ಎಸ್ ಸಿಡಿಸಿಸಿ ಬ್ಯಾಂಕ್ ೨೦೨೫ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ ರೂ. ೧೧೦.೪೦ ಕೋಟಿ ಲಾಭ

Mangalore:

Font size:

ಎಸ್ ಸಿಡಿಸಿಸಿ ಬ್ಯಾಂಕ್ ೨೦೨೫ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ ಬ ರೂ. ೧೧೦.೪೦ ಕೋಟಿ ಲಾಭ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತದ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್.

From: Jayaram udupi

ಮಂಗಳೂರು, ಎ.೨: ಎಸ್ ಸಿಡಿಸಿಸಿ ಬ್ಯಾಂಕ್ ೨೦೨೫ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ ಬ ರೂ. ೧೧೦.೪೦ ಕೋಟಿ ಲಾಭ ಗಳಿಸಿದೆ. ಇದು ಎಸ್ಸಿಡಿಸಿಸಿ ಬ್ಯಾಂಕ್ ನ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತದ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಅವರು ಬುಧವಾರ ಬ್ಯಾಂಕಿನ ಸಭಾಂಗಣದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಬ್ಯಾಂಕಿಂಗ್ ಸೇವೆಯಲ್ಲಿ ದೇಶಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿಡಿಸಿಸಿ ಬ್ಯಾಂಕ್) ಅಭಿವೃದ್ಧಿಯ ಮುಂಚೂಣಿಯಲ್ಲಿದೆ. ಸಹಕಾರಿ ರಂಗದಲ್ಲಿ ವಿಶಿಷ್ಟ ಹಾಗೂ ವಿನೂತನ ಬ್ಯಾಂಕಿಂಗ್ ಸೇವೆಯನ್ನು ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ತನ್ನ ೧೧೩ ಶಾಖೆಗಳ ಮೂಲಕ ನೀಡುತ್ತಿರುವ ಎಸ್ ಸಿಡಿಸಿಸಿ ಬ್ಯಾಂಕ್ ಜನಸಾಮಾನ್ಯರ ಬ್ಯಾಂಕ್ ಆಗಿ ಗುರುತಿಸಿಕೊಂಡಿದೆ. ೧೧೧ ವರ್ಷಗಳ ಸಾರ್ಥಕ ಸೇವೆಯನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೀಡುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವರದಿ ವರ್ಷದಲ್ಲಿ ಅಮೋಘ ಸಾಧನೆಗೈದು, ಕಳೆದ ವರ್ಷ ಕ್ಕಿಂತ ಈ ಬಾರಿ ಲಾಭಾಂಶ ಶೇ ೩೯.೫೯ ಏರಿಕೆಯಾಗಿದೆ (ರೂ.೭೯.೦೯). ಇದು ಎಸ್ ಸಿಡಿಸಿಸಿ ಬ್ಯಾಂಕಿನ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದೆ ಹಾಗೂ ಬ್ಯಾಂಕಿನ ಅನುತ್ಪಾದಕ ಆಸ್ತಿಯ ಪ್ರಮಾಣವು ೩.೫೨ ಶೇಕಡದಿಂದ ೨.೭೧ ಶೇಕಡಕ್ಕೆ ಇಳಿಕೆಯಾಗಿರುವುದು ಒಂದು ಗಮನಾರ್ಹ ಸಾಧನೆಯಾಗಿದೆ ಎಂದೂ ಡಾ. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಎಸ್ ಸಿಡಿಸಿಸಿ ಬ್ಯಾಂಕ್ ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿದೆ. ವರದಿ ವರ್ಷದಲ್ಲಿ ೧೭೩೬೬.೬೮ ಕೋಟಿ ರೂಪಾಯಿಗಳ ಒಟ್ಟು ವ್ಯವಹಾರ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದೆ. ಕಳೆದ ಸಾಲಿನ ಒಟ್ಟು ವ್ಯವಹಾರ (ರೂ.೧೫೫೪೪.೩೪) ಈ ಬಾರಿ ಶೇ ೧೧.೭೨ ಏರಿಕೆ ಕಂಡಿದೆ. ೨೦೨೫-೨೬ನೆ ಸಾಲಿನಲ್ಲಿ ಬ್ಯಾಂಕ್ ರೂ.೧೯೨೫೦.೦೦ ಕೋಟಿ ವ್ಯವಹಾರದ ಗುರಿಯನ್ನು ಹೊಂದಿದೆ ಎಂದರು.
ಠೇವಣಿಗಳ ಸಂಗ್ರಹದಲ್ಲಿ ಎಲ್ಲಾ ಬ್ಯಾಂಕ್ ಗಳಲ್ಲೂ ಸ್ಪರ್ಧೆ ಇದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಯಾವುದೇ ಠೇವಣಾತಿ ಇಲ್ಲದೆಯೂ ಎಸ್ ಸಿಡಿಸಿಸಿ ಬ್ಯಾಂಕ್ ತನ್ನ ೧೧೩ ಶಾಖೆಗಳ ಮುಖಾಂತರ ಒಟ್ಟು ೭೮೮೨.೭೬ ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿ ಸಾಧನೆಗೈದಿದೆ.ಮೂಲಕ ಠೇವಣಿ ಸಂಗ್ರಹದಲ್ಲಿ ರಾಜ್ಯದ ಇತರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ಗಳಲ್ಲಿ ಮುಂಚೂಣಿಯಲ್ಲಿದೆ. ಕಳೆದ ಸಾಲಿನ ಠೇವಣಿ ಸಂಗ್ರಹಕ್ಕಿಂತ ಈ ಬಾರಿ ಶೇ.೯.೧೧ ಏರಿಕೆಯಾಗಿದೆ ಎಂದರು.

