ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದರೂ ನಾವು ಮನುಷ್ಯರು ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

Bagalkote:

Font size:

ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದರೂ ನಾವು ಮನುಷ್ಯರು ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ, ಅ. 13- ನಮ್ಮ ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು ಎಲ್ಲರ ಉದ್ಯಾನವಾಗಬೇಕು. ಜನರಲ್ಲಿ ಪರಸ್ಪರ ಪ್ರೀತಿಯಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ದಾಸೋಹ ರತ್ನ ಚಕ್ರವರ್ತಿ ದಾನೇಶ್ವರರರು ಶ್ರೀ ಬಸವ ಗೋಪಾಲ ನೀಲಮಾಣಿಕ ಮಠ ,ಇವರ ನೇತೃತ್ವದಲ್ಲಿ ರಬಕವಿ ಬನಹಟ್ಟಿಯ ಸುಕ್ಷೇತ್ರ ಬಂಡಿಗಾಣಿ ಮಠದಲ್ಲಿ ಆಯೋಜಿಸಲಾಗಿದ್ದ ವಿಶ್ವಶಾಂತಿಗಾಗಿ ಸರ್ವಧರ್ಮ ಮಹಾಸಂಗಮ 2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದರು.


ಸರ್ವ ಧರ್ಮ ಮಹಾಸಂಗಮ ನಡೆಯುತ್ತಿರುವುದು ಇಂದಿನ ಪರಿಸ್ಥಿತಿಯಲ್ಲಿ ಸಮಂಜಸವಾಗಿದೆ. ದೇಶದಲ್ಲಿ ಹಾಗೂ ಜಗತ್ತಿನಲ್ಲಿ ಅನೇಕ ಧರ್ಮ, ಜಾತಿಗಳಿವೆ. ಜಾತಿ ಧರ್ಮಗಳನ್ನು ನಾವು ಮಾಡಿಲ್ಲ, ಮೊದಲಿನಿಂದ ನಮ್ಮಲ್ಲಿ ಬೆಳೆದುಕೊಂಡು ಬಂದಿದೆ. ನಾವು ಯಾವುದೇ ಧರ್ಮ, ಜಾತಿಗೆ ಸೇರಿದ್ದರೂ ಬೇರೆ ಜಾತಿಯವರನ್ನು ಪ್ರೀತಿಸಬೇಕೇ ಹೊರತು ದ್ವೇಷಿಸಬಾರದು. ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದರೂ ನಾವು ಮನುಷ್ಯರು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಕಂದಾಚಾರ, ಮೌಢ್ಯ ಪಾಲಿಸಿದರೆ ವಿದ್ಯಾವಂತರಾಗಿಯೂ ಪ್ರಯೋಜನವಿಲ್ಲ

ಖಾಯಿಲೆ ಬಂದರೆ ಶರೀರಕ್ಕೆ ಯಾರ ರಕ್ತವಾದರೂ ಕೊಡಿ. ಪ್ರಾಣ ಉಳಿದರೆ ಸಾಕು ಎನ್ನುತ್ತೇವೆ. ಇಂಥವರದ್ದೇ ರಕ್ತ ಕೊಡಿ ಎಂದು ಕೇಳುವುದಿಲ್ಲ. ಗುಣಮುಖರಾದ ನಂತರ ಯಾವ ಜಾತಿ ಎಂದು ಕೇಳುವುದು ನ್ಯಾಯವೇ ಎಂದು ಸಿಎಂ ಪ್ರಶ್ನಿಸಿದರು. ಬಸವಣ್ಣನವರು ದಯೆ ಇಲ್ಲದ ಧರ್ಮ ಯಾವುದಯ್ಯ? ದಯೆಯೇ ಧರ್ಮದ ಮೂಲ ಎಂದು ಹೇಳಿದ್ದಾರೆ. ಇದನ್ನು ತಿಳಿದುಕೊಳ್ಳಬೇಕು. ಯಾರೂ ಹುಟ್ಟುವಾಗ ಇಂಥ ಜಾತಿಯಲ್ಲೇ ಹುಟ್ಟಬೇಕೆಂದು ಅರ್ಜಿ ಹಾಕಿಕೊಳ್ಳುವುದಿಲ್ಲ. ಮೂಲಭೂತವಾಗಿ ನಾವೆಲ್ಲರೂ ಮನುಷ್ಯರು. ಪ್ರಾಣಿಗಳನ್ನು ಪ್ರೀತಿಸುವ ನಾವು ಮನುಷ್ಯರನ್ನು ದ್ವೇಷಿಸುತ್ತೇವೆ. ಜಾತಿ ವ್ಯವಸ್ಥೆಯಿಂದ ಗುಲಾಮಗಿರಿ ಮನೆ ಮಾಡಿಕೊಂಡಿದೆ ಎಂದರು. ವಿದ್ಯಾವಂತರಾದ ಮೇಲೂ ಕಂದಾಚಾರ, ಮೌಢ್ಯ ಪಾಲಿಸಿದರೆ ವಿದ್ಯಾವಂತರಾಗಿಯೂ ಪ್ರಯೋಜನವಿಲ್ಲ ಎಂದರು.

