ಪೂರ್ಣಾವಧಿ ಪೂರೈಸೋ ಸಿಎಂ ವಿಶ್ವಾಸ; ಅವರಿಗೆ ಶುಭವಾಗಲಿ, ಗುಡ್ ಲಕ್ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್

BANGALORE:

Font size:

ಬಳ್ಳಾರಿ ಗಲಭೆಗೆ ಬಲಿಯಾದವವನ ಕುಟುಂಬಕ್ಕೆ ನೆರವು ಮೂಲದ ಪ್ರಶ್ನೆ; ಕುಮಾರಸ್ವಾಮಿ ಜೇಬಲ್ಲೇ ಐಟಿ ಇಲಾಖೆ ಇದೆಯಲ್ಲ ಎಂದು ತಿರುಗೇಟು

ಬೆಂಗಳೂರು, ಜ.6:

"ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ, ಐ ವಿಶ್ ಹಿಮ್ ಆಲ್ ದ ಬೆಸ್ಟ್. ಗುಡ್ ಲಕ್" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಸದಾಶಿವನಗರ ನಿವಾಸ ಹಾಗೂ ಬೆಂಗಳೂರು ವಿವಿಯ ಜ್ಞಾನಜ್ಯೋತಿ ಸಭಾಂಗಣದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು. ಪೂರ್ಣಾವಧಿಗೆ ನಾನೇ ಸಿಎಂ ಆಗಿ ಮುಂದುವರಿಯುವ ವಿಶ್ವಾಸವಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಈ ರೀತಿ ಪ್ರತಿಕ್ರಿಯೆ ನೀಡಿದರು.

ಈ ಹೇಳಿಕೆಯಿಂದ ಮತ್ತೆ ಗೊಂದಲವಾಗುವುದಿಲ್ಲವೇ ಎಂದು ಕೇಳಿದಾಗ, “ನೀವುಗಳು (ಮಾಧ್ಯಮಗಳು) ಗೊಂದಲ ಮಾಡಿಕೊಳ್ಳುತ್ತಿದ್ದೀರಿ. ನಮಲ್ಲಿ ಯಾರಿಗೂ ಗೊಂದಲವಿಲ್ಲ” ಎಂದು ತಿಳಿಸಿದರು.

ಸಿಎಂ ಅವರು ದಾಖಲೆ ನಿರ್ಮಿಸುತ್ತಿರುವ ಬಗ್ಗೆ ಕೇಳಿದಾಗ, “ಅವರಿಗೆ ಯಶಸ್ಸಾಗಲಿ, ಒಳ್ಳೆಯದಾಗಲಿ. ಅವರಿಗೆ ಹೆಚ್ಚು ಆರೋಗ್ಯ ಸಿಗಲಿ, ಜನರ ಸೇವೆ ಮಾಡುವ ಅವಕಾಶವನ್ನು ಭಗವಂತ ಅವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದರು.

ಕುಮಾರಸ್ವಾಮಿ ಜೇಬಲ್ಲೇ ಐಟಿ ಇಲಾಖೆ ಇದೆಯಲ್ಲಾ?

ಮೃತ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ ನೀಡಿದ ಪರಿಹಾರ ಹಣ ಮೂಲ ಕಾಂಗ್ರೆಸ್ ಪಕ್ಷದ್ದೋ, ಸರ್ಕಾರದಿಂದಲೋ? ಐಟಿ ಇಲಾಖೆ ಏನು ಮಾಡುತ್ತಿದೆ ಎನ್ನುವ ಕುಮಾರಸ್ವಾಮಿ ಹಾಗೂ ಪ್ರತಿಪಕ್ಷಗಳ ಆರೋಪದ ಬಗ್ಗೆ ಕೇಳಿದಾಗ, “ಐಟಿ ಸೇರಿದಂತೆ ಇತರೇ ಎಲ್ಲಾ ಇಲಾಖೆಗಳು ವಿರೋಧ ಪಕ್ಷಗಳ ಹತ್ತಿರವೇ ಇದೆಯಲ್ಲವೇ? ಕುಮಾರಸ್ವಾಮಿ ಜೇಬಲ್ಲೇ ಇದ್ದಾವಲ್ಲ? ಪರಿಹಾರ ಹಣದ ಬಗ್ಗೆ ಜಮೀರ್ ಅವರ ಬಳಿ ಮಾತನಾಡುತ್ತೇನೆ” ಎಂದು ಉತ್ತರಿಸಿದರು.

ಬಳ್ಳಾರಿ ಭೇಟಿಯ ಬಗ್ಗೆ ಕೇಳಿದಾಗ, "ನಮಗೆ ಈ ರಾಜ್ಯದಲ್ಲಿರುವ ಹಾಗೂ ಬಳ್ಳಾರಿಯಲ್ಲಿ ಶಾಂತಿಯುತ ವಾತಾವರಣ ಉಳಿಯಬೇಕು. ಬಿಜೆಪಿಯವರು ಹತಾಶರಾಗಿ ಎಲ್ಲಾ ಕಡೆ ಇಂತಹ ಪ್ರಯತ್ನ ನಡೆಸುತ್ತಿದ್ದಾರೆ. ಅಲ್ಲಿ ಹೋಗಿ ಪರಿಸ್ಥಿತಿ ಅವಲೋಕನ ಮಾಡುತ್ತೇನೆ" ಎಂದರು.

ಶೀಘ್ರ ಗುಣಮುಖರಾಗಲಿ

ಸೋನಿಯಾಗಾಂಧಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಬಗ್ಗೆ ಕೇಳಿದಾಗ, "ಅನಾರೋಗ್ಯದ ಕಾರಣಕ್ಕೆ ಸೋನಿಯಾ ಗಾಂಧಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವುದರ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ನನಗೂ ಇದರ ಬಗ್ಗೆ ಮಾಹಿತಿ ನೀಡಿದರು. ಅವರು ಶೀಘ್ರ ಗುಣಮುಖರಾಗಲಿ ಎಂದು ನಾವೆಲ್ಲರೂ ಪ್ರಾರ್ಥನೆ ಮಾಡುತ್ತೇವೆ. ದೀರ್ಘಕಾಲ ಆರೋಗ್ಯಯುತವಾಗಿರಲಿ. ಅವರ ಅಮೂಲ್ಯ ಸಲಹೆಗಳು ಈ ದೇಶ ಹಾಗೂ ಪಕ್ಷಕ್ಕೆ ಬೇಕಾಗಿದೆ. ಪಕ್ಷದ ಸಂಕಷ್ಟದ ಹೊತ್ತಿನಲ್ಲಿ ಅತ್ಯಮೂಲ್ಯ ಸಲಹೆ ನೀಡಿದವರು ಅವರು" ಎಂದರು.

Prev Post ಕ್ವಾಂಟಮ್ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ಸಹಭಾಗಿತ್ವಕ್ಕೆ ಪೆನಾಂಗ್ ಉಪಮುಖ್ಯಮಂತ್ರಿ ಒಲವು: ಸಚಿವ ಎನ್.ಎಸ್. ಭೋಸರಾಜು
Next Post ಉಡುಪಿ ಪರ್ಯಾಯ ಹಿನ್ನೆಲೆ: 6 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನಿರ್ದೇಶನ