2028ರ ವಿಧಾನಸಭೆ ಚುನಾವಣೆಗೆ ಮಹಿಳಾ ಅಭ್ಯರ್ಥಿಗಳನ್ನು ತಯಾರು ಮಾಡಿ: ಮಹಿಳಾ ಕಾಂಗ್ರೆಸ್ ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳು ಮನೆ ಮನೆ ತಲುಪುತ್ತಿವೆ. ಕಾಂಗ್ರೆಸ್ ಪಕ್ಷದಿಂದ ಮಾತ್ರ ಮಹಿಳೆಯರ ಏಳಿಗೆ ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ನಡೆದ ಶನಿವಾರ ನಡೆದ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಪಕ್ಷ ಮಹಿಳೆಯರ ಪರ ಇರುವ ಪಕ್ಷ, ಮಹಿಳೆಯರ, ಯುವಕರ, ವೃದ್ಧರ ಹೀಗೆ..ಎಲ್ಲರಿಗೂ ಸಲ್ಲುವ ಪಕ್ಷ ಕಾಂಗ್ರೆಸ್ ಪಕ್ಷ ಎಂದರು.
ಎಲ್ಲರಿಗೂ ಅನ್ನ, ಅಕ್ಷರ, ವಿದ್ಯೆಯನ್ನು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈಗ ಹಿನ್ನಡೆಯಾಗಿರಬಹುದು. ಯಾರೂ ಧೈರ್ಯಗೇಡಬೇಕಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ದಿನಗಳು ಬರಲಿವೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಲಿದೆ ಎಂದು ಸಚಿವರು ಹೇಳಿದರು.
ಮಹಿಳೆಯರು ಇವತ್ತು ಯಾವುದರಲ್ಲೂ ಹಿಂದೆ ಇಲ್ಲ. ಸಮಾಜದಲ್ಲಿ ಮಹಿಳೆಯರನ್ನು ಬಿಟ್ಟು ಇರುವುದಕ್ಕೂ ಸಾಧ್ಯವಿಲ್ಲ. ಮಹಿಳಾ ಮೀಸಲಾತಿ ಜಾರಿಗೆ ಬಂದರೆ, ಕರ್ನಾಟಕ ವಿಧಾನಸಭೆಯಲ್ಲಿ 70 ರಿಂದ 78 ರವರೆಗೆ ಶಾಸಕಿಯರು ಇರಲಿದ್ದಾರೆ. ಮಹಿಳೆಯರು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಪಕ್ಷ ಬದ್ಧತೆಗೆ ಹೆಸರಾಗಿರುವ ಪಕ್ಷ. ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಅತಿ ದೊಡ್ಡ ಯೋಜನೆಯಾಗಿದೆ. 1.22 ಕೋಟಿ ಫಲಾನುಭಗಳಿಗೆ ಇದುವರೆಗೂ 34 ಸಾವಿರ ಕೋಟಿ ರೂಪಾಯಿ ಹಣವನ್ನು ಹಾಕಲಾಗಿದೆ. ಈ ಯೋಜನೆಯನ್ನು ಜಾರಿಗೆ ತಂದಿರುವುದಕ್ಕೆ ನನಗೆ ಹೆಮ್ಮೆಯಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
1999ರಲ್ಲಿ ನಾನು ಕೂಡ ಸಾಮಾನ್ಯ ಕಾರ್ಯಕರ್ತೆಯಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡೆ. ನಮ್ಮ ಹಿರಿಯ ನಾಯಕಿ ಮಾರ್ಗರೇಟ್ ಅಳ್ವ ಅವರೇ ನನಗೆ ಸ್ಫೂರ್ತಿ. ಹಂತ ಹಂತವಾಗಿ ಮೇಲೆ ಬಂದು ಇಂದು ಸರ್ಕಾರದಲ್ಲಿ ಸಚಿವರಾಗಿರುವೆ. ಕಾಂಗ್ರೆಸ್ ಪಕ್ಷ ಸಾಮಾನ್ಯರನ್ನು ಗುರುತಿಸುವ ಕೆಲಸ ಮಾಡುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಈ ವೇಳೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಮಾಜಿ ಅಧ್ಯಕ್ಷರಾದ ಅಲ್ಲಂ ವೀರಭದ್ರಪ್ಪ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಚ್.ಎಂ.ರೇವಣ್ಣ, ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್, ಮುಖಂಡರಾದ ಜಲಜಾ ನಾಯ್ಕ್, ಮಂಜುಳಾ ನಾಯ್ಡು, ಪುಷ್ಪ ಅಮರ್ ನಾಥ್ ಸೇರಿದಂತೆ ನೂರಾರು ಸಂಖ್ಯೆಯ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.
