ಮಹೇಶ್ ಶೆಟ್ಟಿ ತಿಮರೋಡಿಯನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ...... ಚಿನ್ನಯ್ಯನಿಗೆ ಹಣಕಾಸು ನೆರವು ನೀಡಿದವರ ವಿಚಾರಣೆ ಆರಂಭಿಸಿದ ಎಸ್ಐಟಿ
Jayram Udupi:
ಮಂಗಳೂರು:
ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 32 ಕ್ರಿಮಿನಲ್ ಕೇಸ್ ಹೊಂದಿರುವ ಮಹೇಶ್ ಶೆಟ್ಟಿ ತಿಮರೋಡಿಯನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಸ್ಟೆಲ್ಲಾ ವರ್ಗೀಸ್ ಅವರು ಈ ಸಂಬಂಧ ಆದೇಶ ಹೊರಡಿಸಿದ್ದು, ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಒಂದು ವರ್ಷದ ಅವಧಿಗೆ ಜಿಲ್ಲೆಯ ಹೊರಗೆ ಕಳುಹಿಸಲಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸುಮಾರು 32ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಾನೂನು ಉಲ್ಲಂಘನೆ, ಅಶಾಂತಿ ಸೃಷ್ಟಿ ಹಾಗೂ ಸಮಾಜದಲ್ಲಿ ಅಸ್ಥಿರತೆ ಉಂಟುಮಾಡುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಗಡಿಪಾರು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿಮರೋಡಿ ಮೇಲೆ ಧರ್ಮಸ್ಥಳ ‘ಬುರುಡೆ ಪ್ರಕರಣ’ ಹಾಗು ‘ಶವ ಹೂತಿಟ್ಟ ಪ್ರಕರಣ’ಗಳಲ್ಲಿ ಆರೋಪಿಯಾಗಿದ್ದ ಚೆನ್ನಯ್ಯನಿಗೆ ಆಶ್ರಯ ನೀಡಿದ್ದ ಆರೋಪ ಇದೆ.
ಸೌಜನ್ಯ ಹೋರಾಟ ಸೇರಿದಂತೆ ಹಲವು ಶಾಂತಿ ಕದಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರ ಹಿನ್ನೆಲೆ, ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಎಸ್ಐಟಿ ತನಿಖೆಗಳಲ್ಲಿ ನೂರಾರು ಶವ ಹೂತ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದು, ಆ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂಬುದಾಗಿ ಪ್ರಕರಣ ತನಿಖೆ ನಡೆಸಿ ಪ್ರಕರಣ ಮುಕ್ತಾಯ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಪ್ರಕರಣದ ಷಡ್ಯಂತ್ರ ಹೂಡಿದ ಕುರಿತು ಬುರುಡೆ ಚಿನ್ನಯ್ಯ ಕೋರ್ಟಿನಲ್ಲಿ ತಪ್ಪು ಒಪ್ಪಿಗೆ ಸ್ವ ಇಚ್ಛಾ ಹೇಳಿಕೆ ನೀಡುವ ಸಾಧ್ಯತೆ ಇದೆ.
ಇದಾದ ಬಳಿಕ ಆ ಪ್ರಕರಣದ ಷಡ್ಯಂತ್ರದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವ ಬಂಧಿಸುವ ಸಾಧ್ಯತೆಗಳು ಇದೆಯೋ ಎನ್ನುವುದು ಸ್ಪಷ್ಟವಾಗಿಲ್ಲ.
ಮಂಗಳೂರು
ಚಿನ್ನಯ್ಯನಿಗೆ ಹಣಕಾಸು ನೆರವು ನೀಡಿದವರ ವಿಚಾರಣೆ ಆರಂಭಿಸಿದ ಎಸ್ಐಟಿ
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜೈಲಿನಲ್ಲಿರುವ ದೂರುದಾರ ಚಿನ್ನಯ್ಯನಿಗೆ ಹಣಕಾಸು ನೆರವು ನೀಡಿದವರ ವಿರುದ್ದ ಎಸ್ ಐಟಿ ತನಿಖಾ ತಂಡ ವಿಚಾರಣೆ ಆರಂಭಿಸಿದೆ. ದೂರುದಾರ ಚಿನ್ನಯ್ಯನಿಗೆ ಹಣ ವರ್ಗಾವಣೆ ಮಾಡಿರುವ 11 ಜನರಿಗೆ ನೋಟಿಸ್ ನೀಡಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಚಿನ್ನಯ್ಯನ ಖಾತೆಗೆ ಹಣವನ್ನು ವರ್ಗಾಯಿಸಿದ ಆರು ಜನರನ್ನು ಈಗಾಗಲೇ ಪ್ರಶ್ನಿಸಿದ್ದೇವೆ. ಅವರಲ್ಲಿ ಕೆಲವರು ಮಹೇಶ್ ಶೆಟ್ಟಿ ತಿಮರೋಡಿ ಅವರ ಬೆಂಬಲಿಗರಾಗಿದ್ದಾರೆ. ಚಿನ್ನಯ್ಯನ ಖಾತೆಗೆ ಸುಮಾರು 3.5 ಲಕ್ಷ ರೂ.ಗಳನ್ನು ಹಾಕಲಾಗಿದೆ. ಗಿರೀಶ್ ಮಟ್ಟಣ್ಣವರ್ ಅವರ ಪತ್ನಿಯ ಖಾತೆಯಿಂದಲೂ ಸುಮಾರು ಆರು ತಿಂಗಳ ಹಿಂದೆ ಚಿನ್ನಯ್ಯನ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂದು ಹೆಸರು ಬಹಿರಂಗಪಡಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಏತನ್ಮಧ್ಯೆ ಏಳು ತಲೆಬುರುಡೆಗಳು ಮತ್ತು ಅಸ್ಥಿಪಂಜರಗಳನ್ನು ವಶಪಡಿಸಿಕೊಂಡಿರುವ ಕುರಿತು ಅಸ್ವಾಭಾವಿಕ ಮರಣ ವರದಿ ಪ್ರಕರಣಗಳನ್ನು ದಾಖಲಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಮ್ಯಾಜಿಸ್ಟ್ರೇಟ್ ಅನುಮತಿಯನ್ನು ಕೋರಲಾಗಿದೆ ಎಂದು ತಿಳಿಸಿದ್ದಾರೆ.
ಎಸ್‌ಐಟಿ ಶೋಧದ ಸಮಯದಲ್ಲಿ ಮನೆಯಲ್ಲಿ ಬಂದೂಕು ಮತ್ತು ಶಸ್ತ್ರಾಸ್ತ್ರಗಳು ಪತ್ತೆಯಾದ ನಂತರ ತಿಮರೋಡಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ತಿಮರೋಡಿ ಇನ್ನೂ ವಿಚಾರಣೆಗೆ ಹಾಜರಾಗಿಲ್ಲ ಎಂದು ತಿಳಿದುಬಂದಿದೆ.