ಅಹ್ಮದಾಬಾದ್ ಕರ್ನಾಟಕ ಸಂಘಕ್ಕೆ ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ಗುಜರಾತ್ ಸರಕಾರದ ಜತೆ ಚರ್ಚಿಸುವೆ ಎಂದ ಕೇಂದ್ರ ಸಚಿವರು ಗುಜರಾತ್ ಕನ್ನಡಿಗರ ಭಾಷಾಭಿಮಾನಕ್ಕೆ ಮನಸೋತ ಕೇಂದ್ರ ಸಚಿವರು
ಅಹ್ಮದಾಬಾದ್ (ಗುಜರಾಜ್): ಇಲ್ಲಿನ ಕರ್ನಾಟಕ ಸಂಘಕ್ಕೆ ಕನ್ನಡ ಭವನ ನಿರ್ಮಾಣಕ್ಕೆ ಬೇಕಿರುವ ನಿವೇಶನ ಕೊಡಿಸುವುದಕ್ಕೆ ಗುಜರಾತ್ ಸರಕಾರದ ಜತೆ ಚರ್ಚೆ ನಡೆಸುವುದಾಗಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಭರವಸೆ ನೀಡಿದರು.
ಅಹ್ಮದಾಬಾದ್ ಕರ್ನಾಟಕ ಸಂಘವು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ೭೦ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಸಚಿವರು.
ಅಹ್ಮದಾಬಾದ್ ನಗರ ಒಂದರಲ್ಲಿಯೇ ಸಾವಿರಾರು ಕನ್ನಡ ಕುಟುಂಬಗಳು ಅನೇಕ ದಶಕಗಳಿಂದಲೂ ನೆಲೆಸಿವೆ. ನಿಮ್ಮೆಲ್ಲರ ಕನ್ನಡಸೇವೆ ನನಗೆ ಬಹಳ ಸಂತೋಷ ಉಂಟು ಮಾಡಿದೆ. ಕರ್ನಾಟಕ ಸಂಘಕ್ಕೆ ಸ್ವಂತ ಭವನ ಬೇಕು ಎಂದು ಕೇಳಿದ್ದೀರಿ. ಈ ಬಗ್ಗೆ ನಾನು ಅದಷ್ಟು ಬೇಗ ಗುಜರಾತ್ ಸರಕಾರದ ಜತೆ ಮಾತುಕತೆ ನಡೆಸುತ್ತೇನೆ. ಸಂಘಕ್ಕೆ ನಿವೇಶನ ಹಾಗೂ ಕನ್ನಡ ಭವನ ನಿರ್ಮಾಣಕ್ಕೆ ನೆರವು ಇರುತ್ತದೆ ಎಂದು ಕುಮಾರಸ್ವಾಮಿ ಅವರು ಭರವಸೆ ನೀಡಿದರು.
ನಿಮ್ಮ ಭಾಷಾಭಿಮಾನಕ್ಕೆ ನಾನು ಮೂಕನಾಗಿದ್ದೇನೆ. ನನಗೆ ಬಹಳ ಸಂತೋಷ ಉಂಟಾಗಿದೆ. ನಾನು ಅಹ್ಮದಾಬಾದ್ ನಲ್ಲಿ ಇದ್ದೇನೆಯೋ ಅಥವಾ ಕರ್ನಾಟಕದಲ್ಲಿ ಇದ್ದೇನೆಯೋ ಎನ್ನುವ ಭಾವನೆ ಬರುವಷ್ಟು ಕನ್ನಡ ವಾತಾವರಣ ಇಲ್ಲಿದೆ. 'ಎಲ್ಲಾದರೂ ಇರು, ಎಂತಾದರೂ ಇರು, ನೀ ಕನ್ನಡವಾಗಿರು..' ಎಂದು ರಾಷ್ಟ್ರಕವಿ ಕುವೆಂಪು ಅವರು ನೀಡಿರುವ ಸಂದೇಶದಂತೆ ನೀವೆಲ್ಲರೂ ಕನ್ನಡಕ್ಕೆ ದೊಡ್ಡ ಸೇವೆ ಸಲ್ಲಿಸುತ್ತಿದ್ದೀರಿ ಎಂದು ಕೇಂದ್ರ ಸಚಿವರು ಹೇಳಿದರು.
ಇಲ್ಲಿ ನೀವು ಬದುಕು ಕಟ್ಟಿಕೊಂಡು ನಿಮ್ಮ ಜೀವನ ನೀವು ನೋಡಿಕೊಳ್ಳದೆ ತಾಯ್ನಾಡನ್ನು ಮರೆಯದೇ ಕನ್ನಡ ಸೇವೆ ಮಾಡುತ್ತಿರುವುದು ನನಗೆ ಅಚ್ಚರಿ ಉಂಟು ಮಾಡಿದೆ. ನಾನು ಉಕ್ಕು ಸಚಿವನಾದ ಮೇಲೆ ಛತ್ತೀಸಗಢದ ಬಿಲಾಯಿ ಉಕ್ಕು ಕಾರ್ಖಾನೆಗೆ ಭೇಟಿ ನೀಡಿದ್ದೆ. ಅಲ್ಲಿಯೂ ದಶಕಗಳ ಹಿಂದೆಯೇ ಉಕ್ಕು ಕಾರ್ಖಾನೆ ಕೆಲಸಕ್ಕೆ ಬಂದು ಉದ್ಯೋಗ ಮಾಡಿಕೊಂಡು ಅಲ್ಲಿಯೇ ಶಾಶ್ವತವಾಗಿ ನೆಲೆಸಿದ್ದಾರೆ. ಅಲ್ಲಿಯೂ ಕನ್ನಡ ಸಂಘದ ಸದಸ್ಯರನ್ನು ನಾನು ಭೇಟಿ ಮಾಡಿದ್ದೆ ಎಂದು ಕೇಂದ್ರ ಸಚಿವರು ಹೇಳಿದರು.
ಕನ್ನಡಿಗರು ಕರ್ನಾಟಕ ಬಿಟ್ಟು ಎಲ್ಲೂ ಹೋಗುವುದಿಲ್ಲ ಎನ್ನುವ ನಂಬಿಕೆ ಇಷ್ಟು ದಿನ ನನ್ನಲ್ಲಿ ಇತ್ತು. ಆದರೆ ಅಹ್ಮದಾಬಾದ್ ನಲ್ಲಿ ನಿಮ್ಮನ್ನು ನೋಡಿದ ಮೇಲೆ ನನ್ನ ಅಭಿಪ್ರಾಯ ಬದಲಾಗಿದೆ. ಕನ್ನಡಿಗರು ಅಹ್ಮದಾಬಾದ್, ಬಿಲಾಯಿ ಮಾತ್ರವಲ್ಲ ದೇಶ, ವಿಶ್ವದ ಎಲ್ಲೆಡೆ ನೆಲೆಸಿದ್ದಾರೆ. ಈ ಭೂಮಿಯ ಮೂಲೆ ಮೂಲೆಯಲ್ಲೂ ಕನ್ನಡಿಗರು ಬದುಕು ಅರಸಿಕೊಂಡು ಹೋಗಿ ನೆಲೆಸಿ ಕನ್ನಡದ ಸೇವೆ ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದರು.
ಗುಜರಾಜ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಜಸ್ಟೀಸ್ ಎನ್. ಎಸ್. ಸಂಜಯ್ ಗೌಡ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತಾಡಿದರು.
ಸಂಘದ ಅಧ್ಯಕ್ಷ ಹೆಚ್.ವಿ. ಬೆಣ್ಣೂರ, ಪ್ರಧಾನ ಕಾರ್ಯದರ್ಶಿ ಸುಮನಲಾಲ್ ಕೊಡಿಯಾಲ್ ಬೇಲ್, ಗಾಂಧೀನಗರ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಕಮಲೀಶ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.






