ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಪಾದಯಾತ್ರೆ, ವಿವಿಧ ಸ್ಪರ್ಧೆಗಳ ಆಯೋಜನೆ ಯುವಸಮೂಹದ ಜಾಗೃತಿಗೆ ಏಕತಾ ನಡಿಗೆ- ಪ್ರೀತಂ ಗೌಡ
ಬೆಂಗಳೂರು: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕುರಿತ ಮಾಹಿತಿಯನ್ನು ಯುವಜನರಿಗೆ ತಲುಪಿಸಿ ಜಾಗೃತ ಯುವಸಮೂಹದ ಕಲ್ಪನೆಯೊಂದಿಗೆ ಕೇಂದ್ರ ಸರಕಾರವು ಏಕತಾ ನಡಿಗೆ ಕೈಗೊಳ್ಳಲಿದೆ. ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕುರಿತ ಮಾಹಿತಿ ಯುವಜನರಿಗೆ ತಲುಪುವಲ್ಲಿ ಸರಕಾರಗಳು ಎಡವಿವೆ ಎಂಬ ಭಾವನೆ ಜನರಲ್ಲಿದೆ ಎಂದು ಅವರು ನುಡಿದರು. ಕೊನೆಯದಾಗಿ ರಾಷ್ಟ್ರೀಯ ಪಾದಯಾತ್ರೆ ನಡೆಯಲಿದೆ ಎಂದರು.
ಕೇಂದ್ರ ಸಚಿವ ಮನ್ಸುಕ್ ಮಾಂಡವೀಯ ಅವರು ಇದೇ 6ರಂದು ಉದ್ಘಾಟನೆ ಮಾಡಿದ್ದಾರೆ. ಹಲವಾರು ಸ್ಪರ್ಧೆಗಳನ್ನು ನಡೆಸಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಪ್ರಬಂಧ ಸ್ಪರ್ಧೆ ನಡೆಯಲಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸಾಧನೆಗಳ ಕುರಿತ ರೀಲ್ಸ್ ಮಾಡಲು ಅವಕಾಶವಿದೆ. ಇದನ್ನು ಮೈಭಾರತ್ ಪೋರ್ಟಲ್ ನಲ್ಲಿ ಅಪ್‍ಲೋಡ್ ಮಾಡಬೇಕಾಗುತ್ತದೆ ಎಂದು ವಿವರಿಸಿದರು.
ಅಕ್ಟೋಬರ್ 31ರಿಂದ ನವೆಂಬರ್ 25ರವರೆಗೆ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 8ರಿಂದ 10 ಕಿಮೀ ದೂರವನ್ನು ಪಾದಯಾತ್ರೆ ಮೂಲಕ ಇಡೀ ಜನಸಮೂಹ ತೆರಳಬೇಕೆಂದು ನಿರೀಕ್ಷೆ ಇದೆ. ಲೋಕಸಭಾ ಸದಸ್ಯರು, ಶಾಸಕರು, ಚುನಾಯಿತ ಪ್ರತಿನಿಧಿಗಳು ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಚರ್ಚಾಸ್ಪರ್ಧೆ, ಪಟೇಲ್ ಅವರ ಜೀವನ- ಆದರ್ಶಗಳ ಕುರಿತು ವಿಚಾರಸಂಕಿರಣಗಳನ್ನು ಏರ್ಪಡಿಸಲಾಗುತ್ತದೆ. ಪಟೇಲರಿಗೆ ಸಮಾಜದಲ್ಲಿ ಉಕ್ಕಿನ ಮನುಷ್ಯ ಎನ್ನಲು ಕಾರಣವನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಆಗಬೇಕಿದೆ. ಅವರು ರೈತ ನಾಯಕನಾಗಿ, ರೈತ ಹೋರಾಟದ ಮೂಲಕ ಸಾಮಾಜಿಕ ಜೀವನಕ್ಕೆ ಬಂದವರು ಎಂದರು. ಸಮಾಜ ನಿರ್ಮಾಣ, ಒಗ್ಗೂಡಿಸುವ ಕಡೆ ಅವರ ಕಾರ್ಯಗಳನ್ನು ತಿಳಿಸಲಿದ್ದೇವೆ ಎಂದು ಹೇಳಿದರು.
ಸ್ವದೇಶಿ ವಸ್ತು ಬಳಕೆ ಪ್ರತಿಜ್ಞೆ ಸ್ವೀಕಾರ ನಡೆಯಲಿದೆ. ಸ್ವದೇಶಿ ಮೇಳಗಳ ಆಯೋಜನೆಯೂ ನಡೆಯಲಿದೆ. ಯೋಗ ಮತ್ತು ಆರೋಗ್ಯ ಶಿಬಿರಗಳನ್ನೂ ಆಯೋಜಿಸಲಿದ್ದೇವೆ. ಕಾಲೇಜು, ಶಾಲಾ ವಿದ್ಯಾರ್ಥಿಗಳನ್ನು ಜೋಡಿಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಮಾಲ್‍ಗಳು, ಉದ್ಯಾನವನಗಳು ಸೇರಿದಂತೆ ಯುವಜನರು ಸೇರುವ ಸ್ಥಳಗಳಲ್ಲಿ ಸರ್ದಾರ್ ಪಟೇಲ್ ಅವರ ಜೀವನದ ಕುರಿತಾದ ಬೀದಿ ನಾಟಕಗಳನ್ನು ಏರ್ಪಡಿಸಲು ಯೋಜಿಸಿದ್ದೇವೆ ಎಂದು ತಿಳಿಸಿದರು.
ಸರ್ದಾರ್ ಪಟೇಲ್ ಅವರು ಪ್ರಧಾನಿ ನರೇಂದ್ರ ಮೋದಿ ಇಂದು ವಿಕಸಿತ ಭಾರತ್ 2047 ರ ದೃಷ್ಟಿಕೋನಕ್ಕೆ ಬುನಾದಿ ಹಾಕಿದವರು ಎಂದು ವಿವರಿಸಿದರು. ಭಾರತವನ್ನು ಒಗ್ಗೂಡಿಸುವಲ್ಲಿ ಶ್ರಮ ವಹಿಸಿದ ಪಟೇಲರ ಕುರಿತು ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ನಡೆಸಲಿದ್ದೇವೆ ಎಂದು ಹೇಳಿದರು.
ಸ್ಪರ್ಧಾ ವಿಜೇತ 5 ಜನ ಯುವಕರಿಗೆ ರಾಷ್ಟ್ರೀಯ ಪಾದಯಾತ್ರೆಗೆ ಪಾಲ್ಗೊಳ್ಳುವ ಅವಕಾಶ ಲಭಿಸಲಿದೆ. ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ಯುವ ಮೋರ್ಚಾ ನಿಕಟಪೂರ್ವ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಾಳೆಕಾಯಿ ಉಪಸ್ಥಿತರಿದ್ದರು.