ಮಂಗಳೂರು ದಸರಾಕ್ಕೆ ಚಾಲನೆ

Mangalore:

Font size:

ಮಂಗಳೂರು ದಸರಾಕ್ಕೆ ಚಾಲನೆ

ಮಂಗಳೂರು ದಸರಾಕ್ಕೆ ಚಾಲನೆ

From Jayaram Udupi

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾಕ್ಕೆ ಸೋಮವಾರ ವಿಧ್ಯುಕ್ತ ಚಾಲನೆ ದೊರೆಯಿತು. ಕ್ಷೇತ್ರದಲ್ಲಿ ಶಾರದಾ ಮಾತೆ, ಮಹಾಗಣಪತಿ ಮತ್ತು ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆ ವೈಭವದಿಂದ ನಡೆಯಿತು.

ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ನಡೆಯುವ ಮಂಗಳೂರು ದಸರಾಕ್ಕೆ ಮಂಗಳೂರು ರಾಮಕೃಷ್ಣ ಮಿಶನ್ ಅಧ್ಯಕ್ಷ ಜಿತಕಾಮಾನಂದಜಿ ಮಹಾರಾಜ್, ಮಂಗಳೂರು ಬ್ರಹ್ಮಕುಮಾರೀಸ್ ಸಂಸ್ಥೆಯ ಮುಖ್ಯಸ್ಥೆ ಬಹ್ಮಕುಮಾರಿ ವಿಶ್ವೇಶ್ವರಿ ಜೀ ಚಾಲನೆ ನೀಡಿದರು.

ಭವ್ಯ ಕಲಾಮಂಟಪದಲ್ಲಿ ಶ್ರೀ ಮಹಾಗಣಪತಿ, ಶ್ರೀ ಶಾರದಾ ಮಾತೆ, ಆದಿಶಕ್ತಿ ಸಹಿತ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತೆ, ಮಹಾಗೌರಿ, ಸಿದ್ಧಿಧಾತ್ರಿಯರ ಮೂರ್ತಿಯನ್ನು ಏಕಕಾಲದಲ್ಲಿ ಪ್ರತಿಷ್ಠಾಪಿಸಲಾಯಿತು. ಅಪಾರ ಭಕ್ತರು ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಬಾರಿ ತದಿಗೆ ಉಪರಿ ಬಂದಿರುವ ಹಿನ್ನೆಲೆಯಲ್ಲಿ ೧೧ ದಿನಗಳ ಕಾಲ ದಸರಾ ಪೂಜೆ ನಡೆಯಲಿದೆ. ಭವ್ಯ ಮೂರ್ತಿಗಳಿಗೆ ಅಕ್ಟೋಬರ್ ೨ರಂದು ಸಂಜೆ ವಿಸರ್ಜನಾ ಪೂಜೆಯ ನಂತರ, ನಗರದಾದ್ಯಂತ ಮೆರವಣಿಗೆ ನಡೆಯಲಿದೆ. ಮರುದಿನ ಬೆಳಗ್ಗೆ ಮೂರ್ತಿಗಳನ್ನು ದೇವಸ್ಥಾನದ ಕಲ್ಯಾಣಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಹೆಚ್. ಸೋಮಸುಂದರಂ, ಉರ್ಮಿಳಾ ರಮೇಶ್, ಬಿ. ಮಾಧವ ಸುವರ್ಣ, ಸದಸ್ಯರಾದ ಹೆಚ್. ಎಸ್. ಸಾಯಿರಾಂ, ಕ್ಷೇತ್ರಾಭಿವೃದ್ಧಿ ಸಮಿತಿಯ ದೇವೇಂದ್ರ ಪೂಜಾರಿ, ಹರಿಕೃಷ್ಣ ಬಂಟ್ವಾಳ್, ಡಾ. ಬಿ. ಸುವರ್ಣ, ಲೀಲಾಕ್ಷ ಕರ್ಕೇರಾ ಮೊದಲಾದವರಿದ್ದರು.

ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ ಮಾತನಾಡಿ, ಮಂಗಳೂರು ದಸರಾದ ಧಾರ್ಮಿಕ ಕಾರ್ಯಕ್ರಮ ಶ್ರದ್ದಾಭಕ್ತಿಯಿಂದ ನಡೆದಿದೆ. ಈ ಬಾರಿ ದಾಖಲೆಯ ಸಂಖ್ಯೆಯಲ್ಲಿ ಪ್ರತಿಷ್ಠಾಪನೆಗೆ ಜನಸಾಗರ ಹರಿದುಬಂದಿದೆ. ಹತ್ತು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ದಕ್ಷಿಣ ಕನ್ನಡದಲ್ಲಿ ನವರಾತ್ರಿ:
ಪರಂಪರೆ-ಆಧುನಿಕತೆಯ ಸಮ್ಮಿಳನ
ಇಂದಿನಿಂದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಮತ್ತು ಉಡುಪಿಗಳಲ್ಲಿ ನವರಾತ್ರಿ ವೈಭವ !. ದಕ್ಷಿಣ ಕನ್ನಡದ ಜಿಲ್ಲಾ ಕೇಂದ್ರ ಮಂಗಳೂರು ನವರಾತ್ರಿಯ ವಿಶೇಷ ಆಕರ್ಷಣೆಯಾಗಿ ರಾಜ್ಯಾದ್ಯಂತ ಪ್ರಸಿದ್ಧ. ಇಲ್ಲಿಯ ವರ್ಣಮಯ ದೀಪಾಲಂಕಾರ ನೋಡಲು ಬರುವ ದೇಶ ವಿದೇಶೀಯರಿಂದಾಗಿ ಪ್ರವಾಸೋದ್ಯಮಕ್ಕೆ ಅಲ್ಪಕಾಲೀನ ಚೈತನ್ಯ ದೊರೆಯುತ್ತದೆ. ಕಲಾವಿದರಿಗೆ ಅವಕಾಶಗಳ ವೇದಿಕೆಯನ್ನು ನವರಾತ್ರಿ ತೆರೆದುಕೊಡುತ್ತದೆ.
ಮಂಗಳೂರಿನ ಮಂಗಳಾದೇವಿ ದೇವಾಲಯ ಸಾಂಪ್ರದಾಯಿಕ ನವರಾತ್ರಿ ಮಹೋತ್ಸವದ ಕೇಂದ್ರ ಬಿಂದು. ಮಂಗಳೂರಿನ ಮಂಗಳಾದೇವಿಗೂ ಕೇರಳಕ್ಕೂ ಅನಿನಾಭಾವ ಸಂಬಂಧ. ಅವರು ಮಂಗಳೂರನ್ನು ಮಂಗಳಾಪುರಂ ಎಂದು ಕರೆಯುತ್ತಾರೆ. ಮಂಗಳಾದೇವಿ ಮೂಲತಹ ಕೇರಳದಿಂದ ಬಂದು ಇಲ್ಲಿ ನೆಲೆಸಿದ ದೇವಿ ಎಂಬ ನಂಬಿಕೆ . ನಾಥ ಪಂಥೀಯರಿಗೂ ಮಂಗಳಾದೇವಿಗೂ ಸಂಬಂಧವಿದೆ. ಕರಾವಳಿಯಲ್ಲಿ ದುರ್ಗಿಯ ಆರಾಧನೆ ಇರುವ ಬಹುತೇಕ ದೇವಾಲಯಗಳಲ್ಲಿ ದೇವಿ ಇರುವುದು ಲಿಂಗರೂಪಿಯಾಗಿ ಎಂಬ ಅಂಶವನ್ನು ತುಳುನಾಡಿನ ಇತಿಹಾಸ ಅಧ್ಯಯನ ಕೈಗೊಂಡ ಬಹುತೇಕ ವಿದ್ವಾಂಸರು ತಮ್ಮ ಅಧ್ಯಯನಗಳಲ್ಲಿ ದಾಖಲಿಸಿದ್ದಾರೆ.
