ಪುಣೆಯಲ್ಲಿ SIAT 2026 ಉದ್ಘಾಟಿಸಿದ ಕೇಂದ್ರ ಸಚಿವರು ಸುಸ್ಥಿರ ಮತ್ತು ತಂತ್ರಜ್ಞಾನ ಆಧಾರಿತ ಬೆಳವಣಿಗೆಗೆ ಭಾರತದ ಆಟೋಮೋಟಿವ್ ವಲಯ ಸಜ್ಜಾಗಿದೆ: HDK
ಪುಣೆ 26 ಜನವರಿ 2026
ಬದಲಾಗುತ್ತಿರುವ ಜಾಗತಿಕ ನಿರೀಕ್ಷೆಗಳಿಗೆ ಭಾರತವು ವ್ಯೂಹಾತ್ಮಕ ಅಗತ್ಯವಾಗಿದ್ದು, ಇದರ ಭಾಗವಾಗಿ ದೇಶಿಯ ಆಟೋಮೊಬೈಲ್ ಕ್ಷೇತ್ರವು ನಾಗಾಲೋಟದಲ್ಲಿ ಬೆಳವಣಿಗೆ ಸಾಧಿಸುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸಂತಸ ವ್ಯಕ್ತಪಡಿಸಿದರು.
ಪುಣೆಯಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಆಟೋಮೋಟಿವ್ ತಂತ್ರಜ್ಞಾನ (SIAT) 2026ರ ಮೂರು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು; ಸುರಕ್ಷಿತ, ಸುಸ್ಥಿರ ಮತ್ತು ಜಾಗತಿಕ ಸ್ಪರ್ಧಾತ್ಮಕ ಚಲನಶೀಲತೆಯ ಪರಿಹಾರಗಳತ್ತ ಭಾರತದ ಬೆಳವಣಿಗೆ ಮಹತ್ವದ ಮೈಲಿಗಲ್ಲಾಗಿದೆ ಎಂದರು.
ಭಾರತೀಯ ಆಟೋಮೊಬೈಲ್ ಕ್ಷೇತ್ರವು ಭಾರೀ ವೇಗದಲ್ಲಿ ಬೆಳವಣಿಗೆ ಹೊಂದುತ್ತಿದೆ ಎಂಬ ಅಂಶವನ್ನು ಒತ್ತಿ ಹೇಳಿದ ಸಚಿವರು; 2023-24ನೇ ಹಣಕಾಸು ವರ್ಷದಲ್ಲಿ 28.4 ಮಿಲಿಯನ್ ಯೂನಿಟ್‌ಗಳಿಂದ 2024-25ನೇ ಹಣಕಾಸು ವರ್ಷದಲ್ಲಿ 31 ಮಿಲಿಯನ್ ಯೂನಿಟ್‌ಗಳಿಗೆ ವಾಹನ ಉತ್ಪಾದನೆ ಹೆಚ್ಚಾಗಿದೆ, ಆದರೆ, ಅದೇ ಅವಧಿಯಲ್ಲಿ ರಫ್ತು 4.5 ಮಿಲಿಯನ್ ಯೂನಿಟ್‌ಗಳಿಂದ 5.36 ಮಿಲಿಯನ್ ಯೂನಿಟ್‌ಗಳಿಗೆ ಏರಿದೆ. ಈ ಅಂಕಿ-ಅಂಶಗಳು ಸ್ವಚ್ಛ, ಸ್ಪರ್ಧಾತ್ಮಕ ಮತ್ತು ಸುಸ್ಥಿರ ವಾಹನ ವಲಯವನ್ನು ಉತ್ತೇಜಿಸುವಲ್ಲಿ ಸರಕಾರದ ಪ್ರಯತ್ನಗಳ ಯಶಸ್ಸನ್ನು ಪ್ರತಿಬಿಂಬಿಸುತ್ತವೆ ಎಂದರು.
ಭಾರತದ ತ್ವರಿತ ಆರ್ಥಿಕ ಪ್ರಗತಿಯ ಬಗ್ಗೆ ಒತ್ತಿ ಹೇಳಿದ ಕೇಂದ್ರ ಸಚಿವರುʼ “ಭಾರತವು USD $4.18 ಟ್ರಿಲಿಯನ್ ಜಿಡಿಪಿಯೊಂದಿಗೆ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಮತ್ತು ಮುಂಬರುವ ವರ್ಷಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ. 2030ರ ವೇಳೆಗೆ ಭಾರತದ ಯೋಜಿತ GDP $7.3 ಟ್ರಿಲಿಯನ್ ಮೈಲುಗಲ್ಲು ದಾಟುವ ವಿಶ್ವಾಸ, ಸಾಮರ್ಥ್ಯ ಹೊಂದಿದೆ. ಈ ದಿಕ್ಕಿನಲ್ಲಿ ಉತ್ಪಾದನೆ ಮತ್ತು ಬೆಳವಣಿಗೆ ಸಮತೋಲಿತವಾಗಿ ಸಾಗುತ್ತಿದೆ” ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ನಾಯಕತ್ವದಲ್ಲಿ, ಭಾರತವು 2070ರ ವೇಳೆಗೆ ಇಂಗಾಲದ ನಿವ್ವಳ ಶೂನ್ಯ ಹೊರಸೂಸುವಿಕೆ ಸಾಧಿಸುವತ್ತ ಸ್ಪಷ್ಟ ಮತ್ತು ಮಹತ್ವಾಕಾಂಕ್ಷೆಯ ಮಾರ್ಗಸೂಚಿಯನ್ನು ರೂಪಿಸಿದೆ. ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಕೇಂದ್ರಿಕೃತ ದೃಷ್ಟಿಕೋನವು ಭಾರತದ ಭವಿಷ್ಯದ ಬೆಳವಣಿಗೆ ಮತ್ತು ಜಾಗತಿಕ ಸ್ಥಾನವನ್ನು ವ್ಯಾಖ್ಯಾನಿಸುವ ಮುಂದುವರಿದ ಉತ್ಪಾದನಾ ವಲಯಗಳನ್ನು ಬಲಪಡಿಸುತ್ತಿದೆ ಎಂದು ಅವರು ಹೇಳಿದರು.
ಈ ಪರಿವರ್ತನೆಯ ಭಾಗವಾಗಿ ಆಟೋಮೊಬೈಲ್ ಕ್ಷೇತ್ರದಲ್ಲಿ ಆಮದು ಅವಲಂಬನೆ ಕಡಿಮೆ ಮಾಡುತ್ತಿದೆ. ಇಂಗಾಲ ಹೊರಸೂಸುವಿಕೆಯನ್ನೂ ತಗ್ಗಿಸುತ್ತದೆ ಹಾಗೂ ಭಾರತೀಯ ಉದ್ಯಮ, ನಾವೀನ್ಯಕಾರರು ಮತ್ತು ನಮ್ಮ ಯುವ ಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಕೇಂದ್ರ ಸಚಿವರು ಪ್ರತಿಪಾದಿಸಿದರು.
ಈ ಸಾಧನೆಯ ಭಾಗವಾಗಿ ಕೇಂದ್ರ ಸರಕಾರದ ನೀತಿಗಳು, ಉಪಕ್ರಮಗಳ ಬಗ್ಗೆ ವಿವರಿಸಿದ ಸಚಿವರುʼ ಬೃಹತ್ ಕೈಗಾರಿಕಾ ಸಚಿವಾಲಯವು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದೆ. ₹11,500 ಕೋಟಿ ವೆಚ್ಚದ FAME-II ಯೋಜನೆಯು 16.71 ಲಕ್ಷಕ್ಕೂ ಹೆಚ್ಚು ಇವಿ ವಾಹನಗಳ ಅಳವಡಿಕೆಯನ್ನು ಬೆಂಬಲಿಸಿದೆ ಮತ್ತು ದೇಶಾದ್ಯಂತ 9,000ಕ್ಕೂ ಹೆಚ್ಚು ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳ ಮಂಜೂರಾತಿಗೆ ಅನುವು ಮಾಡಿಕೊಟ್ಟಿದೆ. ಹಾಗೆಯೇ, ₹10,900 ಕೋಟಿ ವೆಚ್ಚದ PM E-DRIVE ಯೋಜನೆಯು ಬೇಡಿಕೆ ಆಧರಿತ ಪ್ರೋತ್ಸಾಹ ಮತ್ತು ವಿಸ್ತರಿಸಿದ ಚಾರ್ಜಿಂಗ್ ಮೂಲಸೌಕರ್ಯದ ಮೂಲಕ ಇವಿ ಕ್ಷೇತ್ರಕ್ಕೆ ಶಕ್ತಿ ನೀಡಿದೆ. ಈ ಯೋಜನೆ ಅಡಿಯಲ್ಲಿ 20 ಲಕ್ಷಕ್ಕೂ ಅಧಿಕ ಇವಿ ವಾಹನಗಳು ಮಾರಾಟವಾಗಿವೆ. ₹25,938 ಕೋಟಿ ವೆಚ್ಚದ ಉತ್ಪಾದನೆ ಸಂಬಂಧಿತ ಪ್ರೋತ್ಸಾಹ (PLI) ಆಟೋ ಯೋಜನೆಯು ದೇಶೀಯ ಮೌಲ್ಯವರ್ಧನೆಯನ್ನು ಉತ್ತೇಜಿಸುತ್ತಿದೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಿದರು.
