ಸ್ಯಾನ್ಸನ್ ಗ್ರೂಪ್ ಗೆ ಮಂಡ್ಯ ಜಿಲ್ಲೆಯಲ್ಲಿ 100 ಎಕರೆ ಜಾಗ: ಕುಮಾರಸ್ವಾಮಿಗೆ ಎಂ ಬಿ ಪಾಟೀಲ ಪತ್ರ

Banglore:

Font size:

ಸ್ಯಾನ್ಸನ್ ಗ್ರೂಪ್ ಗೆ ಮಂಡ್ಯ ಜಿಲ್ಲೆಯಲ್ಲಿ 100 ಎಕರೆ ಜಾಗ: ಕುಮಾರಸ್ವಾಮಿಗೆ ಎಂ ಬಿ ಪಾಟೀಲ ಪತ್ರ

ಬೆಂಗಳೂರು: ಅಮೆರಿಕ ಮೂಲದ ಸೆಮಿಕಂಡಕ್ಟರ್ ಕಂಪನಿ ಸ್ಯಾನ್ಸನ್ ಗ್ರೂಪ್ ಗೆ ತನ್ನ ಘಟಕ ಸ್ಥಾಪಿಸಲು ಮಂಡ್ಯ ಜಿಲ್ಲೆಯಲ್ಲಿ 100 ಎಕರೆ ಭೂಮಿ ನೀಡಲು ರಾಜ್ಯ ಸರಕಾರ ಉತ್ಸುಕವಾಗಿದೆ. ಆದರೆ ಈ ಸಂಬಂಧವಾಗಿ ಆ ಕಂಪನಿಯ ಉನ್ನತಾಧಿಕಾರಿಗಳನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸಿದರೂ ಅವರು ಸಿಕ್ಕಿಲ್ಲ. ಈ ಯೋಜನೆ ರಾಜ್ಯಕ್ಕೆ ಬಂದು ನೆಲೆಯೂರಬೇಕು ಎನ್ನುವುದು ನಮ್ಮ ಆಸಕ್ತಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ಈ ಸಂಬಂಧ ಬುಧವಾರ ಮಾಹಿತಿ ನೀಡಿರುವ ಅವರು, `ಕುಮಾರಸ್ವಾಮಿ ಈ ಬಗ್ಗೆ ಅ.31ರಂದು ನಮಗೆ ಪತ್ರ ಬರೆದಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ನಾವು ನ.24ರಂದು ಪ್ರತ್ಯುತ್ತರ ಬರೆದಿದ್ದೆವು. ಏತನ್ಮಧ್ಯೆ ಪ್ರಸ್ತಾವಿನ ಯೋಜನೆಯ ವಿವರಗಳನ್ನು ತಿಳಿದುಕೊಳ್ಳಲು ಸ್ಯಾನ್ಸನ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಮತ್ತು ಭಾರತೀಯ ವ್ಯವಹಾರಗಳ ಮುಖ್ಯಸ್ಥ ಅಭಯ್ ಕೆ.ರೈ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಲಾಗಿದೆ. ಆದರೆ ಅವರ ಕಡೆಯಿಂದ ಇದುವರೆಗೂ ಉತ್ತರ ಬಂದಿಲ್ಲ’ ಎಂದಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ನೀರು, ವಿದ್ಯುತ್, ಸಂಪರ್ಕ ಸೌಲಭ್ಯವಿರುವ ಕಡೆಯಲ್ಲೇ 100 ಎಕರೆ ಕೊಡಲು ಅಡ್ಡಿಯೇನಿಲ್ಲ. ಕಂಪನಿಯ ಕಡೆಯಿಂದ ಮನವಿ ಬಂದರೆ ಭೂ ಮಂಜೂರಾತಿಯ ಕಾರ್ಯಸಾಧ್ಯತೆ ಜೊತೆಗೆ ಇನ್ನಿತರ ಅಗತ್ಯ ಅನುಮೋದನೆಗಳು ಮತ್ತು ಮೂಲಸೌಕರ್ಯಗಳನ್ನು ಪರಿಗಣಿಸಿ, ತ್ವರಿತವಾಗಿ ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುವುದು. ಈ ಹೊಣೆಯನ್ನು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಅವರಿಗೆ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೈಟೆಕ್ ಉದ್ಯಮಗಳನ್ನು ಬೆಳೆಸಲು ರಾಜ್ಯ ಸರಕಾರ ಬದ್ಧವಾಗಿದೆ. ಈ ಉದ್ದೇಶಿತ ಹೂಡಿಕೆ ಯೋಜನೆ ರಾಜ್ಯದ ಕೈತಪ್ಪಬಾರದು ಎನ್ನುವುದು ನಮ್ಮ ಕಳಕಳಿಯಾಗಿದೆ. ಇದರಿಂದ ಬೆಂಗಳೂರಿನ ಹೊರಗಿನ ಭಾಗಗಳಲ್ಲಿ ಉದ್ಯೋಗಸೃಷ್ಟಿ ಮತ್ತು ಉದ್ದಿಮೆಗಳ ಬೆಳವಣಿಗೆಗೂ ಅನುಕೂಲವಾಗಲಿದೆ ಎಂದು ಪಾಟೀಲ ಹೇಳಿದ್ದಾರೆ.

Prev Post ಮಹಾಸಭಾ ವತಿಯಿಂದ ಡಾ. ಶಾಮನೂರು ಶಿವಶಂಕಪ್ಪಗೆ ನುಡಿ ನಮನ 1000 ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ಮಾಣಕ್ಕೆ ಬದ್ಧ: ಈಶ್ವರ ಖಂಡ್ರೆ
Next Post ಪಕ್ಷದ ಕಾರ್ಯಕರ್ತನಾಗಿ ಉಳಿಯಲು ಬಯಸುತ್ತೇನೆ: ಡಿಸಿಎಂ ಡಿ.ಕೆ. ಶಿವಕುಮಾರ್