ಮಂಗಳಾದೇವಿ ದೇವಾಲಯದ ನವರಾತ್ರಿ ಉತ್ಸವ, ಲಭ್ಯ ಇರುವ ಮಾಹಿತಿಯ ಪ್ರಕಾರ ಅತ್ಯಂತ ಹಿಂದಿನಿಂದಲೂ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬಂದಿರುವ ಪ್ರಸಿದ್ಧ ಉತ್ಸವ. ಪ್ರಚಾರ ಮಾಧ್ಯಮಗಳು ಇಲ್ಲದ ಕಾಲದಲ್ಲಿಯೂ ಇಲ್ಲಿಗೆ ಮಾರ್ನವಮಿ ಉತ್ಸವ ನೋಡಲು ಜನ ಸೇರುತ್ತಿದ್ದ ಬಗ್ಗೆ ದಾಖಲೆಗಳು ಮಾತನಾಡುತ್ತವೆ. ಇಲ್ಲಿ ಮಾರ್ನವಮಿ ಕಟ್ಟೆಯೂ ಇದೆ. ಉರ್ವ ಮಾರಿಯಮ್ಮ, ಕೋಟೆ ಮಾರಿಯಮ್ಮ ದೇವಾಲಯಗಳೂ ಕಾಲಕ್ರಮೇಣ ನವರಾತ್ರಿ ಉತ್ಸವದಲ್ಲಿ ಭಕ್ತರು ಭೇಟಿ ನೀಡಿ ದೇವಿ ದರ್ಶನ ಪಡೆಯುವ ಪ್ರಮುಖ ದೇವಾಲಯಗಳಾಗಿ ಮೂಡಿ ಬಂದಿವೆ.
ಮಂಗಳೂರಿನ ನವರಾತ್ರಿಯಲ್ಲಿ ಗುಜರಾತ್ ಸಮುದಾಯ, ಬೆಂಗಾಳಿ ಸಮುದಾಯ ಸಂಸ್ಕೃತಿಯೂ ಮಿಳಿತವಾಗಿದೆ. ಗುಜರಾತಿ ಸಮುದಾಯದ ಗಾರ್ಭಾ ನೃತ್ಯ ಅಥವಾ ದಾಂಡಿಯಾ ರಾಸ್ ನವರಾತ್ರಿ ಸಂದರ್ಭದ ಜನಪ್ರಿಯ ಧಾರ್ಮಿಕ ನೃತ್ಯ ಪ್ರಕಾರವಾಗಿದೆ. ಕೆಲವು ವರ್ಷಗಳ ಹಿಂದೆ ಇದಕ್ಕೆ ಮುಕ್ತ ಪ್ರವೇಶವಿತ್ತು. ಕೆಲವು ಮಾನವರಂತಿರುವ ಆದರೆ ಮಾನವ ಸಂಸ್ಕೃತಿ ಹೀನ ವ್ಯಕ್ತಿಗಳ ನಡವಳಿಕೆಯಿಂದಾಗಿ ಇಂದು ಈ ನೃತ್ಯ ಭದ್ರತೆಯ ಕೋಟೆಯೊಳಗೆ ನಡೆಯುತ್ತಿದೆ. ನೋಡಬೇಕಿದ್ದರೆ ಒಳಪ್ರವೇಶಿಸಲು ಸಂಘಟಕರ ಅನುಮತಿ ಕಡ್ಡಾಯ.