ಹಾಗೆಯೇ ಸಚಿವ ಕುಮಾರಸ್ವಾಮಿ ಅವರು PLI-ACC ಯೋಜನೆ ಬಗ್ಗೆಯೂ ಒತ್ತಿ ಹೇಳಿ, ಭಾರತದಲ್ಲಿ 50 GWh ಅಡ್ವಾನ್ಸ್‌ಡ್ ಕೆಮಿಸ್ಟ್ರಿ ಸೆಲ್ ಬ್ಯಾಟರಿ ಉತ್ಪಾದನಾ ಸಾಮರ್ಥ್ಯವನ್ನು ಸ್ಥಾಪಿಸುವ ಗುರಿ ಹೊಂದಿದ್ದೇವೆ. ಇದು ದೀರ್ಘಕಾಲೀನ ಇಂಧನ ಸುರಕ್ಷತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುತ್ತದೆ ಎಂದರು.
ಇತ್ತೀಚೆಗೆ ಅನುಮೋದಿಸಲಾದ ಭೂಮಿಯಲ್ಲಿನ ಅಪರೂಪದ ಶಾಶ್ವತ ಅಯಸ್ಕಾಂತಗಳ (REPM) ಬಳಕೆ ಯೋಜನೆಯನ್ನು ಸಚಿವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು. ಇದರ ಬಜೆಟ್ ₹7,280 ಕೋಟಿಗಳಾಗಿದ್ದು, ಇದು ಇವಿ ವಾಹನಗಳು, ವಿಂಡ್ ಟರ್ಬೈನ್‌ಗಳು, ರಕ್ಷಣಾ ವ್ಯವಸ್ಥೆ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ತೊಡಗಿರುವ ಸ್ಥಳೀಯ ಘಟಕಗಳನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು.
ಪರಿಸರದ ಸಂರಕ್ಷಣೆಯ ಬಗ್ಗೆಯೂ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೊಟ್ಟ ಸಚಿವರು; ವಾಣಿಜ್ಯ ವಾಹನ ವಿಭಾಗದ ವಿದ್ಯುದೀಕರಣವು ಮಹತ್ವದ್ದಾಗಿದೆ. ಏಕೆಂದರೆ, ಈ ವಾಹನಗಳು ಸಾರಿಗೆ ಸಂಬಂಧಿತ ಮಾಲಿನ್ಯಕ್ಕೆ ಶೇ.40ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತವೆ. ಈ ವಿಭಾಗದಲ್ಲಿ ಇವಿ ವಾಹನಗಳ ಅಳವಡಿಕೆ ಬಲಪಡಿಸಲು ದೇಶಾದ್ಯಂತ 70,000ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು PM E-DRIVE ಯೋಜನೆಯಡಿಯಲ್ಲಿ ₹2,000 ಕೋಟಿ ಮೀಸಲಿಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು ವಿವಿಧ ಪ್ರದರ್ಶನ ಮಳಿಗೆಗಳನ್ನು ವೀಕ್ಷಿಸಿದರು, ಉದ್ಯಮದ ಪಾಲುದಾರರು, ನವೋದ್ಯಮಗಳು ಮತ್ತು ಸಂಶೋಧಕರೊಂದಿಗೆ ಸಂವಾದ ನಡೆಸಿದರು. ಜತೆಗೆ, ಸುರಕ್ಷತೆ, ಭದ್ರತೆ ಮತ್ತು ಸುಧಾರಿತ ಸಂಶೋಧನಾ ಸಾಮರ್ಥ್ಯಗಳನ್ನು ಬಲಪಡಿಸಲು ಸ್ಥಾಪಿಸಲಾದ ಪುಣೆ ಸಮೀಪದ ಟಕ್ವೆಯಲ್ಲಿರುವ ARAIಯ ಮೊಬಿಲಿಟಿ ಸಂಶೋಧನಾ ಕೇಂದ್ರ (MRC)ದಲ್ಲಿ ಮೂರು ಹೊಸ ಸೌಲಭ್ಯಗಳನ್ನು ಉದ್ಘಾಟಿಸಿದರು.

