ರೋಲ್ಸ್ ರಾಯ್ಸ್ ಜಿಸಿಸಿ ಉದ್ಘಾಟಿಸಿದ ಎಂ ಬಿ ಪಾಟೀಲ ******** ಕೃಷ್ಣಾ ಮೇಲ್ದಂಡೆ: ವಿಜಯಪುರ ಜಿಲ್ಲೆಯ 3 ಲಕ್ಷ ಹೆಕ್ಟೇರ್ ಜಮೀನಿಗೆ ನೀರು
*ರೋಲ್ಸ್ ರಾಯ್ಸ್ ಜಿಸಿಸಿ ಉದ್ಘಾಟಿಸಿದ ಎಂ ಬಿ ಪಾಟೀಲ*
ಬೆಂಗಳೂರು: ಇಲ್ಲಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಪ್ರತಿಷ್ಠಿತ ರೋಲ್ಸ್-ರಾಯ್ಸ್ ಕಂಪನಿಯು ಸ್ಥಾಪಿಸಿರುವ ಅತ್ಯಾಧುನಿಕ ಜಾಗತಿಕ ಸಾಮರ್ಥ್ಯ ಮತ್ತು ನಾವೀನ್ಯತಾ ಕೇಂದ್ರವನ್ನು (ಜಿಸಿಸಿ) ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ʻರಾಜ್ಯದ ವೈಮಾಂತರಿಕ್ಷ ಉದ್ಯಮ ವಲಯದ ಕಾರ್ಯ ಪರಿಸರವನ್ನು ಸೃಷ್ಟಿಸುವಲ್ಲಿ ರೋಲ್ಸ್ ರಾಯ್ಸ್ ಕಂಪನಿಯು ಮೊದಲಿನಿಂದಲೂ ಜತೆಯಾಗಿದೆ. ನೂತನ ಜಿಸಿಸಿ ಕೇಂದ್ರವು ಕಂಪನಿಯ ಪಾಲಿಗೆ ಇಂತಹ ಅತ್ಯಂತ ದೊಡ್ಡ ಮತ್ತು ಅತ್ಯಾಧುನಿಕ ಕೇಂದ್ರವಾಗಿದೆ. ಇಂತಹ ಉಪಕ್ರಮಗಳಿಂದಾಗಿ ಬೆಂಗಳೂರು ನಗರವು ವೈಮಾಂತರಿಕ್ಷ ವಲಯದ ಹೂಡಿಕೆಯಲ್ಲಿ ಜಗತ್ತಿನ ಮೊದಲ ಮೂರು ನಗರಗಳಲ್ಲಿ ಒಂದಾಗಿ ಬೆಳೆದಿದೆʼ ಎಂದಿದ್ದಾರೆ.
ರೋಲ್ಸ್ ರಾಯ್ಸ್ ಕಂಪನಿಯು ಭಾರತದಲ್ಲಿ 2 ಸಾವಿರಕ್ಕೂ ಹೆಚ್ಚು ಎಂಜಿನಿಯರುಗಳನ್ನು ಹೊಂದಿದೆ. ಈ ಪೈಕಿ ಹೆಚ್ಚಿನವರು ಕರ್ನಾಟಕದಿಂದ ಕೆಲಸ ಮಾಡುತ್ತಿದ್ದಾರೆ. ಈ ಕಂಪನಿಯ ಜತೆಗೆ ಏಕಸ್, ಕಾಲಿನ್ಸ್ ಏರೋಸ್ಪೇಸ್, ವಿಪ್ರೋ, ಮಹೀಂದ್ರ, ಬೋಯಿಂಗ್, ಏರ್‌ಬಸ್ ಮತ್ತು ಪಿಕ್ಸೆಲ್ ಕಂಪನಿಗಳೂ ರಾಜ್ಯದಲ್ಲಿ ನೆಲೆಯೂರಿವೆ. ಇವು ಕ್ರಮವಾಗಿ ಪವರ್ ಸಿಸ್ಟಂ ಮತ್ತು ಪ್ರೊಪಲ್ಶನ್, ಸ್ಟ್ರಕ್ಚರಲ್ ಮತ್ತು ಮೆಕ್ಯಾನಿಕಲ್ ಬಿಡಿಭಾಗಗಳು, ವಿಶೇಷ ಪರಿಣತಿಯ ತಂತ್ರಜ್ಞಾನಗಳಲ್ಲಿ ಸಾಧನೆ ಮಾಡಿವೆ.
