||ಬಾಕಿ ಪಾವತಿಗೆ ಮನವಿ ಸಲ್ಲಿಕೆ; ಚರ್ಚಿಸಿ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ ಹೆಚ್.ಡಿ.ಕುಮಾರಸ್ವಾಮಿ||
ಬೆಂಗಳೂರು: ಹಿಂದೂಸ್ತಾನ್ ಮಶೀನ್ ಅಂಡ್ ಟೂಲ್ಸ್ (HMT) ಕಾರ್ಖಾನೆಯ ಹಾಲಿ ಹಾಗೂ ನಿವೃತ್ತ ಉದ್ಯೋಗಿಗಳು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಿದರು.
ಬೆಂಗಳೂರಿನ ಹೆಚ್ ಎಂಟಿ ಕಚೇರಿಯಲ್ಲಿ ಸಚಿವರನ್ನು ಭೇಟಿಯಾದ ಉದ್ಯೋಗಿಗಳು; ವೇತನ, ಗ್ರಾಚ್ಯುಟಿ, ಭವಿಷ್ಯ ನಿಧಿ ಪಾವತಿ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಕೇಂದ್ರ ಬೃಹತ್ ಕೈಗಾರಿಕೆ ಸಇವರೊಬ್ಬರನ್ನು ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ನಾವು ಭೇಟಿಯಾಗುತ್ತಿದ್ದು, ಅದಕ್ಕೆ ಅವಕಾಶ ಕೊಟ್ಟ ನಿಮಗೆ ಧನ್ಯವಾದಗಳು ಎಂದು ಉದ್ಯೋಗಿಗಳು ಹೇಳಿದರು.
ಸಚಿವರ ಮುಂದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡ ನಿವೃತ್ತ ಉದ್ಯೋಗಿಗಳು, ನಾವು ನಿವೃತ್ತರಾಗಿ ಹಲವಾರು ವರ್ಷಗಳೇ ಕಳೆದಿದ್ದರೂ ನಮಗೆ ದೊರೆಯಬೇಕಾದ ಸೌಲಭ್ಯಗಳು ಇನ್ನೂ ಬಂದಿಲ್ಲ. ಕೆಲವರು ಕಾನೂನು ಹೋರಾಟ ನಡೆಸುತ್ತಿದ್ದು, ಇನ್ನೂ ಅನೇಕ ಉದ್ಯೋಗಿಗಳಿಗೆ ಅದು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ತಾವು ತುರ್ತಾಗಿ ಗಮನ ಹರಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ನಿವೃತ್ತಿ ನಂತರ ಕಂಪನಿಯಿಂದ ಬರಬೇಕಾದ ನಮ್ಮ ಸೌಲಭ್ಯಗಳು ಬಾರದೆ ಇರುವುದರಿಂದ ನಮಗೆ ಕಾಯಿಲೆ ಬಂದಾಗ ಔಷಧ ಖರೀದಿ ಮಾಡುವುದು ಕೂಡ ಕಷ್ಟವಾಗಿದೆ. ಸುಮಾರು ಐದಾರು ವರ್ಷಗಳಿಂದ ನಮಗೆ ಬರಬೇಕಿರುವ 30ರಿಂದ 40 ಲಕ್ಷ ರೂಪಾಯಿ ಹಣ ಕಂಪನಿಯಲ್ಲಿಯೇ ಉಳಿದಿದೆ. ಈ ಹಣವನ್ನು ತಾವು ಕೊಡಿಸಬೇಕು ಎಂದು ಅವರು ಕೋರಿದರು.
ಅಲ್ಲದೆ; ಯಾವುದೇ ಕಾರಣಕ್ಕೂ ದೇಶದ ಪ್ರತಿಷ್ಠೆಯ ಕಂಪನಿಯಾಗಿದ್ದ ಹೆಚ್ ಎಂಟಿಯನ್ನು ಮುಚ್ಚಬಾರದು. ಒಂದು ವೇಳೆ ಅಂತಹ ಸಂದರ್ಭ ಬಂದರೆ ಬಿಹೆಚ್ ಇಎಲ್, ಬಿಇಎಲ್, ಬಿಇಎಂಎಲ್ ದಂತಹ ಕಂಪನಿಗಳಲ್ಲಿ ಹೆಚ್ ಎಂಟಿಯನ್ನು ವಿಲೀನ ಮಾಡಬೇಕು ಅಥವಾ ನೌಕರಿಗಾದರೂ ಆ ಸಂಸ್ಥೆಗಳಲ್ಲಿ ಉದ್ಯೋಗವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.
