ಆದಿತ್ಯವಾರದಿಂದ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಶೀರೂರು ಶಕೆ. ಪುತ್ತಿಗೆ ಮಠದ ವಿಶ್ವ ಗೀತಾ ಪರ್ಯಾಯ ಸಮಾರೋಪ

Udupi:

Font size:

ಪರ್ಯಾಯ ಮಹೋತ್ಸವಕ್ಕೆ ಸಜ್ಜುಗೊಂಡಿದೆ ಉಡುಪಿ. ರಥಬೀದಿಯಲ್ಲಿ ದೀಪಾಲಂಕಾರ ನಿರ್ಮಿಸಿದೆ ಹೊಸ ಲೋಕ ಶನಿವಾರದಿಂದ ಶ್ರೀ ಶೀರೂರು ಮಠದ ಪರ್ಯಾಯ ಆರಂಭ.

From Jayaram Udupi

ಉಡುಪಿ ಕೇಂದ್ರ ಸ್ಥಾನವಾಗಿರುವ ಉಡುಪಿ ಜಿಲ್ಲೆಯಲ್ಲಿ ಶ್ರೀ ಕೃಷ್ಣ ದೇವಾಲಯ ಅತ್ಯಂತ ಧಾರ್ಮಿಕ ಮಹತ್ವದ ಸ್ಥಾನವನ್ನು ಹೊಂದಿದೆ. ಯಾವುದೇ ಲಿಖಿತ ಸಂವಿಧಾನ ಇಲ್ಲದೆಯೂ ಬರೇ ನಂಬಿಕೆಯ ಆಧಾರದಲ್ಲಿ ಶ್ರೀಕೃಷ್ಣ ಮಠ ಅಥವಾ ದೇವಾಲಯದ ಪೂಜೆಯ ಅಧಿಕಾರ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ ಅಷ್ಠ ಮಠಗಳ ಯತಿಗಳ ನಡುವೆ ಎರಡು ವರ್ಷಕ್ಕೊಮ್ಮೆ ಹಸ್ತಾಂತರವಾಗುತ್ತದೆ. ಈ ಅಧಿಕಾರ ಅಥವಾ ಜವಾಬ್ದಾರಿ ಹಸ್ತಾಂತರದ ಸಂಭ್ರಮದ ಗಳಿಗೆಗಳೇ ಪರ್ಯಾಯ ಮಹೋತ್ಸವ.

ಅನೇಕ ಸಂಪ್ರದಾಯಗಳ ಸಂಗಮ ಭೂಮಿಯಾದ ಭಾರತದಲ್ಲಿ ಉಡುಪಿ ಜಿಲ್ಲೆಯ ಪರ್ಯಾಯ ಎಂಬುದು ಅಲಿಖಿತ ಸಂಪ್ರದಾಯದ ಸಂಭ್ರಮ. ಮಕರ ಸಂಕ್ರಮಣದ ರಾತ್ರಿಯ ಮೂರು ರಥೋತ್ಸವಗಳ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಂಡ ಭಕ್ತರು ಮರುದಿನ ಚೂರ್ಣೋತ್ಸವ ಅಂದರೆ ಹಗಲು ರಥೋತ್ಸವವನ್ನು ನೋಡಿ ಶ್ರೀ ಕೃಷ್ಣನ ದರ್ಶನ ಪಡೆದು ಧನ್ಯತಾ ಭಾವ ಅನುಭವಿಸಿ ಊರಿಗೆ ಮರಳುತ್ತಾರೆ. ಎರಡು ವರ್ಷಕ್ಕೊಮ್ಮೆ ಚೂರ್ಣೋತ್ಸವ ನಡೆದ ಎರಡೇ ದಿನಗಳ ಬಳಿಕ ಅಂದರೆ ಜನವರಿ ೧೮ರಂದು ಪರ್ಯಾಯ ಸಂಭ್ರಮಕ್ಕೆ ಉಡುಪಿ ಸಾಕ್ಷಿಯಾಗುತ್ತದೆ. ಅಂದಿನ ಮೆರವಣಿಗೆ ಎಂದರೆ ಅದೊಂದು ಜನಸಾಗರವೇ ಪ್ರವಾಹದ ರೀತಿಯಲ್ಲಿ ಸಾಗಿ ಬರುವ ದೃಶ್ಯವಾಗಿರುತ್ತದೆ. ಆಧ್ಯಾತ್ಮಿಕ ಸಾಧನೆಯ ಯತಿಗಳನ್ನು ಜನಸಾಗರ ಸಾಂಪ್ರದಾಯಿಕ ಲೌಕಿಕ ರೀತಿಯಲ್ಲಿ ಮೆರವಣಿಗೆಯಲ್ಲಿ ಕರೆತಂದು ಸಂಭ್ರಮಿಸುತ್ತದೆ.

