ಬೀದರ್ ದರೋಡೆ ಬೆನ್ನಲ್ಲೇ ಮಂಗಳೂರಿನಲ್ಲಿ ಹಾಡುಹಗಲೇ ದರೋಡೆ ಕೋಟೆಕಾರು ಸಹಕಾರಿ ಬ್ಯಾಂಕ್‌ನಿಂದ ೧೨ ಕೋಟಿ ಮೌಲ್ಯದ ನಗ, ನಗದು ಲೂಟಿ

Mangalore:

Font size:

ಬೀದರ್ ದರೋಡೆ ಬೆನ್ನಲ್ಲೇ ಮಂಗಳೂರಿನಲ್ಲಿ ಹಾಡುಹಗಲೇ ದರೋಡೆ ಕೋಟೆಕಾರು ಸಹಕಾರಿ ಬ್ಯಾಂಕ್‌ನಿಂದ ೧೨ ಕೋಟಿ ಮೌಲ್ಯದ ನಗ, ನಗದು ಲೂಟಿ

From ; Jayaram Udupi

ಮಂಗಳೂರು: ಬೀದರ್ ದರೋಡೆ ಪ್ರಕರಣದದ ಬೆನ್ನಲ್ಲೇ ಹಾಡುಹಗಲೇ ಕೆ.ಸಿ ರೋಡ್ ಜಂಕ್ಷನ್‌ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಶಾಖೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ನಗ ನಗದು ದರೋಡೆಯಾಗಿದೆ.
ಬ್ಯಾಂಕ್ ಶಾಖೆಗೆ ನುಗ್ಗಿದ ಸುಮಾರು ೨೫ರಿಂದ ೩೫ ವರ್ಷದೊಳಗಿನ ಐದಾರು ಮಾಸ್ಕ್ ಧಾರಿಗಳು ಒಳಗಿದ್ದ ಐವರು ಸಿಬ್ಬಂದಿಗಳಿಗೆ ಬಂದೂಕು, ತಲ್ವಾರ್ ತೋರಿಸಿ ಬೆದರಿಸಿ ದರೋಡೆ ನಡೆಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಸುಮಾರು ಒಂದು ಗಂಟೆ ವೇಳೆಗೆ ಕಪ್ಪು ಬಣ್ಣದ ಫಿಯೆಟ್ ಕಾರಿನಲ್ಲಿ ಬಂದ ಆಗಂತುಕರಲ್ಲಿ ಐದಾರು ಮಂದಿ ಬ್ಯಾಂಕ್ ಶಾಖೆಗೆ ನುಗ್ಗಿದ್ದು ಕಚೇರಿಯಲ್ಲಿದ್ದ ಸಿಬ್ಬಂದಿಗಳಿಗೆ ಮಾರಕಾಯುಧಗಳನ್ನ ತೋರಿಸಿ ಬೆಲೆ ಬಾಳುವ ಚಿನ್ನಾಭರಣ, ಸುಮಾರು ಐದು ಲಕ್ಷ ರೂಪಾಯಿ ನಗದನ್ನ ದರೋಡೆಗೈದು ಮಂಗಳೂರು ಕಡೆ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಕೆ.ಸಿ ರೋಡ್ ಜಂಕ್ಷನ್‌ನಲ್ಲಿರುವ ವಾಣಿಜ್ಯ ಕಟ್ಟಡದ ಮೊದಲ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಬ್ಯಾಂಕ್ ಶಾಖೆಯಲ್ಲಿ ದರೋಡೆ ನಡೆದಿದೆ. ಬ್ಯಾಂಕಿನ ಕೆಳಗಿನ ಅಂತಸ್ತಿನ ಬೇಕರಿಯಲ್ಲಿದ್ದ ನಾಲ್ವರು ಶಾಲಾ ವಿದ್ಯಾರ್ಥಿಗಳು ಬ್ಯಾಂಕಿನ ಸಿಬ್ಬಂದಿಗಳ ಬೊಬ್ಬೆ ಕೇಳಿ ಮೇಲೆ ಓಡಿದ್ದಾರೆ. ವಿದ್ಯಾರ್ಥಿಗಳಿಗೆ ಆಗಂತುಕರು ಗನ್ ತೋರಿಸಿ ಬೆದರಿಸಿದ್ದಾರೆ.
ವಿಶೇಷ ಎಂದರೆ ಬ್ಯಾಂಕ್ ಒಳಗಿನ ಸಿಸಿಟಿವಿ ಕ್ಯಾಮೆರಾವನ್ನು ಸರ್ವಿಸ್ ಮಾಡುತ್ತಿದ್ದ ವೇಳೆಯೇ ಘಟನೆ ನಡೆದಿದೆ. ಹೊರಗಿನ ಕ್ಯಾಮೆರಾದಲ್ಲಿ ಆರೋಪಿಗಳು ಪಲಾಯನಗೈಯುತ್ತಿರುವ ದೃಶ್ಯ ಸೆರೆಯಾಗಿದೆ. ಹೀಗಾಗಿ ಬ್ಯಾಂಕ್ ಬಗ್ಗೆ ತಿಳಿದಿರುವ ಮಂದಿಯೇ ದರೋಡೆ ನಡೆಸಿರುವ ಸಂಶಯ ವ್ಯಕ್ತವಾಗಿದೆ.
