ಪರಿಶಿಷ್ಟ ಜಾತಿ, ಪಂಗಡಗಳು, ಹಿಂದುಳಿದ ವರ್ಗಗಳಲ್ಲಿ ಬಡವರಿಲ್ಲವೇ? ಕಾಂಗ್ರೆಸ್ ಸರಕಾರ ಭ್ರಷ್ಟಾಚಾರಕ್ಕೆ ಸೀಮಿತ: ವಿಜಯೇಂದ್ರ
ಬೆಳಗಾವಿ: ರಾಜ್ಯದ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರಕ್ಕೆ ಸೀಮಿತವಾಗಿದೆ ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಇಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಸುಮಾರು ಮೂರು ವರ್ಷಗಳಾಗುತ್ತಿದೆÉ. ಕಳೆದ ಎರಡೂವರೆ-ಮೂರು ವರ್ಷದಲ್ಲಿ ಇವರ ಆಡಳಿತ ವೈಖರಿ, ಇವರ ಯೋಗ್ಯತೆಗೆ ಯಾವುದೇ ಒಂದು ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು. ರಾಜ್ಯದಲ್ಲಿರುವ ಬಡವರು, ರೈತರು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು- ಈ ಎಲ್ಲ ಸಮುದಾಯಗಳಲ್ಲಿ ಕಾಂಗ್ರೆಸ್ಸಿಗರ ಮಾತು ನಂಬಿ ನಾವು ಮೋಸ ಹೋಗಿದ್ದೇವೆ; ನಮಗೆ ಅನ್ಯಾಯವಾಗುತ್ತಿದೆ ಎಂಬ ಚರ್ಚೆ ರಾಜ್ಯದೆಲ್ಲೆಡೆ ಆರಂಭವಾಗಿದೆ ಎಂದು ತಿಳಿಸಿದರು.
ಅಹಿಂದ ಹೆಸರು ಹೇಳಿಕೊಂಡು ರಾಜ್ಯದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯನವರ ನೇತೃತ್ವದ ಈ ಕಾಂಗ್ರೆಸ್ ಸರಕಾರವು ‘ಅ’ ಪಕ್ಕಕ್ಕಿಟ್ಟು ಹಿಂದುಳಿದ ಸಮುದಾಯಗಳು, ಪರಿಶಿಷ್ಟ ಜಾತಿ ಪಂಗಡಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ಟೀಕಿಸಿದರು. ಅಹಿಂದ ಎಂದು ಹೇಳಿಕೊಂಡು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆಯೇ ವಿನಾ, ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ; ಮುಖ್ಯಮಂತ್ರಿಗಳು ಪರಿಶಿಷ್ಟ ಜಾತಿ, ಪಂಗಡಗಳು ಸೇರಿ ಎಲ್ಲ ಸಮುದಾಯಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ ಎಂದು ವಿವರಿಸಿದರು.
ಬೇರೆ ಸಮುದಾಯಗಳು ನಿಮಗೆ ಏನು ಅನ್ಯಾಯ ಮಾಡಿವೆ?
ಸರಕಾರವು ಮೊನ್ನೆ ಹೊಸ ಆದೇಶ ಹೊರಡಿಸಿದೆ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಅಲ್ಪಸಂಖ್ಯಾತ ಬಂಧುಗಳಿಗೆ ಒನ್ ಟೈಮ್ ಸೆಟಲ್‍ಮೆಂಟ್ ಸ್ಕೀಮ್ ಅಡಿ ಶೇ 100 ಬಡ್ಡಿ ಮನ್ನಾ ಮಾಡಿದ್ದಾರೆ. ಅವರು ಸಾಲದ ಮೊತ್ತ ಮಾತ್ರ ಕಟ್ಟಿದರೆ ಸಾಕು. ಹಾಗಿದ್ದರೆ ಬೇರೆ ಸಮುದಾಯಗಳು ನಿಮಗೆ ಏನು ಅನ್ಯಾಯ ಮಾಡಿವೆ ಎಂದು ಪ್ರಶ್ನಿಸಿದರು.
