ರಾಜಕೀಯ ದ್ವೇಷಕ್ಕಾಗಿ ರಾಹುಲ್ ಗಾಂಧಿ ಅವರಿಗೆ ಕಿರುಕುಳ: ಡಿಸಿಎಂ ಡಿ.ಕೆ. ಶಿವಕುಮಾರ್ ನ್ಯಾಷನಲ್ ಹೆರಾಲ್ಡ್ ಅವರ ವೈಯಕ್ತಿಕ ಆಸ್ತಿಯಲ್ಲ, ಪಕ್ಷದ ಆಸ್ತಿ

BANGALORE:

Font size:

ಜೈಲಿಗೆ ಹಾಕಿದರೂ ರಾಹುಲ್ ಗಾಂಧಿ ಹಿಂಜರಿಯುವುದಿಲ್ಲ ಉಪಾಹಾರ ಕೂಟ ನನ್ನ ಹಾಗೂ ಸಿಎಂಗೆ ಸಂಬಂಧಿಸಿದ ವಿಚಾರ, ನಾವಿಬ್ಬರೂ ಸಹೋದರರಂತೆ ಕೆಲಸ ಮಾಡುತ್ತಿದ್ದೇವೆ

ಬೆಂಗಳೂರು, ಡಿ.01:

“ರಾಜಕೀಯ ದ್ವೇಷಕ್ಕಾಗಿ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

ರಾಹುಲ್ ಗಾಂಧಿ ಅವರ ಮೇಲೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಎಫ್ ಐಆರ್ ದಾಖಲಿಸಿರುವ ಬಗ್ಗೆ ಕೇಳಿದಾಗ, “ಇದು ಅನ್ಯಾಯ. ಯಾರಿಗೆ ಆಗಲಿ ಕಿರುಕುಳ ನೀಡುವುದಕ್ಕೆ ಒಂದು ಮಿತಿ ಇದೆ. ಈ ಪ್ರಕರಣದಲ್ಲಿ ಕಿರುಕುಳ ನೀಡುವ ಅಗತ್ಯವಿಲ್ಲ. ನ್ಯಾಷನಲ್ ಹೆರಾಲ್ಡ್ ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಅವರ ಆಸ್ತಿಯಲ್ಲ. ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದ ಕಾರಣಕ್ಕೆ ಅವರು ಈ ಸಂಸ್ಥೆಯ ಷೇರುಗಳ ಪಾಲಕರಾಗಿದ್ದರು. ನಾನು ಹಾಗೂ ಸಿಎಂ ಅವರೂ ಕೂಡ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರಾಗಿದ್ದೇವೆ. ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ ಕನಿಷ್ಠ 1-2 ಷೇರುಗಳು ಇರುತ್ತವೆ. ನಮ್ಮ ಅಧಿಕಾರ ಮುಗಿದ ನಂತರ ಈ ಷೇರುಗಳು ವರ್ಗಾವಣೆಯಾಗುತ್ತದೆ. ಅದೇ ರೀತಿ ನಮ್ಮ ನಾಯಕರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಕಾರಣ, ಜವಹಾರ್ ಲಾಲ್ ನೆಹರೂ ಅವರ ಕಾಲದಿಂದ ನಡೆದುಕೊಂಡು ಬಂದಿರುವ ಪ್ರತೀತಿಯಂತೆ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯ ಜವಾಬ್ದಾರಿ ಹೊತ್ತಿರುತ್ತಾರೆ” ಎಂದು ವಿವರಿಸಿದರು.

ನ್ಯಾಷನಲ್ ಹೆರಾಲ್ಡ್ ಅವರ ವೈಯಕ್ತಿಕ ಆಸ್ತಿಯಲ್ಲ, ಪಕ್ಷದ ಆಸ್ತಿ

“ಯಂಗ್ ಇಂಡಿಯಾ ಅಗಲಿ, ನ್ಯಾಷನಲ್ ಹೆರಾಲ್ಡ್ ಆಗಲಿ ನಮ್ಮ ವೈಯಕ್ತಿಕ ಆಸ್ತಿಯಲ್ಲ ಎಂದು ಅವರು ಈಗಾಗಲೇ ಘೋಷಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಆಸ್ತಿ. ಕಾಂಗ್ರೆಸ್ ಪಕ್ಷದ ಪಾಲಕರು ಅವರಾಗಿದ್ದಾರೆ. ಇಲ್ಲಿ ಅನೇಕ ಸದಸ್ಯರುಗಳು ಇದ್ದಾರೆ. ಮೊರಾರ್ಜಿ ಅವರು, ಅಹ್ಮದ್ ಪಟೇಲ್ ಅವರ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಹಿತಕ್ಕಾಗಿ ಕೆಲವು ನಿರ್ಧಾರ ಕೈಗೊಳ್ಳಲಾಗಿತ್ತು. ಕೇಸರಿ ಅವರ ಕಾಲದಲ್ಲಿ ಪಕ್ಷ ಸಂಕಷ್ಟದ ಸಮಯದಲ್ಲಿದ್ದಾಗ, ಕಾಂಗ್ರೆಸ್ ಪಕ್ಷದ ನಾಯಕರಾದ ನಾವುಗಳು ಸೋನಿಯಾ ಗಾಂಧಿ ಅವರ ಮುಂದೆ ಹೋಗಿ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳುವಂತೆ ಬೇಡಿಕೊಂಡೆವು. ಅವರು ನೇತೃತ್ವ ವಹಿಸಿದ ನಂತರ ನಮ್ಮ ಪಕ್ಷ ದೇಶದ ಅತ್ಯುತ್ತಮ ಆರ್ಥಿಕ ತಜ್ಞರ ಮುಂದಾಳತ್ವದಲ್ಲಿ 10 ವರ್ಷ ಆಡಳಿತ ನಡೆಸಿದೆ. ಈಗ ರಾಜಕೀಯವಾಗಿ ಕಿರುಕುಳ ನೀಡಲು ಈ ರೀತಿ ಮಾಡಲಾಗುತ್ತಿದೆ. ಇತಿಹಾಸ ಮರುಕಳಿಸಲಿದೆ. ಅವರು ರಾಹುಲ್ ಗಾಂಧಿ ಅವರನ್ನು ಜೈಲಿಗೆ ಹಾಕಿದರೂ ಅವರು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಕೇಂದ್ರ ಸರ್ಕಾರದ ಈ ದ್ವೇಷ ರಾಜಕಾರಣ ಸರಿಯಲ್ಲ. ಇದರಿಂದ ಅವರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಕೇಂದ್ರಕ್ಕೆ ಹೇಳಲು ಬಯಸುತ್ತೇನೆ. ಇದು ಕೇಂದ್ರ ಸರ್ಕಾರದ ನೈತಿಕತೆಯನ್ನಷ್ಟೇ ಕುಗ್ಗಿಸಲಿದೆ. ರಾಜಕೀಯವನ್ನು ನೇರಾನೇರವಾಗಿ ಜನರ ಮಧ್ಯೆ ಮಾಡೋಣ. ಚುನಾವಣೆಯಲ್ಲಿ ಹೋರಾಡೋಣ. ಆದರೆ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಈ ರೀತಿ ಕಿರುಕುಳ ನೀಡುವುದು ಸರಿಯಲ್ಲ” ಎಂದು ತಿಳಿಸಿದರು.

ಉಪಾಹಾರ ಕೂಟ ನನ್ನ ಹಾಗೂ ಸಿಎಂಗೆ ಸಂಬಂಧಿಸಿದ ವಿಚಾರ:

ನಾಳೆ ಸಿಎಂ ಅವರನ್ನು ಉಪಹಾರಕೂಟಕ್ಕೆ ಆಹ್ವಾನಿಸಿದ್ದೀರಾ ಎಂದು ಕೇಳಿದಾಗ, “ಇದು ನನಗೆ ಹಾಗೂ ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ ವಿಚಾರ. ನಾವಿಬ್ಬರು ಸಹೋದರರಂತೆ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ನೀವುಗಳು ಸದಾ ಗುಂಪು, ಗುಂಪು ಎಂದು ಬಿಂಬಿಸುತ್ತಿದ್ದೀರಿ. ನಮ್ಮಲ್ಲಿ ಯಾವುದೇ ಗುಂಪಿಲ್ಲ. ನಮ್ಮ ಜೊತೆ 140 ಶಾಸಕರಿದ್ದಾರೆ. ನಾವು ಹುಟ್ಟುವಾಗಲೂ ಒಬ್ಬರೇ, ಸಾಯುವಾಗಲೂ ಒಬ್ಬರೆ. ಪಕ್ಷದ ವಿಚಾರ ಬಂದಾಗ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತೇವೆ. ಈ ಬಗ್ಗೆ ಚಿಂತೆ ಬೇಡ” ಎಂದು ತಿಳಿಸಿದರು.

ಈ ವಾರ ದೆಹಲಿಯಲ್ಲಿ ಸರ್ವಪಕ್ಷ ಸಭೆ ನಡೆಯಲಿದೆಯೇ ಎಂದು ಕೇಳಿದಾಗ, “ನಾನು ಸರ್ವಪಕ್ಷ ಸಭೆ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತಿದ್ದೇನೆ. ಸಂಸತ್ ಅಧಿವೇಶನ ಆರಂಭವಾಗಿದ್ದು, ರಾಜ್ಯದ ಹಿತರಕ್ಷಣೆ ವಿಚಾರವಾಗಿ ಸಂಸದರಿಗೆ ಕೆಲವು ಜವಾಬ್ದಾರಿಗಳ ಬಗ್ಗೆ ಹೇಳಬೇಕಿದೆ” ಎಂದು ತಿಳಿಸಿದರು.

ಉತ್ತರ ಪ್ರದೇಶ ಸಂಸದ ರಾಜೀವ್ ರಾಯ್ ಎಂಬುವವರು ನಿನ್ನೆ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಎಕ್ಸ್ ಖಾತೆಯಲ್ಲಿ ಸಿಎಂ ಅವರನ್ನು ಟ್ಯಾಗ್ ಮಾಡಿ ಇದು ಅತ್ಯಂತ ಕೆಟ್ಟ ಟ್ರಾಫಿಕ್ ಜಾಮ್ ಎಂದು ಬರೆದಿರುವ ಬಗ್ಗೆ ಕೇಳಿದಾಗ, “ಅವರಿಗೆ ನನ್ನನ್ನು ದೆಹಲಿಯಲ್ಲಿ ಭೇಟಿ ಮಾಡಲು ಹೇಳಿ. ದೆಹಲಿಯಲ್ಲಿರುವ ಟ್ರಾಫಿಕ್ ಸಮಸ್ಯೆ ಏನು ಎಂದು ಅವರಿಗೆ ತೋರಿಸುತ್ತೇನೆ” ಎಂದು ತಿಳಿಸಿದರು.

ಬೆಂಗಳೂರಿನ ಇಂದಿನ ಅಭಿವೃದ್ಧಿಗೆ ಕೆಂಗಲ್ ಹನುಮಂತಯ್ಯ ಕಾರಣ:
ಕೆಂಗಲ್ ಹನುಮಂತಯ್ಯ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ವಿಧಾನಸೌಧದ ಆವರಣದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, “ಇಂದು ನಾವೆಲ್ಲರೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರನ್ನು ಸ್ಮರಿಸುತ್ತಿದ್ದೇವೆ. ವಿಧಾನ ಸೌಧ ಕಟ್ಟಿದವರು ಕೆಂಗಲ್ ಹನುಮಂತಯ್ಯ ಅವರು, ವಿಕಾಸ ಸೌಧ ಕಟ್ಟಿದವರು ಎಸ್.ಎಂ ಕೃಷ್ಣ ಅವರು, ಬೆಂಗಳೂರನ್ನು ಕಟ್ಟಿದ್ದು ಕೆಂಪೇಗೌಡರು. ಇವೆಲ್ಲವೂ ಈ ನಾಯಕರು ಬಿಟ್ಟು ಹೋಗಿರುವ ಸಾಕ್ಷಿಗುಡ್ಡೆ” ಎಂದರು.

“ಅಂದಿನ ಕಾಲದಲ್ಲಿ ರಾಜಧಾನಿಯನ್ನಾಗಿ ಬೇರೆ ಪ್ರದೇಶವನ್ನು ಆಯ್ಕೆ ಮಾಡಿದ್ದರೆ, ಇಂದು ಬೆಂಗಳೂರು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಬೆಂಗಳೂರಿನಲ್ಲಿರುವ ಹವಾಮಾನ ಕಂಡು ಇಡೀ ವಿಶ್ವದ ಜನ ಆಕರ್ಷಿತರಾಗುತ್ತಾರೆ. ಸಮುದ್ರದ ಪಕ್ಕದಲ್ಲಿನ ನಗರಗಳಿಗೆ ಆಗುತ್ತಿರುವ ಸಮಸ್ಯೆ ನೀವು ಗಮನಿಸಿದ್ದೀರಿ. ಬೆಂಗಳೂರು ದೇಶದಲ್ಲೇ ಅತ್ಯುತ್ತಮ ಸುರಕ್ಷಿತ ಪ್ರದೇಶ. ಇದಕ್ಕೆ ಮುನ್ನುಡಿ ಬರೆದವರು ಕೆಂಗಲ್ ಹನುಮಂತಯ್ಯನವರು. ನಮಗೆ ಅಧಿಕಾರ ಸಿಕ್ಕಾಗ ಇಂತಹ ಸಾಕ್ಷಿಗುಡ್ಡೆಗಳನ್ನು ಬಿಟ್ಟುಹೋಗಬೇಕು” ಎಂದು ತಿಳಿಸಿದರು.

Prev Post ಡಿ.8 ರಂದು ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ: ಸತೀಶ್ ಕಡತನಮಲೆ