ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಕಾಂಗ್ರೆಸ್ ಪಕ್ಷ ಅಪಪ್ರಚಾರ ನಡೆಸುತ್ತಿದೆ ಎಂದು ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
From Jayaram Udupi
ಮಂಗಳೂರು:
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರ ಭಾವಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ಧ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಈ ಸರ್ಕಾರದಲ್ಲಿ ಶಾಸಕರಿಗೇ ಭದ್ರತೆ ಇಲ್ಲ. ಇನ್ನು ಜನಸಾಮಾನ್ಯರ ಗತಿ ಏನು? ಕೇವಲ ಬಿಜೆಪಿ ಶಾಸಕರ ಮೇಲೆ, ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಲಾಗಿದೆ. ಕೂಡಲೇ ಪೋಸ್ಟ್ ಹಾಕಿದವನ ಮೇಲೆ ಕೇಸ್ ದಾಖಲಿಸಬೇಕು ಎಂದರು.
ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಅಂಬೇಡ್ಕರ್ ಕಾಲದಿಂದಲೂ ಕಾಂಗ್ರೆಸ್ ದಲಿತರಿಗೆ ಅವಮಾನ ಮಾಡುತ್ತಲೇ ಬಂದಿದೆ. ಈಗ ದಲಿತ ಸಮುದಾಯದ ಶಾಸಕಿಯೊಬ್ಬರಿಗೆ ಅವಮಾನ ಮಾಡುವ ಮೂಲಕ ಅದು ಮುಂದುವರಿದಿದೆ ಎಂದರು. ಸುಲೋಚನಾ ಭಟ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಎರಡು ಸಾವಿರ ರೂಪಾಯಿ ಮೊತ್ತ ನಮಗೆ ಅಗತ್ಯವಿಲ್ಲ, ನ್ಯಾಯ ಬೇಕು ಎಂದರು.
ಶಾಸಕವೇದವ್ಯಾಸಕಾಮತ್ ಮಾತನಾಡಿ, ಇದು ಕೇವಲ ಒಬ್ಬ ದಲಿತ ಸಹೋದರಿಗಾದ ಅವಮಾನವಲ್ಲ, ಈದೇಶದ ಮಹಿಳೆಯೊಬ್ಬರ ಘನತೆ ಹಾಗೂ ಗೌರವದ ಮೇಲಿನ ನೇರ ದಾಳಿಯಾಗಿದೆ. ಆ ದುಷ್ಟನಿಗೆ ನನ್ನ ಸರ್ಕಾರ ಇರುವ ತನಕ ಪೊಲೀಸರು ಏನೂ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ಇದೆ. ಪೊಲೀಸರು ಇಂತವರ ವಿರುದ್ಧ ಕಾನೂನಿನ ತಾಕತ್ತನ್ನು ಪ್ರದರ್ಶಿಸಬೇಕು. ಹುಬ್ಬಳ್ಳಿಯಲ್ಲಿ ನಮ್ಮ ಪಕ್ಷದ ಮಹಿಳಾ ದಲಿತ ಕಾರ್ಯಕರ್ತೆಯ ಮೇಲೆ ದೌರ್ಜನ್ಯ ಎಸಗಲಾಗಿದೆ. ಮಹಿಳೆಯರಿಗೆ ಕೇವಲ 2 ಸಾವಿರ ಮಾತ್ರವಲ್ಲ, ಅದರ ಜೊತೆಗೆ ಗೌರವ, ಸುರಕ್ಷತೆಯೂ ಬೇಕು ಎಂಬುದನ್ನು ಸರ್ಕಾರ ನೆನಪಿಡಲಿ. ಈ ಅಧಿಕಾರ ಶಾಶ್ವತವಲ್ಲ, ನಿಮ್ಮೆಲ್ಲ ಪಾಪ ಕಾರ್ಯಕ್ಕೆ ಕೆಲವೇ ವರ್ಷಗಳಲ್ಲಿ ಪ್ರತಿಫಲ ಸಿಗಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಕಿಶೋರ್‌ಕುಮಾರ್ ಪುತ್ತೂರು, ಪ್ರೇಮಾನಂದ ಶೆಟ್ಟಿ, ಮೋನಪ್ಪ ಭಂಡಾರಿ, ಸಂಜೀವ ಮಠಂದೂರು, ಬಾಲಕೃಷ್ಣ ಭಟ್, ಪೂರ್ಣಿಮಾ, ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಪ್ರವೀಣ್ , ವಸಂತ ಪೂಜಾರಿ ಮತ್ತಿತರರಿದ್ದರು.
ಮಂಗಳೂರು:
ಕರಾವಳಿ ಪ್ರವಾಸೋದ್ಯಮಕ್ಕೆ ತೊಡಕಾಗಿರುವ ಸಮಸ್ಯೆಗಳನ್ನು ಕಾನೂನುಬದ್ಧವಾಗಿ ಪರಿಹರಿಸಿ, ಹೊಸ ಹಾಗೂ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನು ರೂಪಿಸುವ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ .
ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಕರಾವಳಿಯ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಪಾಲುದಾರರನ್ನು ಒಳಗೊಂಡ ಕಾರ್ಯಯೋಜನೆಯನ್ನು ರೂಪಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಕರಾವಳಿ ಪ್ರದೇಶವೆಂದರೆ ಸೌಂದರ್ಯ, ಜ್ಞಾನ ಮತ್ತು ಸಂಪತ್ತಿನ ನೆಲೆ ಎಂದು ಹೇಳಿದ ಡಿಕೆಶಿ, "ಇಷ್ಟೊಂದು ಸಾಮರ್ಥ್ಯ ಇದ್ದರೂ ಕರಾವಳಿ ಪ್ರದೇಶ ಏಕೆ ಹಿಂದುಳಿದಿದೆ ಎಂಬುದು ಅರ್ಥವಾಗುವುದಿಲ್ಲ. ಕೊಡಗು ಸೇರಿ ಸುಮಾರು 300 ಕಿಲೋಮೀಟರ್ ಉದ್ದದ ಕರಾವಳಿ ಇತಿಹಾಸವನ್ನು ನೋಡಿದರೆ, ಇಲ್ಲಿನ ಹಿರಿಯರು ರಾಷ್ಟ್ರಕ್ಕೆ ಬ್ಯಾಂಕಿಂಗ್ ವ್ಯವಸ್ಥೆ ಶಿಸ್ತು ಮತ್ತು ಶಿಕ್ಷಣದ ಪರಂಪರೆಯನ್ನು ನೀಡಿದ್ದಾರೆ. ಇದು ಶಿಕ್ಷಣದ ಹಬ್ ಆಗಿದ್ದು, ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಪಿಯು ಶಿಕ್ಷಣದ ಮೂಲಕ ಮಾನವ ಸಂಪನ್ಮೂಲವನ್ನು ಸೃಷ್ಟಿಸುತ್ತಿದೆ. ಇಂತಹ ವ್ಯವಸ್ಥೆ ರಾಜ್ಯದ ಬೇರೆ ಯಾವುದೇ ಜಿಲ್ಲೆಗಳಲ್ಲಿ ಕಾಣುವುದಿಲ್ಲ” ಎಂದರು.
ಪ್ರವಾಸೋದ್ಯಮ ಸಮಾವೇಶ 2026' ರಲ್ಲಿ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್, ಸಚಿವರಾದ ದಿನೇಶ್ ಗುಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ರಾಜೇಗೌಡ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು:
ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಕಾಂಗ್ರೆಸ್ ಪಕ್ಷ ಅಪಪ್ರಚಾರ ನಡೆಸುತ್ತಿದೆ ಎಂದು ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2006ರಿಂದ ಗ್ರಾಮೀಣ ಭಾಗಗಳಲ್ಲಿ ಅಭಿವೃದ್ಧಿಯ ಆದ್ಯತೆಗಳು ಬದಲಾಗಿವೆ. ವಿಕಸಿತ್ ಭಾರತ್ ಯೋಜನೆಯ ಭಾಗವಾಗಿ ಜಾರಿಯಲ್ಲಿರುವ ಜಿ.ರಾಮ್ ಜಿ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಬಡವರಿಗೆ ಹಿಂದಿನ 100 ದಿನಗಳ ಬದಲಾಗಿ ಈಗ 125 ದಿನಗಳ ಉದ್ಯೋಗಾವಕಾಶ ಒದಗಿಸಲಾಗುತ್ತಿದೆ' ಎಂದು ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನವನ್ನು ಗ್ರಾಮ ಪಂಚಾಯತ್‌ಗಳ ಮೂಲಕ ನಡೆಸಲಾಗುತ್ತಿದ್ದು, ಜಲಸಂರಕ್ಷಣೆ, ಗ್ರಾಮದ ಮೂಲ ಅವಶ್ಯಕತೆಗಳ ಪೂರೈಕೆ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಯೋಜನೆಯನ್ನು ವಿಂಗಡಿಸಲಾಗಿದೆ ಎಂದು ಕಾಗೇರಿ ವಿವರಿಸಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ದೇಶಾದ್ಯಂತ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಕರ್ನಾಟಕದಲ್ಲೂ ನಡೆದಿರುವ ಭ್ರಷ್ಟಾಚಾರದ ಕುರಿತು ಸಮರ್ಪಕ ತನಿಖೆ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ಕಾಯ್ದೆಯ ಮೂಲಕ ಯೋಜನೆಯನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ" ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದ ಅನೇಕ ಜನಪರ ಯೋಜನೆಗಳು ಜನರಿಗೆ ತಲುಪದಂತೆ ಕಾಂಗ್ರೆಸ್ ಅಡ್ಡಿಪಡಿಸಿದೆ ಎಂದು ಆರೋಪಿಸಿದ ಕಾಗೇರಿ, "ಕಾಂಗ್ರೆಸ್‌ಗೆ ಬಡತನ ನಿರ್ಮೂಲನೆ ಮಾಡುವ ನಿಜವಾದ ಇಚ್ಛಾಶಕ್ತಿ ಇಲ್ಲ. ಹೀಗಾಗಿ ಉದ್ಯೋಗ ಖಾತ್ರಿ ಯೋಜನೆಯ ವಿರುದ್ಧ ಅವಪ್ರಚಾರ ನಡೆಸುತ್ತಿದೆ. ಇದು ಕಾಂಗ್ರೆಸ್‌ನ ಹತಾಶೆಯ ಪ್ರತಿಫಲ" ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ., ಜಿಲ್ಲಾ ಸಂಸದರಾದ ಕ್ಯಾ ಬೃಜೇಶ್ ಚೌಟ , ಶಾಸಕರಾದ ವೇದವ್ಯಾಸ್ ಕಾಮತ್ , ಬಿಜೆಪಿ ಮುಖಂಡರು ಉಪಸ್ಥಿತರಿದ್ದರು .