000
2028ರ ವಿಧಾನಸಭೆ ಚುನಾವಣೆಗೆ ಮಹಿಳಾ ಅಭ್ಯರ್ಥಿಗಳನ್ನು ತಯಾರು ಮಾಡಿ: ಮಹಿಳಾ ಕಾಂಗ್ರೆಸ್ ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ
ಬೆಂಗಳೂರು, ಮಾ.15
“ಮಹಿಳಾ ಮೀಸಲಾತಿ ಜಾರಿಯಾದರೆ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ 74 ಕ್ಷೇತ್ರಗಳಲ್ಲಿ ಮಹಿಳೆಯರೇ ಅಭ್ಯರ್ಥಿಗಳಾಗುತ್ತಾರೆ. ಹೀಗಾಗಿ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ಅಭ್ಯರ್ಥಿಗಳನ್ನು ತಯಾರು ಮಾಡಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಭಾರತ ಜೋಡೋ ಭವನದಲ್ಲಿ ಶನಿವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷರಾದ ಜಿ.ಸಿ ಚಂದ್ರಶೇಖರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ ಅವರು ಉಪಸ್ಥಿತರಿದ್ದರು.
“ನಿಮ್ಮೆಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು. ನೆಹರೂ ಅವರು ಅವರು ಒಂದು ಮಾತು ಹೇಳಿದ್ದಾರೆ. ಜನರನ್ನು ಜಾಗೃತರನ್ನಾಗಿ ಮಾಡಬೇಕಾದರೆ ಮಹಿಳೆಯರು ಜಾಗೃತರಾಗಿರಬೇಕು. ಆಕೆ ನಡೆದರೆ ಕುಟುಂಬ ನಡೆದಂತೆ, ಕುಟುಂಬ ನಡೆದರೆ ಗ್ರಾಮ ನಡೆದಂತೆ, ಸಮಾಜ ಹಾಗೂ ದೇಶ ನಡೆಯುತ್ತದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ 1.23 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪುತ್ತಿದೆ. 1.50 ಕೋಟಿ ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆ ನೀಡಲಾಗುತ್ತಿದೆ. ರಾಜ್ಯದ ಎಲ್ಲಾ ಮಹಿಳೆಯರಿಗೂ ಬಸ್ ನಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಿದ್ದೇವೆ. ಇನ್ನು ಬಡವರಿಗೆ ನೀಡುವ ಮನೆ ಹಾಗೂ ನಿವೇಶನಗಳನ್ನು ಆ ಕುಟುಂಬದ ಮಹಿಳೆಯರ ಹೆಸರಿನಲ್ಲಿ ಮಾಡಬೇಕು ಎಂದು ಕಡ್ಡಾಯ ನಿಯಮ ಮಾಡಿದ್ದೇವೆ. ನನ್ನ ಕ್ಷೇತ್ರದಲ್ಲಿ ಆಶ್ರಯ 7 ಸಾವಿರ ನಿವೇಶನ ನೀಡಿದ್ದೆ. ಎಲ್ಲವನ್ನು ಮಹಿಳೆಯರ ಹೆಸರಿಗೆ ನಿವೇಶನ ಹಂಚಿದೆ. ಆದಾದ ನಂತರದ ಚುನಾವಣೆಯಲ್ಲಿ ಜನ ನನ್ನನ್ನು 30 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದರು” ಎಂದು ತಿಳಿಸಿದರು.