ಬೆಂಗಾಳಿ ಸಮುದಾಯದವರ ನವರಾತ್ರಿ ದೇವಿ ಆರಾಧನೆ ಹಿಂದೆ ಫಾಲ್ಕೆ ಸಭಾಭವನದಲ್ಲಿ ನಡೆಯುತ್ತಿತ್ತು. ಈಗ ಆ ಕಟ್ಟಡ ಕಾಲ ಬದಲಾದಂತೆ ಕೈಬದಲಾಗಿ ಹೊಸ ಕಟ್ಟಡ ಎದ್ದಿದೆ. ಬೆಂಗಾಲಿ ಸಮುದಾಯದವರ ಆಚರಣೆ ಹಿಂದಿ ಪ್ರಚಾರ ಸಭಾಕ್ಕೆ ಸ್ಥಳಾಂತರಗೊಂಡಿದೆ. ಇವರು ಆರಾಧಿಸುವ ದೇವಿ ಮೂರ್ತಿ ಉಗ್ರ ಸ್ವರೂಪದ್ದು, ಕಾಳಿಕಾ ಮಾತೆಗೆ ಇಲ್ಲಿ ಪ್ರಾಧಾನ್ಯ. ಹಿಂದೆ ಇಲ್ಲಿ ವಾಸವಾಗಿದ್ದ ಈಗ ಬೇರೆಡೆ ವರ್ಗಾವಣೆಯಾಗಿರುವ ಅಖಿಲ ಭಾರತ ಸೇವೆಯ ಬೆಂಗಾಲಿ ಅಧಿಕಾರಿಗಳು ನವರಾತ್ರಿ ಸಂದರ್ಭದಲ್ಲಿ ಇಲ್ಲಿಗೆ ಬಂದು ಕಾಳಿ ಮಾತೆಗೆ ನಮಿಸಿ ಹೋಗುತ್ತಾರೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ , ಬಂಟ್ವಾಳದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯಗಳು ಮಂಗಳೂರು ಸನಿಹದ ಸಾಂಪ್ರದಾಯಿಕ ನವರಾತ್ರಿ ಉತ್ಸವದ ಇನ್ನೆರಡು ಪಮುಖ ಕೇಂದ್ರಗಳು. ಪೊಳಲಿ ದೇವಾಲಯ ಜೀರ್ಣೋದ್ಧಾರಗೊಂಡ ಬಳಿಕ ಅದ್ಭುತ ಕಾಷ್ಠ ಸೌಂದರ್ಯಕ್ಕೆ ಸಾಕ್ಷಿಯಾಗಿದೆ. ಈಗ ಇದು ಭಕ್ತ ಜನರ ನವರಾತ್ರಿ ಸರ್ಕ್ಯೂಟ್ ನಲ್ಲಿ ಸೇರಿಕೊಂಡಿದೆ. ಇವೆರಡೂ ಕ್ಷೇತ್ರಗಳು ಭಕ್ತರ ಪ್ರಸಾದ ಭೋಜನ ವ್ಯವಸ್ಥೆಯನ್ನು ಹೊಂದಿವೆ. ಭಕ್ತರ ಸಂಖ್ಯೆ ಎಷ್ಟೇ ದೊಡ್ದದಾದರೂ ಪ್ರಸಾದ ಉಣಬಡಿಸುವ ವ್ಯವಸ್ಥೆ ಅಷ್ಟೇ ಪ್ರಮಾಣದಲ್ಲಿ ಹಿಗ್ಗಿಕೊಳ್ಳುವ ಸ್ಥಿತಿಸ್ಥಾಪತ್ವವನ್ನು ಪಡೆದಿದೆ. ದೇವಾಲಯದ ಆಡಳಿತ ಚುಕ್ಕಣಿ ಹಿಡಿದ ಸ್ಥಳೀಯರು ಈ ದಿಶೆಯಲ್ಲಿ ಯಾವ ಕೊರತೆಯೂ ಎದುರಾಗದಂತೆ ನೋಡಿಕೊಳ್ಳುತ್ತಾರೆ.
