ಮುಖ್ಯಾಂಶಗಳು * ನೋಕಿಯಾ, ಕ್ಲೌಡ್‌ಫ್ಲೇರ್, ವಾಸ್ಟ್‌ಸ್ಪೇಸ್, ಮೆಂಜಿಸ್ ಏವಿಯೇಷನ್, ಟಾಟಾ ಸನ್ಸ್, ಅಮೆಜಾನ್ ವೆಬ್ ಸರ್ವಿಸಸ್ ಮುಖ್ಯಸ್ಥರ ಜೊತೆ ಫಲಪ್ರದ ಸಮಾಲೋಚನೆ * ಬೆಂಗಳೂರು ಆಚೆಗಿನ 2ನೆ ಶ್ರೇಣಿಯ ನಗರಗಳಲ್ಲಿ ಉದ್ಯಮ ವಿಸ್ತರಣೆಗೆ ಹೆಚ್ಚಿದ ಒಲವು * ಅತ್ಯಾಧುನಿಕ ತಂತ್ರಜ್ಞಾನ ಆಕರ್ಷಿಸುವುದರಲ್ಲಿ ಕರ್ನಾಟಕವು ಜಾಗತಿಕ ಅತ್ಯುತ್ತಮ ತಾಣ: ಕ್ಲೌಡ್‌ಫ್ಲೇರ್ ಶ್ಲಾಘನೆ
ರಾಜ್ಯದ ಆರ್ಥಿಕ ಪ್ರಗತಿಗೆ ವೇಗವರ್ಧಕವಾದ ದಾವೋಸ್ ಸಮಾವೇಶ
₹13,070 ಕೋಟಿ ಹೂಡಿಕೆ ವಾಗ್ದಾನಕ್ಕೆ ದಾವೋಸ್‌ನಲ್ಲಿ ಅಧಿಕೃತ ಮುದ್ರೆ: ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ
ಮುಖ್ಯಾಂಶಗಳು
* ನೋಕಿಯಾ, ಕ್ಲೌಡ್‌ಫ್ಲೇರ್, ವಾಸ್ಟ್‌ಸ್ಪೇಸ್, ಮೆಂಜಿಸ್ ಏವಿಯೇಷನ್, ಟಾಟಾ ಸನ್ಸ್, ಅಮೆಜಾನ್ ವೆಬ್ ಸರ್ವಿಸಸ್ ಮುಖ್ಯಸ್ಥರ ಜೊತೆ ಫಲಪ್ರದ ಸಮಾಲೋಚನೆ
* ಬೆಂಗಳೂರು ಆಚೆಗಿನ 2ನೆ ಶ್ರೇಣಿಯ ನಗರಗಳಲ್ಲಿ ಉದ್ಯಮ ವಿಸ್ತರಣೆಗೆ ಹೆಚ್ಚಿದ ಒಲವು
* ಅತ್ಯಾಧುನಿಕ ತಂತ್ರಜ್ಞಾನ ಆಕರ್ಷಿಸುವುದರಲ್ಲಿ ಕರ್ನಾಟಕವು ಜಾಗತಿಕ ಅತ್ಯುತ್ತಮ ತಾಣ: ಕ್ಲೌಡ್‌ಫ್ಲೇರ್ ಶ್ಲಾಘನೆ
ಬೆಂಗಳೂರು: ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ಸಮಾವೇಶವು, ವೈಮಾಂತರಿಕ್ಷ, ಆಹಾರ ಸಂಸ್ಕರಣೆ, ಡೇಟಾ ಕೇಂದ್ರ, ಡಿಜಿಟಲ್ ಮೂಲಸೌಲಭ್ಯ, ಶುದ್ಧ ಇಂಧನ, ಅತ್ಯಾಧುನಿಕ ತಯಾರಿಕೆ ಮತ್ತಿತರ ವಲಯಗಳಲ್ಲಿನ ಹೂಡಿಕೆ, ವಿಸ್ತರಣೆ ಮತ್ತು ಪಾಲುದಾರಿಕೆಗಳಲ್ಲಿ ಕರ್ನಾಟಕವು ಮುಂಬರುವ ದಿನಗಳಲ್ಲಿ ಭಾರಿ ಮುನ್ನಡೆ ಸಾಧಿಸಲು ಚಿಮ್ಮು ಹಲಗೆಯಾಗಿ ಪರಿಣಮಿಸಿದ್ದು, ₹ 13,070 ಕೋಟಿ ಹೂಡಿಕೆ ವಾಗ್ದಾನಕ್ಕೆ ಅಧಿಕೃತ ಮುದ್ರೆ ದೊರೆತಿದೆ.
