ಮಂಗಳೂರು ವಿಶ್ವವಿದ್ಯಾನಿಲಯದ ನಲವತ್ತ ಮೂರನೇ ವಾರ್ಷಿಕ ಘಟಿಕೋತ್ಸವ ಮಾರ್ಚ್ ೨೯, ಶನಿವಾರದಂದು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ
From Jayaram Udupi
ಮಂಗಳೂರು ವಿಶ್ವವಿದ್ಯಾನಿಲಯದ ನಲವತ್ತ ಮೂರನೇ ವಾರ್ಷಿಕ ಘಟಿಕೋತ್ಸವ ಮಾರ್ಚ್ ೨೯, ಶನಿವಾರದಂದು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ನಡೆಯಲಿದ್ದು ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸುತ್ತಾರೆ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಉಪಸ್ಥಿತರಿರುತ್ತಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ಭಾರತೀಯ ವಿಶ್ವವಿದ್ಯಾಲಯಗಳ ಸಂಘ ಮತ್ತು ಮುಂಬಯಿಯ ಸೋಮಿಯಾ ವಿದ್ಯಾವಿಹಾರ್ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ವಿ.ಎನ್.ರಾಜಶೇಖರನ್ ಪಿಳ್ಳೈಮುಖ್ಯ ಅತಿಥಿಯಾಗಿ ಪಾಲ್ಗೊಂಡು ಘಟಿಕೋತ್ಸ ಭಾಷಣ ಮಾಡುತ್ತಾರೆ ಎಂದು ತಿಳಿಸಿದರು.
ಘಟಿಕೋತ್ಸವದಲ್ಲಿ ಉದ್ಯಮಿ ಸಮಾಜ ಸೇವಕ, ದಾನಿ, ಟೆಕ್ನೋಕ್ರಾಟ್ ಕನ್ಯಾನ ಸದಾಶಿವ ಶೆಟ್ಟಿ, ಸಹಕಾರ ರಂಗದ ಧೀಮಂತ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಸತಿ ಮೂಲಸೌಕರ್ಯವನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸುತ್ತಿರುವ ಉದ್ಯಮಿ ರೋಹನ್ ಮೊಂತೆರೋ ಅವರಿಗೆ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿ ಪ್ರದಾನಿಸಲಾಗುತ್ತಿದೆ. ರಾಜ್ಯಪಾಲರಿಂದ ರಚಿಸಲಾದ ತಜ್ಞರ ಪರಿಶೀಲನಾ ಸಮಿತಿಯ ಶಿಫಾರಸಿನ ಮೇರೆಗೆ ಈ ಮೂವರನ್ನು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಲಾಗಿದೆ ಎಂದೂ ಅವರು ತಿಳಿಸಿದರು.
ಕನ್ಯಾನ ಸದಾಶಿವ ಶೆಟ್ಟಿ:
