ನೆರವು-2025' ಡಿಸೆಂಬರ್ ೨೫ ರಂದು ಮಂಗಳೂರಿನಲ್ಲಿ ಎಂ.ಆರ್.ಜಿ. ಗ್ರೂಪ್ ನ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಪ್ರದಾನ ಸಮಾರಂಭ '
From Jayram Udupi
ಮಂಗಳೂರು:
ಎಂ.ಆರ್.ಜಿ. ಗ್ರೂಪ್ ನ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಪ್ರದಾನ ಸಮಾರಂಭ 'ನೆರವು-2025' ಡಿಸೆಂಬರ್ ೨೫ ರಂದು ಮಂಗಳೂರಿನಲ್ಲಿ ನಡೆಯಲಿದೆ.
ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಅಂದು ಸುಮಾರು ೪೦೦೦ ಕುಟುಂಬಗಳು ಹಾಗು ೧೦೦ ಕ್ಕೂ ಅಧಿಕ ಸಂಘ ಸಂಸ್ಥೆಗಳಿಗೆ ಒಟ್ಟು ರೂಪಾಯಿ ೯ ಕೋಟಿಗೂ ಅಧಿಕ ಮೊತ್ತದ ನೆರವು ವಿತರಣೆಯಾಗಲಿದೆ ಎಂದು ಯೋಜನೆಯ ಪ್ರವರ್ತಕರಾದ ಎಂ.ಆರ್.ಜಿ.ಗ್ರೂಪಿನ ಚೇರ್ಮನ್ ಡಾ.ಪ್ರಕಾಶ್ ಶೆಟ್ಟಿ ಮಂಗಳೂರಿನಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ವರ್ಷ ಯೋಜನೆ ಏಳನೇ ವರ್ಷವನ್ನು ಪೂರೈಸುತ್ತಿದೆ. ಇನ್ನು ಮೂರು ವರ್ಷಗಳ ಕಾಲ ಯೋಜನೆ ಮುಂದುವರಿಯುತ್ತದೆ. ದಶಮಾನೋತ್ಸವ ಬಳಿಕ 'ನೆರವು' ಯೋಜನೆಯ ಫಲಾನುಭವಿಗಳನ್ನು ಸೇರಿಸಿಕೊಂಡು ಅದಕ್ಕೊಂದು ಸಾಮೂಹಿಕ ರೂಪ ಕೊಡುವ ಚಿಂತನೆ ಇದೆ. ಈ ವಿಸ್ತರಣೆಯಿಂದ ಪ್ರತೀ ವರ್ಷ ಕನಿಷ್ಠ ಹದಿನಾಲ್ಕು ಸಾವಿರ ಕುಟುಂಬಗಳಿಗೆ ನೆರವು ಕೊಡಲು ಸಾಧ್ಯವಾಗಲಿದೆ ಎಂದವರು ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು.
ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ವೈದ್ಯಕೀಯ ಚಿಕಿತ್ಸೆ ಸುಲಭವಾಗಿದೆ. ಆದರೆ ಆ ಸವಲತ್ತುಗಳಿಗೆ ಎಲ್ಲರಿಗೂ ಪ್ರವೇಶ ಸಾಧ್ಯವಾಗುತ್ತಿಲ್ಲ ಎಂಬುದೂ ಅಷ್ಟೇ ಸತ್ಯ, ನಮ್ಮ ನೆರವಿನ ಮೊತ್ತದಲ್ಲಿ ದೊಡ್ಡ ಭಾಗ ಇದಕ್ಕೆ ಮೀಸಲಾಗಿದೆ. ಆಧುನಿಕ ಚಿಕಿತ್ಸೆಯ ಪ್ರಜಾಪ್ರಭುತ್ವೀಕರಣದ ನಿಟ್ಟಿನಲ್ಲಿ ನಮ್ಮದೊಂದು ಕಿರು ಹೆಜ್ಜೆ ಎಂದು ನಾವು ಪ್ರಾಮಾಣಿಕವಾಗಿ ಮತ್ತು ನಮ್ಯತೆಯಿಂದ ಭಾವಿಸುತ್ತೇವೆ ಎಂದವರು ಈ ವರ್ಷ ಆರೋಗ್ಯ ವಿಭಾಗದಲ್ಲಿ ಒದಗಿಸಲಾಗಿರುವ ದೊಡ್ಡ ಮೊತ್ತದ ನೆರವಿನ ಬಗ್ಗೆ ವಿವರಿಸಿದರು.
ಜಾತಿ, ಧರ್ಮ, ಪಂಗಡ ಎಂಬ ಯಾವ ಮನುಷ್ಯ ನಿರ್ಮಿತ ಗಡಿಗಳಿಲ್ಲದೆ ಅವಶ್ಯಕತೆ ಇರುವವರನ್ನು ನಮ್ಮತಂಡ ಹುಡುಕಿ, ಅರ್ಜಿಗಳನ್ನು ಪರಿಶೀಲಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿದೆ. ಇಲ್ಲಿ ಅವಶ್ಯಕತೆಯೇ ಮಾನದಂಡವಾಗಿದೆ. ಅನಿವಾರ್ಯತೆ ಇಲ್ಲದಿದ್ದರೆ ಯಾರೂ ಅರ್ಜಿ ಸಾಕುವುದಿಲ್ಲ ಎಂಬುದು ನಮ್ಮ ಭಾವನೆ. ದೈಹಿಕ ಸಮಸ್ಯೆ ಇರುವ ದಿವ್ಯಾಂಗರು, ದಯಾಲಿಸಿಸ್ ಸಹಿತ ನಿರಂತರ ಚಿಕಿತ್ಸೆಯನ್ನು ಪಡೆಯಬೇಕಾದ ಅನಿವಾರ್ಯತೆ ಇರುವವರು, ಶಿಕ್ಷಣ ಮುಂದುವರಿಕೆಗೆ ನೆರವು ಬೇಕಾದವರು, ಸಿಂಗಲ್ ಪೇರೆಂಟ್ ಮಕ್ಕಳು, ಸಾಂಸ್ಕೃತಿಕ, ಶಿಕ್ಷಣ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ನೆರವಿನ ಬೆಂಬಲ ಪಡೆಯಲಿದ್ದಾರೆ. ಮನೆ ಕಟ್ಟಿ ಅದರ ಗೃಹ ಪ್ರವೇಶಕ್ಕಾಗಿ ಕಾಯುತ್ತಿರುವವರಿಗೂ ಅವರ ಭಾವನಾತ್ಮಕ ಮತ್ತು ಹಣಕಾಸಿನ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿ ನೆರವು ಕೊಡಲಾಗುತ್ತಿದೆ. ಮನೆ ಕಟ್ಟಲು ಸಹಾಯ ಕೋರಿದ ಅರ್ಜಿಗಳನ್ನು ಪುರಸ್ಕರಿಸಲಾಗಿದೆ. ಈ ಯೋಜನೆಯನ್ನು ಆರಂಭಮಾಡಿದ ಮೊದಲ ವರ್ಷ ಒಟ್ಟು 1.25 ಕೋ.ರೂ. ನೆರವು ವಿತರಿಸಿದ್ದೇವೆ.ಆಗ 28 ಸಂಘ ಸಂಸ್ಥೆಗಳು ಪ್ರಯೋಜನ ಪಡೆದಿವೆ. ಈಗ 7ನೇ ವರ್ಷದಲ್ಲಿ 100ಕ್ಕೂ ಅಧಿಕ ಸಂಘ ಸಂಸ್ಥೆಗಳಿಗೆ ನೆರವು ವಿತರಣೆಯಾಗಲಿದೆ ಎಂದರು.
ಫಲಾನುಭವಿಗಳ ಆಯ್ಕೆಯಲ್ಲಿ ಪ್ರಾದೇಶಿಕತೆಯನ್ನೂ ಗಮನಿಸಲಾಗಿದೆ. ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಕೊಪ್ಪ, ಸಕಲೇಶಪುರ ಮತ್ತು ನಮ್ಮ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಿಂದ ಬಂದ ಅರ್ಜಿಗಳನ್ನು ಪರಿಶೀಲಿಸಿ ಆಯ್ಕೆ ಮಾಡಲಾಗಿದೆ ನಾವು ಆಯ್ಕೆಗೆ ಸಂಬಂಧಿಸಿ ಸ್ವಾಯತ್ತ ಸಮಿತಿಯನ್ನು ಹೊಂದಿದ್ದೇವೆ, ಎಲ್ಲ ಜವಾಬ್ದಾರಿಯನ್ನೂ ಅದು ನಿಭಾಯಿಸುತ್ತದೆ ಎಂದೂ ಡಾ. ಶೆಟ್ಟಿ ಆಯ್ಕೆ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು.
ವರ್ಷಂಪ್ರತಿಯಂತೆ ಈ ವರ್ಷವೂ ಸಾಧಕರನ್ನು ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ವಿಧಾನ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಅವರು ಪಾಲ್ಗೊಳ್ಳುತ್ತಾರೆ. ಚಲನ ಚಿತ್ರ ನಿರ್ಮಾಪಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾಗವಹಿಸುತ್ತಾರೆ. ಮೂಡಬಿದ್ರೆಯ ಅಳ್ವಾಸ್ ಎಜುಕೇಷನ್ ಟ್ರಸ್ಟ್‌ನ ಡಾ.ಮೋಹನ್ ಆಳ್ವ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎಂ.ಆರ್.ಜಿ.ಗ್ರೂಪಿನ ಆಡಳಿತ ನಿರ್ದೇಶಕ ಗೌರವ್ ಪಿ.ಶೆಟ್ಟಿ ಅಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ ಎಂದವರು ವಿವರಿಸಿದರು.