ʼಕೃತಕ ಬುದ್ಧಿಮತ್ತೆ, ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಸ್ಥಾಪನೆ, ಸಂಶೋಧನೆ, ಸುಸ್ಥಿರ ನಗರಾಭಿವೃದ್ಧಿ ಕ್ಷೇತ್ರಗಳಲ್ಲಿ ಕರ್ನಾಟಕವು ದೇಶದ ಪ್ರಮುಖ ತಾಣವನ್ನಾಗಿ ವಿಶ್ವದ ಗಮನ ಸೆಳೆಯುವಂತೆ ಮಾಡುವಲ್ಲಿ ಸತತ ಐದು ದಿನಗಳ ಕಾಲ ನಡೆಸಿದ 45ಕ್ಕೂ ಹೆಚ್ಚು ಸಭೆ – ಸಮಾಲೋಚನೆಗಳು ಫಲ ನೀಡಿವೆ' ಎಂದು ಬೃಹತ್ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ದಾವೋಸ್‌ನಿಂದ ಸ್ವದೇಶಕ್ಕೆ ಮರಳಿದ ನಂತರ ನೀಡಿರುವ ಹೇಳಿಕೆಯಲ್ಲಿ ಭೇಟಿಯ ಯಶಸ್ಸಿನ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ʼಉದ್ಯಮ ದಿಗ್ಗಜರ ಜೊತೆ ನಡೆಸಿದ ಸಮಾಲೋಚನೆಗಳು ರಾಜ್ಯಕ್ಕೆ ಹೊಸ ಬಂಡವಾಳ ಹೂಡಿಕೆಗಳ ಹರಿವಿಗೆ ಗಟ್ಟಿ ಬುನಾದಿ ಹಾಕಿದ್ದು, ಈಗಾಗಲೇ ಜಾರಿಯಲ್ಲಿ ಇರುವ ಯೋಜನೆಗಳಿಗೆ ವೇಗ ನೀಡುವುದಕ್ಕೂ ಗಮನಾರ್ಹ ಕೊಡುಗೆ ನೀಡಿವೆ. ಜಾಗತಿಕ ವಾಣಿಜ್ಯ ಹಾಗೂ ಕೈಗಾರಿಕಾ ಪರಿವರ್ತನೆಯ ಮುಂದಿನ ಹಂತದಲ್ಲಿ ಕರ್ನಾಟಕವು ಸ್ಪರ್ಧಾತ್ಮಕವಾಗಿ ತನ್ನ ಸ್ಥಾನ ಬಲಪಡಿಸಿಕೊಳ್ಳಲು ನೆರವಾಗಿವೆ. ರಾಜ್ಯದಲ್ಲಿರುವ ಉದ್ಯಮ ಸ್ನೇಹಿ ಕೈಗಾರಿಕಾ ವಾತಾವರಣ, ಪರಿಣತ ಮಾನವ ಸಂಪನ್ಮೂಲದ ಲಭ್ಯತೆಯನ್ನು ಜಾಗತಿಕ ಉದ್ಯಮಿಗಳು ಮುಕ್ತಕಂಠದಿಂದ ಪ್ರಶಂಸಿಸಿರುವುದು ರಾಜ್ಯ ಸರ್ಕಾರ ಕಾರ್ಯಗತಗೊಳಿಸುತ್ತಿರುವ ದೂರದೃಷ್ಟಿಯ ಕೈಗಾರಿಕಾ ಸ್ನೇಹಿ ಉಪಕ್ರಮಗಳಿಗೆ ನಿದರ್ಶನವಾಗಿದೆʼ ಎಂದು ಸಚಿವರು ಹೇಳಿದ್ದಾರೆ.
