ಹಳೆ ಬಂದರು ಇಂದಿರಾ ಕ್ಯಾಂಟೀನ್ ಶೀಘ್ರ ಆರಂಭಕ್ಕೆ ಒತ್ತಾಯಿಸಿ ಡಿವೈಎಫ್ಐ, ಶ್ರಮಿಕರ ಸಂಘದಿಂದ ಪ್ರತಿಭಟನೆ
From Jayaram Udupi
ಮಂಗಳೂರು ;
ಹಳೆ ಬಂದರು ಇಂದಿರಾ ಕ್ಯಾಂಟೀನ್ ಶೀಘ್ರ ಆರಂಭಕ್ಕೆ ಒತ್ತಾಯಿಸಿ ಡಿವೈಎಫ್ಐ, ಶ್ರಮಿಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಹಳೇಬಂದರು ಸಗಟು ಮಾರುಕಟ್ಟೆ ಹಮಾಲಿ ಕಾರ್ಮಿಕರು ಮೀನುಗಾರಿಕಾ ಧಕ್ಕೆಯಲ್ಲಿ ದುಡಿಯುವ ಕಾರ್ಮಿಕರು, ಸರಕು ಸಾಗಾಟ ಲಾರಿ, ಟೆಂಪೋ ಚಾಲಕರು , ಮೀನುಗಾರರು ಅತ್ಯಧಿಕ ಸಂಖ್ಯೆಯಲ್ಲಿ ಇರುವ ಬಂದರು ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಬೇಕು. ಆದ್ಯತೆಯಲ್ಲಿ ನಿರ್ಮಿಸಿಕೊಡಬೇಕಿದ್ದ ಇಂದಿರಾ ಕ್ಯಾಂಟೀನನ್ನು ತೆರೆಯದೆ ನಿರ್ಲಕ್ಷ್ಯ ಮಾಡಿರುವ ಜಿಲ್ಲಾಡಳಿತದ ಕ್ರಮ ಖಂಡನೀಯ ಎಂದು ಪ್ರತಿಭಟನಕಾರರು ಆಪಾದಿಸಿದರು.
ಕೂಡಲೇ ಇಂದಿರಾ ಕ್ಯಾಂಟೀನ್ ಸೇವೆ ಆರಂಭಿಸಲು ಒತ್ತಾಯಿಸಿದರು.
ಹಳೆ ಬಂದರು ಹಳೆ ಮುನ್ಸಿಪಲ್ ಕಚೇರಿ ಬಳಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್ ಎದುರು ಪ್ರತಿಭಟನೆ ನಡೆಯಿತು.
ಡಿವೈಎಫ್ಐ ಜಿಲ್ಲಾಧ್ಯಕ್ಷರೂ, ಬಂದರು ಶ್ರಮಿಕರ ಸಂಘದ ಅಧ್ಯಕ್ಷರೂ ಆಗಿರುವ ಬಿ.ಕೆ ಇಮ್ತಿಯಾಜ್ ಪ್ರತಿಭಟನಾನಿರತರನ್ನು ಉದ್ಧೇಶಿಸಿ ಮಾತನಾಡುತ್ತಾ ನಗರದ ಆರ್ಥಿಕತೆಗೆ ಜನ್ಮ ಕೊಟ್ಟ ಬಂದರು ಪ್ರದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರನ್ನು ಕಡೆಗಣಿಸಲಾಗುತ್ತಿದೆ, ಬಂದರಿನ ಕಾರ್ಮಿಕರ ಶ್ರಮದಿಂದ ನಗರ ಅಭಿವೃದ್ಧಿ ಆಗಿದೆ. ಆದರೆ ಹಳೆ ಬಂದರಿನ ಕಾರ್ಮಿಕರಿಗೆ ಆದ್ಯತೆಯಲ್ಲಿ ಆರಂಭಿಸಬೇಕಿದ್ದ ಇಂದಿರಾ ಕ್ಯಾಂಟೀನ್ ಕಾಮಗಾರಿ ಮುಗಿಸಿ ವರ್ಷಗಳು ಕಳೆದರೂ ತೆರೆಯದೆ ಬಡವರಿಗೆ ಅನ್ಯಾಯ ಮಾಡಲಾಗಿದೆ ಎಂದರು.
ದುಬಾರಿ ಹೋಟೆಲ್ ಆಹಾರ ಖರೀದಿಸಲು ಸಾಧ್ಯವಿಲ್ಲದ ಕಾರ್ಮಿಕರ ಹಸಿವು ತಣಿಸಲು ಕೂಡಲೇ ಇಂದಿರಾ ಕ್ಯಾಂಟೀನ್ ತೆರೆಯಬೇಕೆಂದು ಆಗ್ರಹಿಸಿದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ಕೇರಳದ ಮಾವೇಲಿ ಹೋಟೆಲ್, ತಮಿಳುನಾಡಿನ ಅಮ್ಮ ಕ್ಯಾಂಟೀನ್ ಮಾದರಿಯಲ್ಲಿ ಕರ್ನಾಟಕದಲ್ಲೂ ಬಡವರಿಗೆ ರಿಯಾಯಿತಿ ದರದ ಸರಕಾರಿ ಕ್ಯಾಂಟೀನ್ ಆರಂಭಿಸಲು ದಶಕಗಳ ಹಿಂದೆ ಡಿವೈಎಫ್ಐ ನಡೆಸಿದ ಹೋರಾಟದ ಫಲವಾಗಿ ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಇಂದಿರಾ ಕ್ಯಾಂಟೀನ್ ಯೋಜನೆ ಆರಂಭಿಸಿತ್ತು. ಆದರೆ ಮಂಗಳೂರಿನಲ್ಲಿ ಅಗತ್ಯ ಇರುವ ಬಂದರು ಪ್ರದೇಶದಲ್ಲಿ ಆರಂಭಿಸದೆ ನಿರ್ಲಕ್ಷ್ಯ ಮಾಡಿರುವುದರಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿದಿನಗಳ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಬಂದರು ಶ್ರಮಿಕರ ಸಂಘದ ಪ್ರಮುಖರಾದ ಫಾರೂಕ್ ಉಳ್ಳಾಲಬೈಲ್, ಶಮೀರ್ ಬೋಳಿಯಾರ್, ಮಾಧವ ಕಾವೂರು, ಮೋಹನ ಕುಂಪಲ, ಹರೀಶ್ ಕೆರೆಬೈಲ್, ಅಕ್ಬರ್, ಶರೀಫ್ ಕುಪ್ಪೆಪದವು, ಹಕೀಮ್ ಬೆಂಗ್ರೆ, ಇಮ್ರಾನ್, ಯು.ಪಿ ಅಬ್ಬಾಸ್, ಹನೀಫ್, ಡಿವೈಎಫ್ಐ ಮುಖಂಡರಾದ ತಯ್ಯೋಬ್ ಬೆಂಗ್ರೆ, ಅಶ್ರಫ್ ಬಂದರ್,ನೌಶಾದ್ ಬೆಂಗ್ರೆ, ಹನೀಫ್ ಬೆಂಗ್ರೆ, ರಿಜ್ವಾನ್ ಕೊಲ್ನಾಡ್,ಖಾದರ್ ಅದ್ಯಪಾಡಿ, ಆಟೋ ರಿಕ್ಷಾ ಚಾಲಕರ ಸಂಘದ ಮುಖಂಡ ಅನ್ಸಾರ್ ಬಜಾಲ್, ಟೆಂಪೋ ಚಾಲಕರ ಸಂಘದ ಮುಖಂಡ ನಿಸಾರ್ ಬೆಂಗ್ರೆ ಮುಂತಾದವರು ಉಪಸ್ಥಿತರಿದ್ದರು