ಕನ್ನಡಿಗರಿಗೆ ಸೇರಿದ ಜಮೀನು, ಬಾಂಗ್ಲಾದವರಿಗೆ ನೀಡಲು ಬಿಡುವುದಿಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ

BANGALORE:

Font size:

36 ಲಕ್ಷ ಬಡವರಿಗೆ ಮನೆ ಇಲ್ಲ, ಬಾಂಗ್ಲಾದವರಿಗೆ ಎರಡೇ ದಿನದಲ್ಲಿ ಮನೆ ಮಂಜೂರು ತೀರ್ಮಾನ

ಬೆಂಗಳೂರು, ಜನವರಿ 5

ಬಾಂಗ್ಲಾದೇಶದ ಜನರಿಗೆ ಕೋಗಿಲು ಕ್ರಾಸ್‌ನಲ್ಲಿ ಒಂದು ಮನೆ ನೀಡಿದರೂ ಅದು ಕೆಟ್ಟ ಪರಂಪರೆಗೆ ನಾಂದಿ ಹಾಡಲಿದೆ. ಕನ್ನಡಿಗರಿಗೆ ಸೇರಿದ ಜಮೀನನ್ನು ಬಾಂಗ್ಲಾ ಜನರಿಗೆ ನೀಡಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಎಚ್ಚರಿಕೆ ನೀಡಿದರು.

ಕೋಗಿಲು ಕ್ರಾಸ್‌ ಬಳಿ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ಬೇರೆ ಬೇರೆ ಜಿಲ್ಲೆಗಳಿಂದ ಬಡವರು ಬಂದಿದ್ದಾರೆ. ಅನೇಕರು ಮನೆ ಇಲ್ಲದೆ ಪಾದಚಾರಿ ಮಾರ್ಗದಲ್ಲಿ ಮಲಗುತ್ತಿದ್ದಾರೆ. ಇಂತಹವರು ಸಿಎಂ ಸಿದ್ದರಾಮಯ್ಯನವರಿಗೆ ಕಾಣುವುದಿಲ್ಲ. ಆದರೆ ಬಾಂಗ್ಲಾದೇಶದಿಂದ ಬಂದವರು ಇವರಿಗೆ ಸುಲಭವಾಗಿ ಕಾಣುತ್ತಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬಾಂಗ್ಲಾ ಟು ಬೆಂಗಳೂರು ಎಂಬ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಆರಂಭವಾಗಲಿದೆ. ಸರ್ಕಾರದ ದಾಖಲೆ ಪ್ರಕಾರ, ರಾಜ್ಯದಲ್ಲಿ 36 ಲಕ್ಷ ಬಡವರು ಮನೆ ಹಾಗೂ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಂತಹವರಿಗೆ ಮನೆ ನೀಡಿಲ್ಲ. ಇವರೆಲ್ಲರೂ ಗೃಹಮಂಡಳಿ ಬಳಿ ಹೋದರೆ ನಾಳೆ ಬಾ ಎನ್ನುತ್ತಾರೆ ಎಂದರು.

ಕೋಗಿಲು ಕ್ರಾಸ್‌ನಲ್ಲಿ ಇಡೀ ಸರ್ಕಾರ ಬಂದು ನಿಂತಿದೆ. ಕಂದಾಯ ಅಧಿಕಾರಿಗಳು, ಪೊಲೀಸರು ಎಲ್ಲರೂ ಇಲ್ಲೇ ಇದ್ದು ಆ ಜನರಿಗೆ ರಕ್ಷಣೆ ನೀಡುತ್ತಿದ್ದಾರೆ. ಕೇವಲ ಮತಕ್ಕಾಗಿ ಇವರಿಗೆ ಸರ್ಕಾರ ಪ್ರೀತಿ ತೋರಿಸುತ್ತಿದೆ. ಬಾಂಗ್ಲಾದೇಶದಲ್ಲಿರುವ 16 ಕೋಟಿ ಜನರ ಪೈಕಿ, 3 ಕೋಟಿ ಜನರು ಕಾಣೆಯಾಗಿ ಭಾರತಕ್ಕೆ ಬಂದಿದ್ದಾರೆ. ಬೆಂಗಳೂರು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮೊದಲಾದ ಕಡೆಗಳಲ್ಲಿ ಅವರು ವಾಸಿಸುತ್ತಿದ್ದಾರೆ. ಇಂದು ಕಾಶ್ಮೀರದಲ್ಲಿ ಸಾಮಾನ್ಯ ಜನರು ಓಡಾಡಲು ಭಾರತೀಯ ಸೇನೆಯ ರಕ್ಷಣೆ ಬೇಕಾಗಿದೆ. ಜಮ್ಮು ಕಾಶ್ಮೀರವನ್ನು ಉಳಿಸಲು ಅತ್ಯಧಿಕ ಹಣ ಖರ್ಚು ಮಾಡಲಾಗುತ್ತಿದೆ. ಬೆಂಗಳೂರಿಗೆ ಇಂತಹ ಸ್ಥಿತಿ ಬರಬಾರದು ಎಂದರು.