ವಿದ್ಯೆ ಯಾರ ಸ್ವತ್ತೂ ಅಲ್ಲ

ನಮ್ಮ ಸಮಾಜದ ಬಹುತೇಕ ಜನ ಅವಿದ್ಯಾವಂತರಾಗಿದ್ದಾರೆ. ಶೂದ್ರರಿಗೆ ಹಾಗೂ ಮಹಿಳೆಯರಿಗೆ ವಿದ್ಯೆ ಕಲಿಯುವ ಅವಕಾಶವಿರಲಿಲ್ಲ. ವಿದ್ಯೆ ಯಾರ ಸ್ವತ್ತೂ ಅಲ್ಲ. ಈ ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಬಸವಣ್ಣನವರು ವಚನಗಳನ್ನು ರಚಿಸಿದ್ದಾರೆ. ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಜಡತ್ವವಿರುವ ವ್ಯವಸ್ಥೆಯಾಗಿರುವುದರಿಂದ ಇಷ್ಟು ವರ್ಷಗಳಾದರೂ ಬದಲಾವಣೆಯಾಗಿಲ್ಲ. ಜಾತ್ಯತೀತ ಸಮಾಜ ನಿರ್ಮಾಣವಾಗಲು ಸಾಧ್ಯವಾಗಿಲ್ಲ ಎಂದರು. ಸಮಾಜದ ಅಸಮಾನತೆಯನ್ನು ತೊಡೆದುಹಾಕುವವರೆಗೆ ಸ್ವಾತಂತ್ರ್ಯ ಯಶಸ್ವಿಯಾಗುವುದಿಲ್ಲ ಎಂದು ಅಂಬೇಡ್ಕರ್ ಹೇಳಿದ್ದಾರೆ ಎಂದರು. ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಅಸಮಾನತೆಗಳನ್ನು ತೊಡೆದುಹಾಕದಿದ್ದರೆ ಅಸಮಾನತೆಯಿಂದ ನರಳುವವರು ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸ ಮಾಡುತ್ತಾರೆ ಎಂಬ ಎಚ್ಚರಿಕೆಯನ್ನೂ ಅವರು ಕೊಟ್ಟಿದ್ದಾರೆ ಎಂದು ತಿಳಿಸಿದರು.

ನ್ಯಾಯಮೂರ್ತಿಗಳ ಮೇಲೆ ಶೂ ಎಸೆತ: ಖಂಡಿಸಬೇಕು

ಇತ್ತೀಚೆಗೆ ಸನಾತನ ಧರ್ಮಕ್ಕೆ ಸೇರಿದ ವ್ಯಕ್ತಿಯೊಬ್ಬ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದಿದ್ದಾರೆ. ಯಾವ ಧರ್ಮವೂ ದ್ವೇಷಿಸಬೇಕು ಎಂದು ಹೇಳುವುದಿಲ್ಲ. ಕಾನೂನು ಓದಿರುವ ವಕೀಲನೊಬ್ಬ ರೀತಿ ಮಾಡುವುದನ್ನು ನಾವು ಖಂಡಿಸಬೇಕು. ಸಹಿಸಿಕೊಳ್ಳಬಾರದು. ಇಂಥವೆಲ್ಲಾ ನಡೆದರೆ ಸಮಾಜದಲ್ಲಿ ಶಾಂತಿ ಎಲ್ಲಿ ನೆಲೆಸುತ್ತದೆ ಎಂದರು.


ಚಕ್ರವರ್ತಿ ದಾನೇಶ್ವರ ಸ್ವಾಮೀಜಿ, ಅಬಕಾರಿ ಸಚಿವ ಬಿ. ಬಿ ತಿಮ್ಮಾಪುರ, ಮಾಜಿ ಸಚಿವರು ಹಾಗೂ ಮೇಲ್ಮನೆ ಸದಸ್ಯೆ ಉಮಾಶ್ರೀ, ವಿಜಯಾನಂಧ ಕಾಶಪ್ಪನವರ್, ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ನಂಜಯ್ಯ್ ಮಠ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾಧು ಕೋಕಿಲ, ಮಾಜಿ ಶಾಸಕ ನಂದ ನ್ಯಾಮದಾಳ, ಮೊದಲಾದವರು ಉಪಸ್ಥಿತರಿದ್ದರು.

Prev Post ಆರ್.ವಿ ದೇಶಪಾಂಡೆ ಸರ್ಕಾರದ ವಾಸ್ತವ ಅಂಶವನ್ನ ತೆರೆದಿಟ್ಟಿದ್ದಾರೆ - ನಿಖಿಲ್ ಕುಮಾರಸ್ವಾಮಿ
Next Post ಹೆಸರುಘಟ್ಟದಲ್ಲಿರುವ ಸಿನಿಮಾ ಆಟೋ ಗ್ರಾಫಿ ಹಾಗೂ ಸೌಂಡ್ ರೆಕಾಡಿರ್ಂಗ್ ಬಲಿಷ್ಠ ಗೊಳಿಸಲು ತಾಂತ್ರಿಕ ತಜ್ಞರ ಸಮಿತಿ ರಚಿಸಲು ನಿರ್ಧಾರ - ಸಚಿವ ಡಾ. ಎಂ.ಸಿ ಸುಧಾಕರ್