ದ್ವೇಷ ಭಾಷಣ ಮಸೂದೆ ಜನರನ್ನು ಭಯಗೊಳಿಸುತ್ತದೆ: ಹೊದಿಗೆರೆ ಆಕ್ಷೇಪ.
From Jayaram Udupi
ದ್ವೇಷ ಭಾಷಣ ಮಸೂದೆ ಜನರನ್ನು ಭಯಗೊಳಿಸುತ್ತದೆ: ಹೊದಿಗೆರೆ ಆಕ್ಷೇಪ.
ಮಂಗಳೂರು:
ರಾಜ್ಯದ ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿ ಮತ್ತು ರಾಜ್ಯದ ಜನರನ್ನು ಭಯಗೊಸಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ದ್ವೇಷ ಭಾಷಣ ಮಸೂದೆ ತರಲು ಉದ್ದೇಶಿಸಿದೆ ಎಂದು ಬಿಜೆಪಿ ರಾಜ್ಯ ವಕ್ತಾರೆ ಸುರಭಿ ಹೊದಿಗೆರೆ ಆರೋಪಿಸಿದ್ದಾರೆ.
ಅವರು ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ದ್ವೇಷ ಭಾಷಣ ಮಸೂದೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಭಾರೀ ಧಕ್ಕೆ ತರುತ್ತದೆ , ಈ ಮಸೂದೆಯನ್ನು ಸೂಕ್ತ ಚಿಂತನೆ, ಸಮಾಲೋಚನೆ ಹಾಗೂ ತಜ್ಞರ ಸಲಹೆ ಇಲ್ಲದೆ, ಏಕಪಕ್ಷೀಯವಾಗಿ ರೂಪಿಸಿ ಚರ್ಚೆಗಳನ್ನು ನಡೆಸದೆ ಜಾರಿಗೆ ತರಲಾಗಿದೆ ಎಂದಾರೋಪಿಸಿದರು.
"ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಅತ್ಯಂತ ಗಂಭೀರ ವಿಷಯದ ಬಗ್ಗೆ ಮಸೂದೆ ತರಬೇಕಾದರೆ ಸಾಕಷ್ಟು ಚರ್ಚೆ ನಡೆಸಬೇಕು .ಆದರೆ ಇಲ್ಲಿ ಯಾರೊಂದಿಗೆ ಸಮಾಲೋಚನೆ ಮಾಡಿಲ್ಲ. ದ್ವೇಷ ಭಾಷಣ ಮತ್ತು ಅಪರಾಧ ಎರಡನ್ನೂ ಒಂದೇ ಎಂದು ಪರಿಗಣಿಸಲಾಗುತ್ತಿದೆ. ಮಸೂದೆಯ ವ್ಯಾಖ್ಯಾನವೇ ಸರಿಯಾಗಿಲ್ಲ ಇದು ಭಾವನಾತ್ಮಕವಾಗಿ ರೂಪಿಸಿದ ಮಸೂದೆ .
ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿಲ್ಲ" ಎಂದು ಸರಕಾರದ ನಡೆಯನ್ನು ವ್ಯಂಗ ಮಾಡಿದರು .
ಈಗಾಗಲೇ ಭಾರತೀಯ ನ್ಯಾಯ ಸಂಹಿತೆ ಅಸ್ತಿತ್ವದಲ್ಲಿರುವಾಗ, ಹೆಚ್ಚುವರಿಯಾಗಿ ಹೊಸ ಮಸೂದೆ ತರಬೇಕಾದ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ ಅವರು, 'ದ್ವೇಷ ಭಾಷಣ ಮಾಡುವ ಶಂಕೆಯ ಆಧಾರದ ಮೇಲೆ ಮುಂಚಿತವಾಗಿ ಬಂಧಿಸುವ ಉದ್ದೇಶ ಈ ಮಸೂದೆಯಲ್ಲಿ ಅಡಗಿದೆ. ಇದು ಭಾರೀ ದುರುಪಯೋಗಕ್ಕೆ ಕಾರಣವಾಗಲಿದೆ" ಎಂದು ಹೇಳಿದರು.
ಈ ಮಸೂದೆಯಿಂದ ಇಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಮಾಧ್ಯಮ ಹಾಗೂ ವಿವಿಧ ಸಂಘಟನೆಗಳು ಗುರಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ ಸುರಭಿ ಹೊದಿಗೆರೆ, "ಈ ಮಸೂದೆ ಸಂಸ್ಥೆಗಳನ್ನೇ ಗುರಿಯಾಗಿಸಿಕೊಂಡು ರೂಪಿಸಲಾಗಿದೆ. ಕಾಂಗ್ರೆಸ್ ನಾಯಕರ ಪದಪ್ರಯೋಗಗಳನ್ನು ರಾಜ್ಯ ಈಗಾಗಲೇ ಕಂಡಿದೆ. ಬಳ್ಳಾರಿ ಶಾಸಕರ ಪದ ಬಳಕೆ ಮಹಿಳೆಯಾಗಿ ಕೇಳಲು ಸಹ ಮುಜುಗರವಾಗುವಂತಹದ್ದು. ಆದರೆ ಸರ್ಕಾರದ ದ್ವೇಷ ಭಾಷಣ ಮಸೂದೆ ಕಾಂಗ್ರೆಸ್ ನಾಯಕರಿಗೆ ಅನ್ವಯವಾಗುವುದಿಲ್ಲ. ಇದು ಸಂಪೂರ್ಣವಾಗಿ ಬಿಜೆಪಿಯನ್ನು ಗುರಿಯಾಗಿಸಿಕೊಂಡು ತರಲಾದ ಮಸೂದೆ" ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರರಾದ ಅರುಣ್ ಶೆಟ್ಟಿ ಮಾಧವ ಮೋರೆ, ಮಾಧ್ಯಮ ಸಂಚಾಲಕ ವಸಂತ್ ಪೂಜಾರಿ ಹಾಗೂ ಮಾಧ್ಯಮ ಸಹ ಸಂಚಾಲಕ ಹೇಮಂತ್ ಶೆಟ್ಟಿ ಉಪಸ್ಥಿತರಿದ್ದರು.