ದರೋಡೆಕೋರರು ಹಿಂದಿಯಲ್ಲಿ ಮಾತನಾಡುತ್ತಿದ್ದು, ಸುಮಾರು ೧೦ರಿಂದ ೧೨ ಕೋಟಿ ಮೌಲ್ಯದ ನಗ, ನಗದು ದರೋಡೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ದರೋಡೆಯಾಗಿರುವ ಮೊತ್ತ ಇದಕ್ಕೂ ಹೆಚ್ಚಿದೆ ಎನ್ನಲಾಗಿದೆ.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ ಅಗರ್‌ವಾಲ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಎಸಿಪಿ ಧನ್ಯ ನಾಯಕ್ ಮುಂದಾಳತ್ವದೆ ಪೊಲೀಸರ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸ್ಥಳೀಯ ಶಾಸಕರೂ ಆಗಿರುವ ಸ್ಪೀಕರ್ ಖಾದರ್ ಭೇಟಿ ನೀಡಿ ಆರೋಪಿಗಳನ್ನ ಶೀಘ್ರ ಬಂಧಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಗರಂ...
ಕೋಟೆಕರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ನಗರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿ ಶೀಘ್ರ ಆರೋಪಿಗಳ ಪತ್ತೆಗೆ ಖಡಕ್ ಸೂಚನೆ ನೀಡಿದರು.
ಪಶ್ಚಿಮ ವಲಯದ ಐಜಿ ಅಮಿತ್, ಪೊಲೀಸ್ ಆಯುಕ್ತ ಸಿಂಗ್, ಅನುಪಮ್ ಅಗರವಾಲ್, ಎಸ್.ಪಿ ಯತೀಶ್ , ಡಿವೈಎಸ್ ಪಿ ಸೇರಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಘಟನೆಯ ಕುರಿತಂತೆ ಸಮಗ್ರ ಮಾಹಿತಿ ಪಡೆದ ಮುಖ್ಯಮಂತ್ರಿಗಳು, ನೀವೆಲ್ಲಾ ಇದ್ದು ಯಾಕೆ ಹೀಗಾಯ್ತು? ಆರೋಪಿಗಳು ಸಲೀಸಾಗಿ ತಪ್ಪಿಸಿಕೊಂಡು ಹೋಗಿದ್ದು ಹೇಗೆ ? ಎಷ್ಟು ಟೋಲ್ ಗಳನ್ನು ದಾಟಿ ಹೋಗಿದ್ದಾರೆ. ನೀವು ಟೋಲ್‌ಗಳನ್ನು ಏಕೆ ಟೈಟ್ ಮಾಡಲಿಲ್ಲ ಎಂದು ಗರಂ ಆಗಿ ಪ್ರಶ್ನಿಸಿದರು.
ಎಲ್ಲಾ ಟೋಲ್ ಗಳಲ್ಲೂ ಬಿಗಿ ತಪಾಸಣೆ ನಡೆಸಬೇಕು. ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಕಾಬಂಧಿ ಹಾಕಿ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮಕ್ಕೆ ಒಪ್ಪಿಸಿ ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.

Prev Post ಮಂಗಳೂರಿಗೆ ಹೊರವಲಯದ ಕೋಟೆಕಾರ್ ಸಹಕಾರಿ ಸಂಘ ಬ್ಯಾಂಕಿನಲ್ಲಿ ಇಂದು ಹಾಡುಹಗಲೇ ದರೋಡೆ ನಡೆದಿದೆ
Next Post ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಇದೇ ಜ. 21 ರಂದು ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಅನಾವರಣ ಆಗಲಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪೂರ್ವಸಿದ್ಧತೆ ಪರಿಶೀಲನೆ ನಡೆಸಿದರು