ರಾಜಕಾರಣದಲ್ಲಿ ಇರುವವರು ರಾಜಕಾರಣ ಮಾಡಲೇ ಬೇಕು: ಡಿ ಕೆ ಶಿವಕುಮಾರ್

News Delhi:

Font size:

ನನಗೆ ಸದಾ ಯಶಸ್ಸು ಸಿಗುತ್ತದೆ, ಸ್ವಲ್ಪ ಶ್ರಮ ಬೇಕಾಗುತ್ತದೆ ನಾಯಕರ ಜತೆಗಿನ ಚರ್ಚೆ ವಿವರ ಬಹಿರಂಗಪಡಿಸಲಾರೆ ಸರ್ಕಾರಕ್ಕೆ ಸಾವಿರ ದಿನಗಳ ಹಿನ್ನೆಲೆಯಲ್ಲಿ ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ಜಾರಿ ಸಂಘರ್ಷವಿರುವುದು ಬಿಜೆಪಿಯಲ್ಲಿ, ನಮ್ಮಲ್ಲಿ ಅಲ್ಲ

ನವದೆಹಲಿ, ಫೆ. 12:

“ನಾವು ರಾಜಕಾರಣದಲ್ಲಿದ್ದೇವೆ, ರಾಜಕಾರಣ ಮಾಡಲೇಬೇಕು. ನನಗೆ ಸದಾ ಯಶಸ್ಸು ಸಿಗುತ್ತದೆ. ಸ್ವಲ್ಪ ಶ್ರಮ ಬೇಕಾಗುತ್ತದೆ ಅಷ್ಟೇ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಿಳಿಸಿದರು.

ದೆಹಲಿಯ ಕರ್ನಾಟಕ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

ನಿಮ್ಮ ಭೇಟಿ ಫಲಪ್ರದವಾಗಿದೆಯೇ, ಅಧಿಕಾರ ಹಂಚಿಕೆ ವಿಚಾರವಾಗಿ ಹೈಕಮಾಂಡ್ ನಿಂದ ಸ್ಪಷ್ಟನೆ ಸಿಕ್ಕಿದೆಯೇ ಎಂದು ಕೇಳಿದಾಗ, “ನಾವು ಈ ವಿಚಾರವಾಗಿ ಚರ್ಚೆ ಮಾಡಿಲ್ಲ. ಪಕ್ಷ ತನ್ನದೇ ಆದ ಗುರಿ ಹೊಂದಿದ್ದು, ಪಕ್ಷದ ಯಶಸ್ಸು ಹಾಗೂ ಪಕ್ಷದ ಹಿತಾಸಕ್ತಿ, ಕರ್ನಾಟಕ ಹಾಗೂ ದೇಶದ ಹಿತದೃಷ್ಟಿ ಆಧಾರದ ಮೇಲೆ ನಮ್ಮ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಸೂಕ್ತ ಸಮಯದಲ್ಲಿ ತೀರ್ಮಾನ ಮಾಡುತ್ತಾರೆ. ಮಾಧ್ಯಮಗಳು ಹಾಗೂ ಬೇರೆಯವರು ಈ ಭೇಟಿಗೆ ಹೊಸ ರೂಪ, ಬೇರೆ ಬಣ್ಣ ನೀಡುತ್ತಿದ್ದೀರಿ. ನಮಗೆ ಇದರಲ್ಲಿ ವಿಶೇಷವಿಲ್ಲ” ಎಂದರು.

ನೀವು ಬಹಳ ತಾಳ್ಮೆಯಿಂದ ಇದ್ದೀರಿ ಎಂದು ಕೇಳಿದಾಗ, “ತಾಳ್ಮೆ ಕೂಡ ಸಾಕಷ್ಟು ಫಲ ನೀಡುತ್ತದೆ” ಎಂದು ತಿಳಿಸಿದರು.

