ಹೆಸರುಘಟ್ಟದಲ್ಲಿರುವ ಸಿನಿಮಾ ಆಟೋ ಗ್ರಾಫಿ ಹಾಗೂ ಸೌಂಡ್ ರೆಕಾಡಿರ್ಂಗ್ ಬಲಿಷ್ಠ ಗೊಳಿಸಲು ತಾಂತ್ರಿಕ ತಜ್ಞರ ಸಮಿತಿ ರಚಿಸಲು ನಿರ್ಧಾರ - ಸಚಿವ ಡಾ. ಎಂ.ಸಿ ಸುಧಾಕರ್
ಬೆಂಗಳೂರು, ಅ.13 -
ಹೆಸರುಘಟ್ಟದಲ್ಲಿರುವ ದೇಶದ ಮೊದಲ ಸಿನಿಮಾ ಆಟೋ ಗ್ರಾಫಿ ಹಾಗೂ ಸೌಂಡ್ ರೆಕಾಡಿರ್ಂಗ್ ಮತ್ತು ಇಂಜಿನಿಯರಿಂಗ್ ಪಾಲಿಟೆಕ್ನಿಕ್ ಕಾಲೇಜನ್ನು ಈಗಿನ ಕಾಲಘಟ್ಟಕ್ಕೆ ಸೂಕ್ತವಾಗಿ ಬಲಿಷ್ಠ ಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಚಿತ್ರರಂಗದ ಅನುಭವಿ ತಾಂತ್ರಿಕ ತಜ್ಞರ ಸಮಿತಿ ರಚಿಸಲು ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ ಸುಧಾಕರ್ ನಿರ್ಧರಿಸಿದ್ದಾರೆ.
1943 ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ನವರ ದೂರದೃಷ್ಟಿಯ ಫಲವಾಗಿ ಸಿನಿಮಾ ಹಾಗೂ ಸೌಂಡ್ ರೆಕಾಡಿರ್ಂಗ್ ಮತ್ತು ಇಂಜಿನಿಯರಿಂಗ್ ಕೋರ್ಸ್ ಅನ್ನು ಶ್ರೀ ಜಯಚಾಮರಾಜೇಂದ್ರ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಆರಂಭಿಸಲಾಗಿತ್ತು. 1996ರಲ್ಲಿ ಈ ಕೋರ್ಸ್ ಅನ್ನು ವಿಶ್ವ ಬ್ಯಾಂಕ್ ನೆರವಿನ ಆಧಾರದಲ್ಲಿ ಸರ್ಕಾರಿ ಫಿಲಂ ಅಂಡ್ ಟಿವಿ ಇನ್ಸಿಟಿಟ್ಯೂಟ್ ಆಗಿ ಹೆಸರು ಬದಲಾಯಿಸಿ 25 ಎಕರೆ ವಿಸ್ತೀರ್ಣವಿರುವ ಹೆಸರುಘಟ್ಟಕ್ಕೆ ಸ್ಥಳಾಂತರಿಸಲಾಗಿತ್ತು.
ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದ್ದ ಕಾರಣ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ ಸುಧಾಕರ್ ಅವರಿಂದ ಹೆಸರುಘಟ್ಟದಲ್ಲಿರುವ ಸರ್ಕಾರಿ ಫಿಲಂ ಅಂಡ್ ಟಿವಿ ಇನ್ಸಿಟಿಟ್ಯೂಟ್‍ಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ಈಗ ಇರುವ ಫಿಲಂ ಅಂಡ್ ಟಿವಿ ಇನ್ಸಿಟಿಟ್ಯೂಟ್ ನಲ್ಲಿ ತಾಂತ್ರಿಕ ಸಲಕರಣೆಗಳ ಕೊರತೆ ಇದ್ದು, ಅವುಗಳನ್ನ ಪಟ್ಟಿ ಮಾಡಿ ನೂತನ ತಂತ್ರಜ್ಞಾನದ ಸಲಕರಣೆಗಳನ್ನು ಕಲ್ಪಿಸಿ ಕೊಡುವ ತುರ್ತು ಕ್ರಮದ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.