ಇಲ್ಲಿ 150 ಅಕ್ರಮ ಮನೆಗಳನ್ನು ಒಡೆದು ಹಾಕಲಾಗಿದೆ. ಆದರೆ ಈಗ 280 ನಿವಾಸಿಗಳು ಬಂದಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇಷ್ಟಾದರೂ ಬ್ಯಾಟರಾಯನಪುರ ಶಾಸಕರು ಪತ್ತೆಯೇ ಇಲ್ಲ. ಪ್ರತಿಭಟನೆ ಮಾಡಲು ಬಂದರೆ ಪೊಲೀಸರು 60 ಕ್ಕೂ ಅಧಿಕ ಬಸ್‌ಗಳನ್ನು ತಡೆದಿದ್ದಾರೆ. ಈ ಸರ್ಕಾರ ಎರಡು ವರ್ಷವೂ ಇರುವುದಿಲ್ಲ. ಪ್ರತಿಭಟನಾಕಾರರನ್ನು ತಡೆದರೆ ಇನ್ನಷ್ಟು ಉಗ್ರವಾಗಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಓಂ ಶಕ್ತಿ ಮಾಲಾಧಾರಿಗಳು ಮೆರವಣಿಗೆ ಹೋಗುವಾಗ ಕಲ್ಲು ತೂರಾಟ ನಡೆದಿದೆ. ಗಣೇಶ ಮೆರವಣಿಗೆ ನಡೆದರೂ ಹೀಗೆಯೇ ಆಗುತ್ತಿದೆ. ಗಣೇಶನ ಮೂರ್ತಿಯನ್ನು ಪೊಲೀಸರು ಠಾಣೆಯಲ್ಲಿ ಇಟ್ಟಿದ್ದರು. ಮತ ಕೊಟ್ಟ ಹಿಂದೂಗಳಿಗೆ ಕಾಂಗ್ರೆಸ್‌ ದ್ರೋಹ ಎಸಗಿದೆ. ಕೋಗಿಲು ಕ್ರಾಸ್‌ಗೆ ಬೇರೆ ಭಾಗಗಳಿಂದ ಮುಸ್ಲಿಮರನ್ನು ಕರೆದು ತಂದು ಆಧಾರ್‌ ಕಾರ್ಡ್‌ ತೋರಿಸುತ್ತಿದ್ದಾರೆ. ಒಬ್ಬ ಮಹಿಳೆ ಪೆನುಗೊಂಡದಿಂದ ಬಂದಿದ್ದು, ಅವರನ್ನು ಪ್ರಶ್ನಿಸಿದರೆ 25 ವರ್ಷದ ಹಿಂದೆಯೇ ಬಂದೆ ಎಂದು ಹೇಳಿದರು. ಅಂದರೆ ಅವರು 2 ವರ್ಷದ ಮಗುವಾಗಿದ್ದಾಗಲೇ ಇಲ್ಲಿ ಮನೆ ಕಟ್ಟಿದ್ದರು. ಇಂತಹ ಘಟನೆಗಳು ನಡೆಯುವುದು ಕರ್ನಾಟಕದ ಉದ್ದಾರಕ್ಕೆ ಅಲ್ಲ. ಕೇರಳ ಚುನಾವಣೆಗಾಗಿ ಹಾಗೂ ಕಾಂಗ್ರೆಸ್‌ ನಾಯಕ ವೇಣುಗೋಪಾಲ್‌ ಮುಖ್ಯಮಂತ್ರಿಯಾಗಲು, ಅವರ ಮಾತು ಕೇಳಿಕೊಂಡು ಇಲ್ಲಿನ ಕಾಂಗ್ರೆಸ್‌ ಹೀಗೆ ಮಾಡುತ್ತಿದೆ. ಅಲ್ಲಿನ ಸಿಎಂ ಪಿಣರಾಯಿ ವಿಜಯನ್‌ ಸಿಎಂ ಆಗಿ ಉಳಿಯಲು ಟೀಕೆ ಮಾಡುತ್ತಿದ್ದಾರೆ. ಆದರೆ ಇಲ್ಲಿ 600 ಕೋಟಿ ರೂ. ಬೆಲೆಬಾಳುವ ಜಮೀನನ್ನು ಇವರಿಗೆ ನೀಡಲಾಗಿದೆ ಎಂದರು.

ರಾಜೀವ್‌ ಗಾಂಧಿ ವಸತಿ ನಿಗಮದಲ್ಲಿ ಮನೆಗಾಗಿ ಆನ್‌ಲೈನ್‌ ಅರ್ಜಿ ಸಲ್ಲಿಸಬೇಕು. ಅರ್ಜಿ ಅಂತಿಮವಾಗಲು ಎರಡು ವರ್ಷ ಬೇಕಾಗುತ್ತದೆ. ಆದರೆ ಇಲ್ಲಿನ ನಿವಾಸಿಗಳಿಗೆ ಎರಡೇ ದಿನದಲ್ಲಿ ಮನೆ ಮಂಜೂರು ಮಾಡುತ್ತಿದ್ದಾರೆ. ಇದು ಇಡೀ ಕನ್ನಡಿಗರ ಪ್ರಶ್ನೆ. ಬಾಂಗ್ಲಾದವರು ಬಂದು ಇಲ್ಲಿಯೇ ಇದ್ದರೆ ಕಳ್ಳತನ, ದರೋಡೆ, ಡ್ರಗ್ಸ್‌ ಮಾಫಿಯಾ ಹೆಚ್ಚಲಿದೆ. ಆದ್ದರಿಂದ ಕರ್ನಾಟಕವನ್ನು ಕನ್ನಡಿಗರಿಗೆ ಉಳಿಸಿ ಎಂಬ ಸಂದೇಶ ನೀಡುತ್ತಿದ್ದೇವೆ ಎಂದರು.

ಕೋಗಿಲು ಕ್ರಾಸ್‌ನ ಜಮೀನು ಕಾಂಗ್ರೆಸ್‌ ಪಕ್ಷದ್ದಲ್ಲ. ಕಾಂಗ್ರೆಸ್‌ ನಾಯಕ ವೇಣುಗೋಪಾಲ್‌ ಮಾತು ಕೇಳಿಕೊಂಡು ಇಲ್ಲಿ ಜಾಗ ನೀಡಬೇಕಿಲ್ಲ. ಹಿಂದೂಗಳ ಕೊಲೆಯಾದರೂ ಕಾಂಗ್ರೆಸ್‌ ನಾಯಕರು ಮಾತನಾಡಲ್ಲ. ಆದರೆ ಬಾಂಗ್ಲಾದ ಜನರಿಗೆ ಏನೇ ಆದರೂ ಮಾತಾಡುತ್ತಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಡದೆ ಹೋರಾಟ ಮಾಡಲಾಗುವುದು. ಮುಂದಿನ ಅಧಿವೇಶನದಲ್ಲೂ ಹೋರಾಡುತ್ತೇವೆ ಎಂದು ಹೇಳಿದರು.

Prev Post ದೇಶದ ಮೊದಲ ದೇಶೀಯ ತಯಾರಿಕೆಯ ರನ್ ವೇ ಕ್ಲೀನಿಂಗ್ ವೆಹಿಕಲ್ ನೋಯ್ದಾದ ಎನ್.ಐ.ಎ.ಎಲ್ ಗೆ ರನ್ ವೇ ಸ್ವಚ್ಛತಾ ವಾಹನ ಹಸ್ತಾಂತರಿಸಿದ ಸಚಿವ ಎಂ.ಬಿ.ಪಾಟೀಲ
Next Post ಸುದೀರ್ಘ ಅವಧಿಗೆ ಸಿಎಂ ಎಂಬ ದಾಖಲೆ: ಜನರ ಆಶೀರ್ವಾದಿಂದ ಸಾಧ್ಯವಾಗಿದೆ- ಮುಖ್ಯಮಂತ್ರಿ ಸಿದ್ದರಾಮಯ್ಯ