ಬಜೆಟ್ ನಲ್ಲಿ ಘೋಷಿಸಿದ್ದನ್ನು ಜಾರಿ ಮಾಡಿ ನುಡಿದಂತೆ ನಡೆದ ಸಿಎಂ ಸಿದ್ದರಾಮಯ್ಯ
From Jayaram Udupi
*ಬಜೆಟ್ ನಲ್ಲಿ ಘೋಷಿಸಿದ್ದನ್ನು ಜಾರಿ ಮಾಡಿ ನುಡಿದಂತೆ ನಡೆದ ಸಿಎಂ ಸಿದ್ದರಾಮಯ್ಯ*
*ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಶಂಕು ಸ್ಥಾಪನೆ ನೆರವೇರಿಸಿದ ಸಿಎಂ*
ಮಂಗಳೂರು ಜ17:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಜೆಟ್ ನಲ್ಲಿ ಘೋಷಿಸಿದ್ದಂತೆ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಇಂದು ಶಂಕು ಸ್ಥಾಪನೆ ನೆರವೇರಿಸಿ ಮತ್ತೊಮ್ಮೆ ನುಡಿದಂತೆ ನಡೆದ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಯನ್ನು ಮುಂದುವರೆಸಿದ್ದಾರೆ.
ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ರಾಜೀವ್ ಗಾಂಧಿ ವಿವಿ, ಏಷ್ಯಾದ ಅತ್ಯಂತ ದೊಡ್ಡ ಆರೋಗ್ಯ ವಿಶ್ವ ವಿದ್ಯಾಲಯ ಆಗಿದೆ. 3.5 ಲಕ್ಷ ವೈದ್ಯ ವಿದ್ಯಾರ್ಥಿಗಳಿರುವ ಅತ್ಯಂತ ದೊಡ್ಡ ಆರೋಗ್ಯ ವಿವಿ ಇದಾಗಿದೆ. ಆದ್ದರಿಂದ ಗುಣಮಟ್ಟದ ವೈದ್ಯರನ್ನು ರೂಪಿಸುವುದರ ಜೊತೆಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಲ್ಲಿ ರಾಜೀವ್ ಗಾಂಧಿ ವಿವಿಯ ಕೊಡುಗೆ ಅಪಾರವಾಗಿದೆ ಎಂದರು.
ಸರ್ಕಾರಿ ಆಸ್ಪತ್ರೆಗಳೂ ಖಾಸಗಿ ಆಸ್ಪತ್ರೆಗಳ ಮಾದರಿಯಲ್ಲಿ ಶುಚಿತ್ವ ಮತ್ತು ನಿರ್ವಹಣೆ ಕಾಪಾಡುವ ಜೊತೆಗೆ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಸಿಗುವಂತಾಗಬೇಕು. ಶ್ರೀಮಂತರು ಮತ್ತು ನಮ್ಮಂಥಾ ರಾಜಕಾರಣಿಗಳೂ ಸರ್ಕಾರಿ ಆಸ್ಪತ್ರೆಗೆ ಬರುವಂಥಾಗಬೇಕು ಎನ್ನುವ ದಿಕ್ಕಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದರು.
ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಇರಬೇಕು ಎನ್ನುವುದು ನನ್ನ ಗುರಿ. ಮಂಗಳೂರಿನಲ್ಲಿ ಉತ್ತಮ ಆರೋಗ್ಯ ಸೇವೆ ಇದ್ದರೂ ಈ ಜಿಲ್ಲೆಗೂ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಗತ್ಯ ಇದೆ. ಈ ದಿಕ್ಕಿನಲ್ಲೂ ಸರ್ಕಾರ ಯೋಚಿಸಿ ಕ್ರಮ ಕೈಗೊಳ್ಳಲಿದೆ.
ರಾಜೀವ್ ಗಾಂಧಿ ಆರೋಗ್ಯ ವಿವಿ ಆರೋಗ್ಯ ಸೇವೆ ಸರಳವಾಗಿ ಜನರಿಗೆ ಸಿಗುವ ದಿಕ್ಕಿನಲ್ಲಿ ಸಂಶೋಧನೆಗಳನ್ನು ಹೆಚ್ಚೆಚ್ಚು ನಡೆಸಬೇಕು. ದೇಶದ ಅತ್ಯುತ್ತಮ ಆರೋಗ್ಯ ಸೇವೆ ಬಡವರಿಗೂ ಸುಲಭವಾಗಿ ಸಿಗುವಂತೆ ಮಾಡಬೇಕು ಎಂದು ಕರೆ ನೀಡಿದರು.
ಈ ಕ್ಷೇತ್ರದ ಡಿಪ್ಲಮೋ ಮತ್ತು ಇತರೆ ಕೋರ್ಸ್ ಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ವೈದ್ಯ ವಿಜ್ಞಾನ ಪದವೀಧರರೂ ಯುವ ನಿಧಿಗೆ ಅರ್ಹತೆ ಗಳಿಸಿದ್ದಾರೆ. ವೈದ್ಯ ವಿದ್ಯಾರ್ಥಿಗಳು ಇತರೆ ಕ್ಷೇತ್ರಗಳಿಗೆ ವಲಸೆ ಹೋಗದೆ ಆರೋಗ್ಯ ಕ್ಷೇತ್ರದಲ್ಲೇ ತಮ್ಮ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.
