ಮುಂದಿನ ದಿನಗಳಲ್ಲಿ ಕುರುಬ ಕ್ರಿಶ್ಚಿಯನ್ ಪೀಠ ಆರಂಭಿಸುತ್ತಾರೆ: ಬಸವರಾಜ ಬೊಮ್ಮಾಯಿ
ಬೆಂಗಳೂರು: ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಇಲ್ಲದಿರುವ ಜಾರಿ ಸೇರಿಸಿ ಜಾತಿ ನಡುವೆ ಸಂಘರ್ಷ ಉಂಟು ಮಾಡಿ ತಮ್ಮ ರಾಜಕೀಯ ರೊಟ್ಟಿ ಸುಟ್ಡು ಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಸಮುದಾಯದ ಬಿಜೆಪಿ ನಾಯಕರ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಗಣತಿ ಕಾಯಿದೆ ಇದೆ. ಅದರ ಪ್ರಕಾರ ಕೇಂದ್ರ ಸರ್ಕಾರ ಗಣತಿ ಮಾಡುತ್ತದೆ. ರಾಜ್ಯ ಸರ್ಕಾರ ಸರ್ವೆ ಮಾಡಬಹುದು. ಆದರೆ, ಇವರು ಮನೆ ಮನೆಗೆ ಹೋಗುವುದು ಗಣತಿ ಕಾಯಿದೆಯ ವಿರುದ್ದ ಇದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ ಕಾಂತರಾಜ ವರದಿ ಯಾಕೆ ಮಾಡಿಸಿದ್ದರು. ಅದನ್ನು ಯಾಕೆ ಜಾರಿ ಮಾಡುತ್ತಿಲ್ಲ ಎನ್ನುವುದನ್ನು ಜನರಿಗೆ ತಿಳಿಸಬೇಕು. ಕಾಂತರಾಜ್ ವರದಿ ಜಾರಿ ಮಾಡದಿರಲು ಕಾರಣ ಏನು ಎಂದು ಪ್ರಶ್ನಿಸಿದರು.
ಸಂವಿಧಾನದಲ್ಲಿ ಕೇವಲ ಆರು ಧರ್ಮ ಇದೆ. ರಾಜ್ಯ ಸರ್ಕಾರ ಜಾತಿ ಸಮೀಕ್ಷೆಯಲ್ಲಿ ಇತರರು, ನಾಸ್ತಿಕರು ಅಂತ ಸೇರಿಸಿದ್ದಾರೆ. ನಾಸ್ತಿಕರಿಗೆ ಧರ್ಮ ಇಲ್ಲ. ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ಲಿಂಗಾಯತ ಅಂತ ಯಾಕೆ ಕಾಲಂ ಮಾಡಿದ್ದಾರೆ. ಮತಾಂತರ ಹೊಂದಿದವರಿಗೆ ಪ್ರತ್ಯೇಕ ಕಾಲಂ ಮಾಡಬೇಕು ಅಂತ ಯಾವ ಸಂವಿಧಾನದಲ್ಲಿ ಹೇಳಿದೆ. ಸಂವಿಧಾನದ ಬಗ್ಗೆ ಮಾತನಾಡುತ್ತ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಜಾತಿ ಸಮೀಕ್ಷೆಯಲ್ಲಿ ಬಹಳಷ್ಟು ಲೋಪಗಳಿವೆ ಎಂದು ಅನೇಕ ಸ್ವಾಮೀಜಿಗಳು ಹೇಳಿದ್ದಾರೆ. ಅವುಗಳನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ ಎಂದರು.
ವೀರಶೈವ ಲಿಂಗಾಯತ ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಜನರು ಜಾಗೃತರಾಗಿದ್ದಾರೆ. ನಿಮ್ಮ ರಾಜಕೀಯ ಹುನ್ನಾರಕ್ಕೆ ಅವರು ಬಲಿಯಾಗುವುದಿಲ್ಲ. 2018 ರಲ್ಲಿ ಜನರು ಒಮ್ಮೆ ಪಾಠ ಕಲಿಸಿದ್ದಾರೆ. ನಮ್ಮ ಧರ್ಮ ಮತ್ತು ಸಮಾಜವನ್ನು ಒಡೆಯುವ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ. ಈಗ ಮತ್ತೆ ಅದೆ ಕೆಲಸ ಮಾಡುತ್ತಿದ್ದಾರೆ. ಸಮಾಜ ಒಗ್ಗೂಡಿಸಿ ಆಡಳಿತ ಮಾಡುವುದನ್ನು ಬಿಟ್ಟು, ಸಮಾಜ ಒಡೆದು ತಮ್ಮ ರಾಜಕೀಯ ರೊಟ್ಟಿ ಸುಟ್ಡುಕೊಳ್ಳುವ ಕೆಲಸ ಮಾಡುತ್ತಿರುವುದನ್ನು ಜನರು ಸಂಪೂರ್ಣವಾಗಿ ತಿರಸ್ಕಾರ ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.