ಸೀಮಿತ ಉನ್ನತ ಶಿಕ್ಷಣದ ಅವಕಾಶಗಳಿದ್ದ ಐದು ದಶಕಗಳ ಹಿಂದಿನ ಆ ಕಾಲಘಟ್ಟದಲ್ಲಿ ಕಾಸರಗೋಡಿನ ಸಣ್ಣ ಹಳ್ಳಿ ಕನ್ಯಾನದಿಂದ ಬಂದು ಶ್ರಮದಿಂದ ಮತ್ತು ಪ್ರತಿಭೆಯಿಂದ ಉನ್ನತ ಶಿಕ್ಷಣ ಪಡೆದು ದೂರದ ಮುಂಬಯಿಗೆ ತೆರಳಿ ಬದುಕಿ ಕಟ್ಟಿಕೊಂಡ ಕನ್ಯಾನ ಸದಾಶಿವ ಶೆಟ್ಟಿ ತಮ್ಮದೇ ಆದ ವಿಶಿಷ್ಟ ದಾನ ಕಾರ್ಯಗಳ ಮೂಲಕ ಸಾಮಾಜಿಕ ಪರಿವರ್ತನೆಯನ್ನು ತಂದವರು. ದೇವಾಲಯಗಳು, ಆರೋಗ್ಯ, ಜೀವನ ಸುಧಾರಣೆ ಮತ್ತು ಆ ಮೂಲಕ ಸಾಮಾಜಿಕ ಬದಲಾವಣೆಯ ಕನಸು ಕಂಡು ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆ ಹಾಗು ಮಹಾರಾಷ್ಟ್ರ, ಗುಜರಾತ್ ಗಳಲ್ಲಿ ತಮ್ಮ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಮತ್ತು ವೈಯಕ್ತಿಕ ದೇಣಿಗೆಯ ಮೂಲಕ ಸಾವಿರಾರು ಕುಟುಂಬಗಳು, ಅಂಗಊನರಿಗೆ ನೆರವಾದವರು. ಸೀಳ್ದುಟಿ ಸಮಸ್ಯೆಯಿಂದ ಬಳಲುತ್ತಿದ್ದ ನೂರಾರು ಮಕ್ಕಳಿಗೆ ಶಸ್ತ್ರಚಿಕಿತ್ಸೆಯ ಸೌಲಭ್ಯವನ್ನು ಒದಗಿಸಿ ಅವರ ಕೀಳರಿಮೆ ತೊಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು. ಮುಂಬಯಿ, ಗುಜರಾತ್ ಗಳಲ್ಲಿ ಉದ್ಯಮ ಹೊಂದಿರುವ ಕನ್ಯಾನ ಸದಾಶಿವ ಶೆಟ್ಟಿ ಕೃಷಿಕರಿಗೆ ಕೃಷಿ ಪೋಷಕಾಂಶಗಳು, ಕೀಟ ನಾಶಕಗಳು, ಕಳೆನಾಶಕಗಳು ಸಹಿತ ರೈತರ ಆದಾಯ ಹೆಚ್ಚಿಸುವ ಸಮಗ್ರ ಪೋಷಕಾಂಶಗಳನ್ನು ತಯಾರಿಸುವ ಕಾರ್ಖಾನೆಗಳನ್ನು ಹೊಂದಿದ್ದಾರೆ. ಅವರ ಸಂಸ್ಥೆಯ ಉತ್ಪನ್ನಗಳು ಜಗತ್ತಿನ ವಿವಿಧ ದೇಶಗಳಿಗೆ ರಫ್ತಾಗುತ್ತಿವೆ. ಜೊತೆಗೆ ಔಷಧಿ ತಯಾರಿಕೆಯಲ್ಲಿ ಬಳಸುವ ವಸ್ತುಗಳನ್ನು ತಯಾರಿಸುವ ಕೆಮಿನೋ ಫಾರ್ಮಾ ಎಂಬ ಉತ್ಪಾದನಾ ಘಟಕವನ್ನೂ ಹೊಂದಿದ್ದಾರೆ. ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುವ ಮೂಲಕ ಉದ್ಯಮಿಯಾಗಬೇಕಾದರೆ ಯಾವೆಲ್ಲ ಸವಾಲುಗಳನ್ನು ಎದುರಿಸಬೇಕು, ವಿಕ್ಷಿತ ಭಾರತ ನಿರ್ಮಾಣವಾಗಬೇಕಾದರೆ ಭಾರತ ಉತ್ಪಾದನಾ ತಾಣವಾಗಬೇಕು, ಅದಕ್ಕೆ ಉದ್ಯಮಗಳು ಸ್ಥಾಪನೆಯಾಗಬೇಕು ಎಂಬುದರ ಬಗ್ಗೆ ಹೊಸ ತಲೆಮಾರಿಗೆ ಅರಿವು ಮೂಡಿಸುತ್ತ, ಅವರ ಪ್ರಶ್ನೆಗಳಿಗೆ ಉತ್ತರಿಸುತ್ತ ಉದ್ಯಮಿಯ ಹಾದಿ ಹಿಡಿಯಲು ಪ್ರೋತ್ಸಾಹಿಸುವುದು ಅವರ ದಿನಚರಿಯಲ್ಲೊಂದು ಭಾಗವಾಗಿದೆ.