“18 ಕ್ಷೇತ್ರಗಳ ಉಪಚುನಾವಣೆಯಲ್ಲಿ 15 ರಲ್ಲಿ ಸೋತು ಪಕ್ಷ ಕಷ್ಟದ ಪರಿಸ್ಥಿತಿಯಲ್ಲಿತ್ತು. ಮಾರ್ಚ್ 11ರಂದು ನಾನು ಅಧ್ಯಕ್ಷನಾಗಿ ನೇಮಕಗೊಂಡು 5 ವರ್ಷವಾಗಿದೆ. ನಾನು ಇಲ್ಲಿ ಅಧಿಕಾರ ಸ್ವೀಕರಿಸಿದ ದಿನ 'ನನಗೆ ಭವಿಷ್ಯ ಕಾಣಬೇಕಾದರೆ ಮಹಿಳೆ ಹಾಗೂ ಯುವಕರಿಂದ ಮಾತ್ರ ಸಾಧ್ಯ' ಎಂದು ಹೇಳಿದ್ದೆ. ಅದರಂತೆ ನಾವು ಚುನಾವಣೆ ಪ್ರಣಾಳಿಕೆ ಮಾಡುವಾಗ ಯುವಕರು ಹಾಗೂ ಮಹಿಳೆಯರಿಗೆ ಆದ್ಯತೆ ನೀಡಿದೆವು” ಎಂದು ತಿಳಿಸಿದರು.
“ನಮ್ಮ ಈ ಯೋಜನೆಗಳು ಜಾರಿ ಸಾಧ್ಯವೇ? ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಹಾಗೂ ದೇಶ ದಿವಾಳಿಯಾಗಲಿದೆ ಎಂದು ಪ್ರಧಾನಮಂತ್ರಿಯಾದಿಯಾಗಿ ಬಿಜೆಪಿ ನಾಯಕರು ಟೀಕೆ ಮಾಡಿದರು. ಆದರೆ ಈಗ ನಮ್ಮ ಮಾದರಿ ಅನುಸರಿಸಿ ಬಿಜೆಪಿ ರಾಜ್ಯಗಳು ಗ್ಯಾರಂಟಿ ಯೋಜನೆ ನೀಡುತ್ತಿವೆ. ನಾವು ಕಾರ್ಯಕರ್ತರಿಗಾಗಿ ಗ್ಯಾರಂಟಿ ಸಮಿತಿ ರಚಿಸಿದ್ದೇವೆ. ಇದರ ವಿರುದ್ಧ ಅಧಿವೇಶನದಲ್ಲಿ ವಿರೋಧ ಪಕ್ಷದವರು ನಮ್ಮ ಮೇಲೆ ವಾಗ್ದಾಳಿಗೆ ಮುಂದಾಗಿದ್ದಾರೆ. ಶಾಸಕರ ಹಕ್ಕು ಕಸಿಯುತ್ತಿದ್ದೀರಿ ಎಂದು ತಿಳಿಸಿದರು. ಕಾರ್ಯಕರ್ತರು ಅಧಿಕಾರಕ್ಕೆ ತಂದಿದ್ದಾರೆ. ಅದಕ್ಕಾಗಿ ಮಾಡಿದ್ದೇವೆ. ಅಧಿಕಾರಕ್ಕೆ ತರದಿದ್ದರೆ ನಾವು ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾವು ಯಾರ ಹಕ್ಕನ್ನು ಕಸಿಯುತ್ತಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಫಲಾನುಭವಿಗಳಿಗೆ ಈ ಯೋಜನೆಗಳು ಸರಿಯಾಗಿ ತಲುಪುತ್ತಿವೆಯೇ ಇಲ್ಲವೇ ಎಂದು ಪರಿಶೀಲನೆಗೆ ಈ ಸಮಿತಿ ಮಾಡಿದ್ದೇವೆ. ತಾಲುಕು ಮಟ್ಟದಲ್ಲಿ ಕಚೇರಿ ನೀಡಿ ಅವರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಇದನ್ನು ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ನಾನು ಇತ್ತೀಚೆಗೆ ಉಡುಪಿಗೆ ಹೋಗಿದ್ದಾಗ ಅಲ್ಲಿನ ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳಿಗೆ ವಿರೋಧ ಮಾಡುತ್ತಿದ್ದರಂತೆ. ಅದಕ್ಕೆ ನಾನು ಅವರಿಗೆ ಒಂದು ಸವಾಲಾಕಿದೆ. ನಿಮ್ಮ ಪಕ್ಷದ ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳನ್ನು ತ್ಯಜಿಸಿರಿ ಎಂದು ಕರೆ ಕೊಡುವಂತೆ ಹೇಳಿದೆ. ಇದನ್ನು ಮಾಡಲು ಅವರಿಂದ ಸಾಧ್ಯವೇ? ಅವರ ಬೆಂಬಲಿಗರೇ ಅವರಿಗೆ ಛೀಮಾರಿ ಹಾಕುತ್ತಾರೆ” ಎಂದು ತಿಳಿಸಿದರು.