ಹೈಕಮಾಂಡ್ ನಾಯಕರ ಭೇಟಿ ಬಗ್ಗೆ ಕೇಳಿದಾಗ, “ನಾನು ದೆಹಲಿಗೆ ಬಂದ ನಂತರ ಎಲ್ಲರನ್ನೂ ಭೇಟಿ ಮಾಡುತ್ತೇನೆ. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ ವೇಣುಗೋಪಾಲ್, ಸುರ್ಜೆವಾಲ, ಟಿ.ಬಿ. ಜಯಚಂದ್ರ ಸೇರಿದಂತೆ ಎಲ್ಲರನ್ನು ಭೇಟಿ ಮಾಡಿರುವೆ. ರಾಜಕಾರಣಿಗಳು ಭೇಟಿಯಾದಾಗ ರಾಜಕಾರಣ ಚರ್ಚೆ ಮಾಡದೇ ಇರುತ್ತಾರಾ? ರಾಜಕೀಯ ಚರ್ಚೆ ಮಾಡುತ್ತೇವೆ. ಆದರೆ ಆ ಚರ್ಚೆಯ ವಿವರವನ್ನು ಮಾಧ್ಯಮಗಳ ಮುಂದೆ ಬಹಿರಂಗ ಪಡಿಸಲಾರೆ. ಕರ್ನಾಟಕದ ಹಿತ ಸೇರಿದಂತೆ ಅಸ್ಸಾಂ, ದೆಹಲಿ ಬಗ್ಗೆ ಚರ್ಚೆ ಮಾಡಿರುತ್ತೇವೆ” ಎಂದಷ್ಟೇ ತಿಳಿಸಿದರು.

ಯತೀಂದ್ರ ಅವರು ನಾಯಕತ್ವ ಬದಲಾವಣೆ ಇಲ್ಲ ಎಂದು ಹೇಳುತ್ತಿದ್ದಾರೆ ಎಂದಾಗ, “ಅವರು ನಮ್ಮ ಹೈಕಮಾಂಡ್ ಅಲ್ಲವೇ, ಅವರ ಮಾತನ್ನು ನಾವು ಸ್ವೀಕರಿಸಬೇಕು” ಎಂದರು.

ಶಾಸಕರು ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದಾರೆ ಎಂದು ಕೇಳಿದಾಗ, “ಈ ವಿಚಾರವಾಗಿ ನಾನು ಏನನ್ನೂ ಮಾತನಾಡುವುದಿಲ್ಲ. ಶಾಸಕರುಂಟು ಹಾಗೂ ಮುಖ್ಯಮಂತ್ರಿಗಳುಂಟು. ಸಿಎಂ ಅವರಿಗೆ ಯಾವ ಮಾರ್ಗದರ್ಶನ ನೀಡಿದ್ದಾರೋ ನನಗೆ ಗೊತ್ತಿಲ್ಲ. ಈ ವಿಚಾರ ನನ್ನ ಜತೆ ಚರ್ಚೆಯಾಗಿಲ್ಲ. ಈ ವಿಚಾರವಾಗಿ ನಾನು ಮಾಧ್ಯಮಗಳಿಂದ ತಿಳಿಯುತ್ತಿದ್ದೇನೆ ಹೊರತು, ಬೇರೆ ಯಾರು ಈ ಬಗ್ಗೆ ಮಾಹಿತಿ ನೀಡಿಲ್ಲ” ಎಂದು ಸ್ಪಷ್ಟಪಡಿಸಿದರು.

ಸರ್ಕಾರಕ್ಕೆ ಸಾವಿರ ದಿನಗಳ ಹಿನ್ನೆಲೆಯಲ್ಲಿ ಆರನೇ ಗ್ಯಾರಂಟಿ ಭೂಮಿ ಗ್ಯಾರಂಟಿ ಜಾರಿ

ಸರ್ಕಾರದ ಸಾವಿರ ದಿನಗಳ ದಾರಿಯ ಬಗ್ಗೆ ಕೇಳಿದಾಗ, “ನಮ್ಮ ಸರ್ಕಾರದ ಸಾವಿರ ದಿನಗಳ ಸಾಧನೆ ಬಗ್ಗೆ ನಮಗೆ ಸಂತೋಷವಿದೆ. ಈ ಅಭೂತಪೂರ್ವ ಕ್ಷಣವನ್ನು ನಾವು ಸಂಭ್ರಮಿಸುತ್ತಿದ್ದು, ಈ ಸಂದರ್ಭದಲ್ಲಿ ಮತ್ತೊಂದು ಗ್ಯಾರಂಟಿ ಭೂಮಿ ಗ್ಯಾರಂಟಿಯನ್ನು ರಾಜ್ಯದ ಜನರಿಗೆ ನೀಡುತ್ತಿದ್ದೇವೆ. ಭೂಮಿಯ ಹಕ್ಕು ಪತ್ರ ಇಲ್ಲದ ಲಕ್ಷಾಂತರ ಜನರಿಗೆ ನಾವು ಹಕ್ಕುಪತ್ರ, ಪಟ್ಟಾ ದಾಖಲೆ ನೀಡುತ್ತಿದ್ದೇವೆ. ಜತೆಗೆ ಜನರಿಗೆ ಪಕ್ಕಾ ಖಾತೆ ಹಂಚಿಕೆ ಮಾಡುತ್ತಿದ್ದೇವೆ. ಪಂಚ ಗ್ಯಾರಂಟಿಗಳ ಹೊರತಾಗಿ ಇದು ನಮ್ಮ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ” ಎಂದು ತಿಳಿಸಿದರು.

ಮುಂದಿನ ಒಂದು ಸಾವಿರ ದಿನ ಹೇಗಿರಲಿದೆ ಎಂದು ಕೇಳಿದಾಗ, “ಬಹಳ ಪ್ರಕಾಶಮಾನವಾಗಿ, ಬಲಿಷ್ಠವಾಗಿರಲಿದೆ” ಎಂದು ತಿಳಿಸಿದರು.

ಸಂಘರ್ಷವಿರುವುದು ಬಿಜೆಪಿಯಲ್ಲಿ, ನಮ್ಮಲ್ಲಿ ಅಲ್ಲ

ಸಿಎಂ ಹಾಗೂ ಡಿಸಿಎಂ ನಡುವಣ ಸಂಘರ್ಷದಿಂದ ಜನರು ನರಳುವಂತಾಗಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಸಂಘರ್ಷವಿರುವುದು ಬಿಜೆಪಿಯಲ್ಲೇ ಹೊರತು, ನಮ್ಮ ನಡುವೆಯಲ್ಲ. ನಾನು ಹಾಗೂ ಸಿಎಂ ಇಬ್ಬರೂ ಪಕ್ಷದ ತೀರ್ಮಾನದಂತೆ ನಡೆಯುತ್ತೇವೆ ಎಂದು ಹೇಳಿದ್ದಾರೆ. ಎಲ್ಲಾ ಚರ್ಚೆಗಳು ನಮ್ಮ ನಡುವೆ ಆಗಿದೆ. ಪಕ್ಷ ತೀರ್ಮಾನ ಮಾಡಲಿದೆ” ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಪಕ್ಷದ ಜತೆಗೆ ಮೈತ್ರಿ ಉತ್ತಮವಾಗಿದೆ ಆದರೆ ಅಧಿಕಾರ ಹಂಚಿಕೆ ಸಾಧ್ಯವಿಲ್ಲ ಎಂಬ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ನಾನು ಮಾತನಾಡುವುದಿಲ್ಲ, ನಮ್ಮ ಹೈಕಮಾಂಡ್ ನಾಯಕರು ಪ್ರತಿಕ್ರಿಯೆ ನೀಡಲಿದ್ದಾರೆ. ನಾವು ಇದರಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಈ ಬಗ್ಗೆ ಮಾತನಾಡುವುದು ಸರಿಯಲ್ಲ” ಎಂದರು.

Prev Post ಪರಿಶಿಷ್ಟ ಜಾತಿ, ಪಂಗಡಗಳು, ಹಿಂದುಳಿದ ವರ್ಗಗಳಲ್ಲಿ ಬಡವರಿಲ್ಲವೇ? ಕಾಂಗ್ರೆಸ್ ಸರಕಾರ ಭ್ರಷ್ಟಾಚಾರಕ್ಕೆ ಸೀಮಿತ: ವಿಜಯೇಂದ್ರ
Next Post ವಂದೇ ಮಾತರಂ - ಡಿಕೆಎಸ್‌ಗೆ ರವಿಕುಮಾರ್ ತಿರುಗೇಟು