*BPL ಇದ್ದವರಿಗೆ ಉಚಿತ ಸೇವೆ*
BPL ಕಾರ್ಡ್ ಇದ್ದವರಿಗೆ ಎಲ್ಲಾ ರೀತಿಯ ಆರೋಗ್ಯ ಸೇವೆಯನ್ನು ಉಚಿತ ವಾಗಿ ನೀಡಿ ಎನ್ನುವ ಸೂಚನೆಯನ್ನು ವೈದ್ಯಕೀಯ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಬಡವರಿಗೂ ಕೂಡ ದೊಡ್ಡ ದೊಡ್ಡ ಕಾಯಿಲೆಗಳು ಬರುತ್ತಿವೆ. ಕಿಡ್ನಿ ಕಸಿಗೆ 5000 ಮಂದಿ ಸಾಲಿನಲ್ಲಿದ್ದಾರೆ. ಕಿಡ್ನಿ ದಾನಿಗಳು ಸಿಕ್ಕರೆ ನಿತ್ಯ ಕಿಡ್ನಿ ಕಸಿ ಮಾಡುವ ನುರಿತ ವೈದ್ಯರ ತಂಡ ನಮ್ಮಲ್ಲಿದೆ ಎಂದರು.
ಇಂದು ನಾನು ಶಂಕುಸ್ಥಾಪನೆ ನೆರವೇರಿಸಿರುವ ಪ್ರಾದೇಶಿಕ ಕಚೇರಿಯ ನಿರ್ಮಾಣ ಮತ್ತು ಕಾರ್ಯಕ್ಷಮತೆ ಎರಡೂ ಗುಣಮಟ್ಟದಲ್ಲಿ ಕೂಡಲಿ ಎಂದು ಸೂಚಿಸಿದರು.
Oooo
ಧಾರ್ಮಿಕ ನೆಲೆಗಟ್ಟಿನ ಮೇಲೆ ಅನಾದಿ ಕಾಲದಿಂದಲೂ ಯಾವುದೇ ಅಡ್ಡಿ-ಆತಂಕಗಳಿಲ್ಲದೇ ನಿರಂತರವಾಗಿ ನಡೆದು ಬಂದಂತಹ ಗಂಡುಕಲೆಯಾದ ಯಕ್ಷಗಾನವನ್ನು ಪೊಲೀಸರ ಮೂಲಕ ಅರ್ಧಕ್ಕೆ ನಿಲ್ಲಿಸುವ ಮೂಲಕ ಕಲೆಗೆ ಅವಮಾನಿಸಲು ಯತ್ನಿಸಿರುವುದು ಕಾಂಗ್ರೆಸ್ಸಿನ ಹೀನ ಮನಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಕಳದಲ್ಲಿ ಸಂಕ್ರಾಂತಿಯ ಪ್ರಯುಕ್ತ ಸಾರ್ವಜನಿಕ ಸತ್ಯನಾರಾಯಣ ಪೂಜೆಯ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಯಕ್ಷಗಾನ ಪ್ರದರ್ಶನಕ್ಕೆ ಸ್ಥಳೀಯ ಕಾಂಗ್ರೆಸ್ ನಾಯಕನ ಫೋನ್ ಕರೆಯ ದೂರಿನ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಯಕ್ಷಗಾನವನ್ನು ನಿಲ್ಲಿಸುವಂತೆ ಸೂಚಿಸಿ, ಆಯೋಜಕರನ್ನು ಬಂಧಿಸಲು ಮುಂದಾಗಿದ್ದು ಖಂಡನೀಯ. ಇದೀಗ ಯಕ್ಷಗಾನ ಆಯೋಜನೆ ಮಾಡಿದವರ ಮೇಲೆ ಪ್ರಕರಣ ದಾಖಲಾಗಿದ್ದು ಇಂತಹ ಘಟನೆಗಳನ್ನು ಖಂಡಿಸದಿದ್ದರೆ ಮುಂದಿನ ದಿನಗಳಲ್ಲಿ ಅವರು ತುಳುನಾಡ ಪರಂಪರೆಯಾದ ಕೋಲ, ನೇಮ, ಕಂಬಳ, ಜಾತ್ರೆಗೂ ಅಡ್ಡಿಪಡಿಸಲು ಹೇಸುವುದಿಲ್ಲ ಎಂದರು.
ಯಾರೋ ಒಬ್ಬ ವ್ಯಕ್ತಿಯ ದುರುದ್ದೇಶದ ರಾಜಕೀಯ ಹಿತಾಸಕ್ತಿಗಾಗಿ ಶತ ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಸ್ಕೃತಿ ಆಚರಣೆಗಳಿಗೆ ಅಡ್ಡಿಪಡಿಸುವುದು ಶೋಭೆಯಲ್ಲ. ಯಕ್ಷಗಾನವನ್ನೇ ಉಸಿರಾಗಿಸಿಕೊಂಡು ಬದುಕುತ್ತಿರುವ ಕಲಾವಿದರಿಗೆ ಹಾಗೂ ತುಳುನಾಡ ಪರಂಪರೆಗೆ ಕಿಂಚಿತ್ತು ಧಕ್ಕೆಯುಂಟಾದರೂ ಸಹಿಸುವ ಪ್ರಶ್ನೆಯೇ ಇಲ್ಲ. ಕರಾವಳಿಯ ಕಲೆ ಹಾಗೂ ಧಾರ್ಮಿಕತೆಯ ನಂಬಿಕೆಗೆ ಧಕ್ಕೆಯುಂಟು ಮಾಡಿ ದರ್ಪ ತೋರಿದ ಕಾಂಗ್ರೆಸ್ಸಿಗರು ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳುವುದರ ಜೊತೆಗೆ ದ್ವೇಷದಿಂದ ದಾಖಲಾಗಿರುವ ಪ್ರಕರಣವನ್ನು ಬೇಷರತ್ ಹಿಂಪಡೆಯಬೇಕೆಂದು ಶಾಸಕರು ಸರ್ಕಾರವನ್ನು ಆಗ್ರಹಿಸಿದರು.