ಆಧುನಿಕ ದಸರಾ- ಜನರ ದಸರಾ:
ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಆಧುನಿಕ ಕಾಲಘಟ್ಟದ ವೈಭವದ ದಸರಾ ಮಹೋತ್ಸವದ ಕೇಂದ್ರ ಬಿಂದು. ಸಮಾಜ ಸುಧಾರಕ ಸಂತ ಶ್ರೀ ನಾರಾಯಣ ಗುರುಗಳು ಇಲ್ಲಿ ಶಿವನನ್ನು ಪ್ರತಿಷ್ಠಾಪಿಸಿದರು. ಕೇಂದ್ರ ಸಚಿವರಾಗಿದ್ದಾಗ ಜನಾರ್ದನ ಪೂಜಾರಿಯವರು ಈ ಕ್ಷೇತ್ರವನ್ನು ಜೀರ್ಣೋದ್ಧಾರಗೊಳಿಸಿ ಜಗತ್ತಿನ ನಕಾಶೆಯಲ್ಲಿ ಪ್ರಕಾಶಿಸುವಂತೆ ಮಾಡಿದರು. ಅಪ್ಪಟ ಸ್ವಾಭಿಮಾನಿಯಾದ ಜನಾರ್ದನ ಪೂಜಾರಿಯವರು ಕುದ್ರೋಳಿ ದಸರಾ ಬಹಳ ದೊಡ್ಡ ಮೊತ್ತದ ಖರ್ಚು ಬೇಡುತ್ತದಾದರೂ ಸರಕಾರದ ನೆರವನ್ನು ಅಪೇಕ್ಷಿಸಲಿಲ್ಲ, ಅರ್ಜಿಯನ್ನೂ ಕೊಡಲಿಲ್ಲ. ಸರಕಾರ ಅನುದಾನ ಕೊಡುವ ಪ್ರಸ್ತಾಪ ಬಂದಾಗಲೂ ಅವರು ಆ ಬಗ್ಗೆ ಮೌನ ಮುರಿಯಲಿಲ್ಲ. ಬಹುಷಃ ದೇವರ ಸೇವೆ -ಅದು ಭಕ್ತ ಜನರ ಸ್ವಂತ ಖರ್ಚಿನಲ್ಲೇ ನಡೆಯಲಿ ಎಂಬುದು ಅವರ ಆಶಯವಾಗಿದ್ದಿರಬಹುದು. “ಮೈಸೂರಿನದ್ದು ಅರಸರ ದಸರಾ, ನಮ್ಮದು ಜನರಾ ದಸರಾ” ಎಂದವರು ಹೇಳುತ್ತಲೇ ಬಂದಿದ್ದರು. ಕೆಲ ವರ್ಷಗಳ ಹಿಂದಿನಿಂದ ನಗರ ಬೀದಿಗಳ ವರ್ಣಮಯ ದೀಪಾಲಂಕಾರದ ಖರ್ಚು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಭರಿಸಲ್ಪಡುತ್ತಿರುವುದರಿಂದ ಕುದ್ರೋಳಿ ದೇವಾಲಯಭರಿಸಬೇಕಾಗಿದ್ದ ಕೋಟಿ ಮೊತ್ತದ ವಿದ್ಯುತ್ ಬಿಲ್ ಕೊಂಚ ಕಡಿಮೆಯಾಗಿದೆ. ಮಂಗಳೂರು ದಸರಾ ಈಗಲೂ ಜನರ ದಸರಾ ಆಗಿಯೇ ಉಳಿದಿದೆ. ಯಾವುದಕ್ಕೂ ಪಾಸ್ ಎಂಬ ವ್ಯವಸ್ಥೆ ಇಲ್ಲ. ಟಿಕೇಟ್ ಎಂಬ ನಿಯಮ ಇಲ್ಲ! ಮಧ್ಯಾಹ್ನದ ಭೋಜನ ಪ್ರಸಾದವೂ ಇದೆ.
