ಮಿನಿ ಬಾಂಗ್ಲಾದೇಶಗಳ ನಿರ್ಮಾಣ: ಆರ್.ಅಶೋಕ್
ಬೆಂಗಳೂರು: ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರ ಟೋಪಿ ಸರಕಾರ; ಇವರು ಇಷ್ಟು ದಿನ ಕರ್ನಾಟಕದ ಕನ್ನಡಿಗರಿಗೆ ಟೋಪಿ ಹಾಕಿ, ಇವತ್ತು ಕರ್ನಾಟಕದಲ್ಲಿ ಮಿನಿ ಬಾಂಗ್ಲಾದೇಶವನ್ನು ನಿರ್ಮಿಸುತ್ತಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಕ್ಷೇಪಿಸಿದ್ದಾರೆ.
ಒತ್ತುವರಿ ಹಿನ್ನೆಲೆಯಲ್ಲಿ ಅಕ್ರಮವಾಗಿ ವಾಸವಿದ್ದವರನ್ನು ತೆರವುಗೊಳಿಸಿದ ಯಲಹಂಕದ ಕೋಗಿಲು ಬಡಾವಣೆಗೆ ಇಂದು ಭೇಟಿ ನೀಡಿದ ವೇಳೆ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಈ ಸರಕಾರ ಬಂದ ಬಳಿಕ ಕರ್ನಾಟಕವು ಮಿನಿ ಬಾಂಗ್ಲಾದೇಶೀಯರ ತಾಣ ಆಗುತ್ತಿದೆ ಎಂದು ಟೀಕಿಸಿದರು. ಇವರು ಯಾರು? ಎಲ್ಲಿಂದ ಬಂದರು ಎಂದು ಕೇಳಿದರು. ಗೂಗಲ್ ಮ್ಯಾಪ್‍ನಡಿ ಇಲ್ಲಿ ಒಂದು ವರ್ಷದ ಹಿಂದೆ ಮನೆಗಳಿರಲಿಲ್ಲ. ಈಗ ಮನೆಗಳಿವೆ. ಇವರೆಲ್ಲ ಬಂದು ಆರು ತಿಂಗಳಾಗಿಲ್ಲ. ಇವರಿಗೆಲ್ಲ ವಿದ್ಯುತ್ ಸಂಪರ್ಕ ಕೊಟ್ಟದ್ದು ಹೇಗೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಸುಮಾರು 4 ಲಕ್ಷ ಜನರು ಅನಧಿಕೃತ ಮನೆ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕವಿಲ್ಲದೇ ಬದುಕುತ್ತಿದ್ದಾರೆ. ನಮ್ಮ ರಾಜ್ಯದ ತೆರಿಗೆದಾರರು ವಿದ್ಯುತ್ ಸಂಪರ್ಕವಿಲ್ಲದೇ ಜೀವನ ಸಾಗಿಸುತ್ತಿದ್ದರೆ, ಇಲ್ಲಿ ದುಬಾರಿ ಮೊತ್ತದ ಕೇಬಲ್ ಸಂಪರ್ಕ ಮಾಡಿ ವಿದ್ಯುತ್ ಬಳಸುತ್ತಿದ್ದಾರೆ. ಇವರೇನು ಸಿದ್ದರಾಮಯ್ಯನವರ ನೆಂಟರೇ ಎಂದು ಕೇಳಿದರು. ಇವರೆಲ್ಲ ಆಂಧ್ರದ ಪೆನುಗೊಂಡದಿಂದ ಬಂದವರೆಂದು ಹೇಳುತ್ತಾರೆ. 28 ವರ್ಷದವರು ಎನ್ನುತ್ತಾರೆ. 25-26 ವರ್ಷದಿಂದ ವಾಸವಿದ್ದರೆ 2 ವರ್ಷಕ್ಕೆ ಹೇಗೆ ನಡೆದು ಬಂದರು ಎಂದು ಕೇಳಿದರು.
ಇದು ಸುಮಾರು 600 ಕೋಟಿ ಬೆಲೆಯ ಜಮೀನು. ಇದನ್ನು ಸರಕಾರ ಯಾವ ಕಾನೂನಿನಡಿ ಕೊಡಲಿದೆ ಎಂದು ಕೇಳಿದರು. ನೆರೆಯಿಂದ ರಾಜ್ಯದಲ್ಲಿ 13 ಸಾವಿರ ಮನೆಗಳು ಬಿದ್ದಿವೆ. ಆದರೆ, ಕರ್ನಾಟಕದ ರೈತರಾದ ಅವರಿಗೆ ಇನ್ನೂ ಸೂರು ಕೊಟ್ಟಿಲ್ಲ. 2400 ಶಾಲೆಗಳ ಶೀಟ್‍ಗಳು ಹಾರಿ ಹೋಗಿವೆ. ಅವರಿಗೆ ವ್ಯವಸ್ಥೆ ಮಾಡದೇ ಮರದ ಕೆಳಗೆ ಪಾಠ ಮಾಡುವ ಸ್ಥಿತಿ ಇದೆ. ಇವರಿಗೆ ಪಟಾಪಟ್ ಎಂದು ಎರಡೇ ದಿನಗಳಲ್ಲಿ ಬಹುಮಹಡಿ ಮನೆಗಳಲ್ಲಿ ಜಾಗ ಕೊಡುತ್ತಿದ್ದಾರೆ ಎಂದು ಟೀಕಿಸಿದರು.
ಹೊಸ ವರ್ಷಕ್ಕೆ ಬಾಂಗ್ಲಾದೇಶದವರಿಗೆ ಉಡುಗೊರೆ ಕೊಡುತ್ತಾರೆ. ಕನ್ನಡಿಗರಿಗೆ ಏನು ಕೊಡುತ್ತೀರಿ? ಚಿಪ್ಪು ಕೊಡುತ್ತಿದ್ದೀರಾ ಎಂದು ವಾಗ್ದಾಳಿ ನಡೆಸಿದರು. ಇವೆಲ್ಲವೂ ಅಪರಾಧದ ತಾಣಗಳು ಎಂದು ಅವರು ಆರೋಪಿಸಿದರು.
ಪ್ರಕರಣವನ್ನು ಎನ್‍ಐಎಗೆ ಒಪ್ಪಿಸಿ- ಛಲವಾದಿ ನಾರಾಯಣಸ್ವಾಮಿ
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ವೇಣುಗೋಪಾಲ್ ಟ್ವೀಟ್, ಪಿಣರಾಯಿ ವಿಜಯನ್ ಅವರು ತಮ್ಮ ಸಂಸದರನ್ನು ಕಳಿಸಿದ ಬಳಿಕ ನಮ್ಮ ಸರಕಾರ ಏಕಾಏಕಿ ಯೂ ಟರ್ನ್ ತೆಗೆದುಕೊಂಡಿದೆ ಎಂದು ಟೀಕಿಸಿದರು. ಇಲ್ಲಿದ್ದ ಬಾಂಗ್ಲಾದೇಶೀಯರನ್ನು ಸಚಿವರೇ ಬಂದು ಸ್ಥಳಾಂತರ ಮಾಡಿದ್ದಾರೆ ಎಂದು ದೂರಿದರು. ಈ ಪ್ರಕರಣವನ್ನು ಎನ್‍ಐಎಗೆ ಒಪ್ಪಿಸಿ ಮೂಲದಾಖಲೆ ಪರಿಶೀಲನೆಗೆ ಒಳಪಡಿಸಬೇಕಿದೆ ಎಂದು ಅವರು ಆಗ್ರಹಿಸಿದರು.
ರಾಜ್ಯದ 38 ಲಕ್ಷ ಜನರು ಅರ್ಜಿ ಸಲ್ಲಿಸಿ ಮನೆಗೆ ಕಾಯುತ್ತಿದ್ದಾರೆ. ಬೆಂಗಳೂರಿನಲ್ಲಿ 40 ಕಡೆ ಅಕ್ರಮ ಮನೆಗಳ ತೆರವು ಮಾಡಿದ್ದು, ಒಬ್ಬರಿಗೂ ಮನೆ ಕೊಟ್ಟಿಲ್ಲ. ಬಡವರಾದ ಅವರಿಗೆಲ್ಲ ಮನೆ ಕೊಡದೇ ಇವರಿಗೇನು ವಿಶೇಷ? ಕಾರಣ ಹೇಳಿ ಎಂದು ಒತ್ತಾಯಿಸಿದರು. ಅವರಿಗೂ ಮನೆ ಕೊಡಿ ಎಂದರು. ಮೊದಲು ಇದನ್ನು ಎನ್‍ಐಎಗೆ ಕೊಡಿ. ಅದಾಗಿ ವರದಿ ಬಂದ ಬಳಿಕ ಮುಂದುವರೆಯಿರಿ ಎಂದು ತಿಳಿಸಿದರು.
ಹೊರರಾಜ್ಯದ ಸಂಸದರು ಬಂದು ಪರಿಶೀಲನೆ ಮಾಡಲು ಅವರು ಯಾರು? ಅವರನ್ನು ಬಂಧಿಸಬೇಕಿತ್ತು. ನಮ್ಮ ರಾಜ್ಯದ ಆಡಳಿತದಲ್ಲಿ ಮೂಗು ತೂರಿಸಲು ಕೇರಳದ ಸಚಿವರು, ಸಂಸದರು, ಶಾಸಕರಿಗೆ ಅವಕಾಶ ನೀಡಬಾರದು ಎಂದು ತಿಳಿಸಿದರು.
ಬಾಂಗ್ಲಾದೇಶೀಯರಲ್ಲ ಎಂದು ಮುಚ್ಚಿ ಹಾಕುವ ಪ್ರಯತ್ನ- ಡಾ.ಅಶ್ವತ್ಥನಾರಾಯಣ್
ಮಾಜಿ ಡಿಸಿಎಂ ಮತ್ತು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಮಾತನಾಡಿ, ದೇಶ, ಕರ್ನಾಟಕ, ಬೆಂಗಳೂರಿನ ಸುರಕ್ಷತೆಗೆ ಧಕ್ಕೆ ಆಗುತ್ತಿದೆ. ಆತಂಕವೂ ಇದೆ. ಇವರು ಬಾಂಗ್ಲಾದೇಶೀಯರಲ್ಲ ಎಂದು ಮುಚ್ಚಿ ಹಾಕುವ ಪ್ರಯತ್ನ ಸರಕಾರದ್ದು ಎಂದು ಆಕ್ಷೇಪಿಸಿದರು.
ಬಾಂಗ್ಲಾದೇಶೀಯರನ್ನು ಪತ್ತೆ ಹಚ್ಚಿ ಈ ದೇಶದಿಂದ ಹೊರಕ್ಕೆ ಹಾಕುವ ಕೆಲಸ ಮೊದಲು ಆಗಬೇಕೆಂದು ಅವರು ಆಗ್ರಹಿಸಿದರು. ಇಲ್ಲಿ ಮಲೆಯಾಳಿಗಳು ಇಲ್ಲ; ಆದರೂ ಕೇರಳದ ತಿರುವು ತೆಗೆದುಕೊಂಡಿದೆ. ಬಾಂಗ್ಲಾದಿಂದ ಪಶ್ಚಿಮ ಬಂಗಾಲಕ್ಕೆ ಬಂದು ಕೇರಳಕ್ಕೆ ತೆರಳಿ ಇಲ್ಲಿ ಬಂದಿದ್ದಾರೆ. ವಸೀಂ ನಗರ, ಫಕೀರ್ ನಗರ ಇದೆ. ವಸೀಂ ಸ್ವಾತಂತ್ರ್ಯ ಹೋರಾಟಗಾರರೇ? ಎಂದು ಕೇಳಿದರು. ಇವರು ಅಧಿಕಾರಕ್ಕಾಗಿ ಏನನ್ನಾದರೂ ಮಾಡುತ್ತಾರೆ ಎಂದು ದೂರಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಹೆಚ್.ಸಿ. ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಪಕ್ಷದ ಪ್ರಮುಖರು ಇದ್ದರು.