ರಾಜೇಂದ್ರಕುಮಾರ್:
ಸಹಕಾರಿ ಬ್ಯಾಂಕುಗಳೆಂದರೆ ಅವುಗಳು ನಷ್ಟಪೀಡಿತವಾಗಿರಲೇಬೇಕು ಎಂಬ ನಂಬಿಕೆಯನ್ನು ಮೂಢನಂಬಿಕೆ ಎಂದು ಬದಲಾಯಿಸಿದವರು ಎಂ.ಎನ್.ರಾಜೇಂದ್ರ ಕುಮಾರ್.ಸತತ ಏಳನೇ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಚಳವಳಿಯ ಯಶಸ್ಸಿನ ಪ್ರತಿಬಿಂಬದಂತಿರುವ ಅವರು ಬ್ಯಾಂಕನ್ನು ಸದಾ ಲಾಭದಾಯಿಕವಾಗಿ ಮುನ್ನಡೆಸಿದ್ದಾರೆ. ಬ್ಯಾಂಕಿನ ಯಶಸ್ಸಿಗೆ ಅಳತೆಗೋಲಾಗಿರುವುದು ಗ್ರಾಹಕರ ಸಂತೃಪ್ತಿ. ಬ್ಯಾಂಕ್ ಶಾಖೆಗಳು ತ್ವರಿತಗತಿಯಲ್ಲಿ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸುತ್ತಿರುವುದರಿಂದ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ರೈತರು, ಉದ್ಯಮಿಗಳು ಸಹಿತ ವಿವಿಧ ವಯೋಮಾನದವರ ಆದ್ಯತೆಯ ಆಯ್ಕೆಯಾಗಿದೆ. ಆಧುನಿಕ ತಂತ್ರಜ್ಞಾನದ ಅಳವಡಿಕೆ, ಕ್ರೆಡಿಟ್ ಕಾರ್ಡ್, ಎ.ಟಿ.ಎಂ. ಸೌಲಭ್ಯ, ಸಂಚಾರಿ ಎ.ಟಿ.ಎಂ. ಗಳು ರಾಜೇಂದ್ರ ಕುಮಾರ್ ಅವರ ಔಟ್ ಆಫ್ ಬಾಕ್ಸ್ ಚಿಂತನೆಯ ಫಲ.ಇಂತಹ ಆಲೋಚನೆಗಳು ಮತ್ತು ಅವುಗಳ ಅನುಷ್ಠಾನ ಬ್ಯಾಂಕನ್ನು ಅನೇಕ ಪ್ರಥಮಗಳನ್ನು ದಾಖಲಿಸಿದ ಕೀರ್ತಿಗೆ ಭಾಜನವಾಗಿಸಿವೆ. ನವೋದಯ ಸ್ವ ಸಹಾಯ ಸಂಘದ ಮೂಲಕ ಮಹಿಳಾ ಸಶಕ್ತೀಕರಣದತ್ತ ಅವರಿಟ್ಟ ಹೆಜ್ಜೆ ಗ್ರಾಮೀಣ ಭಾಗದಲ್ಲಿ ದೊಡ್ಡದೊಂದು ಸಾಮಾಜಿಕ ಬದಲಾವಣೆಯ ಬೀಜ ಬಿತ್ತಿದೆ.
ಮೂರು ದಶಕಗಳಷ್ಟು ದೀರ್ಘ ವಾದ ತಮ್ಮ ಬ್ಯಾಂಕಿಂಗ್ ಕ್ಷೇತ್ರದ ಪಯಣದಲ್ಲಿ ಪ್ರತಿಕೂಲ ಸ್ಥಿತಿಯಲ್ಲೂ ಅಸಾಮಾನ್ಯ ವಾದುದನ್ನು ಸಾಧಿಸಿದ ಧೀರ ರಾಜೇಂದ್ರ ಕುಮಾರ್. ಜಾಗತಿಕ ಸಾಂಕ್ರಾಮಿಕ ಕೊರೊನಾ ಕಾಡುತ್ತಿದ್ದ ಸಂದರ್ಭದಲ್ಲಿ ಕ್ವಾರಂಟೈನ ಗಾಗಿ ತಮ್ಮ ಸುಪರ್ದಿಯಲ್ಲಿದ್ದ ಕಟ್ಟಡಗಳನ್ನು ಅವರು ಜಿಲ್ಲಾಡಳಿತಕ್ಕೆ ನೀಡಿದ್ದರು.
