ದೇಶದ ವಾಣಿಜ್ಯ ನಗರಿಯ ಉದ್ಯಮ ದಿಗ್ಗಜರ ಜೊತೆ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಫಲಪ್ರದ ಚರ್ಚೆ ಮುಂಬೈನಲ್ಲಿ ಇನ್ವೆಸ್ಟ್‌ ಕರ್ನಾಟಕ ಯಶಸ್ವಿ ರೋಡ್‌ಷೋ

Mumbai:

Font size:

ಉದ್ಯಮ ಪ್ರಮುಖರಿಗೆ ರಾಜ್ಯದಲ್ಲಿನ ಹೂಡಿಕೆ ಅವಕಾಶಗಳ ಪರಿಚಯ ಕರ್ನಾಟಕದಲ್ಲಿನ ಕಂಪನಿಯ ಯೋಜನೆಗಳ ಬಗ್ಗೆ ಬದ್ಧತೆ ತೋರಿದ ಹಿಂಡಾಲ್ಕೊ ಹುಬ್ಬಳ್ಳಿ- ಧಾರವಾಡದಲ್ಲಿ ಪಾದರಕ್ಷೆ ತಯಾರಿಕಾ ಘಟಕ ಸ್ಥಾಪಿಸಲು ಒಲವು ತೋರಿದ ವ್ಯಾನಿಟಿ ಕೇಸ್‌ ಗ್ರೂಪ್‌