ತಯಾರಿಕಾ ಚಟುವಟಿಕೆಗಳನ್ನು ಆಧರಿಸಿದ ಆರ್ಥಿಕತೆಯಲ್ಲಿ ವೈಮಾಂತರಿಕ್ಷ ವಲಯವು ಪ್ರಮುಖ ಪಾತ್ರ ವಹಿಸುತ್ತಿದೆ. ರಾಜ್ಯದ ವೈಮಾಂತರಿಕ್ಷ ಮತ್ತು ರಕ್ಷಣಾ ನೀತಿಯು ಆಕರ್ಷಕವಾಗಿದ್ದು, ಹೂಡಿಕೆದಾರರಿಗೆ ಒಳ್ಳೆಯ ಪ್ರೋತ್ಸಾಹನಾ ಭತ್ಯೆಗಳನ್ನು ಒಳಗೊಂಡಿದೆ. ಇದರ ಜತೆಗೆ ನಮ್ಮಲ್ಲಿರುವ ಸಂಶೋಧನಾ ಸಂಸ್ಕೃತಿಯು ಇದಕ್ಕೆ ಪೂರಕವಾಗಿ, ಬಲ ತುಂಬುತ್ತಿದೆ ಎಂದು ಅವರು ನುಡಿದಿದ್ದಾರೆ.
ಈ ಜಿಸಿಸಿ ಕೇಂದ್ರದಲ್ಲಿ 700 ಮಂದಿ ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ರೋಲ್ಸ್ ರಾಯ್ಸ್ ಸಿಎಫ್‌ಒ ಹೆಲೆನ್ ಮ್ಯಾಕಬೆ, ಬ್ರಿಟಿಷ್ ಹೈಕಮಿಷನರ್ ಲಿಂಡಿ ಕೆಮರಾನ್ ಉಪಸ್ಥಿತರಿದ್ದರು.
*ಮುಖ್ಯಮಂತ್ರಿ, ಡಿಸಿಎಂ ಹಾಗೂ ಸಂಪುಟದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ ಎಂಬಿಪಾ*
*ಕೃಷ್ಣಾ ಮೇಲ್ದಂಡೆ: ವಿಜಯಪುರ ಜಿಲ್ಲೆಯ 3 ಲಕ್ಷ ಹೆಕ್ಟೇರ್ ಜಮೀನಿಗೆ ನೀರು*
ಬೆಂಗಳೂರು: ಮೂರನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ವಿಜಯಪುರ ಜಿಲ್ಲೆಯ 3 ಲಕ್ಷ ಹೆಕ್ಟೇರ್ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಯೋಜನೆಯ ವ್ಯಾಪ್ತಿಯಲ್ಲಿ 9 ಉಪ ಯೋಜನೆಗಳಿದ್ದು, ಬಾಗಲಕೋಟೆ, ಕೊಪ್ಪಳ ಮುಂತಾದ ಜಿಲ್ಲೆಗಳಿಗೂ ಲಾಭವಿದೆ. ಈಗ ರಾಜ್ಯ ಸರಕಾರವು ಯೋಜನೆಗೆ ಬೇಕಾದ ಜಮೀನಿಗೆ ಪರಿಹಾರ ದರ ನಿಗದಿ ಮಾಡಿದ್ದು, ಇದೊಂದು ಐತಿಹಾಸಿಕ ತೀರ್ಮಾನವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ಹೇಳಿದ್ದಾರೆ.
ಈ ಯೋಜನೆ ಜಾರಿಗೆ ನೆರವಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಂಪುಟದ ಎಲ್ಲ ಸದಸ್ಯರಿಗೂ ಅಭಿನಂದನೆಗಳನ್ನು ಸಲ್ಲಿಸಲಾಗುವುದು ಎಂದರು.
ಈಗಾಗಲೇ ಕೃಷ್ಣಾ ನ್ಯಾಯಾಧಿಕರಣ ತನ್ನ ಅಂತಿಮ ತೀರ್ಪು ನೀಡಿ ಹಲವು ವರ್ಷಗಳೇ ಕಳೆದಿವೆ. ಕೇಂದ್ರ ಸರಕಾರ ತ್ವರಿತವಾಗಿ ಇದರ ಗೆಜೆಟ್ ಅಧಿಸೂಚನೆ ಹೊರಡಿಸಬೇಕು. ಮೂರನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಒಟ್ಟು 5.94 ಲಕ್ಷ ಹೆಕ್ಟೇರ್ ಜಮೀನಿಗೆ ನೀರು ಕೊಡಬಹುದು ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಒಟ್ಟು ಭೂಮಿಯ ಶೇ.62ರಷ್ಟು ಪ್ರದೇಶ ಕೃಷ್ಣಾ ಕಣಿವೆಯಲ್ಲಿದೆ. ಯೋಜನೆಗೆ ಒಟ್ಟು 1.33 ಲಕ್ಷ ಎಕರೆ ಭೂಮಿ ಬೇಕಾಗಿದ್ದು, ಇದರಲ್ಲಿ 75,563 ಎಕರೆ ಮುಳುಗಡೆ ಪ್ರದೇಶವಾಗಲಿದೆ. ಮುಳುಗಡೆ ಆಗಲಿರುವ 20 ಹಳ್ಳಿಗಳ ಪುನರ್ವಸತಿ ಸಮರ್ಪಕವಾಗಿ ನಡೆಯಬೇಕಾಗಿದೆ ಎಂದು ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ.