ಧರ್ಮಸ್ಥಳ ಪ್ರಕರಣದಲ್ಲಿ 'ಮಾಸ್ಕ್ ಮ್ಯಾನ್' ಚಿನ್ನಯ್ಯನಿಗೆ ಜೈಲೇ ಗತಿ, ಜಾಮೀನು ಅರ್ಜಿ ವಜಾ

Mangalore:

Font size:

ಧರ್ಮಸ್ಥಳ ಪ್ರಕರಣದಲ್ಲಿ 'ಮಾಸ್ಕ್ ಮ್ಯಾನ್' ಚಿನ್ನಯ್ಯನಿಗೆ ಜೈಲೇ ಗತಿ, ಜಾಮೀನು ಅರ್ಜಿ ವಜಾ

From Jaryram Udupi

ಮಂಗಳೂರು
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಆರೋಪಿಸಿ ಸಂಚಲನ ಮೂಡಿಸಿದ್ದ 'ಮಾಸ್ಕ್ ಮ್ಯಾನ್' ಚಿನ್ನಯ್ಯನ ಜಾಮೀನು ಅರ್ಜಿಯನ್ನು ಬೆಳ್ತಂಗಡಿ ನ್ಯಾಯಾಲಯವು ವಜಾಗೊಳಿಸಿದೆ. ವಿಶೇಷ ತನಿಖಾ ತಂಡವು (ಎಸ್‌ಐಟಿ) ನಡೆಸಿದ ಉತ್ಖನನದಲ್ಲಿ ಬಹುತೇಕ ಸ್ಥಳಗಳಲ್ಲಿ ಮಾನವ ಕಳೇಬರಗಳು ಪತ್ತೆಯಾಗಿರಲಿಲ್ಲ. ಬಳಿಕ ಚಿನ್ನಯನನ್ನೇ ಎಸ್‌ಐಟಿ ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿತ್ತು. ಸದ್ಯ ಸಾಕ್ಷಿ-ದೂರುದಾರ ನ್ಯಾಯಾಂಗ ಬಂಧನದಲ್ಲಿದ್ದು, ಇದೇ ಮುಂದುವರಿಯಲಿದೆ.

ಇದಾದ ಬಳಿಕ ಎಸ್‌ಐಟಿ ಅಧಿಕಾರಿಗಳು ಚಿನ್ನಯ್ಯನನ್ನೇ ಬಂಧಿಸಿ, 15 ದಿನಗಳ ಕಾಲ ತೀವ್ರ ವಿಚಾರಣೆಯನ್ನು ನಡೆಸಿ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದ್ದರು. ನಂತರ ನ್ಯಾಯಾಂಗ ಬಂಧನಕ್ಕೆ ಗುರಿಯಾಗಿದ್ದ ಚಿನ್ನಯ್ಯನನ್ನು ಭದ್ರತಾ ಕಾರಣಗಳಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.

ಚಿನ್ನಯ್ಯ ಜೈಲು ಸೇರಿದ ನಂತರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲರು ಆತನ ಪರವಾಗಿ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಇದಕ್ಕೆ ಎಸ್‌ಐಟಿ ಪರ ವಕೀಲರಾದ ದಿವ್ಯರಾಜ್ ಹೆಗ್ಡೆ ಪುತ್ತೂರು ಅವರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿ, ಜಾಮೀನು ನೀಡದಂತೆ ಮನವಿ ಮಾಡಿದ್ದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ ಅವರು, ಚಿನ್ನಯ್ಯನ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶವನ್ನು ಹೊರಡಿಸಿದ್ದಾರೆ. ಇದರಿಂದಾಗಿ ಚಿನ್ನಯ್ಯ ಸದ್ಯಕ್ಕೆ ಜೈಲಿನಲ್ಲಿಯೇ ಉಳಿಯುವುದು ಅನಿವಾರ್ಯ ಆಗಿದೆ.

ಇನ್ನೊಂದೆಡೆ ಅತ್ಯಾಚಾರಕ್ಕೀಡಾಗಿ ಕೊಲೆಗೀಡಾದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅವರ ತಾಯಿ ಕುಸುಮಾವತಿ ನೀಡಿದ ದೂರಿನ ಅನ್ವಯ, ಸೌಜನ್ಯಾ ನಾಪತ್ತೆ ಮತ್ತು ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯನ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಚಿನ್ನಯ್ಯ ನೀಡಿದ ಹೇಳಿಕೆಗಳ ಆಧಾರದ ಮೇಲೆ ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಹಾಗೂ ಯೂಟ್ಯೂಬರ್‌ಗಳಾದ ಸಮೀರ್ ಎಂಡಿ ಮತ್ತು ಅಭಿಷೇಕ್ ಅವರನ್ನೂ ಸಹ ವಿಚಾರಣೆಗೆ ಒಳಪಡಿಸಲಾಗಿದೆ.

ಎಸ್‌ಐಟಿ ರಚನೆಯಾಗುವ ಮುನ್ನವೇ ಚಿನ್ನಯ್ಯ ಮತ್ತು ಆತನ ತಂಡ ಕೇರಳದ ಸಂಸದರೊಬ್ಬರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿತ್ತು ಎಂಬ ಆರೋಪಗಳೂ ಇವೆ. ಈ ಬಗ್ಗೆಯೂ ಸೇರಿದಂತೆ ವಿವಿಧ ಕೋನಗಳಿಂದ ಎಸ್‌ಐಟಿ ತನ್ನ ತನಿಖೆಯನ್ನು ಮುಂದುವರಿಸಿದೆ.

Prev Post ರೋಲ್ಸ್‌ ರಾಯ್ಸ್‌ ಜಿಸಿಸಿ ಉದ್ಘಾಟಿಸಿದ ಎಂ ಬಿ ಪಾಟೀಲ
Next Post ಮಂಗಳೂರು ;ಅಡ್ಯಾರ್ ತಜಿಪೋಡಿಯಲ್ಲಿ ಗೋ ಕಳ್ಳತನ/ಆರೋಪಿಗಳ ಬಂಧನ