ಕಾಲಾನುಕ್ರಮದಲ್ಲಿ ಯಾವುದು ಬೇಕಾದರೂ ಬದಲಾಗಬಹುದು, ಆದರೆ ಉಡುಪಿಯ ಪರ್ಯಾಯ ಬದಲಾಗುವುದಿಲ್ಲ. ಭಾರತದ ಸಂಪ್ರದಾಯ ಮತ್ತು ಪರಂಪರೆಯ ಒಂದು ಘಟಕವೇ ಆಗಿರುವ ಪರ್ಯಾಯದಲ್ಲಿ ಅಧಿಕಾರ ತ್ಯಾಗವಿದೆ, ಅಧಿಕಾರ ಹೊಸಬರಿಗೆ ಹಸ್ತಾಂತರವಿದೆ. ಇದು ಅಧ್ಯಾತ್ಮಿಕ ಅಧಿಕಾರ. ಆದ್ದರಿಂದ ಅಧಿಕಾರ ತ್ಯಾಗವೆಂದರೆ ಅಲ್ಲಿ ದುಃಖವಿಲ್ಲ. ಅಧಿಕಾರ ವಹಿಸಿಕೊಂಡವರಿಗೆ ಅದು ಜವಾಬ್ದಾರಿ. ಶ್ರೀ ಕೃಷ್ಣನನ್ನು ಪೂಜಿಸಿದರೆ ಸಾಕು ಎಂದು ನಿರ್ಲಿಪ್ತ ಭಾವ ತಾಳುವಂತಿಲ್ಲ. ಆಧ್ಯಾತ್ಮದ ಜೊತೆ ಲಕ್ಷಾಂತರ ಭಕ್ತರ ಜವಾಬ್ದಾರಿಯೂ ಇದೆ. ಕ್ಷೇತ್ರಕ್ಕೆ ಬೇಟಿ ನೀಡುವ ಭಕ್ತರಿಗೆ ಪ್ರಸಾದ ಉಣಬಡಿಸುವ ಲೌಕಿಕ ಜವಾಬ್ದಾರಿಯೂ ಪರ್ಯಾಯ ಪೀಠಕ್ಕಿದೆ. ಹಿಂದೆ ಇದಕ್ಕಾಗಿ ಸಾಲ ಮಾಡುವ ಪರಿಸ್ಥಿತಿ ಇತ್ತು ಎಂಬುದನ್ನು ಪೇಜಾವರ ಮಠದ ಹಿರಿಯ ಯತಿಗಳಾದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಹೇಳಿದ್ದಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲಿ ಪರ್ಯಾಯ ಪೀಠ ಏರಿದವರೂ ಈ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಅವರು ಆಸೀನರಾಗುವ ಪೀಠದಲ್ಲಿ ಶ್ರೀ ಮಧ್ವಾಚಾರ್ಯರ ಸನ್ನಿಧಾನ ಇರುತ್ತದೆ, ಅವರೇ ಜವಾಬ್ದಾರಿ ನಿಭಾಯಿಸುವ ಶಕ್ತಿಯನ್ನು ಕೊಡುತ್ತಾರೆ ಎಂಬುದು ಅಷ್ಠ ಮಠಗಳ ಯತಿಗಳ ಮತ್ತು ಭಕ್ತರ ಬಲವಾದ ನಂಬಿಕೆ. ಅದಕ್ಕೆ ಅನುಗುಣವಾಗಿ ಸರ್ವಜ್ಞ್ ಪೀಠ ಏರುವ ಯತಿಗಳಿಗೆ ಅಧಿಕಾರ ಹಸ್ತಾಂತರ ಸಮಯದಲ್ಲಿ ನಿರ್ಗಮನ ಪೀಠಾಧೀಶರು ಅಕ್ಷಯ ಪಾತ್ರೆ ಮತ್ತು ಸಟ್ಟುಗವನ್ನು ಶ್ರೀ ಕೃಷ್ಣ ಮಠದ ಕೀಲಿ ಕೈ ಸಹಿತ ಹಸ್ತಾಂತರಿಸುತ್ತಾರೆ. ಅಕ್ಷಯ ಪಾತ್ರೆ ಮತ್ತು ಸಟ್ಟುಗ ಭಕ್ತರಿಗೆ ಪ್ರಸಾದ ಭೋಜನಕ್ಕೆ ಕೊರತೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯ ಸಂಕೇತ.