ಸರಕಾರ, ಮುಖ್ಯಮಂತ್ರಿಗಳಿಗೆ ಪರಿಶಿಷ್ಟ ಜಾತಿ, ಪಂಗಡಗಳು, ಹಿಂದುಳಿದ ವರ್ಗಗಳು ಯಾಕೆ ಕಣ್ಣಿಗೆ ಕಾಣುತ್ತಿಲ್ಲ? ಅವರಲ್ಲೂ ಬಡವರಿಲ್ಲವೇ ಮಾನ್ಯ ಮುಖ್ಯಮಂತ್ರಿಗಳೇ ಎಂದು ಕೇಳಿದರು. ಮುಖ್ಯಮಂತ್ರಿಗಳು, ಕಾಂಗ್ರೆಸ್ ಸರಕಾರಕ್ಕೆ ಅವರಲ್ಲಿ ಬಡವರಿರುವುದು ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಪ್ರಶ್ನೆಯನ್ನು ಮುಂದಿಟ್ಟರು. ಅಲ್ಪಸಂಖ್ಯಾತರ ಓಲೈಕೆಗಾಗಿ ಯಾವ ಮಟ್ಟಕ್ಕೂ ಹೋಗುವುದಾದರೆ, ಎಲ್ಲೋ ಒಂದು ಕಡೆ ಈ ಕಾಂಗ್ರೆಸ್ ಸರಕಾರವು ಈ ಎಲ್ಲ ಸಮುದಾಯಗಳಿಗೆ ಘೋರ ಅನ್ಯಾಯವನ್ನು ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹಿಂದುಳಿದ ವರ್ಗಗಳ 1.41 ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್‍ಗೆ ಪ್ರವೇಶ ಸಿಗುತ್ತಿಲ್ಲ
ನುಡಿದಂತೆ ನಡೆದ ಸರಕಾರ, ನುಡಿದಂತೆ ನಡೆಯುತ್ತಿರುವ ಸರಕಾರ ಎಂಬುದನ್ನು ಕೇಳಿಕೇಳಿ ರಾಜ್ಯದ ಜನರ ಕಿವಿ ಚಿಟ್ಟು ಹಿಡಿದು ಹೋಗಿದೆ. ನುಡಿದಂತೆ ನಡೆಯುತ್ತಿರುವ ಸರಕಾರದ ಯೋಗ್ಯತೆಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೀಟ್ ಕೊಡಲಾಗುತ್ತಿಲ್ಲ. ಹಿಂದುಳಿದ ವರ್ಗಗಳ 1.41 ಲಕ್ಷ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್‍ಗೆ ಪ್ರವೇಶ ಸಿಗುತ್ತಿಲ್ಲ ಎಂದು ಪತ್ರಿಕಾ ತುಣುಕನ್ನು ಪ್ರದರ್ಶಿಸಿ ಗಮನ ಸೆಳೆದರು. ಸ್ವತಃ ಸಚಿವರೂ ಇದನ್ನು ಒಪ್ಪಿಕೊಂಡಿದ್ದಾರೆ. ಯಾವ ಮುಖ್ಯಮಂತ್ರಿಗಳ ಬಗ್ಗೆ ಹಿಂದುಳಿದ ಸಮುದಾಯಗಳು ಸಾಕಷ್ಟು ವಿಶ್ವಾಸ ಇಟ್ಟುಕೊಂಡಿದ್ದವೋ, ಅಹಿಂದ ಹೆಸರು ಹೇಳಿಕೊಂಡು ಮುಖ್ಯಮಂತ್ರಿಗಳಾಗಿ ಆ ಸಮುದಾಯಗಳಿಗೆ ಯಾವ ರೀತಿ ನ್ಯಾಯ ಕೊಡುತ್ತಿದ್ದಾರೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ ಎಂದು ಟೀಕಿಸಿದರು. ಹಿಂದುಳಿದ ವರ್ಗಗಳ ಬಗ್ಗೆ ಮೊಸಳೆ ಕಣ್ಣೀರು ಹಾಕುವ ಈ ಕಾಂಗ್ರೆಸ್ ಸರಕಾರವು, ಇವರಿಗೆ ಯಾವುದೇ ನ್ಯಾಯ ಕೊಡಲು ಸಾಧ್ಯ ಆಗುತ್ತಿಲ್ಲ ಎಂದು ದೂರಿದರು.