ʼಬಂಡವಾಳ ಹೂಡಿಕೆ, ಕೈಗಾರಿಕೆಗಳ ಸ್ಥಾಪನೆ, ವಿಸ್ತರಣಾ ಚಟುವಟಿಕೆಗಳಿಗೆ ಕರ್ನಾಟಕವು ಜಾಗತಿಕವಾಗಿ ಅಚ್ಚುಮೆಚ್ಚಿನ ತಾಣವಾಗಿ ಗಮನ ಸೆಳೆಯುತ್ತಿರುವುದನ್ನು ಮನದಟ್ಟು ಮಾಡಿಕೊಟ್ಟಿರುವೆ. ರಾಜ್ಯ ಸರ್ಕಾರದ ಕೈಗಾರಿಕಾ ಸ್ನೇಹಿ ನೀತಿಗಳನ್ನು ವಿವರಿಸಿ, ರಾಜ್ಯದಲ್ಲಿ ಹೂಡಿಕೆ ಮಾಡಲು ಮನವಿ ಮಾಡಿಕೊಂಡಿದ್ದೇನೆ. ಮರುಬಳಕೆ ಇಂಧನ ವಲಯದ ಆರ್.ಪಿ. ಸಂಜೀವ್ ಗೊಯೆಂಕಾ ಉದ್ಯಮ ಸಮೂಹವು ಮುಂದಿನ 3 ವರ್ಷಗಳಲ್ಲಿ ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ₹10,500 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡಲಿದೆ. ಇದರಿಂದ ರಾಜ್ಯದ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹಾಗೂ ಉತ್ತರ ಕರ್ನಾಟಕದಲ್ಲಿ ಗಮನಾರ್ಹ ಪ್ರಗತಿ ಸಾಧ್ಯವಾಗಲಿದೆ. ಜಾಗತಿಕ ಮದ್ಯ ತಯಾರಿಕಾ ಕಂಪನಿ ಕಾರ್ಲ್ಸ್‌ಬರ್ಗ್ ಗ್ರೂಪ್, ನಂಜನಗೂಡಿನಲ್ಲಿನ ₹ 350 ಕೋಟಿ ವೆಚ್ಚದ ಬಾಟ್ಲಿಂಗ್ ಘಟಕ ಸ್ಥಾಪಿಸುವ ಬದ್ಧತೆ ಪುನರುಚ್ಚರಿಸಿದೆ. ಸ್ನೈಡರ್ ಎಲೆಕ್ಟ್ರಿಕ್, ಐಟಿ ವಹಿವಾಟು ಸೇರಿದಂತೆ ₹ 1,520 ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿದೆ. ಪವನ ವಿದ್ಯುತ್ ಕ್ಷೇತ್ರದಲ್ಲಿ ಬಳಕೆಯಾಗುವ ಟರ್ಬೈನ್ ಬ್ಲೇಡ್ ತಯಾರಿಕೆಯನ್ನು ಕುಷ್ಟಗಿಯಲ್ಲಿ ಈಗಾಗಲೇ ಆರಂಭಿಸಿರುವ ಐನಾಕ್ಸ್ ಜಿಎಫ್‌ಎಲ್ ಕಂಪನಿಯು, ಪವನ ವಿದ್ಯುತ್‌ಗೆ ಬೇಕಾದ ದೈತ್ಯ ಗೋಪುರಗಳು ಮತ್ತು ಸೌರ ಫಲಕ ತಯಾರಿಕೆಗೆ ₹ 400 ಕೋಟಿ ವೆಚ್ಚ ಮಾಡುತ್ತಿದೆ. ಈ ಕಂಪನಿಯು ಈಗಾಗಲೇ ರಾಜ್ಯದಲ್ಲಿ ₹ 10 ಸಾವಿರ ಕೋಟಿ ಹೂಡಿಕೆ ಮಾಡಿದೆ. ಟಿವಿಎಸ್ ಕಂಪನಿಗೆ ಬಿಡಿಭಾಗ ಪೂರೈಸುವ ಮೈಸೂರು ಘಟಕದ ವಿಸ್ತರಣೆಗೆ ಬೆಲ್‌ರೈಸ್ ಇಂಡಸ್ಟ್ರೀಸ್ ₹ 300 ಕೋಟಿ ಹೂಡಿಕೆ ಮಾಡುತ್ತಿದೆʼ ಎಂದು ತಿಳಿಸಿದ್ದಾರೆ.