ಫಿಲ್ಮ್ ಅಂಡ್ ಟಿವಿ ಇನ್ಸಿಟಿಟ್ಯೂಟ್ ನಲ್ಲಿ ಸದ್ಯ ಈಗ ಸೌಂಡ್ ಇಂಜಿನಿಯರಿಂಗ್ ಹಾಗೂ ಸಿನಿಮಾಟೋಗ್ರಾಫಿ ಡಿಪ್ಲೋಮೋ ಕೋರ್ಸ್ ಗಳು ಮಾತ್ರ ಇದ್ದು, ಇದಕ್ಕೆ ಪೂರಕವಾದ ಕೋರ್ಸುಗಳನ್ನು ಆರಂಭಿಸುವ ಬಗ್ಗೆಯೂ ಚರ್ಚಿಸಿದರು. ಒಂದೇ ಸೂರಿ ನಡಿ ಅಭಿನಯ ವಸ್ತ್ರಾಲಂಕಾರ ಸಂಕಲನ ಶಬ್ದ ಗ್ರಹಣ ಛಾಯಾಗ್ರಹಣ ಹಾಗೂ ಮೇಕ್ ಅಪ್ ಒಳಗೊಂಡಂತೆ ಆರಂಭಿಸಬಹುದಾದ ಕೋರ್ಸ್ ಗಳ ಜೊತೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಗೇಮಿಂಗ್ ಕೋರ್ಸುಗಳನ್ನು ಆರಂಭಿಸುವ ಮೂಲಕ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಮಹತ್ವ ನೀಡಲು ಕ್ರಮ ಕೈಗೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಹೆಸರುಘಟ್ಟದ ಫಿಲ್ಮ್ ಅಂಡ್ ಟಿ ವಿ ಇನ್ಸಿಟಿಟ್ಯೂಟ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಚಿತ್ರರಂಗದ ವಿವಿಧ ಭಾಗಗಳ ನುರಿತ ತಜ್ಞರ ಸಮಿತಿ ನೇಮಿಸಲು ನಿರ್ಧರಿಸಿದರು.
ಹಾಲಿ ಇರುವ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ನೇರವಾಗಿ ಮಾತುಕತೆ ನಡೆಸಿದ ಸಚಿವರು, ಅವರ ಕುಂದು ಕೊರತೆಗಳನ್ನು ಆಲಿಸಿದರು. ವಿದ್ಯಾರ್ಥಿಗಳಿಗೆ ತುರ್ತಾಗಿ ಆಗಬೇಕಾಗಿರುವ ವಾಹನ ವ್ಯವಸ್ಥೆ ಹಾಸ್ಟೆಲ್ ಗೆ ಆಧುನಿಕ ತಂತ್ರಜ್ಞಾನದ ಸಲಕರಣೆಗಳನ್ನು ಕಲ್ಪಿಸುವುದು ಸೇರಿದಂತೆ ತ್ವರಿತವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದರು.
ಸ್ವತಂತ್ರ ಪೂರ್ವದ ಶಿಕ್ಷಣ ಸಂಸ್ಥೆಯಾದ ಇಲ್ಲಿ ಅತ್ಯಂತ ಮಹತ್ವದ ಕ್ಯಾಮರಾಗಳು ಧ್ವನಿ ಗ್ರಹಣ ತಂತ್ರಜ್ಞಾನದ ಸಲಕರಣೆಗಳಿದ್ದು, ಈಗಿನ ಆಧುನಿಕ ಕಾಲಕ್ಕೆ ಅವು ಉಪಯೋಗಕ್ಕೆ ಬರದಿದ್ದರೂ ಸಹ ಅವುಗಳನ್ನು ಸಂಗ್ರಹಿಸಿ ಆಸಕ್ತಿಯುತ ಸಂಗ್ರಹಾಲಯ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದರು. ವಿವಿಧ ಬಗೆಯ ಹಳೆಯ ಕ್ಯಾಮೆರಾಗಳು ಹಾಗೂ ದ್ವನಿಗ್ರಹಣದ ಯಂತ್ರಗಳನ್ನು ವೀಕ್ಷಿಸಿದ ಸಚಿವರು ಇನ್ಸಿಟಿಟ್ಯೂಟ್ ಹೊಂದಿರುವ ಎಲ್ಲಾ ವಸ್ತುಗಳನ್ನು ಸ್ವಚ್ಛಗೊಳಿಸಿ ಪಟ್ಟಿಮಾಡಿ ವರದಿ ಮಂಡಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಂಠೀರವ ಸ್ಟುಡಿಯೋ ಅಧ್ಯಕ್ಷರಾದ ಮೆಹಬೂಬ್ ಪಾμÁ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಸಚಿವರು ಕಂಠೀರವ ಸ್ಟುಡಿಯೋದಲ್ಲಿರುವ ಶೂಟಿಂಗ್ ಫ್ಲೋರ್ ಗಳನ್ನು ವೀಕ್ಷಿಸಿದರು.