ಉದ್ಯೋಗ ಸೃಷ್ಟಿ ವಿಚಾರದಲ್ಲಿ ಏನು ಮಾಡಿದ್ದೀರಿ?..
ಚುನಾವಣೆ ಸಂದರ್ಭದಲ್ಲಿ ಯುವಜನರಿಗೆ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಕೇಂದ್ರ ಸರಕಾರದ ವಿರುದ್ಧ ಪದೇಪದೇ ಆರೋಪ ಮಾಡುತ್ತಾರೆ. ಹಾಗಿದ್ದರೆ ರಾಜ್ಯದಲ್ಲಿ ನಿಮ್ಮ ಸರಕಾರ ಏನು ಮಾಡುತ್ತಿದೆ ಮಾನ್ಯ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದರು. ಎಷ್ಟು ಉದ್ಯೋಗ ಸೃಷ್ಟಿ ಮಾಡುವುದರಲ್ಲಿ ನೀವು ಯಶಸ್ವಿ ಆಗಿದ್ದೀರಿ? ಎಂದು ಕೇಳಿದರು.
ಯುವಜನರ ಮೇಲೆ ಲಾಠಿ ಚಾರ್ಜ್..
ಕಳೆದ ಬಾರಿ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯುವಾಗ ಹುಬ್ಬಳ್ಳಿಯಲ್ಲಿ ಯುವಜನತೆ ಪ್ರತಿಭಟನೆ, ಹಕ್ಕೊತ್ತಾಯ ಮಾಡುತ್ತಿದ್ದರು. ಕಾಂಗ್ರೆಸ್ ಸರಕಾರದ ಗಮನ ಸೆಳೆಯಲು ಪ್ರತಿಭಟನೆ ಮಾಡಿದರು. ಅದನ್ನೂ ನೀವು ಸಹಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಯುವಜನತೆ, ವಿದ್ಯಾರ್ಥಿ, ವಿದ್ಯಾರ್ಥಿನಿಯರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಮುಖ್ಯಮಂತ್ರಿಗಳ ಭೇಟಿಗೆ ಸಮಯ ನಿಗದಿಪಡಿಸಲು ಹೈಕೋರ್ಟ್ ಮಧ್ಯಪ್ರವೇಶ ಮಾಡಬೇಕಾಯಿತು ಎಂದು ಗಮನಕ್ಕೆ ತಂದರು.
2.75 ಲಕ್ಷ ಹುದ್ದೆಗಳು ನೇಮಕಾತಿ ಆಗದೇ ಖಾಲಿ..
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಇವರು ಪ್ರಾರಂಭವೇ ಮಾಡಿಲ್ಲ ಎಂದು ಟೀಕಿಸಿದರು. ವಿದ್ಯಾವಂತರು, ನಿರುದ್ಯೋಗಿಗಳಿಗೆ, ಯುವಜನರಿಗೆ ಉದ್ಯೋಗ ಸೃಷ್ಟಿಸುವ ಪ್ರಾಮಾಣಿಕ ಕಳಕಳಿ ಇವರಿಗೆ ಇದ್ದರೆ, ರಾಜ್ಯದಲ್ಲಿ 2.75 ಲಕ್ಷ ಹುದ್ದೆಗಳು ನೇಮಕಾತಿ ಆಗದೇ ಖಾಲಿ ಉಳಿಯುವ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ ಎಂದು ತಿಳಿಸಿದರು.