ʼಸಿಂಗಪುರ ಮೂಲದ ಕಂಪನಿಗಳನ್ನು ರಾಜ್ಯಕ್ಕೆ ಆಕರ್ಷಿಸಲು ʼಸಿಂಗಪುರ ಪಾರ್ಕ್ʼ ಸ್ಥಾಪಿಸುವ ಸಂಬಂಧ, ಸಿಂಗಪುರ ಆರ್ಥಿಕ ಅಭಿವೃದ್ಧಿ ಮಂಡಳಿʼ ಜೊತೆ ಚರ್ಚಿಸಲಾಗಿದೆ. ದೇಶದ ಆಹಾರ ಸಂಸ್ಕರಣಾ ವಲಯದಲ್ಲಿ ಕೋಕಾ ಕೋಲಾ ಹೂಡಿಕೆ ಮಾಡಲಿರುವ ₹ 25,760 ಕೋಟಿ ಬಂಡವಾಳದಲ್ಲಿನ ಗಮನಾರ್ಹ ಮೊತ್ತವನ್ನು ರಾಜ್ಯಕ್ಕೆ ಆಕರ್ಷಿಸಲು ಗರಿಷ್ಠ ಪ್ರಯತ್ನ ಮಾಡಿರುವೆ. ಜಾಗತಿಕ ದೈತ್ಯ ಕಂಪನಿಗಳಾದ ನೋಕಿಯಾ, ಅಮೆರಿಕದ ವಾಸ್ಟ್ ಸ್ಪೇಸ್ ಕಂಪನಿ, ಯುಎಇಯ ಕ್ರೆಸೆಂಟ್ ಎಂಟರ್‌ಪ್ರೈಸಿಸ್, ವೊಯೆಜರ್ ಟೆಕ್ನಾಲಜೀಸ್ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಒಲವು ತೋರಿಸಿವೆ.