ಮಠವೊಂದು ತನ್ನ ಭಕ್ತರಿಗೆ ಅನ್ನದಾನ ಮಾಡುವ ಕೈಂಕರ್ಯಕ್ಕೆ ಎಷ್ಟು ಮಹತ್ವ ಕೊಡುತ್ತದೆ ಎನ್ನುವುದಕ್ಕೆ ಸಾಕ್ಷಿ ಇಲ್ಲಿಯ ಕಟ್ಟಿಗೆ ರಥ. ಹಿಂದೆ ಅಡುಗೆಗೆ ಕಟ್ಟಿಗೆಯೇ ಉರುವಲು ಆಗಿದ್ದ ಕಾಲದಲ್ಲಿ ಮಳೆಗಾಲದಲ್ಲಿ ಪ್ರಸಾದ ತಯಾರಿಗೆ ಉರುವಲು ಸಮಸ್ಯೆಯಾಗಬಾರದು ಎಂದು ಕಟ್ಟಿಗೆ ರಥವನ್ನು ನಿರ್ಮಾಣ ಮಾಡುವ ಪರಂಪರೆಯನ್ನು ಉಡುಪಿ ಆರಂಭಿಸಿತು. ಪ್ರತೀ ಪರ್ಯಾಯ ಪೀಠ ಏರುವ ಸ್ವಾಮೀಜಿಗಳಿಗೂ ಕಟ್ಟಿಗೆ ರಥವನ್ನು ನಿರ್ಮಾಣ ಮಾಡುವುದು ಸಾಂಪ್ರದಾಯಿಕ ಕರ್ತವ್ಯದ ಭಾಗವಾಗಿದೆ. ಇಂದು ಕಟ್ಟಿಗೆ ಬಳಸಿ ಅಡುಗೆ ಮಾಡುವ ಕೆಲಸ ಇಲ್ಲ. ಆದುನಿಕ ಉರುವಲು ಲಭ್ಯ ಇದೆಯಾದರೂ ಪರಂಪರೆಯ ಭಾಗವಾಗಿ ಕಟ್ಟಿಗೆ ರಥ ನಿರ್ಮಾಣ ಮುಂದುವರೆದಿದೆ. ಆಡಳಿತ ಎಂಬುದು ಅಧ್ಯಯನ ಶಾಸ್ತ್ರವಾಗಿ ಬೆಳೆಯುವುದಕ್ಕೆ ಎಷ್ಟೋ ವರ್ಷಗಳ ಮೊದಲೇ ಉಡುಪಿ ಶ್ರೀ ಕೃಷ್ಣ ಮಠ ಆಡಳಿತ ನಿರ್ವಹಣೆಗೆ ಒಂದು ಉದಾಹರಣೆಯಾಗಿತ್ತು ಎಂಬುದಕ್ಕೆ ಬಲವಾದ ಪುರಾವೆಗಳಲ್ಲಿ ಒಂದು ಕಟ್ಟಿಗೆ ರಥ.

