6 ತಿಂಗಳಿಂದ ಸ್ವಾತಂತ್ರ್ಯ ಹೋರಾಟಗಾರರ ಗೌರವಧನ ಕೊಡದೇ ಸತಾಯಿಸಿದ್ದಾರೆ ರಾಜ್ಯ ಕಾಂಗ್ರೆಸ್ ಸರಕಾರ ದಿವಾಳಿಯತ್ತ: ವಿಜಯೇಂದ್ರ
ಬೆಂಗಳೂರು: ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ದಿವಾಳಿಯತ್ತ ಸಾಗುತ್ತಿದೆ ಎಂಬ ಅನುಮಾನ ಬಹಳ ದಿನಗಳಿಂದ ನಮ್ಮನ್ನು ಕಾಡುತ್ತಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಅನೇಕ ಘಟನೆಗಳನ್ನು ಮೆಲುಕು ಹಾಕಿದಾಗ ಇದು ಗೊತ್ತಾಗುತ್ತದೆ. ನಿಜವಾಗಿಯೂ ಆರ್ಥಿಕ ಪರಿಸ್ಥಿತಿ ಇವತ್ತು ಸರಿಯಾಗಿಲ್ಲ; ತನ್ನ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲು ಹಣ ಸಂಗ್ರಹಿಸಲು ಸಾಧ್ಯವಾಗದೇ ರಾಜ್ಯ ಸರಕಾರ ಎಷ್ಟರ ಮಟ್ಟಿಗೆ ಪರದಾಡುತ್ತಿದೆ ಎಂದರೆ, ಮಂಡ್ಯ ಸ್ವಾತಂತ್ರ್ಯ ಹೋರಾಟಗಾರರ ಗೌರವಧನವನ್ನು ಆರು ತಿಂಗಳಿಂದ ಕೊಡದೇ ಸತಾಯಿಸಿದ್ದಾರೆ; ಇದು ಪತ್ರಿಕೆಗಳಲ್ಲಿ ಉಲ್ಲೇಖವಾಗಿದೆ ಎಂದು ಗಮನ ಸೆಳೆದರು.
ಇನ್ನೊಂದೆಡೆ ರಾಜ್ಯವೇ ತಲೆತಗ್ಗಿಸುವ ಮತ್ತೊಂದು ಘಟನೆ ನಡೆದ ಮಾಹಿತಿ ಬರುತ್ತಿದೆ. ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಳೆದ ವರ್ಷ ಕುಸಿದು ಬಿದ್ದಿತ್ತು. ಅದರ ಪರಿಣಾಮವಾಗಿ ನೀರು ಪೋಲಾದುದಲ್ಲದೇ ರೈತರಿಗೂ ಸಂಕಷ್ಟ ಎದುರಾಗಿತ್ತು. ಎರಡು ಬೆಳೆ ಬೆಳೆಯುವ ರೈತರು ಒಂದೇ ಬೆಳೆಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿತ್ತು ಎಂದು ವಿವರಿಸಿದರು. ಕೊಪ್ಪಳ ಜಿಲ್ಲೆ, ರಾಯಚೂರು, ಬಳ್ಳಾರಿ ಭಾಗದ ರೈತರಿಗೆ ಅನಾನುಕೂಲ ಆದುದರ ಕುರಿತು ಸದನದಲ್ಲೂ ಚರ್ಚೆ ಆಗಿದೆ. ಸದನದ ಹೊರಗಡೆಯೂ ಚರ್ಚೆ ಆಗಿದೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸದನದಲ್ಲಿ, ನಾವು ಪಕ್ಕದ ಆಂಧ್ರ ಪ್ರದೇಶ ಮತ್ತಿತರ ರಾಜ್ಯಗಳ ಹಣಕ್ಕಾಗಿ ಕಾಯುವುದಿಲ್ಲ. ನಮ್ಮ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಸಂಕಷ್ಟಕ್ಕೆ ಪರಿಹಾರ ಕೊಡುತ್ತೇವೆ. ಸಂಪೂರ್ಣ ಹಣವನ್ನು ಕರ್ನಾಟಕ ಸರಕಾರವೇ ಭರಿಸಿ, ಆ 33 ಕ್ರಸ್ಟ್ ಗೇಟ್ ಬದಲಾಗಿ ಹೊಸ ಗೇಟ್ ಅಳವಡಿಸುತ್ತೇವೆ ಎಂದು ತಿಳಿಸಿದ್ದಾಗ ಹೆಮ್ಮೆ ಎನಿಸಿತ್ತು. ಆದರೆ, ಈಗ ಬಂದ ಮಾಹಿತಿ ಎಂಥ ದುರಂತವೆಂದರೆ, ರಾಜ್ಯ ಸರಕಾರವು ಕ್ರಸ್ಟ್ ಗೇಟ್ ಬದಲಿಸಲು 10 ಕೋಟಿ ನೀಡಿ ಕೆಲಸ ಆರಂಭವಾಗಿತ್ತು. ಇದರ ನಡುವೆ ಆಂಧ್ರ ಪ್ರದೇಶದ ಸರ್ಕಾರ ತನ್ನ ಬಾಬ್ತು 20 ಕೋಟಿ ರೂಪಾಯಿಯನ್ನು ಇಲ್ಲಿಗೆ ಬಿಡುಗಡೆ ಮಾಡಿದೆ. ಅದು ನಮ್ಮ ರಾಜ್ಯದ ಖಜಾನೆಗೆ ಬಂದು ಅಲ್ಲಿಂದ ತುಂಗಭದ್ರಾ ಜಲಾಶಯದ ಸಂಬಂಧ ಹೋಗಬೇಕಿತ್ತು. ಇದರ ಜೊತೆಗೇ 33 ಕೋಟಿ ಮೊತ್ತವನ್ನು ತುಂಗಭದ್ರಾ ಜಲಾಶಯದ ನೌಕರರಿಗೆ ವೇತನ, ನಿರ್ವಹಣೆಗೆ ಬಿಡುಗಡೆ ಮಾಡಿದ್ದಾರೆ. ಆ 33 ಕೋಟಿ ಹಣದಲ್ಲಿ ನಮ್ಮ ರಾಜ್ಯ ಸರಕಾರವು ಹಿಂದೆ ಕೊಟ್ಟಂಥ 10 ಕೋಟಿಯನ್ನು ವಜಾ ಮಾಡಿದೆ ಎಂದು ಆಕ್ಷೇಪಿಸಿದರು.
ಈ ವಿಚಾರವನ್ನು ಸ್ವತಃ ಖನ್ನಾಯ್ಯ ನಾಯ್ಡುರವರೂ ಪ್ರಸ್ತಾಪ ಮಾಡಿದ್ದಾರೆ. ಇದರಿಂದ ರಾಜ್ಯವೇ ತಲೆತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಬಹುಶಃ ಇಂಥ ಸಂಕಷ್ಟ ರಾಜ್ಯ ಸರಕಾರಕ್ಕೆ ಯಾವತ್ತೂ ಬಂದಿರಲಿಲ್ಲ. ಇದನ್ನೇ ನಾನು ಸದನದಲ್ಲಿ ಹೇಳಿದ್ದೆ ಎಂದು ತಿಳಿಸಿದರು. ನಮ್ಮ ರಾಜ್ಯದ ಗ್ಯಾರಂಟಿಗಳು ಇಡೀ ದೇಶಕ್ಕೇ ರೋಲ್ ಮಾಡೆಲ್ ಎಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಲೋಕಸಭಾ ಚುನಾವಣೆಯಲ್ಲಿ ಬೊಬ್ಬೆ ಹೊಡೆಯುತ್ತಿದ್ದರು. ಆದರೆ, ಲೋಕಸಭಾ ಚುನಾವಣೆ ನಂತರದಲ್ಲಿ ಹಿಮಾಚಲ ಪ್ರದೇಶದಲ್ಲೂ ಇವರ ಮಾತನ್ನು ಕಟ್ಟಿಕೊಂಡು ಅಲ್ಲಿಯೂ ಗ್ಯಾರಂಟಿ ನೀಡಿದ್ದರು. ಆ ಸರಕಾರ ಅಸ್ತಿತ್ವಕ್ಕೆ ಬಂದು ಆರೇ ತಿಂಗಳಲ್ಲಿ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳು, ಆ ರಾಜ್ಯದ ಶ್ರೀಮಂತ ದೇವಾಲಯಗಳಿಗೆ ಪತ್ರ ಬರೆದಿದ್ದಾರೆ. ನಾವು ಗ್ಯಾರಂಟಿ ಕೊಟ್ಟಿದ್ದೇವೆ; ಹಾಗಾಗಿ ನಮಗೆ ಹಣದ ಕೊರತೆ ಆಗಿದೆ. ಶ್ರೀಮಂತ ದೇವಾಲಯಗಳಿಗೆ ಬರುವ ಆದಾಯವನ್ನು ರಾಜ್ಯ ಸರಕಾರಕ್ಕೆ ಕೊಡಬೇಕೆಂದು ಬರೆದಿದ್ದರು ಎಂದು ವಿವರಿಸಿದರು.