“ನಮ್ಮ ಭಾಷೆಯನ್ನು ಮಾತೃಭಾಷೆ ಎಂದು ಕರೆಯುತ್ತೇವೆ. ನಮ್ಮ ನಾಡಿನ ದೇವತೆ ಚಾಮುಂಡೇಶ್ವರಿ, ಭುವನೇಶ್ವರಿ. ಹಳ್ಳಿಗಳಿಗೆ ಹೋದರೆ ಗ್ರಾಮ ದೇವತೆ ಕೇಳುತ್ತೇವೆ. ಭೂಮಿಯನ್ನು ಭೂತಾಯಿ ಎಂದು ಪರಿಗಣಿಸುತ್ತೇವೆ. ಯಾವುದೇ ಶುಭ ಕಾರ್ಯಕ್ರಮದಲ್ಲಿ ಆಹ್ವಾನ ನೀಡಬೇಕಾದರೆ ಮೊದಲು ಶ್ರೀಮತಿ ನಂತರ ಶ್ರೀ ಎಂದು ನಮೂದಿಸುತ್ತೇವೆ. ಹೀಗೆ ಪ್ರತಿ ಹಂತದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ನೀವೆಲ್ಲರೂ ನಾಯಕಿಯರು” ಎಂದು ತಿಳಿಸಿದರು.
ಪಕ್ಷಕ್ಕೆ ನಿಮ್ಮ ಕೊಡುಗೆ ಏನು?
“ಮಹಿಳೆಯರಿಗಾಗಿ ನಮ್ಮ ಪಕ್ಷ ಇಷ್ಟು ಕಾರ್ಯಕ್ರಮ ನೀಡಿದೆ. ಈಗ ನೀವೆಲ್ಲರೂ ಸೇರಿ ನಮ್ಮ ಪಕ್ಷಕ್ಕೆ ಏನು ಮಾಡುತ್ತೀರಿ ಎಂದು ಅಧ್ಯಕ್ಷನಾಗಿ ಕೇಳುತ್ತೇನೆ. ನೀವು ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಪಕ್ಷಕ್ಕೆ ಏನು ಕೊಡುಗೆ ನೀಡುತ್ತೀರಿ ಎಂಬುದು ಮುಖ್ಯ. ಸೌಮ್ಯ ರೆಡ್ಡಿ ಸೇರಿದಂತೆ ನಾನು ಎಲ್ಲರಿಗೂ ಹೇಳುವುದು ಒಂದೇ. ರಾಣಿ ಸತೀಶ್ ಅವರ ಕಾಲದಿಂದ ಇಲ್ಲಿಯವರೆಗೂ ಮಹಿಳಾ ಕಾಂಗ್ರೆಸ್ ಬಗ್ಗೆ ನನಗೆ ತೃಪ್ತಿ ಇಲ್ಲ. ನೀವು ನಿಮ್ಮ ಒತ್ತಡಗಳ ಮಧ್ಯೆ ಪಕ್ಷ ಸಂಘಟನೆಗೆ ನನ್ನ ನಿರೀಕ್ಷೆ ಮಟ್ಟದಲ್ಲಿ ಕೆಲಸ ಮಾಡಲು ಆಗಿಲ್ಲ. ಇದಕ್ಕಾಗಿ ನನಗೆ ಬೇಸರವಿಲ್ಲ. ಇಂದು ಕೂಡ ಅವಕಾಶಗಳು ನಿಮ್ಮ ಮನೆ ಬಾಗಿಲ ಮುಂದಿದೆ" ಎಂದರು.