ಸ್ಪರ್ಧಾತ್ಮಕ ವ್ಯವಹಾರದಲ್ಲಿ ಬ್ಯಾಂಕ್ ರೂ.೭೭೭೫.೪೪ ಕೋಟಿ ಮುಂಗಡ ನೀಡಿದೆ. ಕೃಷಿ ಹಾಗೂ ಕೃಷಿ ಅಭಿವೃದ್ಧಿಗೆ ಅಲ್ಪಾವಧಿ ಸಾಲವಾಗಿ ರೂ.೨೧೩೦.೯೫ ಕೋಟಿ ರೂಪಾಯಿ. ಮಧ್ಯಮಾವಧಿ ಸಾಲ ರೂ.೧೬೯.೭೯ ಕೋಟಿ, ಹೀಗೆ ಕೃಷಿ ಕ್ಷೇತ್ರಕ್ಕೆ ಒಟ್ಟು ರೂ.೨೩೦೦.೭೪ ಕೋಟಿ ಸಾಲ ನೀಡಲಾಗಿದ್ದು, ಕೃಷಿಯೇತರ ಕ್ಷೇತ್ರಕ್ಕೆ ರೂ.೫೪೭೪.೭೦ ಕೋಟಿ ಸಾಲ ನೀಡಲಾಗಿದೆ.
ಸತತ ೩೦ ವರ್ಷಗಳಿಂದ ಕೃಷಿ ಸಾಲ ಮರುಪಾವತಿಯಲ್ಲಿ ಶೇಕಡ ೧೦೦ರ ಸಾಧನೆ ಬ್ಯಾಂಕ್ ವರದಿ ಮಾಡಿರುವುದು ರಾಷ್ಟ್ರೀಯ ದಾಖಲೆಯಾಗಿದೆ ಎಂದೂ ಡಾ.ರಾಜೇಂದ್ರ ಕುಮಾರ್ ವಿವರಿಸಿದರು.
ಬ್ಯಾಂಕ್ ಮುಂದಿನ ಅವಧಿಯಲ್ಲಿ ೧೦ ಹೊಸ ಶಾಖೆಗಳನ್ನು ತೆರೆಯುವ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದರಲ್ಲದೆ, ಕೇಂದ್ರ ಸರಕಾರದ ಮಹತ್ತರ ಯೋಜನೆಯಾದ ’ಅಟಲ್ ಪಿಂಚಣಿ ಯೋಜನೆ’ಯ ಚಂದಾದಾರರನ್ನು ನೋಂದಾಯಿಸಿ, ಭಾರತ ಸರ್ಕಾರದ ಹಣಕಾಸು ಸಚಿವಾಲಯದಿಂದ ೪ ಬಾರಿ ಪ್ರಶಸ್ತಿಗೆ ಪಾತ್ರವಾಗಿದೆ. ಬ್ಯಾಂಕಿನ ೨೦ ಶಾಖೆಗಳು ಸಂಪೂರ್ಣ ಹವಾನಿಯಂತ್ರಿತವಾಗಿ ಕಾರ್ಯನಿರ್ವಹಿಸುತ್ತಿವೆ.
ಮೇ ೧೦ರಂದು ಮಂಗಳೂರಿನಲ್ಲಿ ಸುಮಾರು ಒಂದೂವರೆ ಲಕ್ಷ ನವೋದಯ ಸ್ವ ಸಹಾಯ ಗುಂಪುಗಳ ಸದಸ್ಯರು ತಮ್ಮ ಸಮವಸ್ತ್ರ ದೊಂದಿಗೆ ಬೆಳ್ಳಿ ಹಬ್ಬದ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದೂ ತಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಭಾಸ್ಕರ್ ಎಸ್. ಕೋಟ್ಯಾನ್, ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ,ಎಸ್.ಬಿ. ಜಯರಾಮ ರೈ, ಜೈರಾಜ್ ಬಿ. ರೈ, ಸದಾಶಿವ ಉಳ್ಳಾಲ್ ,ಮೋನಪ್ಪ ಶೆಟ್ಟಿ ಎಕ್ಕಾರು, ವಾದಿರಾಜ ಶೆಟ್ಟಿ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.

Prev Post ಬಿಜೆಪಿಯವರು ರೈತ ವಿರೋಧಿಗಳು: ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ
Next Post ಬಿಜೆಪಿ ಕಾಲದ ಬೆಲೆ ಏರಿಕೆ ಬಗ್ಗೆ ಏಕೆ ಪ್ರತಿಭಟನೆ ಮಾಡುತ್ತಿಲ್ಲ?: ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನೆ