ಜರ್ಮನಿಯ ಬವೇರಿಯಾ ಪಾರ್ಲಿಮೆಂಟ್ ಸಭಾಧ್ಯಕ್ಷರ ನೇತೃತ್ವದ ನಿಯೋಗದ ಭೇಟಿ ಗ್ಯಾರಂಟಿ ಸೇರಿದಂತೆ ಅಭಿವೃದ್ಧಿ ವಿಷಯ ಕುರಿತು ಚರ್ಚೆ

Banglore:

Font size:

ಜರ್ಮನಿಯ ಬವೇರಿಯಾ ಪಾರ್ಲಿಮೆಂಟ್ ಸಭಾಧ್ಯಕ್ಷರ ನೇತೃತ್ವದ ನಿಯೋಗದ ಭೇಟಿ ಗ್ಯಾರಂಟಿ ಸೇರಿದಂತೆ ಅಭಿವೃದ್ಧಿ ವಿಷಯ ಕುರಿತು ಚರ್ಚೆ ಗ್ಯಾರಂಟಿ ಯೋಜನೆಗಳ ಯಶೋಗಾಥೆ ವಿವರಿಸಿದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್

ಬೆಂಗಳೂರು, ನ.17 -

ಜರ್ಮನಿ ದೇಶದ ಬವೇರಿಯಾ ರಾಜ್ಯದ ಪಾರ್ಲಿಮೆಂಟಿನ ಸಭಾಧ್ಯಕ್ಷರಾದ ಇಲ್ಸೆ ಐಗ್ನರ್ ಅವರ ನೇತೃತ್ವದ ನಿಯೋಗವು ಸೋಮವಾರ (ನ.17) ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರಾದ ಡಾ.ಶಾಲಿನಿ ರಜನೀಶ್ ಅವರನ್ನು ಸೌಜನ್ಯಯುತ ಭೇಟಿ ಮಾಡಿ ರಾಜ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ನಡೆಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರಾದ ಶಾಲಿನಿ ರಜನೀಶ್ ಅವರು, ಉತ್ತಮ ಸಂಸದೀಯ ವ್ಯವಸ್ಥೆ ಹಾಗೂ ಅಭಿವೃದ್ಧಿ ವಿಷಯದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯವು ಎರಡು ವರ್ಷಗಳ ಹಿಂದೆ ಜಾರಿಗೆ ತಂದಿರುವ "ಗ್ಯಾರಂಟಿ" ಯೋಜನೆಗಳಿಂದ ಆಗಿರುವ ಗುಣಾತ್ಮಕ ಬದಲಾವಣೆಗಳ ಬಗ್ಗೆ ವಿವರಿಸಿದರು.

ಮುಖ್ಯಮಂತ್ರಿಯವರು ಯಾವುದೇ ತಾರತಮ್ಯವಿಲ್ಲದೇ ವಿಶೇಷವಾಗಿ ಮಹಿಳೆಯರ ಸಬಲೀಕರಣವನ್ನು ದೃಷ್ಟಿಯಲ್ಲಿಟ್ಟಕೊಂಡು ಗ್ಯಾರಂಟಿ ಯೋಜನೆ ಜಾರಿಗೊಳಿಸಿರುತ್ತಾರೆ. ರಾಜ್ಯದ 1.2 ಕೋಟಿ ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ ಸರಕಾರವು ಪ್ರತಿ ತಿಂಗಳು 2000 ರೂಪಾಯಿ ನೀಡುತ್ತಿದೆ.

ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಎರಡು ವರ್ಷಗಳಲ್ಲಿ ಮಹಿಳಾ ಉದ್ಯೋಗ ಪ್ರಮಾಣವು ಶೇ.30 ರಷ್ಟು ಹೆಚ್ಚಾಗಿದೆ.

ಗೃಹಜ್ಯೋತಿ ಯೋಜನೆ ಮೂಲಕ 200 ಯುನಿಟ್ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದ್ದು, ಇದರಿಂದ ದೈನಂದಿನ ಮನೆಗೆಲಸಗಳಿಗೆ, ವಿದ್ಯಾರ್ಥಿಗಳ ಓದಿಗೆ ಸಹಕಾರಿಯಾಗಿದೆ. ಕುಟುಂಬದ ಉಳಿತಾಯ ಪ್ರಮಾಣ ಕೂಡ ಹೆಚ್ಚಾಗಿದೆ.

ಇದಲ್ಲದೇ ಅನ್ನಭಾಗ್ಯ ಯೋಜನೆಯಡಿ ಉಚಿತ ಆಹಾರಧಾನ್ಯ ನೀಡಲಾಗುತ್ತಿದೆ. ಮಹಿಖೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಸಾಧ್ಯವಾಗಿದೆ.

ಯುವನಿಧಿ ಯೋಜನೆಯಡಿ ಎರಡು ವರ್ಷಗಳ ಕಾಲ ಭತ್ಯೆ ನೀಡಲಾಗುತ್ತಿದೆ. ಇದರಿಂದ ಕೌಶಲ್ಯಾಭಿವೃದ್ಧಿ ಜತೆಗೆ ಅವರ ಆಯ್ಕೆಯ ಉದ್ಯೋಗ ಪಡೆಯಲು ಅನುಕೂಲವಾಗುತ್ತಿದೆ.

ರಾಜ್ಯದಲ್ಲಿ ಯುವನಿಧಿ ಯೋಜನೆಯು ಕೌಶಲಾಭಿವೃದ್ಧಿಗೆ ಮತ್ತು ಸ್ವ ಉದ್ಯೋಗಕ್ಕೆ ಸಹಕಾರಿಯಾಗುತ್ತಿದೆ ಎಂದು ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ವಿವರಿಸಿದರು.

ಸಮಾನತೆ ಪ್ರಜಾಪ್ರಭುತ್ವದ ಜೀವಾಳ:

ಭಾರತ ಮತ್ತು ಜರ್ಮನಿ ಎರಡೂ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿವೆ. ಸಮಾನತೆಯು ಪ್ರಜಾಪ್ರಭುತ್ವದ ಜೀವಾಳವಾಗಿದೆ.

ಬಡವರಿಗೆ ಎಲ್ಲ ಮೂಲಸೌಲಭ್ಯ ಒದಗಿಸುವ ಮೂಲಕ ಘನತೆಯ ಬದುಕು ಕಲ್ಪಿಸುವುದು ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳ ಆಶಯವಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದರು.

ಈ ಯೋಜನೆಗಳ ಜಾರಿಯ ಬಳಿಕ ಎರಡು ವರ್ಷಗಳಲ್ಲಿ ಇಡೀ ದೇಶದಲ್ಲಿಯೇ ರಾಜ್ಯದ ತಲಾ ಆದಾಯಹೆಚ್ಚಾಗಿದೆ. ಮಹಿಳೆಯರಿಗೆ ನೀಡಲಾಗುವ ಹಣವು ಸದ್ಬಳಕೆಯಾಗುತ್ತದೆ ಎಂಬುದು ಗ್ಯಾರಂಟಿ ಯಶಸ್ಸಿನಿಂದ ತಿಳಿದುಬಂದಿದೆ.

ಮಹಿಳೆಯರ ಸ್ವಾವಲಂಬನೆ ಸಮಾಜದ ಒಟ್ಟಾರೆ ಪ್ರಗತಿದೆ ಬಹಳಷ್ಟು ಸಹಕಾರಿಯಾಗಿದೆ ಎಂದು ತಿಳಿಸಿದರು.

ನಿಯೋಗದ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಾಮಾಜಿಕ ಭದ್ರತಾ ಯೋಜನೆಗಳ ಹೊರತಾಗಿ ಈ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.

ಐದು ಸಂಶೋಧನಾ ಸಂಸ್ಥೆಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಿದ್ದು, ಇದರಿಂದ ಆಗಿರುವ ಸಕಾರಾತ್ಮಕ ಅಭಿವೃದ್ಧಿಯನ್ನು ಗುರುತಿಸಿವೆ.

ಮಹಿಳೆಯರ ಸಬಲೀಕರಣದ ಮೂಲಕ ಸರಕಾರಿ ಮತ್ತು ಖಾಸಗಿ ಕ್ಷೇತ್ರದ ಪ್ರಗತಿಗೆ ಮುಖ್ಯಮಂತ್ರಿಗಳು ಆದ್ಯತೆ ನೀಡುವಂತಹ ಯೋಜನೆಗಳನ್ನು ರೂಪಿಸಿರುತ್ತಾರೆ ಎಂದು ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು ಹಂಚಿಕೊಂಡರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಬೆಂಗಳೂರು ನಗರದ ಮಳೆನೀರಿನ ಚರಂಡಿಗಳನ್ನು ಶುದ್ಧ ಮತ್ತು ಹಸಿರು ಸ್ಥಳಗಳಾಗಿ ಪರಿವರ್ತಿಸುವುದನ್ನು ತೋರಿಸುವ ಕೆ ಹಂಡ್ರೆಡ್ ಕುರಿತ ಕಿರುಪುಸ್ತಕವನ್ನು ಮುಖ್ಯ ಕಾರ್ಯದರ್ಶಿಗಳು ಹಂಚಿಕೊಂಡರು.

ಪರಿಸರದ ಬಗ್ಗೆ ಕಾಳಜಿಯಾಗಿ ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ಡೀಪ್‍ಟೆಕ್, ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ ಇತ್ಯಾದಿಗಳಲ್ಲಿ ಪರಸ್ಪರ ಸಹಕಾರವನ್ನು ಸಕ್ರಿಯಗೊಳಿಸಲು ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಭಾಗವಹಿಸುವ ನಿಯೋಗದ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು.

ಬವೇರಿಯಾ ರಾಜ್ಯದ ಅಭಿವೃದ್ಧಿ ಯೋಜನೆಗಳ ಜತೆ ಕರ್ನಾಟಕ ರಾಜ್ಯವು ಸದಾ ಕೈಜೋಡಿಸಲಿದೆ. ಮಾಹಿತಿ ತಂತ್ರಜ್ಞಾನ ಜತೆಗೆ ಸುಸ್ಥಿರ ಅಭಿವೃದ್ಧಿಗೆ ಜತೆಯಾಗಲಿದೆ ಎಂದು ಡಾ.ಶಾಲಿನಿ ರಜನೀಶ್ ಹೇಳಿದರು.

ಸಂಸದೀಯ ವ್ಯವಸ್ಥೆ, ಸ್ಥಳೀಯ ಸಂಸ್ಥೆಗಳ ಆಡಳಿತ, ಮಹಿಳೆಯರ ಸಬಲೀಕರಣ ಕುರಿತು ನಿಯೋಗವು ಚರ್ಚಿಸಿತು.

ಇದೇ ವೇಳೆ ಸಾಂಪ್ರದಾಯಿಕ ಬೆಳ್ಳಿಯ ಕರಕುಶಲತೆ ಹೊಂದಿರುವ ಸ್ಮರಣಿಕೆ ಮತ್ತು ಬಿದರಿ ಕಲೆ ಹಾಗೂ ಕಸೂತಿ ಕಲೆಯ ವಸ್ತುಗಳನ್ನು ಬವೇರಿಯನ್ ಸಂಸತ್ತಿನ ಅಧ್ಯಕ್ಷರಿಗೆ ನೆನಪಿನ ಕಾಣಿಕೆ ನೀಡಿದರು.

“ಒಂದು ರಾಜ್ಯ-ಹಲವು ಜಗತ್ತು” ಹೆಗ್ಗಳಿಕೆಯನ್ನು ಹೊಂದಿರುವ ಕರ್ನಾಟಕ ರಾಜ್ಯವು ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಹೊಂದಿದೆ. ಮುಂದಿನ ಬಾರಿ ಬೆಂಗಳೂರು ಮಾತ್ರವಲ್ಲದೇ ಇಡೀ ರಾಜ್ಯ ಸುತ್ತಾಡುವ ಮೂಲಕ ವೈಭವವನ್ನು ಆನಂದಿಸುವಂತೆ ನಿಯೋಗಕ್ಕೆ ಆಹ್ವಾನ ನೀಡಿದರು.

ಇದಲ್ಲದೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–2 ರಲ್ಲಿರುವ ಕಲಾ ಲೋಕ ಮಳಿಗೆಗೆ ಭೇಟಿ ನೀಡುವ ಮೂಲಕ ಕೈಕುಸುರಿಯ ಅದ್ಭುತ ಕಲಾಕೃತಿಗಳನ್ನು ವೀಕ್ಷಿಸುವಂತೆ ತಿಳಿಸಿದರು.

ಜರ್ಮನಿ ದೇಶದ ಬವೇರಿಯಾ ರಾಜ್ಯದ ಪಾರ್ಲಿಮೆಂಟಿನ ಸಭಾಧ್ಯಕ್ಷರಾದ ಇಲ್ಸೆ ಐಗ್ನರ್ ಅವರ ನೇತೃತ್ವದ ಹದಿನಾಲ್ಕು ಜನರ ನಿಯೋಗದ ಸದಸ್ಯರು ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

Prev Post ದೇಶವನ್ನು ಬಲಿಷ್ಠಗೊಳಿಸುವಲ್ಲಿ ಮಾಧ್ಯಮ ಕ್ಷೇತ್ರದ ಕೊಡುಗೆ ಪ್ರಮುಖವಾದದ್ದು - ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್
Next Post ಬವೇರಿಯಾ ಜತೆ ಪಾಲುದಾರಿಕೆಗೆ ಯಥೇಚ್ಛ ಅವಕಾಶ: ಸಚಿವ ಎಂ ಬಿ ಪಾಟೀಲ ಚರ್ಚೆ