ತೆರಿಗೆದಾರರ ಹಣ ದುರುಪಯೋಗ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟುವ ಕೆಲಸ: ವಿಜಯೇಂದ್ರ

Banglore:

Font size:

ತೆರಿಗೆದಾರರ ಹಣ ದುರುಪಯೋಗ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟುವ ಕೆಲಸ: ವಿಜಯೇಂದ್ರ

ಜಾಹೀರಾತನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ನೀಡಿದರೆ ನಮ್ಮ ವಿರೋಧ ಇರಲಿಲ್ಲ. ರಾಜ್ಯದ ತೆರಿಗೆದಾರರ ಹಣವನ್ನು ದುರುಪಯೋಗ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಈ ಕಾಂಗ್ರೆಸ್ ಸರಕಾರಕ್ಕೆ ಮಾನ ಮರ್ಯಾದೆ ಇಲ್ಲ. ಕೇಂದ್ರ ಸರಕಾರದ ವಿಬಿ ಜಿ ರಾಮ್ ಜಿ ಕಾಯ್ದೆಯ ವಿರುದ್ಧ ಪತ್ರಿಕೆಗಳ ಮುಖಪುಟದಲ್ಲಿ ರಾಜ್ಯ ಸರಕಾರ ಜಾಹೀರಾತು ನೀಡಿದ್ದನ್ನು ನಾವು ವಿರೋಧಿಸುತ್ತೇವೆ ಎಂದು ತಿಳಿಸಿದರು.
ಈ ಕಾಂಗ್ರೆಸ್ಸಿನವರಿಗೆ ಮಹಾತ್ಮ ಗಾಂಧಿಯವರ ಬಗ್ಗೆ ಗೌರವ ಇಲ್ಲ. ಇವತ್ತು ಕೊಟ್ಟಿರುವ ಜಾಹೀರಾತಿನ ಮೂಲಕ ಅಕ್ಷರಶಃ ಸಂಪೂರ್ಣ ತಪ್ಪು ಮಾಹಿತಿಯನ್ನು ರಾಜ್ಯದ ಜನತೆಗೆ ಕೊಡುವ ಕೆಲಸಕ್ಕೆ ಕಾಂಗ್ರೆಸ್ ಸರಕಾರ ಕೈಹಾಕಿದೆ. ಈ ಜಾಹೀರಾತಿನ ಮುಖೇನ ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದೆ ಎಂದು ಖಂಡಿಸಿದರು.
ಪ್ರಿಯಾಂಕ್ ಖರ್ಗೆಯವರು ತಮ್ಮ ಸಾಧನೆಯನ್ನು ಮುಖಪುಟದ ಜಾಹೀರಾತಾಗಿ ಕೊಡಲಿ ನೋಡೋಣ. ರಾಜ್ಯ ಸರಕಾರದ ಸಾಧನೆ ಏನು ಮಾಡಿದ್ದಾರೋ ಅದನ್ನು ಮುಖಪುಟದಲ್ಲಿ ಜಾಹೀರಾತಾಗಿ ನೀಡಲಿ ನೋಡೋಣ; ಇದನ್ನೆಲ್ಲ ಬಿಟ್ಟು ನರೇಂದ್ರ ಮೋದಿಯವರ ಸರಕಾರ, ಕೇಂದ್ರ ಸರಕಾರವು ಮಹಾತ್ಮ ಗಾಂಧಿಯವರಿಗೆ ಅಪಮಾನ ಮಾಡಿದ್ದಾರೆಂದು ತಪ್ಪು ಸಂದೇಶ ನೀಡಿದ್ದು ಸರಿಯಲ್ಲ. ಇವರಿಗೆ ಮಹಾತ್ಮ ಗಾಂಧಿಯವರ ಬಗ್ಗೆ ಮಾತನಾಡುವ ಯಾವುದೇ ಯೋಗ್ಯತೆಯೂ ಇಲ್ಲ ಎಂದು ಆಕ್ಷೇಪಿಸಿದರು.
ಇದೆಂಥ ಲಜ್ಜೆಗೆಟ್ಟ ಸರಕಾರವೆಂದರೆ, ತನ್ನ ಗ್ಯಾರಂಟಿಗಳಿಗೆ ಹಣ ಕ್ರೋಡೀಕರಿಸಲು ಸಾಧ್ಯವಾಗದೇ 600-700 ಬಾರ್ ಲೈಸೆನ್ಸ್ ಅನ್ನು ಜಾಸ್ತಿ ಮಾಡಲು ಹೊರಟಿದ್ದಾರೆ. ಇವರು ಮಹಾತ್ಮ ಗಾಂಧಿಯವರ ಬಗ್ಗೆ ಮಾತನಾಡಲು ಯೋಗ್ಯತೆ ಇದೆಯೇ ಎಂದು ಪ್ರಶ್ನೆ ಮಾಡಿದರು.
ಮಹಾತ್ಮ ಗಾಂಧಿಯವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಈ ಕಾಂಗ್ರೆಸ್ಸಿನವರು ಅಯೋಗ್ಯರಿದ್ದಾರೆ; ನಾಲಾಯಕ್ ಇದ್ದಾರೆ ಎಂಬ ಕಾರಣಕ್ಕಾಗಿಯೇ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯಾನಂತರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ವಿಸರ್ಜಿಸಲು ತಿಳಿಸಿದಂತೆ ಕಾಣುತ್ತದೆ. ಈ ಅಯೋಗ್ಯರಿಗೆ ಇದನ್ನು ಮುಂದುವರೆಸಲು ಬಿಟ್ಟರೆ, ಸ್ವಾತಂತ್ರ್ಯ ಹೋರಾಟಗಾರರಿಗೂ ಅಪಮಾನ ಮಾಡುತ್ತಾರೆ ಎಂದು ಗೊತ್ತಿದ್ದೇ ಮಹಾತ್ಮ ಗಾಂಧೀಜಿಯವರು ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಲು ಹೇಳಿದಂತಿದೆ ಎಂದು ವಿಶ್ಲೇಷಿಸಿದರು.
ಹೇಳಿಕೊಳ್ಳಲು ಇವರ ಬಳಿ ಸಾಧನೆ ಇಲ್ಲ. ತರಾತುರಿಯಲ್ಲಿ ಅಧಿವೇಶನ ಕರೆದಿದ್ದಾರೆ. ಸರಕಾರವು ಲೋಪದೋಷಗಳನ್ನು ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಈ ರೀತಿ ತಪ್ಪು ಜಾಹೀರಾತು ನೀಡಿ ಜನರ ದುಡ್ಡನ್ನೂ ಹಾಳು ಮಾಡಿದ್ದಾರೆ. ರಾಜ್ಯವನ್ನೂ ಅರಾಜಕತೆಗೆ ಒಯ್ದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದ ಜಾಹೀರಾತು ನೀಡಿದ್ದಾರೆ ಎಂದು ಅವರು ದೂರಿದರು. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಹಣ ಕೊಟ್ಟು ಜಾಹೀರಾತು ನೀಡಿದ್ದು, ಆ ಹಣವನ್ನು ವಾಪಸ್ ಪಡೆದು ಕಾಂಗ್ರೆಸ್ ಪಕ್ಷದಿಂದ ಕೊಡಲಿ. ಅದಕ್ಕೆ ನಾವು ಉತ್ತರ ಕೊಡುತ್ತೇವೆ ಎಂದು ಸವಾಲು ಹಾಕಿದರು. ತೆರಿಗೆದಾರರ ಹಣವನ್ನು ಈ ರೀತಿ ಪೋಲು ಮಾಡಲು ಬಿಡುವುದಿಲ್ಲ ಎಂದು ತಿಳಿಸಿದರು.

Prev Post ನಾಗಾಲೋಟದಲ್ಲಿ ಬೆಳವಣಿಗೆ ಆಗುತ್ತಿರುವ ದೇಶಿಯ ಆಟೋಮೊಬೈಲ್‌ ಕ್ಷೇತ್ರ ಉತ್ಪಾದನೆ, ರಫ್ತಿನಲ್ಲಿ ಗಣನೀಯ ಪ್ರಗತಿ; ಹೆಚ್.ಡಿ.ಕುಮಾರಸ್ವಾಮಿ ಸಂತಸ
Next Post ಕರ್ನಾಟಕದಲ್ಲಿ ಮೊದಲ ಬಾರಿಗೆ ವಿಕಲಚೇತನರಿಗಾಗಿ ವಿಶೇಷ ಉದ್ಯೋಗ ಮೇಳ: ಡಾ. ಶರಣಪ್ರಕಾಶ್ ಪಾಟೀಲ್