ಬೆಂಗಳೂರು-ಪುಣೆ ಹೈಸ್ಪೀಡ್ ರೈಲು ಕಾರಿಡಾರ್ ವಿಚಾರ ಚರ್ಚೆ ಜೋಶಿ, ಎಚ್ಡಿಕೆ ಸ್ಪಂದನೆ ಸ್ವಾಗತಾರ್ಹ: ಎಂ ಬಿ ಪಾಟೀಲ
ಬೆಂಗಳೂರು: ಕೇಂದ್ರ ಬಜೆಟ್ ಮಂಡನೆಯಾದ ಕೂಡಲೇ ನಾನು ಬೆಂಗಳೂರು- ಪುಣೆ- ಮುಂಬೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಅಗತ್ಯವಾಗಿದೆ ಎಂದು ಹೇಳಿದ್ದೆ. ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಮತ್ತು ಎಚ್ ಡಿ ಕುಮಾರಸ್ವಾಮಿ ಅವರು ಈ ಬಗ್ಗೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರೊಂದಿಗೆ ಚರ್ಚಿಸಿರುವುದಕ್ಕೆ ಧನ್ಯವಾದ ಹೇಳುತ್ತೇನೆ. ಇದರಲ್ಲಿ ರಾಜಕೀಯವೇನೂ ಇಲ್ಲ. ಇದು ಕೇವಲ ಭೇಟಿಗೆ ಮಾತ್ರ ನಿಲ್ಲದೆ, ತಾರ್ಕಿಕ ಅಂತ್ಯ ಕಾಣುವಂತೆ ಮಾಡಬೇಕು ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಗುರುವಾರ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ದೇಶದ ತಂತ್ರಜ್ಞಾನ ರಾಜಧಾನಿ ಬೆಂಗಳೂರು ಮತ್ತು ಆರ್ಥಿಕ ರಾಜಧಾನಿ ಮುಂಬಯಿ ನಡುವೆ ಅತ್ಯುತ್ತಮ ಸಂಪರ್ಕ ವ್ಯವಸ್ಥೆ ಬರಬೇಕು. ಇದರಿಂದ ಮಧ್ಯ ಮತ್ತು ಉತ್ತರ ಕರ್ನಾಟಕ ಹಾಗೂ ಪಶ್ಚಿಮ ಮಹಾರಾಷ್ಟ್ರದ ಭಾಗಗಳಿಗೆ ಅಪಾರ ಲಾಭವಿದೆ ಎಂದಿದ್ದಾರೆ.
ಕೇಂದ್ರ ಸರಕಾರದ ಬಜೆಟ್‌ನಲ್ಲಿ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಸೇರಿದಂತೆ 7 ಹೈಸ್ಪೀಡ್ ರೈಲು ಕಾರಿಡಾರ್ ಘೋಷಿಸಿದ್ದಾರೆ. ಇದು ಸ್ವಾಗತಾರ್ಹ. ಆದರೆ ಈ ಎರಡೂ ಯೋಜನೆಗಳಿಂದ ರಾಜ್ಯಕ್ಕೆ ಹೆಚ್ಚಿನ ಪ್ರಯೋಜನವಿಲ್ಲ. ಬೆಂಗಳೂರು-ಪುಣೆ-ಮುಂಬೈ ಮಧ್ಯೆ ಇಂತಹ ಯೋಜನೆ ಬಂದರೆ ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಸಾಂಗ್ಲಿ, ಕೊಲ್ಲಾಪುರ ಹೀಗೆ ಹಲವು ಪ್ರದೇಶಗಳಿಗೆ ಪ್ರಯೋಜನವಾಗಿ, ಆರ್ಥಿಕ ಮತ್ತು ಕೈಗಾರಿಕಾ ಪ್ರಗತಿ ಸಾಧ್ಯವಾಗಲಿದೆ ಎಂದು ಬಜೆಟ್ ದಿನವೇ ಹೇಳಿದ್ದೆ. ಈಗ ಆ ನಿಟ್ಟಿನಲ್ಲಿ ಇಬ್ಬರೂ ಕೇಂದ್ರ ಸಚಿವರು ಕಾರ್ಯಪ್ರವೃತ್ತರಾಗಿರುವುದು ಸ್ವಾಗತಾರ್ಹ ಕ್ರಮ ಎಂದು ಅವರು ನುಡಿದಿದ್ದಾರೆ.
ಕುಮಾರಸ್ವಾಮಿ ಮತ್ತು ಜೋಶಿ ಈ ವಿಚಾರದ ಬಗ್ಗೆ ಗಮನ ಹರಿಸಿರುವುದು ಒಳ್ಳೆಯದು. ಇಂತಹ ವಿಚಾರಗಳಲ್ಲಿ ನಾವು ರಾಜಕೀಯ ಮಾಡಬಾರದು. ಯೋಜನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್, ರೈಲು ಸಚಿವ ಅಶ್ವಿನಿ ವೈಷ್ಣವ್, ವಿ.ಸೋಮಣ್ಣ ಅವರಿಗೆ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಲಿಂಗಾಯತ ಶಾಸಕರ ಸಭೆ ತಪ್ಪಲ್ಲ
ನಾಲ್ಕು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿರುವ ಲಿಂಗಾಯತ ಶಾಸಕರ ಸಭೆ ನಡೆದಿದ್ದು ಇದು ಶಕ್ತಿ ಪ್ರದರ್ಶನವೇನೂ ಅಲ್ಲ. ಅಶೋಕ ಪಟ್ಟಣ ಮತ್ತು ಬಿ ಆರ್ ಪಾಟೀಲ ಈ ಸಭೆ ಕರೆದಿದ್ದರು. ಸಮುದಾಯದ ಹಿತಾಸಕ್ತಿ ಕುರಿತು ಅಲ್ಲಿ ಚರ್ಚೆ ನಡೆಯಿತಷ್ಟೆ ಎಂದು ಪಾಟೀಲ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ.
ನಾವು ಆಗಿಂದಾಗ್ಗೆ ಹೀಗೆ ಸಭೆ ಸೇರುತ್ತಲೇ ಇರುತ್ತೇವೆ. ಬೇರೆಬೇರೆ ಸಮುದಾಯಗಳ ಶಾಸಕರೂ ಸಭೆ ಮಾಡುತ್ತಾರೆ. ಆದರೆ ನಮ್ಮ ಸಭೆಯನ್ನು ಮಾತ್ರ ಲಿಂಗಾಯತರ ಶಕ್ತಿ ಪ್ರದರ್ಶನ ಎಂದು ಬಿಂಬಿಸುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
1989ರಲ್ಲಿ ಲಿಂಗಾಯತರ ಬೆಂಬಲದಿಂದ ಕಾಂಗ್ರೆಸ್ 178 ಕಡೆ ಗೆದ್ದು, ಐತಿಹಾಸಿಕ ಸಾಧನೆ ಮಾಡಿತ್ತು. ಈಗಲೂ ಕಾಂಗ್ರೆಸ್ ನಲ್ಲಿ 34 ಲಿಂಗಾಯತ ಶಾಸಕರಿದ್ದೇವೆ. 2023ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸಮುದಾಯ ಕಾಂಗ್ರೆಸ್ಸಿಗೆ ವೋಟ್ ಹಾಕಿದೆ. ಹೀಗಾಗಿ ಸರಕಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಬೇಕು ಎನ್ನುವುದರಲ್ಲಿ ತಪ್ಪೇನಿಲ್ಲ. ಆದರೆ ನಾವು ಇನ್ನೊಂದು ಸಮುದಾಯದ ಪಾಲನ್ನು ಕಿತ್ತುಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.
ಮನರೇಗಾ ಪುನಃ ಬರಲಿ
ಹಿಂದೆ ಯುಪಿಎ ಸರಕಾರ ಜಾರಿಗೆ ತಂದಿದ್ದ ಮನರೇಗಾ ಯೋಜನೆಯನ್ನು ಬಿಜೆಪಿ ನಾಯಕರಾದ ಆಡ್ವಾಣಿ, ನಿತಿನ್ ಗಡ್ಕರಿ ಮತ್ತು ನಿರ್ಮಲಾ ಸೀತಾರಾಮನ್ ಅವರೇ ಹೊಗಳಿದ್ದರು. ಈಗ ಮೋದಿ ಸರಕಾರ ಇದನ್ನು ಹಾಳು ಮಾಡಿದ್ದು, ಯೋಜನೆಯ ಹೆಸರನ್ನು ವಿಬಿ-ಜಿ ರಾಮ್ ಜಿ ಎಂದು ಬದಲಿಸಿದೆ. ಬಿಜೆಪಿ ಸಂಸದರೇ ಈ ಬಗ್ಗೆ ದನಿ ಎತ್ತಿ, ತಮ್ಮ ಬೆಲೆ ಉಳಿಸಿಕೊಳ್ಳಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ.