ಪರ್ಯಾಯ ಮಹೋತ್ಸವದ ಕೇಂದ್ರ ಬಿಂದು ರಥಬೀದಿ ಸಹಿತ ಪ್ರಮುಖ ಬೀದಿಗಳು ರಾತ್ರಿ ಕಾಲದಲ್ಲಿ ಅದ್ಭುತ ದೀಪಾಲಂಕಾರದಿಂದ ಮನಸೆಳೆಯುತ್ತಿವೆ. ಶುಕ್ರವಾರ ರಾತ್ರಿ ಜಾಗರಣೆಗಾಗಿ ಪ್ರಮುಖ ವೃತ್ತಗಳಲ್ಲಿ ರಸಮಂಜರಿ ಸಹಿತ ವಿವಿಧ ವಿನೋದಾವಳಿ ಕಾರ್ಯಕ್ರಮಗಳನ್ನು ಸಂಘ ಸಂಸ್ಥೆಗಳು ಹಮ್ಮಿಕೊಂಡಿವೆ. ಖ್ಯಾತ ನಾಮ ಕಲಾವಿದರು ಇದರಲ್ಲಿ ಭಾಗವಹಿತ್ತಿದ್ದಾರೆ. ಪರ್ಯಾಯೋತ್ಸವಕ್ಕಾಗಿ ಸಂಚಾರ ಮಾರ್ಗಗಳಲ್ಲಿ ಬದಲಾವಣೆಗಳನ್ನು ತರಲಾಗಿದೆ. ಭದ್ರತೆಯನ್ನು ಹೆಚ್ಚಿಸಲಾಗಿದೆ.

-
ಜನವರಿ ೧೮ರಂದು ಶ್ರೀ ಶೀರೂರು ಮಠಾಧೀಶರನ್ನು ಸಂಪ್ರದಾಯಬದ್ಧವಾಗಿ ಪರ್ಯಾಯ ಪೀಠದಲ್ಲಿ ಕುಳ್ಳಿರಿಸಿ ಶ್ರೀಕೃಷ್ಣ ಪೂಜಾಧಿಕಾರ ಹಸ್ತಾಂತರಿಸಿ ನಿರ್ಗಮಿಸಲಿರುವ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ತಮ್ಮ ಅನೇಕ ಹೊಸ ಚಿಂತನೆಗಳ ಮೂಲಕ ಶ್ರೀ ಕೃಷ್ಣ ಸಂದೇಶವನ್ನು ವಿದೇಶಗಳಲ್ಲಿ ಸಾರಿದವರು. ನಾಲ್ಕನೇ ಬಾರಿ ಪರ್ಯಾಯ ಪೀಠ ಏರಿ ನಾಲ್ಕು ದ್ವೈವಾರ್ಷಿಕ ಪರ್ಯಾಯಗಳನ್ನು ಯಶಸ್ವಿಯಾಗಿ ಪೂರೈಸಿದ ತೃಪ್ತಿ ಅವರದ್ದು. ಅವರ ಪರ್ಯಾಯ ಅವಧಿಯಲ್ಲಿ ಶ್ರೀ ಕೃಷ್ಣನನ್ನು ವಿವಿಧ ರೀತಿಯಲ್ಲಿ ಶೃಂಗರಿಸಿ ಭಕ್ತರ ಮನದಲ್ಲಿ ವಿವಿಧ ರೂಪಗಳ ಶ್ರೀಕೃಷ್ಣನ ಪಡಿಯಚ್ಚು ಶಾಶ್ವತವಾಗಿ ನೆಲೆಸುವಂತೆ ಮಾಡಿದವರು ಅವರ ಶಿಷ್ಯರಾದ ಶ್ರೀ ಸುಶ್ರೀಂದ್ರ ತೀರ್ಥರು. ಶ್ರೀ ಕೃಷ್ಣನ ಬಹಳ ಅಪೂರ್ವವಾದ ಅಲಂಕಾರ ಸೇವೆಯನ್ನು ಅವರು ಅತ್ಯುಚ್ಛ ಮಟ್ಟದಲ್ಲಿ ನಿರ್ವಹಿಸಿದ್ದಾರೆ. ಭಕ್ತರು ಕೂಡಾ ಶ್ರೀಕೃಷ್ಣನನ್ನು ವಿವಿಧ ರೂಪಗಳಲ್ಲಿ, ಅವತಾರಗಳಲ್ಲಿ ನೋಡಿ ಆನಂದಿಸಿದ್ದಾರೆ.