ʼಇದುವರೆಗೆ ರಾಜ್ಯದಲ್ಲಿ ಸುಮಾರು ₹ 13,000 ಕೋಟಿ ಮೊತ್ತದ ಹೂಡಿಕೆ ಮಾಡಿರುವ ಭಾರ್ತಿ ಎಂಟರ್‌ಪ್ರೈಸಸ್ ಹೊಸ ಡೇಟಾ ಸೆಂಟರ್ ಸ್ಥಾಪನೆಗೆ ಆಸಕ್ತಿ ತೋರಿಸಿರುವುದರಿಂದ ಡಿಜಿಟಲ್ ಮೂಲಸೌಕರ್ಯಕ್ಕೆ ಇನ್ನಷ್ಟು ಬಲ ಬರಲಿದೆ. ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಫೊರ್ಜಿಂಗ್ ಮತ್ತು ಪ್ರಿಸಿಷನ್ ಎಂಜಿನಿಯರಿಂಗ್ ಕಂಪನಿ ಭಾರತ್ ಫೋರ್ಜ್ ಲಿಮಿಟೆಡ್, ಮಾಹಿತಿ ಪಡೆದುಕೊಂಡಿದೆ. ಫ್ರಾನ್ಸ್ ಮೂಲದ ಮಿಸ್ಟ್ರಾಲ್ ಎಐ, ಬೆಂಗಳೂರಿನಲ್ಲಿ ಹಂತ ಹಂತವಾಗಿ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಉತ್ಸುಕತೆ ತೋರಿಸಿದೆ. ತಂಬಾಕು ಮತ್ತು ನಿಕೋಟಿಕ್ ಉತ್ಪನ್ನಗಳಿಗೆ ಖ್ಯಾತವಾಗಿರುವ ಅಮೆರಿಕ ಮೂಲದ ಫಿಲಿಪ್ ಮಾರಿಸ್ ಕಂಪನಿಯು ರಾಜ್ಯದಲ್ಲಿ ಧೂಮರಹಿತ ಉತ್ಪನ್ನ ತಯಾರಿಸುವ ಇಂಗಿತ ವ್ಯಕ್ತಪಡಿಸಿದೆ.
ʼದೂರಸಂಪರ್ಕ ತಂತ್ರಜ್ಞಾನ ಕ್ಷೇತ್ರದ ಜಾಗತಿಕ ದೈತ್ಯ ಸಂಸ್ಥೆಗಳಲ್ಲಿ ಒಂದಾಗಿರುವ ನೋಕಿಯಾ ಕಾರ್ಪೊರೇಷನ್, ರಾಜ್ಯದಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ) ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಒಲವು ವ್ಯಕ್ತಪಡಿಸಿದೆ. ಬೆಂಗಳೂರು ಆಚೆಗಿನ ನಗರಗಳು ಸ್ವಯಂ ಸುಸ್ಥಿರ ನಗರಗಳಾಗಿ ಬೆಳೆಯುವುದಕ್ಕೆ ರಾಜ್ಯ ಸರ್ಕಾರದ ನೀಡುತ್ತಿರುವ ಆದ್ಯತೆಗೆ ಪೂರಕವಾಗಿ, ರಾಜ್ಯದಲ್ಲಿನ 2ನೆ ಸ್ಥರದ ನಗರಗಳಲ್ಲಿ ವಿಸ್ತರಣೆಗೆ ಟೆಕ್ ಮಹೀಂದ್ರಾ, ಡೇಟಾ ಕೇಂದ್ರಗಳನ್ನು ಸ್ಥಾಪಿಸಲು ಭಾರ್ತಿ ಎಂಟರ್‌ಪ್ರೈಸಸ್ ಮತ್ತು ಸಿಫಿ ಟೆಕ್ನಾಲಜೀಸ್ ಆಸಕ್ತಿ ತೋರಿಸಿವೆʼ ಎಂದು ಸಚಿವರು ತಿಳಿಸಿದ್ದಾರೆ.
ಗಮನ ಸೆಳೆದ ಕ್ವಿನ್ ಸಿಟಿ
ʼಲಂಡನ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಇಂಪೇರಿಯಲ್ ಕಾಲೇಜ್, ದಾಬಸ್‌ಪೇಟೆ-ದೊಡ್ಡಬಳ್ಳಾಪುರ ಮಧ್ಯೆ ತಲೆ ಎತ್ತಲಿರುವ ʼಕ್ವಿನ್ ಸಿಟಿʼಯಲ್ಲಿ ತನ್ನ ಸಂಶೋಧನಾ ಹಾಗೂ ಅಭಿವೃದ್ಧಿ ಕೇಂದ್ರ ಆರಂಭಿಸುವ ಕುರಿತು ಮಾಹಿತಿ ಹಂಚಿಕೊಂಡಿದೆ. ʼಕ್ವಿನ್ ಸಿಟಿʼ ಯೋಜನೆಯ ಭಾಗವಾಗುವ ಬಗ್ಗೆ ಸೈಬರ್ ಸುರಕ್ಷತೆಯ ಜಾಗತಿಕ ಕಂಪನಿ ಕ್ಲೌಡ್‌ಫ್ಲೇರ್ ಕೂಡ ಆಲೋಚನೆ ಹೊಂದಿದೆ.
