ಖರ್ಗೆ ಕುಟುಂಬಕ್ಕೆ ಮೊದಲು ಪರಿಹಾರ ಕೊಡಿ; ರೈತರ ಸಂಕಷ್ಟಕ್ಕೂ ಸ್ಪಂದಿಸಿ- ವಿಜಯೇಂದ್ರ

Gulbarga:

Font size:

ಜಾತಿಗಣತಿ ವಿಷಯದಲ್ಲಿ ಗೊಂದಲ ಮೂಡಿಸುವ ಸರಕಾರ, ಕಾಂಗ್ರೆಸ್ ಹೈಕಮಾಂಡ್- ಗೋವಿಂದ ಕಾರಜೋಳ

ಕಲಬುರ್ಗಿ: ಮೊದಲು ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬಕ್ಕೆ ಪರಿಹಾರ ಕೊಡಿ. ಜೊತೆಗೇ ರೈತರ ಸಂಕಷ್ಟಕ್ಕೂ ಸ್ಪಂದಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ರೈತರೊಬ್ಬರು ಬೆಳೆ ನಾಶವಾಗಿದೆ. ತೊಗರಿ ಬೆಳೆ ನಾಶವಾಗಿದೆ. 4 ಎಕರೆಗೆ ಪರಿಹಾರ ಕೊಡಿಸಿ ಎಂದು ಕೇಳಿದರೆ, ನನ್ನದೇ 40 ಎಕರೆ ಇದೆ; ನನ್ನ ಬೆಳೆಯೂ ಸಂಪೂರ್ಣ ನಾಶವಾಗಿದೆ. ಪರಿಹಾರ ಬಂದಿಲ್ಲ ಎಂಬ ಮಾತು ಮಲ್ಲಿಕಾರ್ಜುನ ಖರ್ಗೆಯವರದು ಎಂದು ಆಕ್ಷೇಪಿಸಿದರು.
ಒಣಭೂಮಿಗೆ ಎನ್‍ಡಿಆರ್‍ಎಫ್ ನಿಯಮದಡಿ ಹೆಕ್ಟೇರ್‍ಗೆ 6 ಸಾವಿರ ರೂ. ಪರಿಹಾರ ಇತ್ತು. ಆದರೆ, ಮುಖ್ಯಮಂತ್ರಿಗಳಾಗಿದ್ದ ರೈತನಾಯಕ ಯಡಿಯೂರಪ್ಪ ಅವರು ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿ ಪ್ರವಾಹಪೀಡಿತರಿಗೆ ರಾಜ್ಯದಿಂದ ಎನ್‍ಡಿಆರ್‍ಎಫ್ ಮಾದರಿಯ ನೆರವು ನೀಡಿದ್ದರು. ಸಿದ್ದರಾಮಯ್ಯನವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪ ಮಾಡುತ್ತಿಲ್ಲ; ಆ ಕಾಳಜಿ ವ್ಯಕ್ತವಾಗಲಿ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಸಂದಿಗ್ಧ ಪರಿಸ್ಥಿತಿಯಲ್ಲಿರುವ ರೈತರ ಬಗ್ಗೆ ಈಗ ನೀವು ಕಾಳಜಿ ತೋರಿಸದೇ ಇದ್ದರೆ ಇನ್ಯಾವಾಗ ಕಾಳಜಿ ತೋರಿಸುತ್ತೀರಿ ಎಂದು ಪ್ರಶ್ನಿಸಿದರು. ಎಕರೆಗೆ 25ರಿಂದ 30 ಸಾವಿರ ರೂ. ಪರಿಹಾರ ಕೊಡಬೇಕೆಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.