ಹುಲಿ ವೇಷ:
ಮಾರ್ನವಮಿ ಹಬ್ಬದಲ್ಲಿ ಅಂದರೆ ನವರಾತ್ರಿ ಹಬ್ಬದಲ್ಲಿ ಮಂಗಳೂರಿನ ಬೀದಿಗಳಲ್ಲಿ ಧಾರಾಳವಾಗಿ ಮಿಂಚುವ ವೇಷಗಳೆಂದರೆ ಹುಲಿ ವೇಷಗಳು. ಹಿಂದೆ ಮುಸಲ್ಮಾನರು ಕೂಡಾ ಮೊಹರಂ ಹಬ್ಬಗಳಲಿ ಹುಲಿ ವೇಷ ಹಾಕುವ ಪರಂಪರೆ ಇತ್ತು. ರಹಮತ್ ತರಿಕೆರೆ ಎಂಬ ವಿದ್ವಾಂಸರು ಇದನ್ನು ದಾಖಲಿಸಿದ್ದಾರೆ. ಹಿಂದೂ ಗಳಲ್ಲಿ ಹರಕೆ ರೂಪದಲ್ಲಿ ಪ್ರಚಲಿತವಿದ್ದ ಹುಲಿ ವೇಷಕ್ಕೆ ಈಗ ಕಾರ್ಪೋರೇಟ್ ಟಚ್ ಸಿಕ್ಕಿದೆ. ಮಿಥುನ್ ರೈ, ನಳಿನ್ ಕುಮಾರ್ ಕಟೀಲ್, ವೇದವ್ಯಾಸ ಕಾಮತ್ ..ಹೀಗೆ ಬೇರೆ ಬೇರೆ ರಾಜಕೀಯ ಸಿದ್ಧಾಂತಗಳಿಗೆ ಸೇರಿದ ಜನಪ್ರತಿನಿಧಿಗಳು , ಕಾರ್ಪೋರೇಟ್ ಸಂಸ್ಥೆಗಳು ಹುಲಿ ವೇಷ ಪರಂಪರೆಯನ್ನು ಪೋಷಿಸುತ್ತಿವೆ.
ನವ ತಲೆ ಮಾರಿನ ನವ ಕುಬೇರರು ಧಾರಾಳ ಮೊತ್ತ ನೀಡುವ ಮೂಲಕ, ಹುಲಿವೇಷಗಳ ತಂಡದ ಮುಖ್ಯಸ್ಥರಿಗೆ ನೋಟಿನ ಹಾರ ಹಾಕುವ ಮೂಲಕ ತಮ ಮನೆಯಂಗಳ ಅಥವ ಸಂಸ್ಥೆಯ ಅಂಗಳಗಳಲ್ಲಿ ಕುಣಿಸುವ ಮೂಲಕ ಬೆಂಬಲ ನೀಡುತ್ತಿದ್ದಾರೆ. ಹುಲಿ ವೇಷ ಹಾಕುವುದು ಮತ್ತು ಆ ತಂಡವನ್ನು ವಾದ್ಯ ಪರಿಕರಗಳು ಹಾಗು ವಾಹನಗಳೊಂದಿಗೆ ಮುನ್ನಡೆಸುವುದು ಬಹಳ ದೊಡ್ಡ ಖರ್ಚಿನ ಬಾಬತ್ತು. ಉದ್ಯಮಿಗಳ, ನವಕುಬೇರರ ಬೆಂಬಲದಿಂದ ಹುಲಿವೇಷ ತಂಡಗಳ ಸಂಖ್ಯೆ ಹೆಚ್ಚುತ್ತಿದೆ. ಅವುಗಳು ಕೂಡಾ ಹೊಸ ಹೊಸ ಕಸರತ್ತು, ಸಾಹಸಗಳನ್ನು ಪ್ರದರ್ಶಿಸುವ ಮೂಲಕ ಹುಲಿಗಳ ತಾಕತ್ತನು ಪ್ರತಿಬಿಂಬಿಸುತ್ತಿವೆ. ಜನಮೆಚ್ಚುಗೆಯನ್ನೂ ಪಡೆಯುತ್ತಿವೆ. ಆದರೆ ಈ ಹುಲಿ ವೇಷ ತಂಡಗಳು ಸಾಂಪ್ರದಾಯಿಕತೆ ಮತ್ತು ಪರಂಪರೆಗೆ ಬದ್ಧವಾಗಿಯೇ ಸಾಗುತ್ತಿವೆ. ಊದು ಪೂಜೆ ಇಲ್ಲದೆ ಯಾವ ತಂಡವೂ ವೇಷ ಹಾಕಲು ಮುಂದಾಗುವುದಿಲ್ಲ. ಅಲ್ಲಿಂದಲೇ ಹುಲಿ ವೇಷಧಾರಿ ಅನುಸರಿಸಬೇಕಾದ ನಿಯಮಗಳ ಪಾಲನೆ ಕಟ್ಟು ನಿಟ್ಟಾಗಿ ಜಾರಿಯಾಗುತ್ತದೆ.
