ಪ್ರತಿ ವರ್ಷ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತ್ರತ್ವದಲ್ಲಿ ಆಯೋಜನೆಯಾಗುವ ಗೋಲ್ಡ್ ಫಿಂಚ್ ಸಿಟಿಯ ಕಂಬಳ ಇದೇ ಡಿಸೆಂಬರ್ ೨೭ ಶನಿವಾರ ನಡೆಯಲಿದೆ.
From Jayram Udupi
ಮಂಗಳೂರು :
ಪ್ರತಿ ವರ್ಷ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತ್ರತ್ವದಲ್ಲಿ ಆಯೋಜನೆಯಾಗುವ ಗೋಲ್ಡ್ ಫಿಂಚ್ ಸಿಟಿಯ ಕಂಬಳ ಇದೇ ಡಿಸೆಂಬರ್ ೨೭ ಶನಿವಾರ ನಡೆಯಲಿದೆ.
ಕದ್ರಿ ಕಂಬಳ ಸ್ಥಗಿತಗೊಂಡ ಬಳಿಕ ಮಂಗಳೂರು ನಗರದ ವ್ಯಾಪ್ತಿಯಲ್ಲಿ ಕಂಬಳಗಳು ಇರಲಿಲ್ಲ. ಗೋಲ್ಡ್ ಫಿಂಚ್ ಸಿಟಿಯಲ್ಲಿ ಅದಕ್ಕೆ ಅವಕಾಶ ದೊರೆತಿದೆ. ಕಂಬಳಕ್ಕಾಗಿಯೇ ಸಾಕುವ ಕೋಣಗಳ ರೋಚಕ ಓಟ ನೋಡಲು ಕಿರಿಯ ಜೆನ್ ಜೀ, ಜೆನ್ ಆಲ್ಫಾ ಸೇರಿದಂತೆ ಹಿರಿಯ ತಲೆಮಾರು ಸಹಸ್ರ ಸಂಖ್ಯೆಯಲ್ಲಿ ಸೇರುತ್ತದೆ.
"9ನೇ ವರ್ಷದ ರಾಮಲಕ್ಷ್ಮಣ ಜೋಡುಕರೆ ಕಂಬಳವು ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ವರ್ಷಂಪ್ರತಿಯಂತೆ ನಡೆಯಲಿದೆ" ಎಂದು ಕಂಬಳ ಸಮಿತಿಯ ಅಧ್ಯಕ್ಷ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
"ಅಂದು ಬೆಳಗ್ಗೆ 8 ಗಂಟೆಗೆ ಕಂಬಳದ ಉದ್ಘಾಟನೆ ನಡೆಯಲಿದೆ. ಗರೋಡಿ ಬ್ರಹ್ಮ ಬೈದರ್ಕಳ ಕ್ಷೇತ್ರದ ಮೊಕ್ತೇಸರ ಚಿತ್ತರಂಜನ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ರಾಘವೇಂದ್ರ ಸಹಿತ ಶಾಸಕರು, ರಾಜಕೀಯ, ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ. ಕಂಬಳವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದೇಶ ವಿದೇಶದ ಮಕ್ಕಳಿಗೆ ತುಳುನಾಡಿನ ಸಂಸ್ಕೃತಿಯ ಪರಿಚಯವಾಗಬೇಕು ಎಂಬ ನಿಟ್ಟಿನಲ್ಲಿ ಪ್ರಾರಂಭಗೊಂಡ ಕಂಬಳ 9ನೇ ವರ್ಷಕ್ಕೆ ಕಾಲಿಟ್ಟಿದ್ದು ಸಂತಸದ ವಿಚಾರ" ಎಂದರು.
ನಗರ ಪ್ರದೇಶದಲ್ಲಿ ನೆಲೆಸಿರುವ ಜನರಿಗೆ ತುಳುನಾಡಿನ ಕಂಬಳದ ಪರಿಚಯವಾಗಬೇಕು ಎಂದು ವಿಶೇಷವಾಗಿ ಈ ಬಾರಿ 9 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತುಳುನಾಡಿನ ಹೆಮ್ಮೆಯ ರಾಣಿ ಅಬ್ಬಕ್ಕ ಚಿತ್ರಕಲಾ ಸ್ಪರ್ಧೆಯನ್ನು ಮಕ್ಕಳಿಗಾಗಿ ಆಯೋಜಿಸಲಾಗಿದೆ. ವಂದೇ ಮಾತರಂ 150ನೇ ವರ್ಷ ಅಚರಣೆಯ ನಿಮಿತ್ತ ಕಂಬಳದಲ್ಲಿ ವಂದೇ ಮಾತರಂ ಗಾಯನ ಮತ್ತು 150 ವಿದ್ಯಾರ್ಥಿನಿಯರಿಂದ ಸಾಮೂಹಿಕ ವಂದೇ ಮಾತರಂ ಗಾಯನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಪ್ರಧಾನಿ ಮೋದಿಯವರ ಆಶಯದಂತೆ ಗಿಡ ನೆಟ್ಟು ಬೆಳೆಸುವ ಕಾರ್ಯಕ್ರಮದಂಗವಾಗಿ ಗಿಡ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ. ಬ್ಯಾಕ್ ಟು ಊರು ಅಭಿಯಾನದಡಿ 9 ಮಂದಿಯನ್ನು ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕ್ಯಾಪ್ಟನ್ ಚೌಟ ಅವರು ಕಂಬಳದ ಅಂಗವಾಗಿ ಹಮ್ಮಿ ಕೊಂಡಿರುವ ಹೊಸ ಕಾರ್ಯಕ್ರಮಗಳ ವಿವರ ಒದಗಿಸಿದರು.
ಮಂಗಳೂರು ನಗರದಲ್ಲಿರುವ ವೃದ್ಧಾಶ್ರಮದ ಹಿರಿಯ ಜೀವಗಳಿಗೆ ಕಂಬಳ ತೋರಿಸುವ ಕಾರ್ಯಕ್ರಮ, ಪೇಂಟಿಂಗ್, ರೀಲ್ಸ್ ಸ್ಪರ್ಧೆ, ಫೋಟೋಗ್ರಫಿ, Al ಮುಖಾಂತರ ಮಂಗಳೂರು ಕಂಬಳ ಕ್ರಿಯೇಟ್ ಮಾಡುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಮಕ್ಕಳು, ಹಿರಿಯರು, ಯುವಜನರು ಹೀಗೆ ಎಲ್ಲರನ್ನೂ ಸೇರಿಸಿಕೊಂಡು ಕಂಬಳವನ್ನು ಸದಾಕಾಲ ನೆನಪಲ್ಲಿ ಉಳಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ" ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಸಾದ್ ಕುಮಾರ್ ಶೆಟ್ಟಿ, ವಿಜಯ ಕುಮಾರ್ ಕೆಂಗಿನ ಮನೆ, ಕಿರಣ್ ಕೋಡಿಕಲ್, ಸಂಜಯ್ ಪ್ರಭು, ವಸಂತ ಪೂಜಾರಿ, ನಂದನ್ ಮಲ್ಯ, ಸಚಿನ್ ಶೆಟ್ಟಿ, ಈಶ್ವರ್, ಸುಜಿತ್ ಕುಮಾರ್ ಮಂಗಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.






