ಪೊಲೀಸ್ ಭದ್ರತೆ ನಡುವೆ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗೆ ಮುತ್ತಿಕ್ಕಿದ ಯುವಕ / ರಿಷಬ್ ಶೆಟ್ಟಿಗೆ ದೈವದ ಅಭಯ/ ನಳಿನ್‌ಗೆ ರಾಜಕೀಯ ಸ್ಥಾನಮಾನ ಸಿಗಲಿ - ಡಿಕೆಶಿ
.from Jayaram Udupi
ಪೊಲೀಸ್ ಭದ್ರತೆ ನಡುವೆ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗೆ ಮುತ್ತಿಕ್ಕಿದ ಯುವಕ
ಮಂಗಳೂರು: ಪೊಲೀಸ್ ಭದ್ರತೆ ನಡೆವೆಯೇ ಯುವಕನೊಬ್ಬ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗೆ ಮುತ್ತಿಕ್ಕಿರುವ ಘಟನೆ ನಡೆದಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಶಾಫಿ ಬೆಳ್ಳಾರೆಯನ್ನು ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆದುಕೊಂಡು ಬಂದಿದ್ದರು. ಆ ವೇಳೆ ಕೋರ್ಟ್ ಆವರಣದಲ್ಲಿ ಪೊಲೀಸರ ಭದ್ರತೆ ನಡುವೆ ಯುವಕನೊಬ್ಬ ಬಂದು ಆರೋಪಿ ಶಾಫಿ ಬೆಳ್ಳಾರೆ ಹಣೆಗೆ ಮುತ್ತು ಕೊಟ್ಟಿದ್ದಾನೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಆರೋಪಿ ಶಾಫಿ ಬೆಳ್ಳಾರೆ ಈಗಾಗಲೇ ಎನ್‌ಐಎಯಿಂದ ಬಂಧನವಾಗಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆದರೆ ೨೦೧೭ರಲ್ಲಿ ಆರ್.ಎಸ್.ಎಸ್ ಹಾಗೂ ಕಲ್ಲಡ್ಕ ಭಟ್ ವಿರುದ್ಧ ಅವಹೇನಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಟಿ ವಾರೆಂಟ್ ಮೇಲೆ ಪೊಲೀಸರು ಶಾಫಿ ಬೆಳ್ಳಾರೆಯನ್ನ ಕರೆದುಕೊಂಡು ಬಂದು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಿದರು. ಈ ವೇಲೆ ಈ ಮುತ್ತು ಕೊಟ್ಟಿರುವ ಘಟನೆ ನಡೆದಿದೆ.
ರಿಷಬ್ ಶೆಟ್ಟಿಗೆ ದೈವದ ಅಭಯ
.
ಮಂಗಳೂರು: ನಟ, ನಿರ್ದೇಶಕ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಮಂಗಳೂರಿನಲ್ಲಿ ನಡೆದ ಪಂಜುರ್ಲಿ ನೇಮಕ್ಕೆ ಬಂದು ದೈವದ ಮುಂದೆ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ.
ಭಾನುವಾರ ಬೆಂಗಳೂರಿನಿಂದ ಮಂಗಳೂರಿಗೆ ಹೆಂಡತಿ ಮಕ್ಕಳೊಂದಿಗೆ ಆಗಮಿಸಿದ ರಿಷಬ್ ಶೆಟ್ಟಿ ನಗರದ ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ನೇಮೋತ್ಸವದಲ್ಲಿ ರಾತ್ರಿಯಿಂದ ಬೆಳಿಗ್ಗೆಯವರೆಗೂ ಪಾಲ್ಗೊಂಡಿದ್ದರು
ಈ ವೇಳೆ ವಾರಾಹಿ ಪಂಜುರ್ಲಿ ದೈವದ ಬಳಿ ನಟ ತನ್ನ ಕಷ್ಟ ಹೇಳಿಕೊಂಡಿದ್ದಾರೆ. ರಿಷಬ್ ದಂಪತಿಗೆ ವಾರಾಹಿ ಪಂಜುರ್ಲಿ ದೈವದ ಅಭಯ ಸಿಕ್ಕಿದೆ. ‘ನಿನಗೆ ಶತ್ರುಗಳಿದ್ದಾರೆ, ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಸಂಚು ನಡೆದಿದೆ. ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ, ನಂಬಿದ ದೈವ ಕೈ ಬಿಡುವುದಿಲ್ಲ, ಯಾರು ನಿನಗೆ ಕೇಡು ಬಗೆದಿದ್ದಾರೆಂದು ಈಗ ಹೇಳುವುದಿಲ್ಲ, ನೋಡಿಕೊಳ್ಳುತ್ತೇನ. ‘ನನಗೆ ಸೇವೆ ನೀಡುವ ಹರಕೆ ಹೇಳಿಕೋ, ಐದು ತಿಂಗಳ ಗಡುವಲ್ಲಿ ಒಳ್ಳೆದು ಮಾಡುತ್ತೇನೆ’ಎಂದು ರಿಷಬ್ ದಂಪತಿಗೆ ವಾರಾಹಿ ಪಂಜುರ್ಲಿ ದೈವ ಅಭಯ ನೀಡಿದೆ.
ನಳಿನ್‌ಗೆ ರಾಜಕೀಯ ಸ್ಥಾನಮಾನ ಸಿಗಲಿ - ಡಿಕೆಶಿ
ಮಂಗಳೂರು: ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್ಗೆ ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕೇರಳ ರಾಜ್ಯದ ಕಾಸರಗೋಡಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನೆಲೆ ಶನಿವಾರ ಸಂಜೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು, ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಳಿನ್ ಕುಮಾರ್ ಕಟೀಲ್ ಹಾಗೂ ಡಿಕೆ ಶಿವಕುಮಾರ್ ಒಂದೇ ವೇದಿಕೆಯಲ್ಲಿ ಜೊತೆಯಾಗಿದ್ದರು. ಈ ವೇಳೆ ನಳಿನ್ ಕುಮಾರ್ ಪರ ಡಿಕೆಶಿ ಬ್ಯಾಟಿಂಗ್ ಮಾಡಿದ್ದಾರೆ.
‘ನನ್ನ ಮಿತ್ರ, ಮಾಜಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಇದ್ದಾರೆ. ಅವರು ಮಾಜಿ ಅಂದುಕೊಳ್ಳೋದು ಬೇಡ. ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ. ಹೀರೋ ಝೀರೋ ಆಗುತ್ತಾನೆ, ಝೀರೋ ಹೀರೋ ಆಗುತ್ತಾನೆ. ನಾನು ಮತ್ತು ನೀವು ಒಂದೇ ವೇದಿಕೆಯಲ್ಲಿ ದೇವರನ್ನ ಪ್ರಾರ್ಥನೆ ಮಾಡಿದ್ದೇವೆ. ಭಗವಂತ ನಿಮ್ಮ ಎಲ್ಲಾ ವಿಘ್ನ ನಿವಾರಣೆ ಮಾಡಿ ಮತ್ತೆ ಈ ರಾಜ್ಯದಲ್ಲಿ ಸೇವೆ ಮಾಡುವ ಅವಕಾಶ ಕೊಡಲಿ. ಮತ್ತೆ ನಿಮಗೆ ಅವಕಾಶ ಸಿಗಲಿ ಅಂತ ನಾನೂ ಕೂಡ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು.