ರಾಜ್ಯದ ಸಮಗ್ರ ಕೈಗಾರಿಕಾ ಅಭಿವೃದ್ಧಿಗೆ ಆಕರ್ಷಕ ಉಪಕ್ರಮಗಳು ಅನಿವಾರ್ಯ: ಎಂ ಬಿ ಪಾಟೀಲ

Bangalore:

Font size:

ರಾಜ್ಯದ ಸಮಗ್ರ ಕೈಗಾರಿಕಾ ಅಭಿವೃದ್ಧಿಗೆ ಆಕರ್ಷಕ ಉಪಕ್ರಮಗಳು ಅನಿವಾರ್ಯ: ಎಂ ಬಿ ಪಾಟೀಲ

*ರಾಜ್ಯದ ಸಮಗ್ರ ಕೈಗಾರಿಕಾ ಅಭಿವೃದ್ಧಿಗೆ ಆಕರ್ಷಕ ಉಪಕ್ರಮಗಳು ಅನಿವಾರ್ಯ: ಎಂ ಬಿ ಪಾಟೀಲ*

*ಪ್ರಾದೇಶಿಕ ಅಸಮಾನತೆ ನಿವಾರಣಾ ಸಮಿತಿ ಸಭೆಯಲ್ಲಿ ಪ್ರತಿಪಾದನೆ*

ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಹೊರತುಪಡಿಸಿ, ರಾಜ್ಯದ ಉಳಿದ ಹಿಂದುಳಿದ ಭಾಗಗಳಲ್ಲಿ ಉದ್ಯಮಗಳನ್ನು ಬೆಳೆಸಬೇಕೆಂದರೆ ತೆರಿಗೆ ರಜೆ, ಹೆಚ್ಚಿನ ಸಹಾಯಧನ, ಕೇಂದ್ರ ಸರಕಾರದಿಂದ ಪಡೆದುಕೊಳ್ಳಬಹುದಾದ ನೆರವು ಸೇರಿದಂತೆ ಸಮಗ್ರ ದೃಷ್ಟಿಕೋನದ ತುರ್ತು ಅಗತ್ಯವಿದೆ. ಇವುಗಳ ಜತೆಗೆ ನಾವು ಕೈಗಾರಿಕೆಗಳು ಬೆಳೆಯಲು ಬೇಕಾದ ಕಾರ್ಯಪರಿಸರವನ್ನು ಸೃಷ್ಟಿಸಬೇಕಾಗಿದೆ. ಈ ವಿಚಾರದಲ್ಲಿ ನಾವು ನೆರೆಹೊರೆಯ ರಾಜ್ಯಗಳ ನೀತಿಗಳನ್ನೂ ಗಮನಿಸಿ, ದಾಪುಗಾಲಿಡಬೇಕಾದ ತುರ್ತಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಂಗಳವಾರ ಹೇಳಿದ್ದಾರೆ.

ಇಲ್ಲಿನ ಖನಿಜ ಭವನದಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿಯು ತಮ್ಮೊಂದಿಗೆ ನಡೆಸಿದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ಈ ವಿಚಾರಗಳನ್ನು ಮುಂದಿಟ್ಟಿದ್ದಾರೆ.

ಸಭೆಯಲ್ಲಿ ಮಾತನಾಡಿದ ಅವರು, ಹಿಂದೆ ಡಿ ಎಂ ನಂಜುಂಡಪ್ಪ ವರದಿಯ ಶಿಫಾರಸಿನಂತೆ ಹಿಂದುಳಿದ ಮತ್ತು ಅತೀ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ 2007ರಿಂದ 2021ರವರೆಗೆ 29,422 ಕೋಟಿ ರೂ. ಕೊಡಲಾಗಿದೆ. ಬೆಂಗಳೂರಿನ ಮೇಲೆ ಕೈಗಾರಿಕೆಗಳ ವಿಪರೀತ ಒತ್ತಡವಿದೆ. ಇನ್ನೊಂದೆಡೆ ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ ಸೇರಿದಂತೆ ಇಡೀ ರಾಜ್ಯದಲ್ಲಿ ಕೈಗಾರಿಕೆಗಳು ನೆಲೆಯೂರುವಂತೆ ಮಾಡಬೇಕಾಗಿದೆ. ಆದರೆ ಈಗ ಇರುವ ಉಪಕ್ರಮಗಳು ಅಷ್ಟೊಂದು ಆಕರ್ಷಕವಾಗಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಈಗ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ (ಝೋನ್‌ 1 ಮತ್ತು 2) ಉದ್ಯಮಗಳನ್ನು ಸ್ಥಾಪಿಸುವವರಿಗೆ ಶೇ.25ರವರೆಗೆ ಬಂಡವಾಳ ಹೂಡಿಕೆ ಸಬ್ಸಿಡಿ ಮತ್ತು ಹೆಚ್ಚುವರಿಯಾಗಿ ಶೇ.5ರಷ್ಟು ಹೂಡಿಕೆ ಸಬ್ಸಿಡಿ, ಝೋನ್-‌3ರಡಿ ಬರುವ ಪ್ರದೇಶಗಳಲ್ಲಿ ಭೂಮಿಯ ಮೇಲಿನ ನೋಂದಣಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ, ಸ್ಥಳೀಯ ಯುವಜನರಿಗೆ ಉದ್ಯೋಗ ನೀಡಲೆಂದು ಶೇ.7.5ರಿಂದ ಶೇ.15ರವರೆಗೆ ಬೋನಸ್‌ ಸಬ್ಸಿಡಿ ಕೊಡಲಾಗುತ್ತಿದೆ. ಆದರೆ, ಕೈಗಾರಿಕೆಗಳ ಬೆಳವಣಿಗೆಗೆ ಇದು ಸಾಲದು ಎಂದು ಅವರು ವಿವರಿಸಿದ್ದಾರೆ.

ಹಿಂದೆ ಎಸ್‌ ಎಂ ಕೃಷ್ಣ ಮುಖ್ಯಮಂತ್ರಿಗಳಾಗಿದ್ದಾಗ ಐ.ಟಿ. ವಲಯದ ಕಂಪನಿಗಳಿಗೆ ಹತ್ತು ವರ್ಷಗಳ ತೆರಿಗೆ ರಜೆ ಕೊಟ್ಟಿದ್ದರು. ಇದರಿಂದ ರಾಜ್ಯವು ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಅದೇ ರೀತಿಯಲ್ಲಿ ಈಗ ಬೆಂಗಳೂರನ್ನು ಹೊರತುಪಡಿಸಿ ರಾಜ್ಯದ ಬೇರೆಬೇರೆ ಭಾಗಗಳಲ್ಲಿ ಇಂತಹ ಸೌಲಭ್ಯಗಳನ್ನು ಕೊಟ್ಟು, ಕೈಗಾರಿಕೆಗಳನ್ನು ಬೆಳೆಸಬೇಕಿದೆ. ಜೊತೆಗೆ ಇದಕ್ಕೆ ಪೂರಕವಾದ ಶಿಕ್ಷಣ ವ್ಯವಸ್ಥೆ, ಕೌಶಲ್ಯಾಭಿವೃದ್ಧಿ, ಪ್ರತಿಭಾವಂತ ಮಾನವ ಸಂಪನ್ಮೂಲ ಅಭಿವೃದ್ಧಿ, ಜಾಗತಿಕ ಗುಣಮಟ್ಟದ ಮೂಲಸೌಕರ್ಯ ಜಾಲ ಇವುಗಳ ಕಡೆಗೂ ತಮ್ಮ ವರದಿಯಲ್ಲಿ ಒತ್ತು ಕೊಡಬೇಕಾಗಿದೆ ಎಂದು ಅವರು ನುಡಿದಿದ್ದಾರೆ.

ಪ್ರಾದೇಶಿಕ ಅಸಮಾನತೆ ನಿವಾರಣೆ ಸಮಿತಿಯು ಬೆಂಗಳೂರನ್ನು ಹೊರತುಪಡಿಸಿ ಉಳಿದ ಭಾಗಗಳಲ್ಲಿ ದೇವಸ್ಥಾನ ಮತ್ತು ನೀರಿನ ಆಸರೆಗಳನ್ನು ಆಧರಿಸಿದ ಪ್ರವಾಸೋದ್ಯಮಕ್ಕೂ ಗಮನ ಹರಿಸಬೇಕು. ಉತ್ತರ ಕರ್ನಾಟಕದಲ್ಲಿ ಇದಕ್ಕೆ ಯಥೇಚ್ಛ ಅವಕಾಶಗಳಿವೆ. ಆದರೆ, ವಾಸ್ತವದಲ್ಲಿ ಇವೆಲ್ಲ ನನೆಗುದಿಗೆ ಬಿದ್ದಿದೆ. ತಮ್ಮ ವರದಿಯಲ್ಲಿ ಈ ಅಂಶಗಳ ಬಗ್ಗೆಯೂ ಪ್ರಸ್ತಾಪಿಸಿದರೆ ಉತ್ತಮ ಎಂದು ಪಾಟೀಲ ಅಭಿಪ್ರಾಯಪಟ್ಟರು.

ರಾಜ್ಯ ಸರಕಾರವು ಹಿಂದುಳಿದ ಜಿಲ್ಲೆಗಳಲ್ಲಿ (ಟೈಯರ್-‌2 ನಗರಗಳು) ಕ್ಷಿಪ್ರವಾಗಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ವರ್ಷದ ಫೆಬ್ರವರಿಯಲ್ಲಿ ನಡೆಸಿದ ಜಾಗತಿಕ ಹೂಡಿಕೆದಾರರ ಸಮಾವೇಶದ ಮೂಲಕ ಖಾತ್ರಿಯಾಗಿರುವ 10.27 ಲಕ್ಷ ಕೋಟಿ ರೂ. ಹೂಡಿಕೆಯಲ್ಲಿ ಶೇ.75ರಷ್ಟು ಬೆಂಗಳೂರಿಂದ ಆಚೆ ಇರುವ ಪ್ರದೇಶಗಳಿಗೆ ಹೋಗುವಂತೆ ನೋಡಿಕೊಳ್ಳಲಾಗಿದೆ. ಜೊತೆಗೆ ಈ ಒಟ್ಟು ಹೂಡಿಕೆಯಲ್ಲಿ ಶೇ.45ರಷ್ಟು ಬಂಡವಾಳವು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆಗುವಂತೆ ನೋಡಿಕೊಳ್ಳಲಾಗಿದೆ ಎಂದು ಅವರು ಅಂಕಿಅಂಶಗಳ ಸಮೇತ ವಿವರಿಸಿದ್ದಾರೆ.

ಕೇಂದ್ರ ಸರಕಾರವು ತನ್ನ ʻಮಹತ್ವಾಕಾಂಕ್ಷಿ ಜಿಲ್ಲೆಗಳ ಅಭಿವೃದ್ಧಿʼ ಕಾರ್ಯಕ್ರಮದಡಿ ರಾಜ್ಯದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಕೂಡ ಸೇರಿಸಿಕೊಂಡಿದೆ. ಇದರಡಿಯಲ್ಲಿ ವಿಶೇಷ ಯೋಜನೆಗಳು, ಹಿಂದುಳಿದ ಪ್ರದೇಶಗಳಿಗೆ ಮೀಸಲಾಗಿರುವ ಅನುದಾನದ ನಿಧಿ ಮತ್ತು ಹೆಚ್ಚುವರಿ ಹಣಕಾಸು ನೆರವು ಸಿಗುತ್ತದೆ. ಇದನ್ನು ಆಧರಿಸಿ ನಾವು ಕೂಡ ಅತ್ಯುತ್ತಮ ಕಾರ್ಯಪರಿಸರ ಸೃಷ್ಟಿ, ಹಿಂದುಳಿದ ಪ್ರದೇಶಗಳಿಗೆ ಕೇಂದ್ರದಿಂದ ಹೆಚ್ಚುವರಿ ಪ್ರೋತ್ಸಾಹನಾ ಭತ್ಯೆಗಳ ಪಡೆಯುವಿಕೆ, ವಿಶೇಷ ಅಭಿವೃದ್ಧಿ ನಿಧಿ ಮುಂತಾದವನ್ನು ಮಾಡಬೇಕು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಸಭೆಯಲ್ಲಿ ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕೈಗಾರಿಕಾ ಇಲಾಖೆ ತಾಂತ್ರಿಕ ನಿರ್ದೇಶಕ ರಮೇಶ, ಸಮಿತಿಯ ಅಧ್ಯಕ್ಷ ಎಂ ಗೋವಿಂದರಾವ್‌, ಸದಸ್ಯರಾದ ಡಾ.ಸೂರ್ಯನಾರಾಯಣ, ಡಾ.ಎಸ್‌ ಟಿ ಬಾಗಲಕೋಟಿ, ಎನ್‌ ಕೆ ಸಂಗೀತಾ, ಯೋಜನಾ ಇಲಾಖೆಯ ಉಪನಿರ್ದೇಶಕಿ ಕವಿತಾ ಉಪಸ್ಥಿತರಿದ್ದರು.

Prev Post ಗದಗ ಜಿಲ್ಲೆಯ ಲಕ್ಕುಂಡಿಗೆ ಯುನೆಸ್ಕೋ ಸ್ಥಾನಮಾನ: ಎಚ್.ಕೆ. ಪಾಟೀಲ
Next Post ಆರೆಸ್ಸೆಸ್ ನಿಷೇಧಿಸಲು ಸಾಧ್ಯವಿಲ್ಲ: ವಿಜಯೇಂದ್ರ