ಕಾಲಮಿತಿಯೊಳಗೆ ತಮ್ಮ ಕಷ್ಟಗಳಿಗೆ ನೀವು ಸ್ಪಂದಿಸಬೇಕು, ಇಲ್ಲವಾದರೆ ನಮಗೆ ಬದುಕೇ ಕಷ್ಟವಾಗಿದೆ ಎಂದು ಉದ್ಯೋಗಿಗಳು ಸಚಿವರಲ್ಲಿ ಅಳಲು ತೋಡಿಕೊಂಡರು.
ಉದ್ಯೋಗಿಗಳ ಮನವಿ ಆಲಿಸಿದ ನಂತರ ಮಾತನಾಡಿದ ಸಚಿವ ಕುಮಾರಸ್ವಾಮಿ ಅವರು; ಈ ವಿಷಯ ನನ್ನ ಗಮನಕ್ಕೆ ಈಗಾಗಲೇ ಬಂದಿದೆ. ಉದ್ಯೋಗಿಗಳಿಗೆ ಬಾಕಿ ಇರುವ ₹361 ಕೋಟಿ ಮೊತ್ತ ಪಾವತಿಸುವ ಬಗ್ಗೆ ಮಾರ್ಗೋಪಾಯ ಹುಡುಕಲಾಗುವುದು. ಈ ಬಗ್ಗೆ ಸಚಿವಾಲಯದ ಉನ್ನತ ಅಧಿಕಾರಿಗಳ ಜತೆ ಖಂಡಿತಾ ಚರ್ಚೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಹೆಚ್ ಎಂಟಿ ಕಾರ್ಖಾನೆಯನ್ನು ಪುನಚ್ಛೇತನ ಮಾಡುವುದು ಒಂದು ಭಾಗವಾದರೆ, ನಿವೃತ್ತ ಹಾಗೂ ಹಾಲಿ ಕಾರ್ಮಿಕರ ಬಾಕಿ ಪಾವತಿ ಮಾಡುವುದು ಮತ್ತೊಂದು ಸವಾಲಾಗಿದೆ. ಈ ಬಗ್ಗೆ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಚಿವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳಿಗೆ ಕಾಯಕಲ್ಪ ನೀಡುವ ಪ್ರಯತ್ನ ಮಾಡುತ್ತಿದ್ದೇನೆ. ಏಕೆಂದರೆ, ಪ್ರಧಾನಿಗಳ ವಿಕಸಿತ ಭಾರತ್ ಕನಸು ಬಹುದೊಡ್ಡದು. ಆ ಗುರಿ ಮುಟ್ಟಲು ನಾವು ಮೆಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ್ ಭಾರತ ಯೋಜನೆಗಳ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ಪ್ರಧಾನಿಗಳ ನೇತೃತ್ವದಲ್ಲಿ ಸಂಕಷ್ಟದಲ್ಲಿರುವ ವಿವಿಧ ಕೈಗಾರಿಕೆಗಳಿಗೆ ಮರುಜೀವ ಕೊಡುವ ಪ್ರಯತ್ನ ನಡೆಯುತ್ತಿದೆ. ಅದರಲ್ಲಿ ವೈಜಾಗ್ ಸ್ಟೀಲ್, ಭದ್ರಾವತಿಯ ಸರ್ ಎಂ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಅದಿರು ಕಾರ್ಖಾನೆ, ಸೇಲಂ ಸ್ಟೀಲ್ ಇತ್ಯಾದಿ ಸೇರಿವೆ ಎಂದು ಕುಮಾರಸ್ವಾಮಿ ಅವರು ಉದ್ಯೋಗಿಗಳಿಗೆ ಧೈರ್ಯ ತುಂಬಿದರು.
ದೇಶದ ಉದ್ದಗಲಕ್ಕೂ ವಿವಿಧ ಘಟಕಗಳಲ್ಲಿ ನಿವೃತ್ತರಾಗಿರುವ ಹಾಗೂ ಹಾಲಿ ಕೆಲಸ ಮಾಡುತ್ತಿರುವ ಅನೇಕರು ಸಚಿವರನ್ನು ಭೇಟಿಯಾಗಿದ್ದರು.