50 ಸದಸ್ಯೆಯರನ್ನು ನೋಂದಾಯಿಸಿದರೆ ನಿರ್ದೇಶಕ ಹುದ್ದೆ
ಪ್ರತಿ ಗೃಹಲಕ್ಷ್ಮಿ ಫಲಾನುಭವಿಗಳಿಂದ 50 ಜನ ಕಾಂಗ್ರೆಸ್ ಸದಸ್ಯರನ್ನಾಗಿ ಮಾಡಿಸಿ ಸಾಕು. ಪ್ರತಿ ವಿಧಾನಸಭೆಯಲ್ಲಿ ಕ್ಷೇತ್ರ ಅಥವಾ ತಾಲೂಕು ಮಟ್ಟದಲ್ಲಿ ಯಾರು ಅತಿ ಹೆಚ್ಚು ಮಹಿಳೆಯರನ್ನು ಪಕ್ಷದ ಸದಸ್ಯೆಯರನ್ನಾಗಿ ಮಾಡುತ್ತೀರೋ ಅವರಿಗೆ ತಾಲೂಕು ಮಟ್ಟದಲ್ಲಾದರೂ ನಿರ್ದೇಶಕ ಹುದ್ದೆ ನೀಡಲಾಗುವುದು. ಇದು ನನ್ನ ವಾಗ್ದಾನ, ಬದ್ಧತೆ. ಕರಾವಳಿ ಭಾಗದಲ್ಲಿ ನಮ್ಮ ಶಾಸಕರು ಹೆಚ್ಚಾಗಿ ಗೆದ್ದಿಲ್ಲ. ಅಲ್ಲಿನ ಮಹಿಳೆಯರು ಈ ಯೋಜನೆಗಳ ಫಲಾನುಭವಿಗಳಾಗಿಲ್ಲವೇ? ನೀವು ಅವರ ಬಳಿ ಹೋಗಿ, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ಚರ್ಚೆ ಮಾಡಿ. ಈ ಪಕ್ಷವನ್ನು ಉಳಿಸಿಕೊಳ್ಳಿ ಎಂದು ಪಕ್ಷದ ಸದಸ್ಯತ್ವ ಅಭಿಯಾನ ಮಾಡಿ” ಎಂದು ತಿಳಿಸಿದರು.
“ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂದು ಕಾಂಗ್ರೆಸ್ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿತ್ತು. ರಾಜ್ಯಸಭೆಯಲ್ಲಿ ಸಂಖ್ಯಾಬಲದ ಕೊರತೆಯಿಂದ ಸಾಧ್ಯವಾಗಲಿಲ್ಲ. ಈಗ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಪ್ರಣಾಳಿಕೆಯಲ್ಲಿ ಈ ವಿಚಾರ ಪ್ರಸ್ತಾಪಿಸಿವೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ 224 ಕ್ಷೇತ್ರಗಳ ಪೈಕಿ 74 ಮಹಿಳಾ ಅಭ್ಯರ್ಥಿಗಳು ಬೇಕಾಗುತ್ತಾರೆ. ಈಗ ನಾವು 10-12 ಅಭ್ಯರ್ಥಿಗೆ ಟಿಕೆಟ್ ನೀಡುತ್ತಿದ್ದೇವೆ. ಈ 74 ಅಭ್ಯರ್ಥಿಗಳನ್ನು ಯಾರು ತಯಾರು ಮಾಡಬೇಕು? ನನಗೆ ನನ್ನ ಮಗಳು, ಪತ್ನಿಯನ್ನು ಅಭ್ಯರ್ಥಿ ಮಾಡುವುದು ಮುಖ್ಯವಲ್ಲ. ನಿಮ್ಮಂತಹ ಕಾರ್ಯಕರ್ತರು, ಜನಸಾಮಾನ್ಯರು ಪಕ್ಷದ ಅಭ್ಯರ್ಥಿಯಾಗುವ ಮಟ್ಟಕ್ಕೆ ಬೆಳೆಯಬೇಕು. ಆಗ ಮಾತ್ರ ನಾವು ನಿಮಗೆ ಶಕ್ತಿ ನೀಡಿದಂತಾಗುತ್ತದೆ” ಎಂದರು.