ಎಲ್ಲ ಸಮುದಾಯ ಒಂದಾಗಬೇಕು
ಕರ್ನಾಟಕದ ಎಲ್ಲ ಸಮುದಾಯಗಳಲ್ಲಿ ಒಕ್ಕಟ್ಡು ಇರಬೇಕು. ವೀರಶೈವ ಲಂಗಾಯತ, ಒಕ್ಕಲಿಗ, ಬ್ರಾಹ್ಮಣ, ಎಸ್ಸಿ ಎಸ್ಟಿ, ಹಿಂದುಳಿದ ವರ್ಗ ಎಲ್ಲರೂ ಒಕ್ಕಟ್ಟಾಗಿರಬೇಕು. ಈಗ ಕಾಗಿನೆಲೆ ಪೀಠ ಇದೆ. ಮುಂದಿನ ದಿನಗಳಲ್ಲಿ ಕುರುಬ ಕ್ರಿಶ್ಚಿಯನ್ ಪೀಠ ಆರಂಭವಾಗುತ್ತದೆ. ಬಹುತೇಕ ಸಿಎಂ ಸಿದ್ದರಾಮಯ್ಯ ಯಾರನ್ನಾದರೂ ಫಾದ್ರಿಯನ್ನು ತಂದು ಕೂಡಿಸುತ್ತಾರೆ. ಸಮಾಜವನ್ನು ಎಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಇದರ ಅಗತ್ಯ ಏನಿದೆ. ಕೇಂದ್ರ ಸರ್ಕಾರ ಗಣತಿ ಮಾಡಲು ತೀರ್ಮಾನಿಸಿದೆ. ಇಡೀ ದೇಶದಲ್ಲಿ ಜಾತಿ ಗಣತಿಯನ್ನೂ ಮಾಡುತ್ತಿದೆ ಎಂದರು.
ಕಣ್ಣಿಗೆ ಮಣ್ಣೆರಚುವ ಕೆಲಸ
ರಾಜ್ಯ ಸರ್ಕಾರ ಒಂದು ರೀತಿಯಲ್ಲಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ಒಂದೂವರೆ ಕೋಟಿ ಮನೆಗಳನ್ನು ಹದಿನೈದು ದಿನಗಳಲ್ಲಿ ಗಣತಿ ಮಾಡುತ್ತೇವೆ ಎನ್ನುತ್ತಾರೆ. ಒಂದು ಮನೆಯಲ್ಲಿ ಪ್ರತಿಯೊಬ್ಬರಿಗೂ ಅರವತ್ತು ಪ್ರಶ್ನೆಗಳನ್ನು ಕೇಳುತ್ತಾರೆ. ಅಷ್ಟು ಪ್ರಶ್ನೆ ಕೇಳಲು ಎಷ್ಟು ಸಮಯ ಬೇಕು. ಒಂದೂವರೆ ಕೋಟಿ ಮನೆಗಳನ್ನು ಇಷ್ಟು ಕಡಿಮೆ ಸಮಯದಲ್ಲಿ ತಲುಪಲು ಸಾಧ್ಯವಿಲ್ಲ. ಮತ್ತೆ ಕಾಂತರಾಜ ವರದಿಯನ್ನು ಕಟ್ ಆಂಡ್ ಪೇಸ್ಟ್ ಮಾಡುತ್ತಾರೆ. ಕಾನೂನು ಪ್ರಕಾರ ಹಿಂದುಳಿದ ವರ್ಗದ ಆಯೋಗಕ್ಕೆ ಎಲ್ಲ ಜನಾಂಗದ ಗಣತಿ ಮಾಡಲು ಅಧಿಕಾರ ಇಲ್ಲ. ಕೇವಲ ರಾಜಕಿಯ ಉದ್ದೇಶಕ್ಕೆ ಸಮಿಕ್ಷೆ ಮಾಡುತ್ತಿದ್ದಾರೆ. ಈಗಲೂ ಸರಿಪಡಿಸಲು ಅವಕಾಶ ಇದೆ. ಸಿಎಂ ಸಿದ್ದರಾಮಯ್ಯ ತಿದ್ದಿಕೊಳ್ಳಿ, ಇಲ್ಲದಿದ್ದರೆ ಇದು ನಿಮ್ಮ ರಾಜಕೀಯ ಅಧಪತನದ ಸಂಕೇತವಾಗಲಿದೆ ಎಂದು ಹೇಳಿದರು.