ಬಜೆಟ್ ಕಲಾಪ ಮುಗಿಯುವುದೊರಳಗೆ ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವ ಭೂಪೇಂದ್ರ ಯಾದವ್ ತ್ವರಿತವಾಗಿ ಕ್ರಮ ವಹಿಸುವ ಭರವಸೆ ಕೊಟ್ಟ ಅರಣ್ಯ ಸಚಿವರು ಅಂತರ ಸಚಿವಾಲಯ ವಿಷಯಗಳು, ಅಭಿವೃದ್ಧಿ ಬಗ್ಗೆ ಚರ್ಚಿಸಿದ ಸಚಿವದ್ವಯರು
ನವದೆಹಲಿ 4 ಜನವರಿ 2026
ಕರ್ನಾಟಕದಲ್ಲಿ ನಿರಂತರವಾಗಿ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತವಾಗಿ ತಡೆಯೊಡ್ಡಿ ಜನರ ಜೇವ ರಕ್ಷಣೆ ಮಾಡುವ ಬಗ್ಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವರಾದ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು.
ಸಂಸತ್ ಭವನದಲ್ಲಿರುವ ಅರಣ್ಯ ಸಚಿವರ ಕಚೇರಿಯಲ್ಲಿ ನಡೆದ ಈ ಭೇಟಿಯ ವೇಳೆ ಕುಮಾರಸ್ವಾಮಿ ಅವರು; ಮುಖ್ಯವಾಗಿ ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಆನೆಗಳ ದಾಳಿ ಬಗ್ಗೆ ಚರ್ಚೆ ನಡೆಸಿದರು.
ವನ್ಯಜೀವಿ ಉಪಟಳ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಅನೇಕರು, ಅದರಲ್ಲಿಯೂ ಅರಣ್ಯದ ಅಂಚಿನಲ್ಲಿ ಬೇಸಾಯ ಮಾಡುವ, ದನಕರುಗಳನ್ನು ಮೇಯಿಸುವ ರೈತರು ಬಲಿಯಾಗಿದ್ದಾರೆ. ಇನ್ನೂ ಅನೇಕರು ಗಾಯಗೊಂಡು ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾಗುತ್ತಿದ್ದಾರೆ. ಕರ್ನಾಟಕದಲ್ಲಿ ಈ ಸಮಸ್ಯೆ ಬಿಗಡಾಯಿಸಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಕುಮಾರಸ್ವಾಮಿ ಅವರು ಭೂಪೇಂದ್ರ ಯಾದವ್ ಅವರನ್ನು ವಿನಂತಿಸಿದರು.
ಕುಮಾರಸ್ವಾಮಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಈ ಬಗ್ಗೆ ತುರ್ತು ಗಮನ ಹರಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಅದಕ್ಕೆ ಪೂರಕವಾದ ಎಲ್ಲಾ ಮಾಹಿತಿಯನ್ನು ಸಚಿವ ಕುಮಾರಸ್ವಾಮಿ ಅವರಿಂದ ಪಡೆದುಕೊಂಡರು. ಅಲ್ಲದೆ, ಈ ನಿಟಿನಲ್ಲಿ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ಅಧಿಕಾರಿಗಳು ಹೇಗೆ ಕಾರ್ಯ ನಿರ್ವಹಿಸಬೇಕು ಎನ್ನುವ ಕುರಿತು ನಿರ್ದೇಶನ ನೀಡಿದರು.
ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನ ಮುಗಿಯುವದರೊಳಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಸಚಿವ ಭೂಪೇಂದ್ರ ಯಾದವ್ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಅತ್ಯಂತ ತ್ವರಿತವಾಗಿ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಅಂತರ ಸಚಿವಾಲಯ ವಿಷಯಗಳ ಕುರಿತು ಸಮಾಲೋಚನೆ:
ಈ ಭೇಟಿಯ ಸಂದರ್ಭದಲ್ಲಿ ಸಚಿವದ್ವಯರು ತಮ್ಮ ನಿರ್ವಹಣೆಯ ಇಲಾಖೆಗಳಿಗೆ ಸಂಬಂಧಿಸಿದ ಸುದೀರ್ಘ ಚರ್ಚೆ ನಡೆಸಿದರು. ಎರಡೂ ಇಲಾಖೆಗಳ ಸಮನ್ವಯತೆ, ಅಭಿವೃದ್ಧಿ ವಿಷಯಗಳ ಕುರಿತಾಗಿ ಅವರಿಬ್ಬರ ಮಾತುಕತೆ ಕೇಂದ್ರೀಕೃತವಾಗಿತ್ತು. ಜತೆಗೆ, ಉಕ್ಕು ಉದ್ಯಮದ ಬೆಳವಣಿಗೆ ಹಾಗೂ ಅದಕ್ಕೆ ಪೂರಕವಾಗಿ ಪರಿಸರ ಇಲಾಖೆಯಿಂದ ದೊರೆಯುತ್ತಿರುವ ಉತ್ತಮ ಸಹಕಾರದ ಬಗ್ಗೆಯೂ ಮಾತುಕತೆ ನಡೆಸಿದರು.






