ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಪೂರ್ಣ ಸಹಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Mangalore:

Font size:

* ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶದಲ್ಲಿ ಸಚಿವರ ಭರವಸೆ

ಮಂಗಳೂರು: ಹೊರ ರಾಜ್ಯ, ‌ಹೊಸ ದೇಶಗಳಲ್ಲೂ ಉದ್ಯಮ ಸ್ಥಾಪಿಸಿರುವ ಕರಾವಳಿ ಭಾಗದ ಉದ್ಯಮಿಗಳು ತವರಿನತ್ತ ಮುಖ ಮಾಡುತ್ತಿದ್ದು, ಅವರಿಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ‌ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದರು.

ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತಗಳ ಸಹಯೋಗದಲ್ಲಿ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಮುಂದಿನ ದಿನಗಳಲ್ಲಿ ಕರಾವಳಿ ಜಿಲ್ಲೆಗಳು ಇಡೀ ವಿಶ್ವದಲ್ಲೆ ಗಮನ ಸೆಳೆಯಲಿವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕರಾವಳಿ ಅಭಿವೃದ್ಧಿಗೆ ಪಣತೊಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,‌ ಅಧಿಕಾರಿ ವರ್ಗದವರಿಗೆ ಅಭಿನಂದನೆ ಹೇಳಲು ಬಯಸುವೆ. ಮುಂದೆ ಇತಿಹಾಸ ಸೃಷ್ಟಿಸಲು ಇದು ಉತ್ತಮ ವೇದಿಕೆಯಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಸರ್ಕಾರದ ಒಂದು ಕರೆಗೆ ಮೂರು ಜಿಲ್ಲೆಗಳ ಉದ್ಯಮಿಗಳು ಬಂದು ಸೇರಿದ್ದಾರೆ. ಇದು ಜನ್ಮ ಭೂಮಿ ಮೇಲೆ ಉದ್ಯಮಿಗಳು ಇಟ್ಟಿರುವ ಪ್ರೀತಿ ತೋರುತ್ತದೆ. ಎಲ್ಲಿಯ ಬೆಳಗಾವಿ ಎಲ್ಲಿಯ ಉಡುಪಿ, ನಾನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಬಂದೆ. ಇಂದು ಉಡುಪಿ ಜಿಲ್ಲೆ ಮೇಲೆ ವಿಶೇಷ ಅಭಿಮಾನ ನನ್ನಲ್ಲಿ ಮೂಡಿದೆ ಎಂದರು‌.

ಪ್ರವಾಸೋದ್ಯಮ ಹಾಗೂ ವಿದ್ಯಾಭ್ಯಾಸದ ದೃಷ್ಟಿಯಿಂದ ಉತ್ತರ ಕರ್ನಾಟಕದ ಬಹುತೇಕ ಮಂದಿ ಕರಾವಳಿ ಕಡೆ ಬರುತ್ತಿದ್ದಾರೆ. ಪ್ರವಾಸೋದ್ಯಮಕ್ಕೆ ಅಡ್ಡಿಯಾಗಿರುವ ಸಿಆರ್ ಝೆಡ್ ಕ್ಲಿಯರ್ ಮಾಡಲು ನಮ್ಮ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಈ ಮೂರು ಜಿಲ್ಲೆಗಳನ್ನು ಬೆಳೆಸೋಣ, ಕರ್ನಾಟಕ ರಾಜ್ಯಕ್ಕೆ ಅತಿ ಹೆಚ್ಚು ಆರ್ಥಿಕ ಶಕ್ತಿ ಸಿಗುವಂತೆ ಮಾಡೋಣ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಈ ವೇಳೆ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಪ್ರವಾಸೋದ್ಯಮ ಇಲಾಖೆ ಸಚಿವರಾದ ಎಚ್.ಕೆ. ಪಾಟೀಲ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ, ಶಾಸಕರಾದ ಸತೀಶ್ ಸೈಲ್, ಗುರ್ಮೆ ಸುರೇಶ್ ಶೆಟ್ಟಿ, ರಾಜೇಗೌಡ, ಭೀಮಾ ನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಐವಾನ್ ಡಿಸೋಜ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹಮದ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್, ನಿಗಮ ಮಂಡಳಿಗಳ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Prev Post ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಕಾಂಗ್ರೆಸ್ ಪಕ್ಷ ಅಪಪ್ರಚಾರ ನಡೆಸುತ್ತಿದೆ ಎಂದು ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
Next Post ಪೂಪಾಡಿಕಲ್ಲು ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭ/ಚರುಮುರಿ ಸ್ಟಾಲ್ ಬಳಿ ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿದ ಪ್ರಕರಣ/ರಸ್ತೆಗೆ ದನ ಬಿಟ್ಟವರ ಮೇಲೆ ಕೇಸು