ವಿದೇಶಗಳಲ್ಲಿ ತಮ್ಮ ಮಠಗಳನ್ನು ಸ್ಥಾಪಿಸಿರುವ ಪುತ್ತಿಗೆ ಸ್ವಾಮೀಜಿಯವರು ತಮ್ಮ ಈ ಬಾರಿಯ ಪರ್ಯಾಯವನ್ನು ವಿಶ್ವ ಗೀತಾ ಪರ್ಯಾಯ ಎಂದು ಕರೆದಿದ್ದರು. ಅವರ ಮಹತ್ವಾಕಾಂಕ್ಷೆಯ ಲಕ್ಷ ಕಂಠ ಗೀತಾ ಗಾಯನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದ್ದರು. ಪುತ್ತಿಗೆ ಮಠಾಧೀಶರಿಂದ ಭಾರತ ಭಾಗ್ಯವಿಧಾತ ಗೌರವವನ್ನು ಸ್ವೀಕರಿಸಿದ್ದರು.

ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಸನ್ಯಾಸ ಸ್ವೀಕರಿಸಿ ಸುವರ್ಣ ಸಂವತ್ಸರ ಪೂರೈಸಿದ ಸ್ಮರಣೆಗಾಗಿ ಶ್ರೀ ಕೃಷ್ಣನಿಗೆ ಪಾರ್ಥ ಸಾರಥಿ ಸುವರ್ಣ ರಥವನ್ನು 20 ಕೋಟಿ ರೂಪಾಯಿ ವೆಚ್ಚದಲ್ಲಿ ಅರ್ಪಿಸಿದ್ದಾರೆ. ಪರ್ಯಾಯ ಸಂದರ್ಭದಲ್ಲಿ ಪೂಜಾಧಿಕಾರ ಹಸ್ತಾಂತರಕ್ಕೆ ಸಾಕ್ಷಿಯಾಗುವ ಸರ್ವಜ್ಞ್ ಪೀಠಕ್ಕೆ ಸುವರ್ಣ ಕವಚ ಹೊದೆಸಿದ್ದಾರೆ.