ರೋಹನ್ ಮೊಂತೆರೋ:
ಆಧುನಿಕ ಕಾಲದ ವಸತಿ ಆವಶ್ಯಕತೆಗಳನ್ನು , ಜೀವನ ವಿಧಾನದ ನಿರೀಕ್ಷೆಗಳನ್ನು ಆದ್ಯತೆಯಾಗಿಸಿಕೊಂಡು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುತ್ತಿರುವ ರೋಹನ್ ಕಾರ್ಪೋರೇಷನ್ ನ ಮುಖ್ಯಸ್ಥರಾಗಿರುವ ರೋಹನ್ ಮೊಂತೆರೋ ನವ ತಲೆಮಾರಿನ ಉದ್ಯಮಿ. ವಿನ್ಯಾಸ ಸೂಕ್ಷ್ಮತೆ ವಾಸ್ತು ವೈಶಿಷ್ಟ್ಯ, ಸ್ಥಳಾವಕಾಶದ ಗರಿಷ್ಠ ಬಳಕೆ -ಇವು ರೋಹನ್ ಅವರ ನಿರ್ಮಾಣ ಸಂಸ್ಥೆಯ ಪ್ರಥಮಾದ್ಯತೆಗಳು.
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬ್ರಾಂಡ್ ನೇಮ್ ಆಗಿರುವ ರೋಹನ್ ಕಾರ್ಪೋರೇಷನ್ ಅತ್ಯಾಧುನಿಕ ವಸತಿ ಮತ್ತು ವಾಣಿಜ್ಯ ಸಮುಚ್ಚಯಗಳನ್ನು ನಿರ್ಮಿಸುವಲ್ಲಿ ಪರಿಣತಿ ಪಡೆದಿದೆ. ಇಂದು ಮನೆ ಎಂಬುದು ಕೆಲಸ ಮತ್ತು ಜೀವನವನ್ನು ಸಮತೋಲನಗೊಳಿಸುವ ಸ್ಥಳವಾಗಿದೆ. ಇದರಿಂದ ಕೆಲಸಕ್ಕೆ ಹೋಗುವ ಸ್ಥಳಕ್ಕೆ ಹತ್ತಿರದಲ್ಲೆ ಮನೆ ಹುಡುಕುವ ಮೇಲ್ ಮಧ್ಯಮ ವರ್ಗದವರ ಸಂಖ್ಯೆ ಹೆಚ್ಚಾಗಿದೆ. ಇಂತಹ ವ್ಯೂಹಾತ್ಮಕವಾದ ಪ್ರದೇಶಗಳಲ್ಲಿ ರೋಹನ್ ಮೊಂತೆರೋ ಅವರು ರಿಯಲ್ ಎಸ್ಟೇಟ್ ಹೊಂದಿರುವುದು ಈ ಕ್ಷೇತ್ರದಲ್ಲಿ ತ್ವರಿತಗತಿಯ ಬೆಳವಣಿಗೆಯನ್ನು ದಾಖಲಿಸುವುದಕ್ಕೆ ಸಾಧ್ಯವಾಗಿದೆ.
ಸುಮಾರು ಮೂರು ದಶಕಗಳ ಅನುಭವ ಅವರು ಬದಲಾವಣೆಗಳನ್ನು ತ್ವರಿತವಾಗಿ ಅಳವಡಿಕೊಳ್ಳುವಂತಹ ಸ್ಥಿತಿ ಸ್ಥಾಪಕತ್ವದ ವ್ಯವಸ್ಥೆಯನ್ನು ಮೈಗೂಡಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟಿದೆ. ಭವಿಷ್ಯದಲ್ಲಿ ಶೂನ್ಯ ತ್ಯಾಜ್ಯ ಮತ್ತು ಇಂಧನ ವಸತಿ ಯೋಜನೆಗಳು ಅವರ ನೇತ್ರತ್ವದಲ್ಲಿ ಮಂಗಳೂರಿನಲ್ಲಿ ಅನುಷ್ಠಾನಕ್ಕೆ ಬಂದು ನೆಟ್ ಜೀರೋ ಸ್ಟ್ರಕ್ಚರ್ ಆಂದೋಲನಕ್ಕೆ ಮುನ್ನುಡಿ ಬರೆಯುವ ನಿರೀಕ್ಷೆ ಇದೆ.