ಹಿಂಬಾಗಿಲ ಮೂಲಕ ಸಚಿವಸಂಪುಟದ ಸ್ಥಾನಮಾನ ನೀಡುವ ಸರಕಾರ;ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಆರೋಪ

Banglore:

Font size:

ಮುಖ್ಯ ಕಾರ್ಯದರ್ಶಿ ಸಚಿವಸಂಪುಟ ದರ್ಜೆ ಹೊಂದಿದವರ ಪಟ್ಟಿ ಬಿಡುಗಡೆ ಮಾಡಲಿ: ಎನ್.ರವಿಕುಮಾರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ಸಚಿವ ಸಂಪುಟ ದರ್ಜೆ ಹೊಂದಿದವರ ಪಟ್ಟಿಯನ್ನು ಮುಖ್ಯ ಕಾರ್ಯದರ್ಶಿಗಳು ಬಿಡುಗಡೆ ಮಾಡಬೇಕೆಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಆಗ್ರಹಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರು ಇರಬಹುದು, ಹಣಕಾಸು ಸಲಹೆಗಾರರು, ರಾಜಕೀಯ ಕಾರ್ಯದರ್ಶಿ, ಕಾನೂನು ಸಲಹೆಗಾರರು, ಸಚಿವರು, ನಿಗಮ, ಮಂಡಳಿ ಅಧ್ಯಕ್ಷರು- ಇವರೆಲ್ಲ ಸೇರಿ ಎಷ್ಟು ಜನರು ಈ ಸ್ಥಾನಮಾನ ಪಡೆದಿದ್ದಾರೆ ಎಂಬ ಪಟ್ಟಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಅವರಿಗೆ ಎಷ್ಟು ಖರ್ಚಾಗುತ್ತದೆ ಎಂಬ ವಿವರ ನೀಡಬೇಕೆಂದು ಕೋರಿದರು.
ನಿಗಮಗಳ 54 ಜನರನ್ನು ಸಚಿವಸಂಪುಟ ದರ್ಜೆಗೆ ಏರಿಸಿದ್ದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ. ಇದರ ಪರಿಣಾಮವಾಗಿ ಹಾಗೂ ಹಿಂದೆ ಸಚಿವರಲ್ಲದ ಅನೇಕರಿಗೆ ಸಚಿವಸಂಪುಟ ದರ್ಜೆ ಕೊಟಿದ್ದುÀ, ಗ್ಯಾರಂಟಿಯ ರಾಜ್ಯದ ಜಾರಿ ಸಮಿತಿಯ ರಾಜ್ಯ ಸಮಿತಿ ಅಧ್ಯಕ್ಷರಿಗೂ ಇದೇ ಸ್ಥಾನಮಾನ ನೀಡಲಾಗಿದೆ. ಇವೆಲ್ಲ ಸೇರಿ ಕರ್ನಾಟಕದಲ್ಲಿ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ನು ಸಿಎಂ ಸೇರಿ 150 ಜನರಿಗೆ ಕೊಡಲಾಗಿದೆ ಎಂದು ತಿಳಿಸಿದರು.
2003ರಲ್ಲಿ ಒಂದು ಕಾಯಿದೆ ಬಂದಿದೆ. ಆಡಳಿತ ಪಕ್ಷದ ಶೇ 15 ಶಾಸಕರು ಮತ್ತು ಸಂಸದರಿಗೆ ಮಾತ್ರ ಸಚಿವರನ್ನಾಗಿ ಮಾಡಬಹುದು. ಕರ್ನಾಟಕದಲ್ಲಿ 33 ಜನರಿಗೆ ಮಾತ್ರ ಮಂತ್ರಿಗಳಾಗಿ ಮಾಡಲು ಅವಕಾಶವಿದೆ. ಈ ಕಾರಣದಿಂದ ಈ ಸರಕಾರವು ಸಚಿವರಾಗಲು ಬಯಸಿದವರು, ಸಂಪುಟದಲ್ಲಿ ಸ್ಥಾನ ಬಯಸಿ ಸಚಿವರನ್ನಾಗಿ ಮಾಡಲಾಗದವರಿಗೆ ಹಿಂಬಾಗಿಲ ಮೂಲಕ ಸಚಿವಸಂಪುಟದ ಸ್ಥಾನಮಾನವನ್ನು ಈ ಸರಕಾರ ಕೊಡುತ್ತಿದೆ ಎಂದು ಟೀಕಿಸಿದರು.
ರಾಜ್ಯ ಸರಕಾರವು ದೊಡ್ಡ ಇತಿಹಾಸ ನಿರ್ಮಿಸಲು ಹೊರಟಂತಿದೆ ಎಂದು ಆಕ್ಷೇಪಿಸಿದರು. ನಿಗಮಗಳ ಅಧ್ಯಕ್ಷರನ್ನು ಕ್ಯಾಬಿನೆಟ್ ದರ್ಜೆಗೆ ಏರಿಸಿದ ಸರಕಾರವು ನಿಗಮಕ್ಕೆ ಎಷ್ಟು ಹಣ ಕೊಟ್ಟಿದೆ ಎಂದು ಅವರು ಕೇಳಿದರು. ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ 2023-24ರಲ್ಲಿ 100 ಕೋಟಿ ರೂ. ಘೋಷಿಸಿ ಕೇವಲ 50 ಕೋಟಿ ಕೊಟ್ಟಿದ್ದಾರೆ ಎಂದು ಟೀಕಿಸಿದರು.
ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ನಾವು 25 ಕೋಟಿ ಕೊಟ್ಟಿದ್ದೆವು. ಇವರು ಘೋಷಿಸಿದ್ದು 13 ಕೋಟಿ. ಕೊಟ್ಟಿರುವುದು 6.5 ಕೋಟಿ ಎಂದರು. ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ನಾವು 25 ಕೋಟಿ ಬಿಡುಗಡೆ ಮಾಡಿದ್ದೆವು. ಇವರು ಬಿಡುಗಡೆ ಮಾಡಿದ್ದು 4.5 ಕೋಟಿ ಎಂದು ವಿವರಿಸಿದರು.
ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ನಾವು 15 ಕೋಟಿ ಬಿಡುಗಡೆ ಮಾಡಿದ್ದೆವು. ಇವರು ಕೊಟ್ಟದ್ದು 4 ಕೋಟಿ. ಸವಿತಾ ಸಮಾಜಕ್ಕೆ ನಾವು 10 ಕೋಟಿ ಕೊಟ್ಟಿದ್ದೆವು. ಇವರು ಕೊಟ್ಟದ್ದು 2.5 ಕೋಟಿ. ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ನಾವು 16 ಕೋಟಿ ಬಿಡುಗಡೆ ಮಾಡಿದ್ದೆವು. ಇವರು ಕೇವಲ 6 ಕೋಟಿ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಕ್ಕೆ ನಾವು 15 ಕೋಟಿ ಕೊಟ್ಟರೆ, ಇವರು 4.5 ಕೋಟಿ ನೀಡಿದ್ದಾರೆ. ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ನಾವು 15 ಕೋಟಿ ಕೊಟ್ಟರೆ, ಇವರು 7.5 ಕೋಟಿ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಇವರಿಗೆ ಹಿಂದುಳಿದ ವರ್ಗಗಳ ಮತ ಬೇಕು. ಆದರೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಬೇಕಾಗಿಲ್ಲ ಎಂದು ಟೀಕಿಸಿದರು. ಇವರು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಇವರ ಶಾಸಕರು, ವಿಧಾನಪರಿಷತ್ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡಿ, ಅವರಿಗೆ ಸಚಿವಸಂಪುಟ ದರ್ಜೆ ಸ್ಥಾನಮಾನ ಕೊಡುತ್ತಿದ್ದಾರೆ. ಅವರೊಬ್ಬರ ಅಭಿವೃದ್ಧಿಯೇ ನಿಗಮ ಹಾಗೂ ರಾಜ್ಯದ ಅಭಿವೃದ್ಧಿಯೇ ಎಂದು ಕೇಳಿದರು. ಇದಕ್ಕೆ ಏನು ಅಳತೆಗೋಲು ಎಂದು ಪ್ರಶ್ನಿಸಿದರು. ರಾಜ್ಯದ ಎಲ್ಲ ಅಭಿವೃದ್ಧಿ ನಿಗಮಗಳಿಗೆ ಈ ಸರಕಾರ ದ್ರೋಹ ಮಾಡಿದೆ ಎಂದು ಆಕ್ಷೇಪಿಸಿದರು.

ಕೇಂದ್ರದ ದರ ನಿಗದಿ ಸಮಿತಿಗೆ ಒತ್ತಡ ಹೇರಿದ್ದೇಕೆ?
ಈಗಾಗಲೇ ರಾಜ್ಯದ ಮೆಟ್ರೋ ಪ್ರಯಾಣ ದರ ಪ್ರಯಾಣಿಕರಿಗೆ ಭಾರ ಆಗಿದೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮ ಕರ್ನಾಟಕದ ದರ ಹೆಚ್ಚಿಗೆಯೇ ಇದೆ. ಹೀಗಿದ್ದರೂ ಮತ್ತೆ ಶೇ 5 ದರ ಏರಿಸಲು ಈ ಸರಕಾರ ಕೇಂದ್ರದ ದರ ನಿಗದಿ ಸಮಿತಿಗೆ ಒತ್ತಡ ಹೇರಬೇಕು ಎಂದು ಪ್ರಶ್ನಿಸಿದರು. ರಾಜ್ಯ ಸರಕಾರ ತನ್ನ ಖಜಾನೆಯನ್ನು ಸಂಪೂರ್ಣವಾಗಿ ಖಾಲಿ ಮಾಡಿಕೊಂಡಿದೆ ಎಂದು ಅವರು ಆರೋಪಿಸಿದರು.
ಹೆಚ್ಚು ತೆರಿಗೆ, ಪ್ರಯಾಣದರ ಏರಿಕೆ ಮೂಲಕ ಹಣ ಸಂಗ್ರಹದಲ್ಲಿ ಈ ಸರಕಾರ ತೊಡಗಿದೆ ಎಂದು ಅವರು ಆಕ್ಷೇಪಿಸಿದರು. ಬೆಂಗಳೂರಿನಲ್ಲಿ 2 ಕಿಮೀಗೆ 11 ರೂ. ದರ ಇದೆ. ದೆಹಲಿಯಲ್ಲಿ 11 ರೂ, ಹೈದರಾಬಾದ್, ಚೆನ್ನೈ, ಮುಂಬೈನಲ್ಲಿ 10 ರೂ. ಇದೆ. ಕಲ್ಕತ್ತದಲ್ಲಿ 5 ರೂ. ಇದೆ. ಇಲ್ಯಾಕೆ 11 ರೂ ಎಂದು ಕೇಳಿದರು. ರೋಲ್ ಮಾಡೆಲ್ ಸಿದ್ದರಾಮಯ್ಯನವರು ಇದನ್ನು ಕಡಿಮೆ ಎಂದರೆ, 9 ರೂ. ಮಾಡಬೇಕಿತ್ತು ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಶ್ವೇತಪತ್ರ ಹೊರಡಿಸಲಿ..
ಸರಕಾರದ ಎಲ್ಲ ಇಲಾಖೆಗಳಲ್ಲೂ ಮಿತಿಮೀರಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ರಾಜ್ಯದಲ್ಲಿ ತೆರಿಗೆ ಹೆಚ್ಚಳ, ದರ ಹೆಚ್ಚಳದಿಂದ ಬರುವ ಆದಾಯ ಎಷ್ಟೆಂಬ ಕುರಿತು ಮುಖ್ಯಮಂತ್ರಿಗಳು ಶ್ವೇತಪತ್ರ ಹೊರಡಿಸಬೇಕೆಂದು ಅವರು ಒತ್ತಾಯಿಸಿದರು.

Prev Post ಯುತ್ ಕಾಂಗ್ರೆಸ್ಸಿನಿಂದ ರಾಜಕೀಯ ದಂಗೆಗೆ ಪ್ರಚೋದನೆ: ಬಿಜೆಪಿಯಿಂದ ಪೊಲೀಸ್ ಠಾಣೆಗೆ ದೂರು
Next Post ಖ್ಯಾತ ನಟಿ ತಮನ್ನಾ ಇಂದಿನಿಂದ 2 ವರ್ಷ ಪ್ರಚಾರ ರಾಯಭಾರಿ: ಎಂ ಬಿ ಪಾಟೀಲ