ಪುತ್ತಿಗೆ ಪರ್ಯಾಯ ಅವಧಿಯಲ್ಲಿ ಕನಕನ ಕಿಂಡಿಗೆ ಪ್ರಮೋದ್ ಮಧ್ವರಾಜ್ ಅವರು ಸೇವಾ ರೂಪದಲ್ಲಿ ಸುವರ್ಣ ಹೊದಿಕೆ ಹೊದಿಸಿ ದೇವರಿಗೆ ಸಮರ್ಪಿಸಿದ್ದಾರೆ. ಲಕ್ಷ್ಮೀನಾರಾಯಣನ್ ಎಂಬ ಭಕ್ತರು ೨ ಕೋಟಿ ರೂಪಾಯಿ ವೆಚ್ಚದಲ್ಲಿ ೭೦ ಸುವರ್ಣ ಹಾಳೆಗಳಲ್ಲಿ ೭೦೦ ಶ್ಲೋಕಗಳನ್ನು ಬರೆಸಿ ಶ್ರೀ ಕೃಷ್ಣನಿಗೆ ಅರ್ಪಿಸಿದ್ದಾರೆ. ಭಗವದ್ಗೀತೆಯ ಬಗ್ಗೆ ವ್ಯಾಪಕ ಚಿಂತನ-ಮಂಥನ ಜೊತೆಗೆ ಅರಿವು ಮೂಡಿಸುವಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶರು ಕೈಗೊಂಡ ಕೋಟಿ ಗೀತಾ ಲೇಖನ ಯಜ್ಞ್ ಪ್ರಮುಖ ಪಾತ್ರವಹಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಗೀತೆಯ ಸಾರ ಅನೇಕರಿಗೆ ಜೀವನದ ಬಿಕ್ಕಟ್ಟುಗಳನ್ನು ಎದುರಿಸುವ ಧೈರ್ಯ ನೀಡಿದೆ.

ಈ ಹಿಂದಿನ ಪರ್ಯಾಯಗಳ ಸಮಯದಲ್ಲಿ ಪುತ್ತಿಗೆ ಸ್ವಾಮಿಗಳ ವಿಷಯದಲ್ಲಿ ಇದ್ದ ಸಮುದ್ರೋಲ್ಲಂಘನೆಯ ಆರೋಪ ಮುನ್ನೆಲೆಯಲ್ಲಿ ಪ್ರಸ್ತಾಪವಾಗುತ್ತಿತ್ತು. ನಿಷೇಧವನ್ನು ಮುರಿದಿದ್ದಾರೆ ಎಂಬ ಸಾಂಪ್ರದಾಯಿಕ ಎದುರಾಳಿಗಳ ಅಸಮಾಧಾನ, ವಿರೋಧ ಈ ಬಾರಿ ಹಿನ್ನೆಲೆಗೆ ಸರಿದಿದೆ. ಅವರನ್ನು ತಾತ್ವಿಕ ಕಾರಣಕ್ಕಾಗಿ ವಿರೋಧಿಸುತ್ತಿದ್ದ ಸಂಪ್ರದಾಯನಿಷ್ಠರೂ ಈ ಬಾರಿ ಸ್ವಾಮೀಜಿ ಅವರ ಚಿಂತನಾಕ್ರಮವನ್ನು ಬೆಂಬಲಿಸಿದ್ದಾರೆ. ವಿಶಾಲ ಭಕ್ತ ಸಮೂಹವನ್ನು ಗಮನದಲ್ಲಿಟ್ಟುಕೊಂಡು ಸ್ವಾಮೀಜಿ ಕೈಗೊಂಡ ಗೀತಾ ಯಜ್ಞ್ ದ ಚಿಂತನೆ ದೇಶಾದ್ಯಂತ ಉಡುಪಿಯ ಹೆಸರನ್ನು ಜನಪ್ರಿಯಗೊಳಿಸಿದೆ. ಇಲ್ಲಿಯ ಧಾರ್ಮಿಕ ಪ್ರವಾಸೋದ್ಯಮಕ್ಕೆ ಕಸುವು ತಂದಿದೆ.

ಸಂತ ಸಮಾವೇಶ, ಅಂಚೆ ಚೀಟಿ ಪ್ರದರ್ಶನ, ಹಲಸು-ಮಾವು ಮೇಳ, ದೇಶೀಯ ಉತ್ಪನ್ನ ಮಾರಾಟಕ್ಕೆ ಭಾರತ್ ಮೇಳ, ಶ್ರೀ ಕೃಷ್ಣನಿಗೆ ೪೮ ದಿನಗಳ ಶ್ರೀ ಕೃಷ್ಣ ಮಂಡಲೋತ್ಸವ ಸಹಿತ ವೈವಿದ್ಯಮಯ ಕಾರ್ಯಕ್ರಮಗಳು ಪುತ್ತಿಗೆ ಪರ್ಯಾಯದಲ್ಲಿ ನಡೆದಿವೆ. ನೂರಾರು ಮಂದಿ ಸಾಧಕರನ್ನು ಗುರುತಿಸಿ ಗೌರವಿಸಿದ ಕಾರ್ಯಗಳು ಸಮಾಜ ಮತ್ತು ಮಠವನ್ನು ಇನ್ನಷ್ಟು ನಿಕಟವಾಗಿಸಿವೆ.

ನಿರ್ಗಮನ ಪರ್ಯಾಯ ಪೀಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥರಿಗೆ ಈಗ ೭೦ರ ಹರೆಯ. ಅವರು ಸನ್ಯಾಸ ಸ್ವೀಕರಿಸುವಾಗ ವಯಸ್ಸು ೧೧ ವರ್ಷ. ಮೊದಲ ಪರ್ಯಾಯ ನಡೆಸುವಾಗ ವಯಸ್ಸು ೧೩ ವರ್ಷ. ಜನವರಿ ಹದಿನೆಂಟರ ಮುಂಜಾವದಲ್ಲಿ ಪುತ್ತಿಗೆ ಮಠಾಧೀಶರಿಂದ ಪರ್ಯಾಯ ಪೂಜಾಧಿಕಾರ ಸ್ವೀಕರಿಸಲಿರುವ ಶೀರೂರು ಮಠಾಧೀಶರಿಗೆ ೨೦ರ ಹರೆಯ.

ಪರ್ಯಾಯ ಪೀಠದ ಹೊಣೆಗಾರಿಕೆ ಪೂರೈಸಿದ ಬಳಿಕ ಶ್ರೀ ಸುಗುಣೇಂದ್ರ ತೀರ್ಥರು ಮತ್ತೆ ವಿಶ್ವಸಂಚಾರಕ್ಕೆ ಅಣಿಯಾಗಲಿದ್ದಾರೆ. ಶ್ರೀ ಕೃಷ್ಣ ಸಂದೇಶ ಜಗತ್ತಿನಾದ್ಯಂತ ಸಾರುವ ತಮ್ಮ ಬದ್ಧತೆಯನ್ನು ಮುಂದುವರೆಸಲಿದ್ದಾರೆ.

Prev Post ಮೋದಿ ಹಾಗು ಫಡ್ನವಿಸ್ ಅವರ ಡಬಲ್ ಎಂಜಿನ್ ಸರ್ಕಾರಗಳು ಅನುಸರಿಸಿದ ಅಭಿವೃದ್ಧಿ, ಆರ್ಥಿಕ ಬೆಳವಣಿಗೆ ಹಾಗು ಸಾಂಸ್ಕೃತಿಕ ಪುನರುತ್ಥಾನದ ರಾಜಕಾರಣಕ್ಕೆ ಜನರಿಂದ ದೊರೆತಿರುವುದು ಸ್ಪಷ್ಟವಾದ ಹಾಗು ಸಕಾರಾತ್ಮಕ ಆದೇಶ”;ಮುಂಬೈ ಚುನಾವಣೆಯ ಕುರಿತು ವಿಜಯೇಂದ್ರ ಅವರ ಪ್ರತಿಕ್ರಿಯೆ
Next Post ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆಗೆ ಐದು ವರ್ಷಗಳಲ್ಲಿ 4000 ಕೋಟಿ ವೆಚ್ಚ ಮಾಡುವ ಗುರಿ : ಮುಖ್ಯಮಂತ್ರಿ ಸಿದ್ದರಾಮಯ್ಯ