದರು.