ತೊಗರಿ ಖರೀದಿಗೆ ರಾಜ್ಯ ಸರ್ಕಾರದಿಂದ ರೂ 140 ಕೋಟಿ/ ಧರಣಿನಿರತ ರೈತರನ್ನುದ್ದೇಶಿಸಿ ಕೃಷಿ ಮಾರುಕಟ್ಟೆ, ಕಬ್ಬು ಅಭಿವೃದ್ಧಿ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿದರು

vijayapura:

Font size:

ಕ್ವಿಂಟಾಲ್‌ಗೆ ಹೆಚ್ಚುವರಿ ರೂ 450 ಘೋಷಣೆ; 400ಕ್ಕೂ ಅಧಿಕ ಖರೀದಿ ಕೇಂದ್ರ: ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ

ವಿಜಯಪುರ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ರಾಜ್ಯ ಸರ್ಕಾರ ಕ್ವಿಂಟಾಲ್‌ಗೆ ಹೆಚ್ಚುವರಿ ರೂ 450 ನೀಡಲು ನಿರ್ಧರಿಸಿದ್ದು, ಈ ಉದ್ದೇಶಕ್ಕೆ ಊ 140 ಕೋಟಿ ಒದಗಿಸಲಾಗುವುದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಘೋಷಿಸಿದರು.

ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರೊಂದಿಗೆ ಅವರ ಬೇಡಿಕೆಗಳ ಬಗ್ಗೆ ಚರ್ಚಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ ಸಚಿವರು, ಒಟ್ಟು ಪ್ರತಿ ಕ್ರಿಂಟಾಲ್‌ಗೆ ಎಂಟು ಸಾವಿರ ರೂ. ಬೆಂಬಲ ಬೆಲೆ ನೀಡಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ನಫೆಡ್‌ ಖರೀದಿ ಏಜನ್ಸಿಯಾಗಿದ್ದು, ದಾಖಲೆಗಳನ್ನು ಸಕಾಲಕ್ಕೆ ಒದಗಿಸದ ಕಾರಣ ಖರೀದಿ ಪ್ರಕ್ರಿಯೆ ವಿಳಂಬವಾಗಿದೆ. ರಾಜ್ಯಾದ್ಯಂತ 400ಕ್ಕೂ ಅಧಿಕ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ತೊಗರಿ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಇದೇ ಮೊದಲ ಬಾರಿಗೆ ರೂ 8000 ಧಾರಣಿಯಲ್ಲಿ ತೊಗರಿ ಖರೀದಿ ಮಾಡಲಾಗುತ್ತಿದೆ. ಇದುವರೆಗೆ ರೂ 5800 ಧಾರಣಿಯಲ್ಲಿ ಖರೀದಿ ಮಾಡಲಾಗುತ್ತಿತ್ತು. ಬೀದರ್‌ ಜಿಲ್ಲೆಯಿಂದ ಚಿತ್ರದುರ್ಗ ಜಿಲ್ಲೆಯವರೆಗೆ ತೊಗರಿ ಬೆಳೆಯಲಾಗುತ್ತಿದ್ದು, ರೈತರು ಬೆಂಬಲ ಬೆಲೆ ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ರೈತರ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿ ಕ್ವಿಂಟಾಲ್‌ಗೆ ರೂ 450 ಹೆಚ್ಚುವರಿ ಕೊಡುವ ನಿರ್ಧಾರ ಕೈಗೊಂಡಿದೆ ಎಂದು ವಿವರಿಸಿದರು.

ಆಂಧ್ರದ ಜೋಳಕ್ಕೆ ತಡೆ: ಆಂಧ್ರಪ್ರದೇಶದ ಹೈಬ್ರಿಡ್‌ ಜೋಳವನ್ನು ರಾಜ್ಯದ ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿರುವುದು ಗಮನಕ್ಕೆ ಬಂದಿದ್ದು, ಆಂಧ್ರದ ಜೋಳಕ್ಕೆ ಕಡಿವಾಣ ಹಾಕಲಾಗುವುದು ಎಂದು ಸಚಿವರು ಹೇಳಿದರು.

ಹೈಬ್ರಿಡ್‌ ಜೋಳಕ್ಕೆ ರೂ 3370 ಹಾಗೂ ಮಾಲದಂಡಿ ಜೋಳಕ್ಕೆ ರೂ 3400 ಬೆಂಬಲ ಬೆಲೆ ಘೋಷಣೆ ಮಾಡಲಾಗಿದ್ದು, ಒಟ್ಟು ಐದು ಲಕ್ಷ ಕ್ವಿಂಟಾಲ್‌ ಖರೀದಿ ಮಾಡಲಾಗುವುದು. ಇದುವರೆಗೆ ಕೆಲವೇ ಕೆಲವು ಜಿಲ್ಲೆಗಳ ರೈತರು ಮಾತ್ರ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡುತ್ತಿದ್ದರು. ಈ ಬಾರಿ ಜೋಳ ಬೆಳೆಯುವ ಎಲ್ಲ ಜಿಲ್ಲೆಗಳಿಗೂ ಖರೀದಿ ಪ್ರಮಾಣವನ್ನು ಹಂಚಿಕೆ ಮಾಡಲಾಗುವುದು ಎಂದು ವಿವರಿಸಿದರು.

ಕಳಪೆ ಬಿತ್ತನೆ ಬೀಜ ಮತ್ತು ಕೀಟನಾಶಕ ಮಾರಾಟದ ದೂರುಗಳು ಹೆಚ್ಚಾಗಿದ್ದು, ಅಂತಹವರಿಗೆ ಶಿಕ್ಷೆ ಕೊಡಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

-------------
ಕಬ್ಬು ಹಾನಿಗೆ ಪರಿಹಾರ ನೀಡಲು ನಿಧಿ ಸ್ಥಾಪನೆ.

ಈ ವರ್ಷದಿಂದ ಪ್ರತಿ ವರ್ಷ 50 ಲಕ್ಷ ರೂ. ನಿಧಿ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಭರವಸೆ

ವಿಜಯಪುರ: ಅಗ್ನಿ ದುರಂತದಲ್ಲಿ ಸಂಭವಿಸುವ ಕಬ್ಬಿನ ಹಾನಿಗೆ ಪರಿಹಾರ ನೀಡಲು ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ನಿಧಿ ಸ್ಥಾಪಿಸಲಿದ್ದು, ಈ ವರ್ಷದಿಂದಲೇ ರೂ 50 ಲಕ್ಷ ತೆಗೆದಿರಿಸಲಾಗುವುದು ಎಂದು ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಘೋಷಣೆ ಮಾಡಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜೇರಿ ನೇತೃತ್ವದ ರೈತ ಮುಖಂಡರೊಂದಿಗೆ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚಿಸಿದ ಸಚಿವರು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ನೀಡುವ ಪರಿಹಾರ ಅತ್ಯಲ್ಪ ಎಂಬ ಕಾರಣಕ್ಕೆ ನಿಜಲಿಂಗಪ್ಪ ಸಂಸ್ಥೆಯಿಂದಲೂ ಪರಿಹಾರ ನೀಡುವ ನಿರ್ಧಾರ ಕೈ ಗೊಳ್ಳಲಾಗಿದೆ ಎಂದು ಹೇಳಿದರು.

ಆರಂಭದಲ್ಲಿ ಗರಿಷ್ಠ ಐದು ಎಕರೆ ಮಿತಿಯಲ್ಲಿ ಪರಿಹಾರ ನೀಡಲಿದ್ದು, ನಂತರ ಈ ಪರಿಹಾರ ಯೋಜನೆಯನ್ನು ವಿಸ್ತರಣೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು. ವಿದ್ಯುತ್‌ ಷಾರ್ಟ್‌ ಸರ್ಕ್ಯೂಟ್‌ ಮತ್ತಿತರ ಕಾರಣಗಳಿಂದ ಕಬ್ಬು ಹಾನಿಗೀಡಾದರೂ ಸಕ್ಕರೆ ಕಾರ್ಖಾನೆಗಳು ಈ ಕಬ್ಬನ್ನು ನುರಿಸಲಿವೆ. ಆದರೂ ಸರ್ಕಾರ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಪರಿಹಾರ ನೀಡುವ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.

ಬಹುಮಾನದ ಮೊತ್ತ ಹೆಚ್ಚಳ ತೂಕದಲ್ಲಿ ವಂಚನೆ ಮಾಡುವ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ವಿರುದ್ಧ ಸೂಕ್ತ ದಾಖಲೆಗಳೊಂದಿಗೆ ದೂರು ನೀಡುವ ರೈತರಿಗೆ ರೂ 1 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಬೆಳಗಾವಿ ಅಧಿವೇಶನದ ವೇಳೆ ಘೋಷಣೆ ಮಾಡಲಾಗಿತ್ತು.ಈ ಬಹುಮಾನದ ಮೊತ್ತವನ್ನು ರೂ 2.5 ಲಕ್ಷಗಳಿಗೆ ಹೆಚ್ಚಿಸಲಾಗಿದ್ದು, ದೂರು ನೀಡುವ ಕಬ್ಬು ಬೆಳೆಗಾರರಿಗೆ ಯಾವುದೇ ಸಮಸ್ಯೆಯಾಗದಂತೆ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳಲಿದೆ. ಅವರ ಕಬ್ಬನ್ನು ನುರಿಸುವ ಹೊಣೆಯನ್ನೂ ಸರ್ಕಾರ ಹೊರಲಿದೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಒಟ್ಟು 80 ಸಕ್ಕರೆ ಕಾರ್ಖಾನೆಗಳಿದ್ದು, ಅವುಗಳಲ್ಲಿ 72 ಕಾರ್ಖಾನೆಗಳಲ್ಲಿ ಹಳೆ ಪದ್ಧತಿಯ ಅನಲಾಗ್‌ ಯಂತ್ರಗಳ ಬದಲಿಗೆ ಡಿಜಿಟಲ್‌ ತೂಕದ ಯಂತ್ರಗಳನ್ನು ಹಾಕಲಾಗಿದೆ. ಐದು ಕಾರ್ಖಾನೆಗಳ ಮಾಲೀಕರು ನ್ಯಾಯಾಲಯಕ್ಕೆ ಹೋಗಿರುವುದರಿಂದ ವಿಳಂಭವಾಗಿದೆ. ಇತರ ಕಾರ್ಖಾನೆಗಳಲ್ಲಿ ಡಿಜಿಟಲ್‌ ತೂಕದ ಯಂತ್ರ ಅಳವಡಿಕೆ ಪ್ರಗತಿಯಲ್ಲಿದೆ.

ಬೆಳಗಾವಿಯಲ್ಲಿ ಮೂರು, ಬಾಗಲಕೋಟ ಜಿಲ್ಲೆಯಲ್ಲಿ ಎರಡು ಸೇರಿದಂತೆ ರಾಜ್ಯಾದ್ಯಂತ ಎಪಿಎಂಸಿಯಿಂದ 12 ಡಿಜಿಟಲ್ ತೂಕದ ಯಂತ್ರಗಳನ್ನು ಹಾಕಲಿದ್ದು, ರೈತ ಸಂಘಗಳು ಮುಂದೆ ಬಂದರೆ ನಿರ್ವಹಣೆ ಜವಾಬ್ದಾರಿಯನ್ನು ನೀಡಲಾಗುವುದು. ತೂಕ ಮತ್ತು ಅಳತೆ ನಮ್ಮ ಇಲಾಖೆ ವ್ಯಾಪ್ತಿಗೊಳಪಡದಿದ್ದರೂ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಈ ನಿರ್ಧಾರ ಮಾಡಲಾಗಿದೆ.

ಎಫ್ಆರ್ಪಿ ದರ ಹೆಚ್ಚಳ ಮಾಡುವ ದೃಷ್ಟಿಯಿಂದ 2025-26ನೇ ಸಾಲಿಗೆ ಪ್ರತಿ ಟನ್‌ಗೆ ರೂ 4440 ನಿಗಧಿಪಡಿಸುವಂತೆ ರಾಜ್ಯ ಸರ್ಕಾರವೇ ಸ್ವಪ್ರೇರಣೆಯಿಂದ ಸಿಎಸಿಪಿಗೆ ಶಿಪಾರಸ್ಸು ಮಾಡಿದೆ. ಕಬ್ಬಿನ ಬೆಲೆಯನ್ನು ಕೇಂದ್ರ ಸರ್ಕಾರವೇ ನಿಗದಿಪಡಿಸಲಿದ್ದು, ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಚೂನಪ್ಪ ಪೂಜೇರಿ, ವಿಜಯಪುರ ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ, ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ, ಮಹೇಶ್ ಗೌಡ ಸುಬೇದಾರ್, ಶರಣಪ್ಪ ದೊಡ್ಡಮನಿ, ರಾಮನಗೌಡ ಪಾಟೀಲ, ಸೋಮು ವಿಜಯಪುರ, ಈರಪ್ಪ ಕುಳೇಕುಮಟಗಿ, ಮಾಳು ಪೂಜಾರ, ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆನ್ನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ, ಕೃಷಿ ಮಾರಾಟ ಮಂಡಳಿ ಸಿಜಿಎಂ ಚಂದ್ರಕಾಂತ ಪಾಟೀಲ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Prev Post ಜನವರಿ 23 ರಿಂದ 25 ರ ವರೆಗೆ ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ 2025 - ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ
Next Post ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆ 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಸೂಚನೆ: ಎಂ.ಬಿ.ಪಾಟೀಲ