“ಒಂದೇ ದಿನದಲ್ಲಿ ಗಿಡ ಮರವಾಗಿ ಬೆಳೆದು ಹಣ್ಣು ಬಿಡುವುದಿಲ್ಲ. ಇದಕ್ಕೆ ಕಾಲಾವಕಾಶ ಬೇಕು. ಇದಕ್ಕಾಗಿ ನಾನು 'ನಾ ನಾಯಕಿ' ಕಾರ್ಯಕ್ರಮ ಮಾಡಿದೆ. ಈ ನಾ ನಾಯಕಿ ಕಾರ್ಯಕ್ರಮಕ್ಕೆ ನೀವೆಲ್ಲರೂ ಹೊಸ ರೂಪ ನೀಡಬೇಕು. ಇಂದು ಮಹಿಳಾ ದಿನಾಚರಣೆ ಆಚರಿಸುತ್ತಿದ್ದೀರಿ. ಈ ಹಬ್ಬದಲ್ಲಿ ಸ್ವಯಂಪ್ರೇರಿತರಾಗಿ ಮಹಿಳೆಯರನ್ನು ಕರೆ ತರಬೇಕು. ಕಾಂಗ್ರೆಸಿಗರ ಪಾಲಿಗೆ ಪಕ್ಷದ ಕಚೇರಿ ದೇವಾಲಯವಿದ್ದಂತೆ. ಇಲ್ಲಿಗೆ ಜನರನ್ನು ಕರೆತರಬೇಕು. ನೀವು ವೇಗವಾಗಿ ಸಾಗಬೇಕಾದರೆ ಒಬ್ಬರೇ ಸಾಗಿ, ನೀವು ದೂರ ಕ್ರಮಿಸಬೇಕಾದರೆ ಒಟ್ಟಾಗಿ ಸಾಗಿ ಎಂದು ನಾನು ಹೇಳುತ್ತಿರುತ್ತೇನೆ. ನಾನು ಒಬ್ಬನೇ ಪಾದಯಾತ್ರೆ ಮಾಡಲು ಸಾಧ್ಯವೇ? ಹತ್ತಾರು ಜನ ಸೇರಿದ್ದಕ್ಕೆ ಅಲ್ಲವೇ ದೂರದ ಪಾದಯಾತ್ರೆ ಮಾಡಲು ಸಾಧ್ಯವಾಗಿದ್ದು. ಅವರು ಬಂದರೆ ನಮ್ಮ ಸ್ಥಾನ ಏನಾಗುತ್ತದೆಯೋ ಎಂಬ ಅಳುಕು ಬೇಡ. ನಿಮ್ಮ ಹಣೆಬರಹವನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ. ಎಲ್ಲಿ ಭಕ್ತಿ ಇರುತ್ತದೆಯೋ ಅಲ್ಲಿ ಭಗವಂತ ಇರುತ್ತಾನೆ. ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗ ಇರುತ್ತದೆ. ಶ್ರಮಪಟ್ಟು ಸಂಘಟನೆ ಮಾಡಿ” ಎಂದು ಸಲಹೆ ನೀಡಿದರು.
ತ್ಯಾಗದ ಮನೋಭಾವದಿಂದ ಶ್ರಮವಹಿಸಿ
“ನಮ್ಮ ಸಮಾಜ ಸೇವೆ ಮಾಡುವವರನ್ನು ಸ್ಮರಿಸುತ್ತದೆ. ನಮ್ಮಲ್ಲಿ ರಾಮನ ತಂದೆ ದಶರಥ ಮಹರಾಜನಿಗಿಂತ, ರಾಮನ ಭಂಟ ಹನುಮಂತನ ದೇವಾಲಯಗಳು ಹೆಚ್ಚಾಗಿವೆ. ಮಹಿಳೆ ಎಂದರೆ ತ್ಯಾಗ. ತ್ಯಾಗದ ಮನೋಭಾವದಲ್ಲಿ ನೀವು ಶ್ರಮಿಸಿ. ಇದಕ್ಕೆ ಸೂಕ್ತ ಉದಾಹರಣೆ ನಮ್ಮ ನಾಯಕಿ ಸೋನಿಯಾ ಗಾಂಧಿ. ಅವರು ದೇಶಕ್ಕಾಗಿ ತನ್ನ ಪತಿ, ಅತ್ತೆಯನ್ನು ಕಳೆದುಕೊಂಡರು. ಪಕ್ಷ ಮುಳುಗಿಹೋಗುತ್ತಿದೆ ಎಂಬ ಸಂದರ್ಭದಲ್ಲಿ ನಾವು ಬಲವಂತವಾಗಿ ಅವರಿಗೆ ಪಕ್ಷದ ಜವಾಬ್ದಾರಿ ನೀಡಿದೆವು. ಸಂಕಷ್ಟದ ಸಮಯದಲ್ಲಿ ಪಕ್ಷದ ಜವಾಬ್ದಾರಿ ವಹಿಸಿಕೊಂಡರು. ಕೊನೆಗೆ ದೇಶದ ಪ್ರಧಾನಮಂತ್ರಿ ಹುದ್ದೆ ಅಲಂಕರಿಸುವ ಸಂದರ್ಭದಲ್ಲಿ ತ್ಯಾಗ ಮಾಡಿದರು. ರಾಜೀವ್ ಗಾಂಧಿ ಅವರು ಸತ್ತಾಗಲೂ ತ್ಯಾಗ ಮಾಡಿ ನರಸಿಂಹರಾವ್ ಅವರನ್ನು ಪ್ರಧಾನಿ ಮಾಡಿದರು. ನಂತರ ಯುಪಿಎ ಸರ್ಕಾರದ ಅವಧಿಯಲ್ಲಿ ಬಿಜೆಪಿ ನಾಯಕಿಯರಾದ ಉಮಾ ಭಾರತಿ, ಸುಷ್ಮಾ ಸ್ವರಾಜ್ ಅವರು ತಲೆ ಬೋಳಿಸಿಕೊಳ್ಳುತ್ತೇವೆ ಎಂದು ಸವಾಲು ಹಾಕಿದಾಗ, ಈ ದೇಶಕ್ಕೆ ಆರ್ಥಿಕ ತಜ್ಞರ ಅಗತ್ಯವಿದೆ ಎಂದು ಮನಮೋಹನ್ ಸಿಂಗ್ ಅವರಿಗೆ ತಮ್ಮ ಬಳಿಗೆ ಬಂದ ಹುದ್ದೆಯನ್ನು ತ್ಯಾಗ ಮಾಡಿದರು. ನಾವು ಒಂದು ಪಂಚಾಯ್ತಿ ಅಧ್ಯಕ್ಷ ಸ್ಥಾನ ಬಿಡುತ್ತೇವಾ?” ಎಂದು ತಿಳಿಸಿದರು.
“ಇಂದು ಕೂಡ ನಿಮ್ಮ ಮುಂದೆ ಅವಕಾಶಗಳಿವೆ. ನೀವು ನಿಮ್ಮ ಆಲೋಚನೆಗಳನ್ನು ಪಕ್ಕಕ್ಕಿಟ್ಟು ದೂರದೃಷ್ಟಿಯಿಂದ ಆಲೋಚಿಸಿ. ನೀವು ಹೊಸ ಪೀಳಿಗೆ ತಯಾರು ಮಾಡದಿದ್ದರೆ ನಮಗೆ ಬಹಳ ತೊಂದರೆಯಾಗಲಿದೆ. ಬರುವವರೆಲ್ಲಾ ಒಂದೇ ಬಾರಿಗೆ ಶಾಸಕರು, ಸಂಸದರಾಗಲು ಮುಂದಾಗುತ್ತಾರೆ. ಸೌಮ್ಯ ಅವರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗ ಬೇಕು ಎಂದು ಬಯಸಿರಲಿಲ್ಲ. ನಾನೇ ಆಕೆಗೆ ಈ ಜವಾಬ್ದಾರಿ ನೀಡಿದ್ದೇನೆ. ಇದಕ್ಕೆ ಅನೇಕರು ಟೀಕೆ ಮಾಡಿದರು. ಟೀಕೆ ಮಾಡುವವರು ಮಾಡಿಕೊಳ್ಳಲಿ. ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಹುಟ್ಟಿದ ಕರುಗಳೆಲ್ಲಾ ಬಸವ ಆಗಲು ಸಾಧ್ಯವಿಲ್ಲ. ಶಿಲಾಯೋಗಂ, ನರಾಯೋಗಂ ಎಂಬ ಶ್ಲೋಕವಿದೆ. ಅಂದರೆ ಶಿಲೆಗೆ ಒಂದು ಕಾಲ, ಮನುಷ್ಯನಿಗೆ ಒಂದು ಕಾಲ ಎಂದರ್ಥ. ನೀವು ಮಹಿಳಾ ಶಿಲ್ಪಿಗಳು. ನಿಮ್ಮಲ್ಲಿ ನಾಯಕತ್ವ ಗುಣವಿದೆ. ಹತ್ತಾರು ಮಹಿಳಾ ನಾಯಕಿಯರನ್ನು ಹುಟ್ಟುಹಾಕಿ. ನಿಮ್ಮ ಸೀಟಿಗೆ ಏನು ಆಗುವುದಿಲ್ಲ” ಎಂದು ತಿಳಿಸಿದರು.