ಮುಂಬೈ,ಜ. 29- , ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಇನ್ವೆಸ್ಟ್‌ ಕರ್ನಾಟಕ 2025 (ಜಾಗತಿಕ ಹೂಡಿಕೆದಾರರ ಸಮಾವೇಶ) -ದ ಪೂರ್ವಭಾವಿ ಸಿದ್ಧತೆಗಳ ಭಾಗವಾಗಿ ಮಂಗಳವಾರ ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಏರ್ಪಡಿಸಿದ್ದ ರೋಡ್‌ಷೋ ತನ್ನ ಉದ್ದೇಶ ಸಾಧನೆಯಲ್ಲಿ ಯಶಸ್ವಿಯಾಗಿದೆ.
ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು, ಹಿಂಡಾಲ್ಕೊ ಇಂಡಸ್ಟ್ರೀಸ್‌, ವ್ಯಾನಿಟಿ ಕೇಸ್‌ ಗ್ರೂಪ್‌, ಆರ್‌ಪಿಜಿ ಗ್ರೂಪ್‌, ಜ್ಯೋತಿ ಲ್ಯಾಬ್ಸ್‌ ಮತ್ತು ಪಿಡಿಲೈಟ್‌ ಇಂಡಸ್ಟ್ರೀಸ್‌ನ ಪ್ರಮುಖರ ಜೊತೆ ಮಾತುಕತೆ ನಡೆಸಿದರು. ರಾಜ್ಯದಲ್ಲಿನ ಉದ್ಯಮ ಸ್ನೇಹಿ ವಾತಾವರಣ ಹಾಗೂ ಹೂಡಿಕೆದಾರರಿಗೆ ನೆರವಾಗುವ ಸುಲಲಿತ ಉದ್ದಿಮೆ ನೀತಿಯನ್ನು ಉದ್ಯಮ ಪ್ರಮುಖರಿಗೆ ವಿವರಿಸಿದರು. ಇನ್ವೆಸ್ಟ್‌ ಕರ್ನಾಟಕ ಸಮಾವೇಶದಲ್ಲಿ ಭಾಗವಹಿಸಲು ಔಪಚಾರಿಕ ಆಹ್ವಾನ ನೀಡಿದರು.
ರಾಜ್ಯದಲ್ಲಿನ ಸರಿಸಾಟಿಯಿಲ್ಲದ ಹೂಡಿಕೆ ಅವಕಾಶಗಳನ್ನು ಮುಂಬೈನ ಪ್ರಮುಖ ಉದ್ಯಮಗಳು ಮತ್ತು ಹೂಡಿಕೆದಾರರಿಗೆ ಪರಿಚಯಿಸಲು ಈ ರೋಡ್‌ಷೋ ನೆರವಾಯಿತು.
ಕರ್ನಾಟಕದಲ್ಲಿನ ತಮ್ಮ ಯೋಜನೆಗಳ ಬಗ್ಗೆ ಹಿಂಡಾಲ್ಕೊದ ಅಲುಮಿನಾ ವಹಿವಾಟಿನ ಸಿಇಒ ಸೌರಭ್‌ ಖೇಡೆಕರ್‌ ಅವರು ಕಂಪನಿಯ ಬದ್ಧತೆಯನ್ನು ಪುನರುಚ್ಚರಿಸಿದರು.
ವ್ಯಾನಿಟಿ ಕೇಸ್‌ ಗ್ರೂಪ್‌ನ ಸಿಇಒ ಸಮೀರ್‌ ಕೊಠಾರಿ ಅವರು ಹುಬ್ಬಳ್ಳಿ – ಧಾರವಾಡದಲ್ಲಿ ಪಾದರಕ್ಷೆ ತಯಾರಿಕಾ ಘಟಕ ಸ್ಥಾಪಿಸಲು ಒಲವು ವ್ಯಕ್ತಪಡಿಸಿದರು.
ಆರ್‌ಪಿಜಿ ಗ್ರೂಪ್‌ನ ವೈಸ್‌ ಚೇರ್ಮನ್‌ ಅನಂತ್‌ ಗೋಯೆಂಕಾ ಅವರ ಜೊತೆಗಿನ ಚರ್ಚೆಯಲ್ಲಿ ಆರ್‌ಪಿಜಿ ಸಮೂಹದ ಮೂಲಸೌಲಭ್ಯ, ಇಂಧನ, ಐಟಿ ಮತ್ತಿತರ ವಹಿವಾಟುಗಳ ವಿಸ್ತರಣೆಯು ಪ್ರಮುಖವಾಗಿ ಚರ್ಚಿಸಲಾಯಿತು.
ರಾಜ್ಯದಲ್ಲಿನ ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ (ಎಫ್‌ಎಂಸಿಜಿ) ಕ್ಲಸ್ಟರ್‌ನಲ್ಲಿ ಹೂಡಿಕೆ ಮಾಡಲು ಸಚಿವ ಪಾಟೀಲ ಅವರು ಜ್ಯೋತಿ ಲ್ಯಾಬ್ಸ್‌ನ ಯೋಜನಾ ಮುಖ್ಯಸ್ಥ ಅನಂತ್‌ ರಾವ್‌ ಅವರಿಗೆ ಮನವಿ ಮಾಡಿಕೊಂಡರು.
ರಾಜ್ಯದ ನಿಯೋಗವು ಪಿಡಿಲೈಟ್‌ ಇಂಡಸ್ಟ್ರೀಸ್‌ನ ಮಾರಾಟ ಮುಖ್ಯಸ್ಥ ಸಂದೀಪ್‌ ಜೋಗ್ಲೆಕರ್‌ ಅವರ ಜೊತೆಗೂ ಸಮಾಲೋಚನೆ ನಡೆಸಿತು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ ಅವರು ಸಮಾಲೋಚನೆಗಳಲ್ಲಿ ಭಾಗವಹಿಸಿದ್ದರು.

Prev Post ದೇವದಾಸಿ ಪದ್ಧತಿ ನಿಷೇಧ ಆಗಿದೆ. ಎಲ್ಲಿಯಾದರೂ ನಡೆದದ್ದು ಗಮನಕ್ಕೆ ಬಂದರೆ SP-DC ವಿರುದ್ಧ ಮುಲಾಜಿಲ್ಲದೆ ಕ್ರಮ: ಸಿ.ಎಂ ಎಚ್ಚರಿಕೆ
Next Post ಮಹಾತ್ಮಾಗಾಂಧೀಜಿಯವರ ಹೋರಾಟದ ಬದುಕು ಪ್ರೇರಣಾದಾಯಕ- ಮುಖ್ಯಮಂತ್ರಿ ಸಿದ್ದರಾಮಯ್ಯ