ದೀಪಗಳ ಕಾವ್ಯ:
ಮಂಗಳೂರು ನವರಾತ್ರಿ-ದಸರಾ ಉತ್ಸವ ಸಾಂಪ್ರದಾಯಿಕತೆ, ಪರಂಪರೆಗೆ ಆಧುನಿಕತೆಯ ಮೆರುಗು ತುಂಬಿದ ಹಬ್ಬ. ನವರಾತ್ರಿಯ ದೀಪಗಳ ಅಲಂಕಾರಕ್ಕೆ ಮಂಗಳೂರಿಗೆ ಮಂಗಳೂರೇ ಸಾಟಿ!. ಜನಜಂಗುಳಿ ಕರಗಿದ ಮೇಲೆ ವಾಹನ ಸೌಲಭ್ಯ ಇರುವವರು ತಮ್ಮದೇ ವಾಹನಗಳಲ್ಲಿ ದೀಪಾಲಂಕಾರ ಸವಿಯಲು ನೆರೆಯ ಜಿಲ್ಲೆಗಳಿಂದ ಬಂದು ಹೋಗುತ್ತಾರೆ. ಆದುನಿಕ ಪ್ರವಾಸೋದ್ಯಮ ಪರಿಭಾಷೆ ಇದನ್ನು ನಿಧಾನವಾಗಿ ಬದುಕುವುದು ಎಂದು ವ್ಯಾಖ್ಯಾನಿಸುತ್ತದೆ. ಇಲ್ಲಿ ಪೈಪೋಟಿ ಇಲ್ಲ. ನಿಧಾನವಾಗಿ ಸಾಗುತ್ತ ಮರಗಳ ಮೇಲೆ ದೀಪಗಳು ಓಡುವುದನ್ನು, ರಸ್ತೆಗಳು ಜಗಮಗಿಸುವುದನ್ನು, ನಿರಭ್ರ ಅಥವಾ ಕೆಲವೊಮ್ಮೆ ಮೋಡಗಳು ಓಡುವ ಆಕಾಶವನ್ನು ಮೌನದಲ್ಲಿ ನೋಡುವುದು, , ಆ ಮೂಲಕ ಆನಂದವನ್ನು ಪಡೆಯುವುದು. ಕರಾವಳಿಗರ ಭಾಷೆಯಲ್ಲಿ ಹೇಳುವುದಾದರೆ ಒಟ್ರಾಸಿ ಖುಶಿ!
ಕಲಾಪ್ರದರ್ಶನಕ್ಕೆ ಅವಕಾಶ ಒದಗಿಸುವ ಸಂದರ್ಭಗಳಲ್ಲಿ ನವರಾತ್ರಿ ಕಾಲಾವಧಿಯೂ ಒಂದು. ಜಿಲ್ಲೆಯ ಬಹುತೇಕ ದೇವಾಲಯಗಳು ಕಲಾ ಸಂಸ್ಕೃತಿಗೆ ಪ್ರೋತ್ಸಾಹ ಕೊಡುತ್ತಿವೆ.

Prev Post ಜಾತಿಗಳ ಕ್ರಿಶ್ಚಿಯನ್ ಟ್ಯಾಗ್ ಕೈಬಿಡಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