ಸರ್ಕಾರದ 2 ವರ್ಷದ ಸಂಭ್ರಮವನ್ನು ಎಲ್ಲೆಡೆ ಹಬ್ಬದಂತೆ ಆಚರಿಸಿ
“ಇದೇ ಮೇ 20ರಂದು ಸರ್ಕಾರದ ಎರಡು ವರ್ಷಗಳ ಸಂಭ್ರಮಾಚರಣೆ ನಡೆಯಲಿದ್ದು, ರಾಜ್ಯದೆಲ್ಲೆಡೆ ಇದನ್ನು ಹಬ್ಬದಂತೆ ಸಂಭ್ರಮಾಚರಣೆ ಮಾಡಬೇಕು. ಎಲ್ಲಾ ಗ್ರಾಮಗಳಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಮನೆ ಮುಂದೆ ರಂಗೋಲೆ ಸ್ಪರ್ಧೆ ನಡೆಸಬೇಕು. ಅತ್ಯುತ್ತಮವಾಗಿ ರಂಗೋಲಿ ಹಾಕಿದವರಿಗೆ ಬಹುಮಾನ ನೀಡಲಾಗುವುದು. ಸರ್ಕಾರದ ವಿರುದ್ಧ ಯಾರು ಎಷ್ಟಾದರೂ ಧಿಕ್ಕಾರ ಕೂಗಲಿ, ಕುಣಿಯಲಿ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಹಣಕಾಸಿನ ವಿಚಾರ ಚರ್ಚೆ ಮಾಡುತ್ತೇನೆ” ಎಂದು ತಿಳಿಸಿದರು.
ಪಕ್ಷವೇ ನಮಗೆ ತಂದೆ ತಾಯಿ, ಪಕ್ಷವೇ ನಮಗೆ ಬಂಧು ಬಳಗ. ಪಕ್ಷ ಅಧಿಕಾರಕ್ಕೆ ಬಂದಾಗ ನಾವು ನೀವು ಅಧಿಕಾರಕ್ಕೆ ಬರಲು ಸಾಧ್ಯ. ಪಕ್ಷವಿಲ್ಲದಿದ್ದರೆ ನಮಗಾರಿಗೂ ಅಧಿಕಾರ ಇರುವುದಿಲ್ಲ. ಇದಕ್ಕಾಗಿಯೇ ನಾನು ವ್ಯಕ್ತಿ ಪೂಜೆ ಬಿಡಿ, ಪಕ್ಷ ಪೂಜೆ ಮಾಡಿ ಎಂದು ಹೇಳುತ್ತಲೇ ಇರುತ್ತೇನೆ.
ಕಾರ್ಯಕ್ರಮಕ್ಕೂ ಮುನ್ನ ಸೊಬಗು ಸಾಮಾಜಿಕ ಸಂಸ್ಥೆ ವತಿಯಿಂದ ‘ಮಹಿಳಾ ಸಮಾನತೆ ಮತ್ತು ಸಮತೆ ಕಡೆಗೆ ನಾವು ನೀವು’ ಎಂಬ ಮಹಿಳಾ ಜಾಗೃತಿ ನಾಟಕ ಪ್ರದರ್ಶಿಸಲಾಯಿತು. ಇನ್ನು 52 ದಿನಗಳ ಕಾಲ ಏಕಾಂಗಿಯಾಗಿ ಅಟ್ಲಾಂಟಿಕ್ ಮಹಾಸಾಗರದ ಸ್ಪಾನಿಶ್ ದ್ವೀಪದಿಂದ ಆಂಟಿಗುವಾವರೆಗೂ 3 ಸಾವಿರ ಮೈಲು ದೂರವನ್ನು ದೋಣಿಯಲ್ಲಿ ಸಾಗಿದ ಭಾರತದ ಮೊದಲ ಮಹಿಳೆ ಎಂಬ ಸಾಧನೆ ಮಾಡಿರುವ ಖ್ಯಾತ ಸಾಹಿತಿ ಜಿ.ಎಸ್ ಶಿವರುದ್ರಪ್ಪ ಅವರ ಮೊಮ್ಮಗಳಾದ ಅನನ್ಯ ಪ್ರಸಾದ್ ಅವರಿಗೆ ಡಿ.ಕೆ. ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸನ್ಮಾನಿಸಿದರು.

