ಶಾಸನ ಸಭೆಗಳ ಸಬಲೀಕರಣದಿಂದ ಪ್ರಜಾಪ್ರಭುತ್ವ ಸಧೃಡ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಮತ
ಪ್ರಜಾಪ್ರಭುತ್ವದ ಜೀವಾಳವಾಗಿರುವ ಶಾಸನ ಸಭೆಗಳ ವ್ಯವಸ್ಥಿತ ಸಬಲೀಕರಣದಿಂದ ಪ್ರಜಾಪ್ರಭುತ್ವ ಸಧೃಡಗೊಂಡು ನಾಗರೀಕರ ಅಭ್ಯುದಯದ ಆಶಯಗಳ ಈಡೇರಿಕೆ ಸಾಧ್ಯ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅಭಿಮತ ವ್ಯಕ್ತಪಡಿಸಿದರು.
ಕೆರೆಬಿಯನ್ ಪೂರ್ವ ದ್ವೀಪ ರಾಷ್ಟ್ರವಾಗಿರುವ ಬ್ರಿಟಿಷ್ ಕಾಮನ್‌ವೆಲ್ತ್ನ ಗಣರಾಜ್ಯವಾಗಿರುವ ಬಾರ್ಬ್ಡೋಸ್ ದೇಶದ ರಾಜಧಾನಿ ಬ್ರಿಜ್ಡ್ಟೌನ್ ನಗರದಲ್ಲಿ ನಡೆಯುತ್ತಿರುವ 68ನೇ ಕಾಮನ್‌ವೆಲ್ತ್ನ ಸಂಸದೀಯ ಸಮಾವೇಶದ ವಿಚಾರ ಗೋಷ್ಠಿಯಲ್ಲಿ "ಪ್ರಜಾಪ್ರಭುತ್ವದ ಯಶಸ್ಸಿಗೆ ಶಾಸನ ಸಭೆಗಳ ಸಬಲೀಕರಣದ ಅಗತ್ಯತೆ” ಕುರಿತು ತಮ್ಮ ವಿಚಾರ ಮಂಡಿಸಿದ ಬಸವರಾಜ ಹೊರಟ್ಟಿ, ಪ್ರಜಾಪ್ರಭುತ್ವದ ಯಶಸ್ಸಿಗೆ, ಶಾಸನ ಸಭೆಗಳ ಹಾಗೂ ಜನಪ್ರತಿನಿಧಿಗಳ ಕ್ರೀಯಾಶೀಲತೆ ಹಾಗೂ ಪಕ್ಷಬೇಧವಿಲ್ಲದ ಅಭಿವೃದ್ದಿ ಪರ ಚಿಂತನೆ ಅಗತ್ಯವಾಗಿದ್ದು ಅದರಿಂದ ರಾಷ್ಟ್ರದ ಭವಿಷ್ಯ ಉಜ್ವಲವಾಗಬಲ್ಲದು ಎಂದರು.
ಪ್ರಜಾಪ್ರಭುತ್ವದ ಮೂಲತತ್ವಗಳನ್ನು ಅನುಷ್ಠಾನಗೊಳಿಸುವ ಸಂಸತ್ತು, ರಾಜ್ಯ ವಿಧಾನ ಸಭೆ, ವಿಧಾನ ಪರಿಷತ್ತುಗಳೇ ಮೂಲ ಕೇಂದ್ರಗಳಾಗಿದ್ದು, ಅಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳು, ಸಮಾಜದ ಮೂಲಭೂತ ಅವಶ್ಯಕತೆಗಳ ಮೇಲೆ ಕೇಂದ್ರಿಕೃತವಾಗಿ ದೇಶದಲ್ಲಿರುವ ಬಡತನ, ಜನರ ಸಂಕಷ್ಟ, ಬವಣೆಗಳ ನಿವಾರಣೆ ನಿಟ್ಟಿನಲ್ಲಿ ಚಿಂತನೆ ನಡೆಸುವ “ಚಿಂತಕರ ಚಾವಡಿ” ಗಳಾಗಿ ಪರಿವರ್ತನೆಯಾಗಿ ಸರ್ಕಾರದ ಆಡಳಿತ ಯಂತ್ರಕ್ಕೆ ಮಾರ್ಗದರ್ಶಿಯಾದಾಗ ಮಾತ್ರ ಪ್ರಜಾಪ್ರಭುತ್ವದ ನೈಜ ಆಶಯಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದರು.
ಇಂದಿನ ಜಾಗತಿಕ ಸಂದರ್ಭದಲ್ಲಿ ನಮ್ಮ ಪ್ರಜಾಪ್ರಭುತ್ವದ ಸಂಸ್ಥೆಗಳು ಸದೃಡಗೊಂಡಿವೆ ಎಂದು ಕೆಲವರು ಅಭಿಪ್ರಾಯಪಡುತ್ತಿದ್ದರೂ ಇಂದಿಗೂ ಸಹ ಆ ಸಂಸ್ಥೆಗಳು ಹಲವಾರು ಸವಾಲುಗಳನ್ನು ಎದುರಿಸುತ್ತಿವೆ ಎಂದು ಹಲವು ಉದಾಹರಣೆಗಳ ಮೂಲಕ ಪ್ರಸ್ತಾಪಿಸಿದ ಬಸವರಾಜ ಹೊರಟ್ಟಿ ಸಾಮಾನ್ಯ ಜನರ ಬದುಕು, ಬವಣೆಗಳ ಬಗೆ ತಿಳಿದುಕೊಳ್ಳಲು ಜನಪ್ರತಿನಿಧಿಗಳು ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಹೊಂದುವ ಮೂಲಕ ನಿರಂತರ ಬಲವರ್ಧನೆ ಅಗತ್ಯ ಇದರಿಂದ ನಿಜರೂಪದಲ್ಲಿ ಸಾರ್ವಜನಿಕರ ಬದುಕು ಹಸನಗೊಳಿಸಲು ಸಾಧ್ಯ ಎಂದರು.
ಪ್ರಜಾಪ್ರಭುತ್ವ ಬಲವರ್ಧನೆಯಲ್ಲಿ ಶಾಸನಗಳ ಸಭೆಗಳ ಜವಾಬ್ದಾರಿ ಜೊತೆಗೆ ನಾಗರೀಕ ಸಮಾಜ ಹಾಗೂ ನಾಗರೀಕರ ಪಾತ್ರದ ಬಗೆಗೆ ವಿಶ್ಲೇಷಿಸಿದ ಬಸವರಾಜ ಹೊರಟ್ಟಿ, ಜವಾಬ್ದಾರಿಯುತ ಹಾಗೂ ಆರೋಗ್ಯ ಪೂರ್ಣ ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸುವಲ್ಲಿ ಸಾರ್ವಜನಿಕರ ಕ್ರೀಯಾಶೀಲ ಪಾಲ್ಗೊಳ್ಳುವಿಕೆಯ ಅಗತ್ಯತೆಯನ್ನು ಪ್ರತಿಪಾದಿಸಿದರು. ಪ್ರತಿಯೊಬ್ಬ ಪ್ರಜೆಯೂ ದೇಶದ ಬಗೆಗೆ ಉತ್ತರದಾಯತ್ವ ಹಾಗೂ ಪಾರದರ್ಶಕತೆಯ ಹೊಣೆಗಾರಿಕೆಯನ್ನು ಅರಿತಾಗ ಮಾತ್ರ ಪ್ರಜಾಪ್ರಭುತ್ವದ ನೈಜ ಬೇರುಗಳು ಬಲಗೊಳ್ಳಲು ಸಹಕಾರಿಯಾಗುತ್ತದೆ ಈ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ನಾಗರೀಕರು ತಮ್ಮ ಹಕ್ಕುಗಳ ಪ್ರತಿಪಾದನೆಯ ಜೊತೆಗೆ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಸದೃಢಗೊಳಿಸುವ ಪಣ ತೊಡಬೇಕಾದ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಅತಿ ಅವಶ್ಯಕವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಒಂದೇ ಕ್ಷೇತ್ರದಿಂದ ಸತತವಾಗಿ ಎಂಟು ಬಾರಿಗೆ ಆಯ್ಕೆಯಾಗಿ ಹಲವು ಜಾಗತಿಕ ದಾಖಲೆಗಳನ್ನು ನಿರ್ಮಿಸಿದ ಹೆಮ್ಮೆ ತಮ್ಮದಾಗಿದೆ ಎಂದು ತಮ್ಮ ನಾಲ್ಕೂವರೆ ದಶಕಗಳ ಸಂಸದೀಯ ಅನುಭವಗಳನ್ನು ಹಂಚಿಕೊಂಡ ಬಸವರಾಜ ಹೊರಟ್ಟಿ, ಜಾತಿ, ಧರ್ಮ ಲಿಂಗಗಳ ಬೇಧವಿಲ್ಲದೆ ಜನರ ಮತಗಳಿಂದ ಜನಪ್ರತಿನಿಧಿಯಾಗುವ ಅವಕಾಶ ಪ್ರಜಾಪ್ರಭುತ್ವ ಕಲ್ಪಿಸಿಕೊಟ್ಟಿದ್ದು, ಪ್ರತಿಯೊಬ್ಬ ಜನಪ್ರತಿನಿಧಿಯು ವಿಶ್ವಾಸರ್ಹತೆಯಿಂದ ಔದಾರ್ಯವನ್ನು ಮೆರೆದು ದೇಶದ ಅಭ್ಯುದಯಕ್ಕೆ ಕಟಿಬದ್ದರಾಗಿ ಸಂಸದೀಯ ಮೌಲ್ಯಗಳ ರಕ್ಷಣೆಗೆ ಮುಂದಾಗಬೇಕಿದೆ. ಇಂದಿನ ಆಧುನಿಕ ದಿನಮಾನಗಳಲ್ಲಿ ಅಭಿವೃದ್ದಿಯೇ ಪ್ರತಿಯೊಬ್ಬರ ಮೂಲ ಮಂತ್ರವಾಗಬೇಕಿದೆ ಎಂದರು.
ಪ್ರಜಾಪ್ರಭುತ್ವದ ಸಾರ್ಥಕತೆಗೆ ದೇಶದ ಸುಸ್ಥಿರ ಹಾಗೂ ಸಮಗ್ರ ಬೆಳವಣಿಗೆಯಲ್ಲಿ ಶಾಸನ ಸಭೆಗಳು ಹಾಗೂ ಜನಪ್ರತಿನಿಧಿಗಳ ಪಾತ್ರ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದ್ದು, ಪ್ರತಿಯೊಬ್ಬ ಜನಪ್ರತಿನಿಧಿಯು ಆಧುನಿಕ ಸಂವಹನ ತಂತ್ರಗಾರಿಕೆಗಳನ್ನು ಅಳವಡಿಸಿಕೊಂಡು ಅಭಿವೃದ್ದಿ ಬಗೆಗೆ ಬದ್ಧತೆ ಹೊಂದಿ ದೇಶದ ಏಳಿಗೆಗೆ ಶ್ರಮಿಸಲು ಮುಂದಾಗಬೇಕಿದೆ ಎಂದು ಬಸವರಾಜ ಹೊರಟ್ಟಿ ಕರೆ ನೀಡಿದರು.
ನಾಲ್ಕು ದಿನಗಳ ಕಾಲ ನಡೆಯುವ ಕಾಮನ್‌ವೆಲ್ತ್ ಸಂಸದೀಯ ಸಮಾವೇಶದಲ್ಲಿ ಜಗತ್ತಿನ ವಿವಿಧ ದೇಶಗಳ ಪ್ರತಿನಿಧಿಗಳು, ಲೋಕಸಭಾಧ್ಯಕ್ಷರು, ರಾಜ್ಯಸಭೆಯ ಉಪ ಸಭಾಪತಿಗಳು, ವಿವಿಧ ರಾಜ್ಯಗಳ ವಿಧಾನ ಸಭೆ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು, ಸಚಿವರುಗಳು, ರಾಜಕೀಯ ತಜ್ಞರು, ನೀತಿ ನಿರೂಪಕರು, ರಾಜಕೀಯ ಮುತ್ಸದ್ದಿಗಳು ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಂಡಿದ್ದಾರೆ.