ಹಿಂದೂ ಸಮಾಜ ಒಡೆಯಲು ಹೊರಟಿದ್ದಾರೆ..
ಜಾತಿ ಸಮೀಕ್ಷೆ ಕುರಿತು ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಅವರು, ಮುಖ್ಯಮಂತ್ರಿಗಳು ನಿನ್ನೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಕೇಂದ್ರ ಸರಕಾರದ ಜಾತಿ ಸಮೀಕ್ಷೆಯನ್ನೂ ವಿರೋಧಿಸುತ್ತೀರಾ ಎಂದು ಕೇಳಿದ್ದಾರೆ. ಕಾಂತರಾಜು ವರದಿಗೆ 180 ಕೋಟಿ ಖರ್ಚು ಮಾಡಿದ್ದೀರಲ್ಲವೇ? ನೀವೇ ಮುಖ್ಯಮಂತ್ರಿ ಇದ್ದರೂ ಅದನ್ನು ಅನುಷ್ಠಾನ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದರು.
ಇವತ್ತು 500- 600 ಕೋಟಿ ಖರ್ಚು ಮಾಡಿ ಸಮೀಕ್ಷೆ ಮಾಡುವುದನ್ನು ಬಿಜೆಪಿ ವಿರೋಧಿಸಲು ಹೊರಟಿಲ್ಲ. ಸ್ವಾತಂತ್ರ್ಯಾನಂತರದಲ್ಲಿ ಹಿಂದಿನ ಕಾಂಗ್ರೆಸ್, ಯುಪಿಎ ಸರಕಾರವು ಜಾತಿ ಗಣತಿ ಕುರಿತು ಇಂಥ ದಿಟ್ಟ ನಿರ್ಧಾರ ಮಾಡಿರಲಿಲ್ಲ. ಮನಮೋಹನ್ ಸಿಂಗ್ ಅವರ ಸರಕಾರ ತೀರ್ಮಾನ ಮಾಡಿದರೂ ರಾಹುಲ್ ಗಾಂದಿಯವರುü ಅದನ್ನು ವಿರೋಧಿಸಿದ್ದರು ಎಂದು ಗಮನ ಸೆಳೆದರು.
ರಾಜ್ಯ ಸರಕಾರವು ಜಾತಿ ಜನಗಣತಿ ನೆಪದಲ್ಲಿ ಪಗಡೆಯಾಟ ಮಾಡಲು ಹೊರಟಿದೆ. ಹಿಂದೂ ಸಮಾಜ ಒಡೆಯಲು ಹೊರಟಿದ್ದಾರೆ. ರಾಜ್ಯ ಸರಕಾರಕ್ಕೆ ಅಧಿಕಾರ ಇದೆಯೋ ಇಲ್ಲವೋ; ನಾವು ಜಾತಿ ಜನಗಣತಿಯನ್ನು ವಿರೋಧಿಸುತ್ತಿಲ್ಲ. ಸಿಎಂ ಇಚ್ಛಾಶಕ್ತಿ ಬಗ್ಗೆ ಗೊಂದಲ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿ ಜನಗಣತಿ ಮಾಡಲು ಹೊರಟಿದ್ದಾರಾ ಅಥವಾ ಪ್ರಾಮಾಣಿಕವಾಗಿ ಹಿಂದುಳಿದ, ಶೋಷಿತ ಸಮುದಾಯಗಳಿಗೆ ನ್ಯಾಯ ಕೊಡಲೆಂದು ಇದನ್ನು ಮಾಡುತ್ತಿದ್ದಾರಾ? ಅವರಲ್ಲಿ ಪ್ರಾಮಾಣಿಕ ಕಳಕಳಿ ಕಾಣುತ್ತಿಲ್ಲ; ಜನರಲ್ಲೂ ಅನುಮಾನ ಹುಟ್ಟುಹಾಕಿದ್ದಾರೆ ಎಂದು ಆಕ್ಷೇಪಿಸಿದರು.

ಪ್ರಶ್ನೆಗೆ ಉತ್ತರ ನೀಡಿದ ಅವರು, ಶೋಷಿತ- ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ನ್ಯಾಯ ಕೊಡಬೇಕೆಂಬ ಬದ್ಧತೆ ಬಿಜೆಪಿಗೆ ಸ್ಪಷ್ಟವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಬಿಜೆಪಿ ಅಲ್ಲ ಎಂದು ತಿಳಸಿದರು. ಸಿದ್ದರಾಮಯ್ಯನವರ ಮನಸ್ಥಿತಿಗೆ ನಮ್ಮ ವಿರೋಧ ಇದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಹೈಕೋರ್ಟ್ ಏನು ಆದೇಶ ಮಾಡಿದೆ? ಯಾಕೆ ಕೆಲಸಕ್ಕೆ ಬಾರದ ಪ್ರಶ್ನೆಗಳನ್ನು ಇಟ್ಟುಕೊಂಡಿದ್ದಾರೆ? 60ಕ್ಕೂ ಹೆಚ್ಚು ಪ್ರಶ್ನೆಗಳಿದ್ದು, ಇದರಲ್ಲಿ ಎಲ್ಲವೂ ಕಡ್ಡಾಯವಲ್ಲ ಎಂದು ರಾಜ್ಯ ಹೈಕೋರ್ಟ್ ತಿಳಿಸಿದೆ ಎಂದು ಗಮನ ಸೆಳೆದರು.
ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ, ಮಾಜಿ ಸಂಸದ ಉಮೇಶ್ ಜಾಧÀವ್, ಶಾಸಕ ಬಸವರಾಜ ಮತ್ತಿಮೂಡ್, ವಿಧಾನಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್, ಶಶಿಲ್ ನಮೋಶಿ, ಮಾಜಿ ಶಾಸಕರಾದ ಅಮರನಾಥ ಪಾಟೀಲ್, ದತ್ತಾತ್ರೇಯ ಪಾಟೀಲ್ ರೇವೂರ್, ಬಿಜೆಪಿ ಕಲಬುರಗಿ ನಗರ ಜಿಲ್ಲಾಧ್ಯಕ್ಷ ಚಂದ್ರಕಾಂತ್ ಬಿ. ಪಾಟೀಲ್, ಕಲಬುರಗಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ ಹಾಗೂ ಮುಖಂಡರು ಇದ್ದರು.