ಮತ್ತೊಂದು ಕಡೆ ತೆಲಂಗಾಣದಲ್ಲೂ ಗ್ಯಾರಂಟಿ ಕೊಟ್ಟಿದ್ದಾರೆ. ಅಲ್ಲಿ ಗ್ಯಾರಂಟಿಯಿಂದ ಸರಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೆ ಆಗುತ್ತಿಲ್ಲ ಎಂದು ಅಲ್ಲಿನ ಮುಖ್ಯಮಂತ್ರಿ ತೆಲಂಗಾಣದ ಸದನದಲ್ಲೇ ಹೇಳಿದ್ದಾಗಿ ತಿಳಿಸಿದರು. ಇದು ವಾಸ್ತವಿಕ ಸತ್ಯ ಎಂದು ಗಮನ ಸೆಳೆದರು.
ಜಮೀರ್ ಅಹ್ಮದ್ ಅವರು ಬಳ್ಳಾರಿಗೆ ಹೋಗಿ ಕಾರ್ಯಕರ್ತನ ಹತ್ಯೆ ಸಂಬಂಧ 25 ಲಕ್ಷ ಕೊಟ್ಟಿದ್ದಾರೆ. ಮಂಗಳೂರಿನಲ್ಲಿ ಯಾರೋ ಪ್ರಾಣ ಕಳಕೊಂಡರೆಂದು 30-40 ಲಕ್ಷ ಕೊಟ್ಟಿದ್ದಾರೆ. ಯಲ್ಲಾಪುರದಲ್ಲಿ ದಲಿತ ಹೆಣ್ಮಗಳ ಬರ್ಬರ ಹತ್ಯೆ ಆಗಿತ್ತು. ಆದರೆ, ದಲಿತರ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಪ್ರಿಯಾಂಕ್ ಖರ್ಗೆ, ಮಹದೇವಪ್ಪ ಅವರಿಗೆ ಯಲ್ಲಾಪುರದ ದಲಿತ ಕುಟುಂಬಕ್ಕೆ 50 ಲಕ್ಷ ನೀಡಬೇಕೆಂಬ ಕನಿಷ್ಠ ಸೌಜನ್ಯವೂ ಇಲ್ಲ ಎಂದು ಟೀಕಿಸಿದರು.
ಒಟ್ಟಾರೆಯಾಗಿ ರಾಜ್ಯ ಸರಕಾರ ದಿವಾಳಿಯತ್ತ ಸಾಗುತ್ತಿದೆ; ಅಥವಾ ದಿವಾಳಿಗೆ ಬಂದು ಮುಟ್ಟಿದೆ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಹೊಸಪೇಟೆ ತುಂಗಭದ್ರಾ ಜಲಾಶಯದ 33 ಕೋಟಿಯಲ್ಲಿ 10 ಕೋಟಿ ಜಮಾ ಮಾಡಿಕೊಂಡಿದ್ದನ್ನು ಗಮನಿಸಿದರೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋದುದು ಗೊತ್ತಾಗುತ್ತದೆ ಎಂದು ವಿಶ್ಲೇಷಿಸಿದರು.