ʼರಾಜ್ಯ ಸರ್ಕಾರದ ಜೊತೆ ಪಾಲುದಾರಿಕೆಯ ಒಪ್ಪಂದ ಮಾಡಿಕೊಳ್ಳುವುದಕ್ಕೆ ಅಮೆರಿಕದ ವೈಮಾಂತರಿಕ್ಷ ಕಂಪನಿ ವೊಯೆಜರ್ ಟೆಕ್ನಾಲಜೀಸ್, ಬಾಹ್ಯಾಕಾಶ ತಂತ್ರಜ್ಞಾನ ಕಂಪನಿ ವಾಸ್ಟ್ ಸ್ಪೇಸ್ ಕಂಪನಿ ಆಸಕ್ತಿ ವ್ಯಕ್ತಪಡಿಸಿವೆ. ಯುಎಇ ಮೂಲದ ಬಹುರಾಷ್ಟ್ರೀಯ ಉದ್ಯಮ ಸಮೂಹವಾಗಿರುವ ಕ್ರೆಸೆಂಟ್ ಎಂಟರ್‌ಪ್ರೈಸಿಸ್ , ರಾಜ್ಯದ ಉದ್ದಿಮೆ ಹಾಗೂ ಕಂಪನಿಗಳಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿದೆ. ರಾಜ್ಯದಲ್ಲಿನ ಉದ್ದಿಮೆ ಸ್ನೇಹಿ ಹಾಗೂ ನಾವೀನ್ಯತಾ ವ್ಯವಸ್ಥೆಯ ಸದ್ಬಳಕೆ ಮಾಡಿಕೊಳ್ಳಲು ಸ್ವಿಸ್ ಕಂಪನಿಗಳಿಗೆ ಅನುಕೂಲತೆ ಕಲ್ಪಿಸುವ ಉದ್ದೇಶದಿಂದ ತಿಳಿವಳಿಕೆಯ ಒಪ್ಪಂದ ಪತ್ರಕ್ಕೆ (ಎಂಒಯು) ಅಂಕಿತ ಹಾಕಲಾಗಿದೆ. ವಹಿವಾಟು ವಿಸ್ತರಣೆ ಕುರಿತು ರಾಜ್ಯ ಸರ್ಕಾರದ ಜೊತೆ ವಿಸ್ತೃತ ಯೋಜನಾ ಪ್ರಸ್ತಾವ ಹಂಚಿಕೊಳ್ಳುವುದಾಗಿ ನ್ಯಾಚುರಲ್ ಫೈಬರ್ ವೆಲ್ಡಿಂಗ್ (ಎನ್‌ಎಫ್‌ಡಬ್ಲ್ಯು ಅರ್ಥ್) ತಿಳಿಸಿದೆʼ ಎಂದು ಸಚಿವರು ವಿವರಿಸಿದ್ದಾರೆ.
ದ್ವಿಪಕ್ಷೀಯ ವಾಣಿಜ್ಯ ಬಾಂಧವ್ಯ ವೃದ್ಧಿ ಉದ್ದೇಶದಿಂದ ಸಚಿವರು ದೇಶ – ವಿದೇಶಗಳ ಕಾರ್ಪೊರೇಟ್ ದಿಗ್ಗಜರು, ಹೂಡಿಕೆದಾರರು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಮುಖ್ಯಸ್ಥರು ಹಾಗೂ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ಉನ್ನತ ಅಧಿಕಾರಿಗಳ ಜೊತೆ ಫಲಪ್ರದ ಚರ್ಚೆಗಳಲ್ಲಿ ಭಾಗವಹಿಸಿದ್ದರು.