ಜಾತಿಗಣತಿ ವಿಷಯದಲ್ಲಿ ಗೊಂದಲ ಮೂಡಿಸುವ ಸರಕಾರ, ಕಾಂಗ್ರೆಸ್ ಹೈಕಮಾಂಡ್- ಗೋವಿಂದ ಕಾರಜೋಳ

ಕಲಬುರ್ಗಿ: ಜಾತಿ ಗಣತಿ ವಿಷಯದಲ್ಲಿ ನಾವು ಗೊಂದಲ ಸೃಷ್ಟಿಸುತ್ತಿಲ್ಲ; ಕಾಂಗ್ರೆಸ್ ಸರಕಾರ ಮತ್ತು ಕಾಂಗ್ರೆಸ್ ಹೈಕಮಾಂಡ್ ಗೊಂದಲ ಮೂಡಿಸುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಅವರು ಆಕ್ಷೇಪಿಸಿದ್ದಾರೆ.
ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ಕೊಟ್ಟರು. ಕ್ರಿಶ್ಚಿಯನ್ ಲಿಂಗಾಯತರು ಇದ್ದಾರಾ? ಜೈನ ಪಂಚಮಸಾಲಿ ಇದ್ದಾರಾ? ಕ್ರಿಶ್ಚಿಯನ್ ದಲಿತರು ಇದ್ದಾರಾ? ಎಂದು ಪ್ರಶ್ನಿಸಿದರು.
ಕ್ರಿಶ್ಚಿಯನ್ ದಲಿತರು ಎನ್ನಬೇಡಿ; ಯಾವುದೇ ವ್ಯಕ್ತಿ ಧರ್ಮಾಂತರ ಆದರೆ, ಧರ್ಮಾಂತರ ಆದ ದಿನದಿಂದ ಅವನ ಪೂರ್ವಾಶ್ರಮದ ಹಂಗು ಇರುವುದಿಲ್ಲ; ಪೂರ್ವಾಶ್ರಮದ ಸಂಬಂಧ ಕಡಿದುಹೋಗುತ್ತದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಧರ್ಮಾಂತರ ಆದರೆ, ಕ್ರಿಶ್ಚಿಯನ್ ಆದರೆ ಕ್ರಿಶ್ಚಿಯನ್, ಇಸ್ಲಾಂಗೆ ಆಗಿದ್ದರೆ ಇಸ್ಲಾಂ ಧರ್ಮ ಇರುತ್ತದೆ ಎಂದು ತಿಳಿಸಿದರು.
ಆರ್ಥಿಕ, ಶೈಕ್ಷಣಿಕ ಕಾಳಜಿ ಇದ್ದರೆ 2013ರಿಂದ 2018ರವರೆಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿದ್ದರು. ಕಾಂತರಾಜು ಅವರನ್ನು ನೇಮಿಸಿ ವರದಿ ತೆಗೆದುಕೊಂಡರು. 180 ಕೋಟಿ ಖರ್ಚು ಮಾಡಿದ ಆ ವರದಿ ಏನಾಗಿದೆ? ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಟೀಕಿಸಿದರು.
ನಾವು ದಾರಿ ತಪ್ಪಿಸುತ್ತಿಲ್ಲ; ಸಿದ್ದರಾಮಯ್ಯನವರು- ಕಾಂಗ್ರೆಸ್ ಪಕ್ಷ ದಾರಿ ತಪ್ಪಿಸುತ್ತಿವೆ. ಆವತ್ತು ಜಾತಿಗಳ ಅಂಕಿ ಸಂಖ್ಯೆ ಬಿಡುಗಡೆ ಮಾಡಿದ್ದರು. ಗೌಪ್ಯವಾಗಿ ಇಡಬೇಕಾದ ಅಂಕಿ ಅಂಶವನ್ನು ಯಾಕೆ ಗೌಪ್ಯವಾಗಿಡಲಿಲ್ಲ? ಎಂದು ಕೇಳಿದರು.

Prev Post ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ವದಂತಿಗಳಿಗೆ ಕಿವಿ ಕೊಡಬೇಡಿ - ಡಿಸಿ ಜಿ ಜಗದೀಶ
Next Post ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರಿಗೆ ಹೈಕೋರ್ಟ್ ಮಧ್ಯಂತರ ತಡೆ‌